🛑LOCAL EXPRESS :”ಗದಗ | ಮೌಲ್ಯಾಧಾರಿತ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಸ್ಪೀಕರ್‌ ಯು.ಟಿ. ಖಾದರ್‌ ಅಭಿಮತ”

By admin

🛑LOCAL EXPRESS :“ಗದಗ | ಮೌಲ್ಯಾಧಾರಿತ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ: ಸ್ಪೀಕರ್‌ ಯು.ಟಿ. ಖಾದರ್‌ ಅಭಿಮತ”

• ಸೆಕ್ಯುಲರ್‌ ವಾಯ್ಸ್‌ ನ್ಯೂಸ್‌ ಗದಗ: 

‘ಜನಪ್ರತಿನಿಧಿಗಳಿಂದ ಸಮಾಜದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಕೊಡುವುದರಿಂದ ಮಾತ್ರ ಸಮಗ್ರ ಅಭಿವೃದ್ಧಿಸಾಧ್ಯ. ಬರಹಗಾರರು ಸಮಾಜವನ್ನು ಕಟ್ಟುವ ಕೆಲಸ ಮಾಡಬೇಕೇ ಹೊರತು ಸಮಾಜ ಒಡೆಯುವ ಕೆಲಸ ಮಾಡಬಾರದು’ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಹೇಳಿದರು.

ಅವರು ಗಜೇಂದ್ರಗಡ ಶ್ರೀ ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಶಾಲಾ ಸಭಾಂಗಣದಲ್ಲಿ ಮುಸ್ಲಿಮ್‌ ಲೇಖಕರ ಸಂಘವು ದಿವಂಗತ ಯು.ಟಿ. ಫರೀದ್ ಸ್ಮರಣಾರ್ಥ ಕೊಡಮಾಡುವ 2024ನೇ ಸಾಲಿನ ರಾಜ್ಯ ಮಟ್ಟದ ‘ಮುಸ್ಲಿಮ್ ಸಾಹಿತ್ಯ ಪ್ರಶಸ್ತಿ’ ಪ್ರಧಾನ ಹಾಗೂ ಕನ್ನಡ ಮತ್ತು ಉರ್ದು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು. ಡಾ. ಐ.ಜೆ. ಮ್ಯಾಗೇರಿ (ಕೃತಿ: ʼಜೈಲ್‌ ಡೈರಿʼ) ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.‌ ಪಾಟೀಲ್‌ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಐ.ಜೆ. ಮ್ಯಾಗೇರಿ ಅವರ ಧರ್ಮಪತ್ನಿ ಫರೀದಾ ಬೇಗಂ ಡಾಲಾಯತ್, ಗಜೇಂದ್ರಗಡದ ಅಂಜುಮನ್‌ ಇಸ್ಲಾಮ್‌ ಕಮಿಟಿ ಅಧ್ಯಕ್ಷ ಹಸನಸಾಬ ತಟಗಾರ, ಹಿರಿಯ ಸಾಹಿತಿ ಬಿ.ವಿ. ಕೆಂಚರೆಡ್ಡಿ, ಗಜೇಂದ್ರಗಡ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎ.ಪಿ. ಗಾಣಗೇರ, ಯೂಸುಫ್‌ ಗೋಡೆಕಾರ ಉಪಸ್ಥಿತರಿದ್ದರು. ಮುಸ್ಲಿಮ್‌ ಲೇಖಕರ ಸಂಘದ ಅಧ್ಯಕ್ಷ ಉಮರ್‌ ಯು.ಹೆಚ್.‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಮತ್ತು ಉರ್ದು ಕವಿಗೋಷ್ಠಿಯಲ್ಲಿ ಕವಿಗಳಾದ ಎ. ಎಸ್.‌ ಮಕಾನದಾರ, ಡಾ. ಹಸೀನಾ ಖಾದ್ರಿ, ಶಿಲ್ಪಾ ಮ್ಯಾಗೇರಿ, ಮೊಹಮ್ಮದ್‌ ಅರ್ಶದ್‌ ಹಿರೇಹಾಳ, ಮುರ್ತುಜಾ ಬೇಗಂ ಕೊಡಗಲಿ, ಅನ್ವರ್ ಅಹ್ಮದ್‌ ವಣಗೇರಿ ಮತ್ತು ಖಾಝಿ ಶಬ್ಬೀರ್‌ ಅಹ್ಮದ್‌ ಶಬ್ಬೀರ್‌ ಮನ್ಸೂರಿ ಕವನ ವಾಚಿಸಿದರು. ಮುಸ್ಲಿಮ್‌ ಲೇಖಕರ ಸಂಘದ ಕಾರ್ಯದರ್ಶಿ ಸಲೀಂ ಬೋಳಂಗಡಿ ಸ್ತುತಿಗೀತೆ ಹಾಡಿದರು.

ಕಾರ್ಯಕಾರಿ ಸಮಿತಿ ಸದಸ್ಯ ಎ.ಕೆ. ಕುಕ್ಕಿಲ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಿ.ಎ. ಮುಹಮ್ಮದ್‌ ಅಲಿ ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ಎ. ಎಸ ಈದ್‌ ಇಸ್ಮಾಯಿಲ್ ಧನ್ಯವಾದವಿತ್ತರು. ಕಾರ್ಯಕಾರಿ ಸಮಿತಿ ಸದಸ್ಯರಾದ ಯಾಕೂಬ್‌ ಕಲ್ಲರ್ಪೆ ಮತ್ತು ಹುಸೈನ್‌ ಕಾಟಿಪಳ್ಳ ಉಪಸ್ಥಿತರಿದ್ದರು.