ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ : ಅಂತರಂಗ ದರ್ಶನ

By admin

ಹಿರಿಯ ಚಿತ್ರಕಲಾವಿದ ಎಂ.ಆರ್.ಬಾಳಿಕಾಯಿ : ಅಂತರಂಗ ದರ್ಶನ

ಮಹಾವೀರಪ್ಪ ರಾಯಪ್ಪ ಬಾಳಿಕಾಯಿ ಅವರ ಬದುಕಿನ ಕಲಾ ಚಿಂತನೆಯಲ್ಲಿ ಸದಾ ನಗುವಿನ ಪ್ರತಿಕ್ರಿಯೆ ನಿಜಕ್ಕೂ ಕಲಾ ಲೋಕದ ತೀಕ್ಷಣತೆ ಅವರ ಅಂತರಂಗದ ಧ್ಯಾನದ ಪ್ರತೀಕವಾಗಿ ಕಂಡು ಬರುತ್ತದೆ. ಮಾತುಗಳನ್ನಾಡಲು ಶುರು ಮಾಡಿದರೆಂದರೆ ಚಿತ್ರಕಲಾಕೃತಿಗಳ ತಾತ್ವಿಕ ನಿಲುವುಗಳ ಚರ್ಚೆ, ಸಂವಾದ,ನಿಟ್ಟುಸಿರು ಬಿಡದೆ ಹೇಳುವ ಶೈಲಿ, ಸತ್ವಯತೆ, ಎಲ್ಲವೂ
ಕಲಾ ಧ್ಯಾನದ ಸುವಾಸನೆಯೇ ಹೌದು.ಈ ಅನುಭವ ಅವರನ್ನು ಹತ್ತಿರದಿಂದ ಮಾತುಕತೆಗಿಳಿದಾಗ ಆಗುವ ಸಂದರ್ಭ.ಧಾರವಾಡದ ಪ್ರಸಿದ್ಧ ಕವಿ ಡಾ.ದ. ರಾ.ಬೇಂದ್ರೆಯವರ ಮನೆಯ ಹಿಂದೆಯೇ ಸ್ವಲ್ಪ ದೂರದಲ್ಲಿರುವ ಕಲಾವಿದ ಬಾಳಿಕಾಯಿಯವರು ಎಂಬತ್ತರ ಇಳಿ ವಯಸ್ಸಿನಲ್ಲೂ ಚಿತ್ರಕಲೆಯ ಮೇಲಿನ ಪ್ರೀತಿ, ಗೌರವ, ಸದಾ ಹಸಿರಿನ ಫಸಲು.

ಯುವ ಕನಸು ಹೊತ್ತ ಕಲಾವಿದರ,ವಿದ್ಯಾರ್ಥಿಗಳ,ಸಂಶೋಧನೆ ಮಾಡುವ ಮನಸುಗಳ ಜೊತೆ ಮಾತಾಡುವ, ಪ್ರೋತ್ಸಾಹ ಮಾಡುವ ರೀತಿ ಅನನ್ಯವಾದದ್ದು. ಮುಂದಿನ ಕಲಾ ರಥವನ್ನು ಎಳೆವ,ಮುನ್ನಡೆಸುವ ಜವಾಬ್ದಾರಿ ನಿಮ್ಮ ಮೇಲಿದೆ ಹಾಗಾಗಿ ನೀವು ಬಹಳ ಅಧ್ಯಯನಶೀಲರಾಗಿ ಓದಬೇಕು.ಬರಿಯಬೇಕು.ಅಷ್ಟೇ ಹಿರಿಯರನ್ನ ಕಲಾ ಸಮುದಾಯವನ್ನ ಗೌರವದಿಂದ ಕಾಣುವ ಮನಸ್ಥಿತಿ ಬೆಳೆಸಿಕೊಂಡು ನಡೆಯುವ ಹಾದಿ ತಾವು ಕಲಿಯಬೇಕು ಎಂಬ ಅನೇಕ ಸಂಗತಿಗಳನ್ನು ಮುಕ್ತವಾಗಿ,ಅಷ್ಟೇ ಆಪ್ತತೆಯ ಪ್ರೀತಿಯಿಂದ ಮಾರ್ಗದರ್ಶನ ಮಾಡುತ್ತಾರೆ.

ನಾವು ನಮ್ಮವರು ಎಂಬ ಅರಿವಿನ ದೀವಿಗೆಯನ್ನು ಹಚ್ಚುವ ಕಾರ್ಯದಲ್ಲಿ ತೊಡಗುತ್ತ ಸಮಕಾಲೀನ ಕಲಾ ಸಮಸ್ಯೆಗೆ ಪ್ರತಿ ಉತ್ತರವಾಗಿ ಬದುಕುವ ಧೈರ್ಯ ತಾಳ್ಮೆ ವಿನಯಶೀಲತೆ ಬೆಳೆಸಿಕೊಳ್ಳಬೇಕೆಂಬ ಅರಿವನ್ನು ಮೂಡಿಸುತ್ತಾರೆ.
ಇಂತಹ ಸರಳ ಸಜ್ಜನಿಕೆಯ ಹಿರಿಯ ಕಲಾವಿದ ಎಂ.ಆರ್.ಬಾಳಿಕಾಯಿ ಅವರು ನಮ್ಮ ನಡುವಿನ ಕಲಾ ಶ್ರೀಮಂತ ವ್ಯಕ್ತಿ.ಅವರನ್ನು ಭೇಟಿಯಾಗಿ ಮಾತಾನಾಡುವ ಪ್ರೀತಿ ,ಕಲೆಯ ಕುರಿತಾದ ಚಿಂತನೆ ಅರಿಯುವ ಕಾರ್ಯದಲ್ಲಿ ಯುವ ಕಲಾವಿದರು ತೊಡಗಿಸಿಕೊಳ್ಳಬೇಕಿದೆ,ಕಲೆ ಮತ್ತು ಬದುಕಿನ ಅನುಭವದೊಂದಿಗೆ ತಾಸುಗಟ್ಟಲೇ ಮಾತಾಡುವ,ಕಲೆಯ ಅರ್ಥವನ್ನು ತಿಳಿಯುವಂತೆ ಹೇಳುವ,ಪ್ರಾಚೀನ ಮತ್ತು ಸಾಂಸ್ಕೃತಿಕ ಸಂಗತಿಗಳ ಪ್ರೀತಿಯೊಂದಿಗೆ ಕಲೆಯ ವಿವಿಧ ಆಯಾಮಗಳನ್ನು ಸಮತೋಲನ ದೃಷ್ಟಿಯಿಂದ ಅವಲೋಕಿಸಿ ಹೇಳುವ ವಿಶಿಷ್ಟ ಮಾತುಗಳು ಅವರಿಂದ ಹೊರ ಹೊಮ್ಮುತ್ತವೆ.ಹಾಗಾಗಿ ಇಂತಹ ಹಿರಿಯರ ಒಡನಾಟದ ಅನುಭವ ಕಲಾ ಲೋಕದ ತಿಳುವಳಿಕೆಯನ್ನು ವಿಸ್ತರಿಸಿಕೊಳ್ಳಲು ಅನುಕೂಲ.
ಅವರ ಹೆಸರಿನಲ್ಲಿ ಒಂದು ಉತ್ತಮ ಕಲಾ ಗ್ಯಾಲರಿಯೊಂದು ನಿರ್ಮಿಸಿ ಕಲಾ ಚಟುವಟಿಕೆ ನಡೆಸಲು ಅನುಕೂಲ ಮಾಡಿಕೊಟ್ಟಿದ್ದಾರೆ.ಯುವ ಮತ್ತು ಹಿರಿಯ ಕಲಾವಿದರು ಈ ಗ್ಯಾಲರಿಯನ್ನು ಮುಕ್ತವಾಗಿ ಬಳಸಿಕೊಳ್ಳಲು ಅವಕಾಶವಿದೆ.ಧಾರವಾಡ ಗದಗ ಹುಬ್ಬಳ್ಳಿ ಬೆಳಗಾವಿ ಸುತ್ತ ಮುತ್ತಲಿನ ಕಲಾವಿದರು ಈ ಕಲಾ ಗ್ಯಾಲರಿಯನ್ನು ಸದುಪಯೋಗ ಮಾಡಿಕೊಳ್ಳಲು ಅವಕಾಶವಿದೆ ಇಂತಹ ಕೆಲಸವನ್ನು ಮಾಡಿದ ಬಾಳಿಕಾಯಿ ಅವರ ಸೇವೆ ಕಲಾ ಲೋಕಕೊಂದು ವಿಶೇಷ ಉಡುಗೊರೆ.ಈಗಾಗಲೇ ಹಲವು ಕಲಾವಿದರು ಪ್ರದರ್ಶನ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.ಕಲಾವಿದರು ಬೆಳೆಯಲು ಸಾಕಸ್ಟು ಸೌಲಭ್ಯಗಳಿವೆ,ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧನ ಸಹಾಯ ನೀಡುತ್ತಿದೆ ಈ ಎಲ್ಲ ಅನುಕೂಲತೆಗಳನ್ನು ಪಡೆದು ಕಲಾವಿದರು ಉತ್ತಮ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಲಾ ಪ್ರಗತಿಯ ವಿಚಾರಕ್ಕೆ ಮುಂದಾಗಬೇಕಿದೆ.ಅಂತೆಯೇ ಕಲಾವಿದರು ಆ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಸಹ ಸಂತಸದ ವಿಚಾರವೆಂದು ತಿಳಿಸುತ್ತಾರೆ.ನಾಡು ನುಡಿ ಕಲೆ ಸಾಹಿತ್ಯಿಕ ಮನಸ್ಸುಗಳು ಹೆಚ್ಚು ಹೆಚ್ಚು ಬೆಳಕಿಗೆ ಬರಬೇಕಿದೆ ಆ ಮೂಲಕ ಸಾಂಸ್ಕೃತಿಕ ಬದುಕಿಗೆ ಹಿರಿಮೆಯನ್ನು ಬೆಳಗಬೇಕಿದೆ ಎಂಬ ವಿಚಾರವನ್ನು ಪ್ರಸ್ತುತ ಪಡಿಸುತ್ತಾರೆ.

ಕಲಾವಿದರೊಂದಿಗೆ ಲೇಖಕ ಬಸವರಾಜ ಕಲೆಗಾರ

ಕಲೆ ,ಕಲಾವಿದರು, ಸಾಮಾಜಿಕ ಬದುಕಿನ ಪ್ರತಿಬಿಂಬಗಳು ಹಾಗಾಗಿ ಸಮಾಜದಲ್ಲಿ ನಡೆಯುವ ಪ್ರಚಲಿತ ಸಂಗತಿಗಳು ಚಿತ್ರಕಾರನ ಮೇಲೆ ಪ್ರಭಾವವನ್ನು ಬೀರುತ್ತವೆ ಹಾಗಾಗಿ ಆ ಅನುಭವಗಳೇ ಕಲಾವಿದನ ಆಂತರಿಕ ಸಂವೇದನೆಗಳಾಗಿ ಹೊರ ಹೊಮ್ಮಿ ಕಲಾಕೃತಿಗಳಾಗಿ ಜೀವ ತಾಳುತ್ತವೆ.ಇಂತಹ ಅನೇಕ ಅನುಭವಗಳನ್ನು ದ. ರಾ.ಬೇಂದ್ರೆಯವರು ನನ್ನೊಂದಿಗೆ ಮುಖಾಮುಖಿಯಾಗಿ ಸಂವಾದ ಚರ್ಚೆ ಮಾಡಿರುವ ವಿಷಯವನ್ನು ಸಹ ಮುಕ್ತವಾಗಿ ಹಂಚಿಕೊಳ್ಳುತ್ತಾರೆ.ಹೀಗೆ ಅನೇಕ ತಮ್ಮ ಕಲಾ ಬದುಕಿನ ಹಂತಗಳನ್ನು ತಿಳಿಸುವುದರೊಂದಿಗೆ ಕಲಾಧ್ಯಾನದ ಪ್ರತೀಕವಾಗಿ ಮಾತುಕತೆಗಿಳಿಯುವ ಸಹೃದಯವಂತಿಕೆ ಹಿರಿಯ ಕಲಾವಿದರಾದ ಎಂ.ಆರ್.ಬಾಳಿಕಾಯಿ ಅವರದು.
ಸದಾ ಕಲೆಯ ಕನವರಿಕೆಯಲ್ಲಿ ಬದುಕುವ,ಅಧ್ಯಯನಶೀಲರಾಗುವ ವಿಶಿಷ್ಟ ವ್ಯಕ್ತಿತ್ವ.ಚಿತ್ರಕಲಾ ಲೋಕದಲ್ಲಿ ಬಹಳ ಅಪರೂಪ.ಇಂತಹ ಕಲಾವಿದರ ಅಂತರಂಗ ದರ್ಶನ ಯುವ ಕಲಾ ಸಮುದಾಯ ಪಡೆದರೆ ಧಾನ್ಯ.
ಬದುಕಿನುದ್ದಕ್ಕೂ ಬಿಡುವಿಲ್ಲದೆ ಕೊರೆವ ಗೆರೆ, ಬೆರಳ ತುದಿಯಿಂದ ಬಣ್ಣ ಲೇಪಿಸುವಿಕೆ,ಕ್ಯಾನವಾಸ್ ಮತ್ತು ಕಾಗದ ಬಳಸುವ ತಂತ್ರಗಾರಿಕೆ ಎಲ್ಲವೂ ಆಯಾ ಕಾಲದ ವಸ್ತು ವಿಷಯದ ವೈವಿಧ್ಯತೆಗಳಾಗಿಯೇ ಕಂಡು ಬರುತ್ತದೆ.ಅಂಗೈ ಅಗಲ ಹಾಳೆ ಸಿಕ್ಕಿತೆಂದರೆ ಸಾಕು ತನ್ನ ಮನ ಭಾವನೆಗಳನ್ನು
ರೇಖಾಚಿತ್ರಗಳ ಮೂಲಕ ಮನದ ತುಮುಲಗಳೊಂದಿಗೆ,ಸಾಮಾಜಿಕ ಸಮಸ್ಯೆಗಳ ಅನಾವರಣವೇ ಚಿತ್ರದ ಅಭಿವ್ಯಕ್ತಿ ಆಗಿ ಬಿಡುತ್ತದೆ.ಗೆರೆಯೊಳಗಿನ ರೂಪ,ಬಣ್ಣಗಳೊಂದಿಗೆ ನಲಿದಾಡಿದ ಸಂಭ್ರಮ,ಕಪ್ಪು ಬಿಳುಪು ಕೆಂಪು ಹಸಿರು ಹಳದಿ ಇತ್ಯಾದಿ ಮಿಶ್ರ ವರ್ಣಗಳ ಲೇಪನ ಮತ್ತು ಸಂಯೋಜನಾ ಗುಣ,ತಂತ್ರಗಾರಿಕೆ ಸೇರಿದಂತೆ ಹದವರಿತ ಭಾವದೊಂದಿಗೆ ನಿರರ್ಗಳವಾಗಿ ವಿವರಿಸುವ ವಿಧಾನ ಚಿತ್ರಕಲಾ ಕಲಿಕೆಗೆ ಅತ್ಯಂತ ಪುರಕವಾದದ್ದು

ಲೇಖನ : ಡಾ.ಬಸವರಾಜ ಎಸ್.ಕಲೆಗಾರ
ಸಹಾಯಕ ಪ್ರಾಧ್ಯಾಪಕರು (ತಾತ್ಕಾಲಿಕ)
ದೃಶ್ಯಕಲಾ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ