ವಾನರೇಶ್ವರ ಸುಗ್ರೀವ ರಾಮನಿಗೆ ನುಡಿದ:“ ಇಚ್ಚಾರೂಪಿ, I ಭಾಗ-20

By admin


ವಾನರೇಶ್ವರ ಸುಗ್ರೀವ ರಾಮನಿಗೆ ನುಡಿದ:“ ಇಚ್ಚಾರೂಪಿ, I
ಮಹೇಂದ್ರ ಪರ್ವತ ಬಲ ವಾನರರು ಬಂದಿಹರು; II
ರಾಕ್ಷಸ ದೈತರಿಗೆ ಸಮ ಬಲ ವಾನರ ವೀರರುI
ಜಯಭೇರಿಗಾಗಿ ನಿಮ್ಮ ಸಹಾಯಕೆ ಬಂದಿಹರು; II
ಓ ರಾಮಾ, ಕೃತ್ಯದಲಿ ಖ್ಯಾತರು ಗೆಲುವಿನ ಛಲದಂಕರುI
ಪರಾಕ್ರಮಿ ವಿಖ್ಯಾತ ವಾನರ ಶೂರರು ಬಂದಿಹರು;II
ಬಂದಿಹರು ದಶದಿಕ್ಕುಗಳಿಂದ,ಕಡಲ ಸರೋವರ ಗಿರಿI
ಪರ್ವತಗಳಿಂದ ವಾನರ ವೀರರು ನಿಮ್ಮ ಸೇವೆಯಲಿ;II
ಓ ರಾಮಾ, ನಿರ್ದೇಶಿಸು ಸರ್ವ ವಾನರ ಸೇನೆಗೆ ರಾಜನ ಆದೇಶದಂತೆ
ಬಂದಿಹರು ನಿಮ್ಮ ಸೇವೆಗೆ”; ಕೇಳಿ ವಿಶ್ವಾಸII
-ನುಡಿ ರಾಮನು ಸುಗ್ರೀವನಿಗೆ “ ಓ ಸುಗ್ರೀವಾ, ತಿಳಿಯೋಣI
ವೈದೇಹಿ ಸತ್ತಿಹಳೆ ಇಲ್ಲವೆ ಬದುಕಿರುವಳೆ, II
ಮೊದಲು ಹುಡುಕೋಣ ರಾವಣ-ತಾಣ; ರಾವಣ ಸೀತೆ ವಾಸ ತಿಳಿದುI
ಯೋಗ್ಯ ಸಮಯದಲಿ ಆದೇಶ ಕೈಕೊಳ್ಳೋಣ, II
ಓ ವಾನರ ರಾಜನೇ, ಸೀತೆ ಹುಡುಕುವ ನೇತೃತ್ವ ನಿಮ್ಮದು,I
ನನಗೆ, ಲಕ್ಷ್ಮಣಗೆ, ನೀನೇ ಕಾರ್ಯ ವಹಿಸು, II
ನನಗೆ, ಲಕ್ಷ್ಮಣನ ನಂತರ ನೀನೇ ಅತ್ಯುತ್ತಮ,I
ನಮ್ಮ ಹಿತ ಸಮಯ ಬಲ್ಲ ಸಾಹಸಿ ವಾನರ ನೀ”;II
ಕೇಳುತ್ತಲೇ ರಾಮನ ನುಡಿದ ದೈತ ಯುವ ವಾನರI
ನಾಯಕ ವಿನತನಿಗೆ,ರಾಮ ಲಕ್ಷ್ಮಣರ ಸಮ್ಮುಖದಲಿ: II
“ಓ ವಿನತ, ಸಮಯ, ದೇಶ ಯುಕ್ತಿ ಪ್ರವೀಣ ನೀ, I
ಪೂರ್ವದತ್ತ ಹೊರಡು ಸೀತೆ ಅರಸಲು; ಒಂದು ಲಕ್ಷ ಸೂರ್ಯ II
ಚಂದ್ರ ತೇಜಿವಾನರ ಜತೆ, ಮಾರ್ಗಮಧ್ಯೆ ಹುಡುಕಿ ಸೀತೆ ರಾವಣರ ತಾಣI
ದುರ್ಗಮ ಅರಣ್ಯ, ಪರ್ವತ ಪ್ರದೇಶಗಳಲಿ; II
ಭಾಗೀರಥೀ, ಸರಯು, ಕೌಶಿಕಿ, ಕಾಲಿಂದಿ ಯಮುನಾ ನದಿಗಳI
ಕೊಳ್ಳ ಗಿರಿ ಅರಣ್ಯ ಪ್ರದೇಶಗಳಲ್ಲಿ ಹುಡಿಕಿ ಸೀತೆಯನು; II
ಬಂಡೆ ಪರ್ವತ ಅರಣ್ಯ ಶೋಭಿತ ಸರಸ್ವತಿ, ಸಿಂಧು,I
ಸೋನಾ ಮಹೀ ರತ್ನ-ಜಲನದಿ ಪ್ರದೇಶಗಳಲಿ ಹುಡುಕಿ ಸೀತೆನ;II
ಹುಡುಕಿರಿ ಬ್ರಹ್ಮಮಾಲ, ವೈದೇಹ, ಮಾಲ್ವ, ಕಾಶಿ, ಕೋಸಲ ವI
ಮಗದ ರಾಜ್ಯ ಹಳ್ಳಿ ಹಳ್ಳಿ ಪ್ರದೇಶಗಳಲಿ ಸೀತೆಯನು; II
ಪುಂದ್ರ ಅಂಗ ಕೊಶಕಾರ ರಾಜ್ಯಗಳ ಬೆಳ್ಳಿ ಖನಿಜಗಳI
ಪ್ರದೇಶಗಳಲ್ಲಿ ಹುಡುಕಿರಿ ರಾಮನ ಸೀತೆಯನು; II
ಓ ಅರಣ್ಯವಾಸಿ ವಾನರರೇ, ಸಮುದ್ರದಡದ ನಗರ ಪರ್ವತ,I
ಮಹೇಂದ್ರ ಪರ್ವತ ಶಿಖರಗಳಲಿ ಹುಡಿಕಿ; II
ವಿಚಿತ್ರ ಪ್ರಾಣಿ ವಾಸಿಸುವವು ಅಲ್ಲಿ: ವಿಚಿತ್ರ ದೇಹದ, ಕಿವಿಯಿಲ್ಲದ, I
ತುಟಿಗಳೇ ಕಿವಿಗಳು,ಕಬ್ಬಿನ-ಮುಖವಾಡದ,II
ಒಂಟಿಗಾಲದ; ಕೆಲವು ಬುಡಕಟ್ಟುಗಳು: ನರಭಕ್ಷಕ, ಅನಿಪುಣ, I
ಚಿನ್ನ-ವರ್ಣ ಆರ್ಷಕ ಮೈಮಾಟದ ಜನ: II
ಕೆಲವು ಬುಡಕಟ್ಟುಗಳು: ಮೀನಭಕ್ಷಿಸುವ ನಡುಗಡ್ಡೆ ಕಿರಾತರು,I
ಜಲಕನ್ನಿಕೆಯರಂತೆ ನರ ವ್ಯಾಘ್ರ ವಾಸಿಗಳು; II
ಈ ಪ್ರದೇಶಗಳ ಕಾನನ, ಪರ್ವತ,ಶಿಖರಗಳI
ಮೂಲೆ ಮೂಲೆಗಳಲಿ ಹುಡುಕಿ ಸೀತೆಯನು;II
ಕಿಷ್ಕಿಂಧಕಾಂಡ ರಾಮಾಯಣ

ಸುಗ್ರೀವನು ರಾಮನಿಗೆ ವಾನರ ಸೈನ್ಯದ ಪರಿಚಯ ನೀಡುತ ಅವರನ್ನು ನಾಲ್ಕು ಗುಂಪುಗಳಲ್ಲಿ ವಿಭಜಿಸಿ ಸೀತೆಯನ್ನು ಹುಡುಕಲು ಕಳಿಸುವ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: (1)ಸುಗ್ರೀವನು ರಾಮನಿಗೆ ಸೈನ್ಯದ ನೇತೃತ್ವ ವಹಿಸಲು ಕೋರುವನು: ವಾನರೇಶ್ವರ ಸುಗ್ರೀವನು ರಾಮನಿಗೆ ಇಚ್ಚಾರೂಪಧಾರಕರು, ಮಹೇಂದ್ರ ಪರ್ವತ ಬಲ ವಾನರರು, ರಾಕ್ಷಸ ದೈತರಿಗೆ ಸಮ ಬಲ ವಾನರ ವೀರರು, ಕೃತ್ಯದಲಿ ಖ್ಯಾತರು ಗೆಲುವಿನ ಛಲದಂಕರು ಪರಾಕ್ರಮಿ ವಿಖ್ಯಾತ ವಾನರ ಶೂರರು, ದಶದಿಕ್ಕುಗಳಿಂದ, ಕಡಲ ಸರೋವರ ಗಿರಿ ಪರ್ವತಗಳಿಂದ ವಾನರ ವೀರರು ಜಯಭೇರಿಗಾಗಿ ನಿಮ್ಮ ಸಹಾಯಕೆ ಬಂದಿರುವರು ನೀನು ಸರ್ವ ವಾನರ ಸೇನೆಯನ್ನು ನಿರ್ದೇಶಿಸು ಎಂದು ಕೇಳಿಕೊಳ್ಳುವನು, (2) ಸುಗ್ರೀವನ ವಿಶ್ವಾಸದ ಮಾತುಗಳನ್ನು ಕೇಳಿ ರಾಮನು ಅವನಿಗೆ ಮೊದಲು ವೈದೇಹಿ ಸತ್ತಿರವಳೆ ಇಲ್ಲವೆ ಜೀವಂತಿರುವಳೆ ಎಂದು ತಿಳಿಯಲು ರಾವಣನ ತಾಣವನ್ನು ಹುಡುಕೋಣ; ರಾವಣ ಮತ್ತು ಸೀತೆ ವಾಸವಿದ್ದ ಸ್ಥಾನ ಗೊತ್ತಾದ ಬಳಿಕ ಯೋಗ್ಯ ಸಮಯದಲ್ಲಿ ಆದೇಶ ಕೈಕೊಳ್ಳೋಣ, ಲಕ್ಷ್ಮಣನ ನಂತರ ಸುಗ್ರೀವನೆ ಅತ್ಯುತ್ತಮನು, ತನಗೆ ಹಾಗು ಲಕ್ಷ್ಮಣಗೆ ಕಾರ್ಯ ವಹಿಸಿಕೊಡು ಎಂದು ಅವನಲ್ಲಿ ಕೇಳಿಕೊಂಡ ರಾಮನು ತನ್ನ ಮೀತಿ ಅರಿತು ಮತ್ತು ಸುಗ್ರೀವನ ಜಾಣ್ಮೆ ತಿಳಿದು ಅವನಿಗೆಯೇ ಸೀತೆಯನ್ನು ಹುಡುಕುವ ನೇತೃತ್ವವನ್ನು ವಹಿಸುವ ರಾಮನ ಸ್ವಭಾವ ವರ್ಣನೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, (3) ಶೂರ ವಾನರ ನಾಯಕ ವಿನತನ ನೇತೃತ್ವದಲ್ಲಿ ಜಂಬುದ್ವೀಪದ ಪೂರ್ವದಿಕ್ಕಿನ ಪ್ರದೇಶಗಳಿಗೆ ಸೀತೆಯನ್ನು ಹುಡುಕಲು ಸುಗ್ರೀವನು ವಾನರ ಸೈನ್ಯವನ್ನು ಕಲಿಸಿದನು: ಸುಗ್ರೀವನು ರಾಮ ಮತ್ತು ಲಕ್ಷ್ಮಣರ ಸಮ್ಮುಖದಲಿ ಸಮಯ ದೇಶ ಮತ್ತು ಯುಕ್ತಿಯಲ್ಲಿ ಪ್ರವೀಣನು ದೈತ ಯುವ ವಾನರ ನಾಯಕ ವಿನತನಿಗೆ “ನೀನು ಸೀತೆಯನ್ನು ಅರಸಲು ಒಂದು ಲಕ್ಷ ಸೂರ್ಯ ಚಂದ್ರ ತೇಜಿನ ವಾನರರ ಜೊತೆ ಪೂರ್ವದತ್ತ ಹೊರಡು ಎಂದು ಆದೇಶಿಸಿದನು (4) ಪೂರ್ವದಿಕ್ಕಿನ ಪ್ರದೇಶಗಳ ಮಾರ್ಗ ಸೂಚಿಯನ್ನು ಸುಗ್ರೀವನು ವಿನತನಿಗೆ ಹೇಳಿದನು “ಮಾರ್ಗಮಧ್ಯೆ, ದುರ್ಗಮ ಅರಣ್ಯ, ಪರ್ವತ ಪ್ರದೇಶಗಳಲಿ ಹಾಗು ಭಾಗೀರಥೀ, ಸರಯು, ಕೌಶಿಕಿ, ಕಾಲಿಂದಿ ಯಮುನಾ ನದಿಗಳ ಕೊಳ್ಳ ಗಿರಿ ಅರಣ್ಯ ಪ್ರದೇಶಗಳಲ್ಲಿ ಹುಡಿಕಿರಿ ಸೀತೆ ಮತ್ತು ರಾವಣರ ತಾಣವನ್ನು; ಕಲ್ಲುಬಂಡೆಗಳ ಪರ್ವತ ಅರಣ್ಯ ಶೋಭಿತ ಸರಸ್ವತಿ, ಸಿಂಧು ( ಗಂಗಾ-ಬ್ರಹ್ಮಪುತ್ರ ನದಿಗಳ ಸಂಗಮ), ಸೋನಾ, ಮಹೀ ರತ್ನ-ಜಲ ನದಿ ಪ್ರದೇಶಗಳಲಿ ಹಾಗು ಬ್ರಹ್ಮಮಾಲ (ಇಂದಿನ ಬ್ರಹ್ಮದೇಶ/ಮ್ಯಾನ್ಮಾರ), ವೈದೇಹ (ಇಂದಿನ ಜನಕಪುರ)) ಮಾಲ್ವ (ಮಾಳವ ದೇಶ), ಕಾಶಿ, ಕೋಸಲ ಮತ್ತು ಮಗದ ರಾಜ್ಯಗಳ ಹಳ್ಳಿ ಹಳ್ಳಿ ಪ್ರದೇಶಗಳಲ್ಲಿ ಸೀತೆಯನು ಹುಡುಕಿರಿ; ಬೆಳ್ಳಿ ಖನಿಜಗಳ ಪ್ರದೇಶಗಳಾದ ಪುಂದ್ರ, ಅಂಗ, ಕೊಶಕಾರ ರಾಜ್ಯಗಳಲ್ಲಿ ರಾಮಣ, ಸೀತೆಯನ್ನು ಹುಡುಕಿರಿ; ಓ ಅರಣ್ಯವಾಸಿ ವಾನರರೇ, ಸಮುದ್ರದಡದ ನಗರ ಪರ್ವತಗಳಲಿ ಮತ್ತು ಮಹೇಂದ್ರ ಪರ್ವತ ಶಿಖರಗಳಲ್ಲಿ(ಬಂಗಾಳ ಉಪಸಾಗರದ ದಡದ ಪ್ರದೇಶಗಳು) ಕಿವಿಯಿಲ್ಲದ, ತುಟಿಗಳೇ ಕಿವಿಗಳು,ಕಬ್ಬಿನ-ಮುಖವಾಡದ, ಒಂಟಿಗಾಲದ ವಿಚಿತ್ರ ದೇಹದ ವಿಚಿತ್ರ ಪ್ರಾಣಿಗಳು ವಾಸಿಸುವವು, ಆ ಪ್ರದೇಶಗಳಲ್ಲಿ ಸೀತೆಯನ್ನು ಹುಡಿಕಿರಿ; ನರಭಕ್ಷಕ, ಅನಿಪುಣ, ಚಿನ್ನ-ವರ್ಣ ಆರ್ಷಕ ಮೈಮಾಟದ ಕೆಲವು ಬುಡಕಟ್ಟುಗಳ ಜನ-ಪ್ರದೇಶ ಹಾಗು ಮೀನಭಕ್ಷಿಸುವ ನಡುಗಡ್ಡೆ ಕಿರಾತರು, ಜಲಕನ್ನಿಕೆಯರಂತೆ ನರವ್ಯಾಘ್ರ ಕೆಲವು ಬುಡಕಟ್ಟು ವಾಸಿಗಳ ಆ ಪ್ರದೇಶಗಳ ಕಾನನ, ಪರ್ವತ,ಶಿಖರಗಳ ಮೂಲೆ ಮೂಲೆಗಳಲ್ಲಿ ಸೀತೆಯನು ಹುಡುಕಿರಿ” ಎಂದು ಜಂಬುದ್ವೀಪದ ಪೂರ್ವದಿಕ್ಕಿನ ರಾಜ್ಯಗಳು, ನಗರಗಳು ಹಳ್ಳಿಗಳು, ನದಿಕೊಳ್ಳಗಳ, ಸಮುದ್ರದಂಡೆ ಮತ್ತು ಪರ್ವತಗಳ ಪ್ರಧೇಸಗಳ ಮಾಹಿತಿಯನ್ನು ಕೊಟ್ಟು ಸುಗ್ರೀವನು ಆ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕಲು ಆದೇಶಿಸುವನು. ಸುಗ್ರೀವನು ವಾನರ ವೀರ ವಿನತನಿಗೆ ವಾನರ ಸೈನ್ಯದ ಒಂದು ತುಕಡಿ ನೇತೃತ್ವ ವಹಿಸಿ ಸೀತೆಯನ್ನು ಹುಡುಕಲು ಜಂಬುದ್ವೀಪದ ಪೂರ್ವದಕ್ಕಿನ ಪ್ರದೇಶಗಳ ವಿವರಣೆ ಮಾರ್ಗ ಸೂಚಿ ನೀಡಿದ ವಿವರಣೆಗಳ ಮುಖೇನ ಆದಿಕವಿ ವಾಲ್ಮೀಕಿಯ ಮನಶಾಸ್ತ್ರ ಮತ್ತು ಭೂಮಂಡಲದ ಭೌಗೋಲಿಕ-ಅಂಶಗಳ ಜ್ಞಾನದ ಪರಿಧಿಯ ಅನುಭವವಾಗುವದು. ಭೌಗೋಳಿಕ ಅಂಶಗಳ ವಿವರಣೆ ಪ್ರತ್ಯೆಕ್ಷ ಅನುಭವದಿಂದ ವಿವರಿಸಲು ಸಾಧ್ಯ, ಅದು ರಾಮಾಯಣ ಘಟನೆಗೆ ಬಲವಾದ ಪುರಾವೆ ಆಗಿದೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ