ಕೊರೊನಾ ಕಾಲದಲ್ಲಿ : ಪ್ರಕೃತಿ ಧ್ಯಾನ

By admin

ಕೊರೊನಾ ಕಾಲದಲ್ಲಿ : ಪ್ರಕೃತಿ ಧ್ಯಾನ

ಮೌನದಲ್ಲಿ ಧ್ಯಾನಿಸುವ ಕಲಾವಿದನಿಗೆ ಒಂದಿಷ್ಟು ಬಣ್ಣ.ಬ್ರೇಶ್,ಪೆನ್ಸಿಲ್,ಪೆನ್ನು,ಮಸಿ ಕೊಟ್ಟರೆ ತನ್ನೊಳಗೆ ಕಾಡುವ ಬಯಕೆಗಳನ್ನು ಕಾಗದ ಮತ್ತು ಕ್ಯಾನವಾಸ್ ಮೇಲೆ ಸುಖಾ ಸುಮ್ಮನೆ ರೇಖಾರೂಪವಾಗಿ ಗೀಚಿ ಬಿಡುವ,ಗೆರೆಗಳ ಕೊರೆತದಲ್ಲಿ ಬಣ್ಣ ತುಂಬುವ, ಮೂಲಕ ಅಂದವಾದ ಚಿತ್ರವೊಂದು ನಿರ್ಮಿಸುತ್ತಾನೆ.ಆಗ ಕಲಾವಿದ ಆನಂದ ಪಡುತ್ತ,ಸಾಧ್ಯವಾದರೆ ಗ್ಯಾಲರಿಯಲ್ಲಿ ಹತ್ತಾರು ಕಡೆ ಪ್ರದರ್ಶನ ಮಾಡಲು ಮುಂದಾಗುತ್ತಾನೆ.ಪ್ರದರ್ಶನದ ಮೂಲಕ ನೋಡುಗರ ಮನ ಸೇರುತ್ತಾನೆ ಅಥವಾ ನಿರಾಕಾರಕ್ಕೂ ಒಳಗಾಗಬಹುದು! ಅದು ನೋಡುಗರ ಕಣ್ಣಿಗೆ ಒಡಮೂಡುವ ಕುತೂಹಲಕಾರಿ ಚಿಂತನೆ.

ಇತ್ತೀಚೆಗೆ ಕೊರೊನಾ ಎಂಬ ಕಾಲದ ಸುಳಿಯಲ್ಲಿ ಸಿಕ್ಕು ಏನನ್ನು ಮಾಡದೆ ಕಾಲ ಕಳೆದ ಕಲಾವಿದರು ಇದ್ದಾರೆ. ಅತ್ಯುತ್ತಮ ಕಲಾವಿದರನ್ನು ಕಳೆದುಕೊಂಡ ಕಲಾ ಕುಟುಂಬಗಳು ಇವೆ.ಮೂರೋತ್ತಿನ ಊಟವೂ ಸಿಗದೆ ಉಪವಾಸ ವನವಾಸ ಅನುಭವಿಸಿದ ಕಲಾ ಬದುಕುಗಳು ಇವೆ. ಎಲ್ಲವೂ ಇದ್ದು ಏನನ್ನು ಮಾಡದೆ ಕಾಲ ಹರಣ ಮಾಡಿದ ಕಲಾವಿದರು ಇದ್ದಾರೆ. ಇಂತಹ ಹಲವು ಕಲಾ ಚಿಂತನೆಗಳ ಮಧ್ಯೆ ಎಲ್ಲಿಯೂ ಸಮಯ ಹಾಳು ಮಾಡದೆ ಮನದ ಮೂಲೆಯಲ್ಲಿ ಸದಾ ಕಾಡುವ ಭಾವನೆಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ನೂರಾರು ಕಲಾಕೃತಿಗಳನ್ನು ರಚಿಸಿದವರು ಇದ್ದಾರೆ.ಅವರಲ್ಲಿ ವಿಜಯನಗರ ಜಿಲ್ಲೆಯ ಕಲಾವಿದ ಮಾರುತಿ ಬಾಣದ ಅವರು ಪ್ರಮುಖರಾಗಿ ಕಾಣುತ್ತಾರೆ.
ಸುಮಾರು ಆರು ಅಥವಾ ಏಳು ತಿಂಗಳುಗಳಿಂದ ಮನೆಯಲ್ಲಿಯೇ ಕುಳಿತು ಸುಮಾರು ನೂರಕ್ಕೂ ಹೆಚ್ಚು ಕಲಾಕೃತಿಗಳನ್ನು ರಚಿಸಿದ್ದಾರೆ.

ಕಲಾವಿದ ಮಾರುತಿ ಬಾಣದ ಇತ್ತೀಚೆಗಷ್ಟೇ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ 2020 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಸ್ವೀಕರಿಸಿದರು.ಆದರೂ ಯಾವ ಹಮ್ಮು ಬಿಮ್ಮು ಇಲ್ಲದೆ ಸದಾ ಕಲೆಯ ಕನವರಿಕೆಯಲ್ಲಿ ಧ್ಯಾನಿಸುತ್ತ ಕಲಾ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ತಮ್ಮ ಬದುಕಿನಲ್ಲಿ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ,ಯಾವುದಕ್ಕೂ ಹೆದರದೆ ಬಣ್ಣಗಳೊಂದಿಗೆ ಬಾಂಧವ್ಯ ಬೆರೆಸಿದ ಪ್ರೀತಿ ಅನನ್ಯವಾದದ್ದು. ಯಾರಿಂದ ಏನನ್ನೂ ನಿರೀಕ್ಷಿಸದೆ ತಮ್ಮ ಕಾಯಕದಲ್ಲಿ ಕೈಲಾಸ ಕಂಡವರು.ಕಲಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ನಾಡಿನ ಹಲವೆಡೆ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳನ್ನು ಮಾಡುತ್ತಾ ಕ್ರಿಯಾಶೀಲರಾಗಿದ್ದಾರೆ.ತನ್ನ ಸುತ್ತಲಿನ ಯುವಕರನ್ನು ಕಲೆಯ ಧ್ಯಾನದ ಪ್ರತೀಕವಾಗಿ ತೊಡಗಿಕೊಳ್ಳಬೇಕು.ಉತ್ತಮ ಕಾರ್ಯಗಳಲ್ಲಿ ಮುನ್ನಡೆಯಬೇಕು.ಸಮಾಜಕ್ಕಾಗಿ,ಕಲೆಗಾಗಿ ಅವಿರತ ಶ್ರಮಿಸಬೇಕು ಅಂದಾಗ ನಮ್ಮ ಬದುಕು ಸಾರ್ಥಕತೆ ಆಗುತ್ತದೆ ಎಂಬ ಪ್ರೀತಿದಾಯಕ ಮಾತುಗಳು ಬಾಣದ ಅವರಿಂದ ಕೇಳಿದ್ದೆ ಜಾಸ್ತಿ.ತೊಂದರೆ,ತಕರಾರು,ಕಾಲೆಳೆವ,ಹಿಂಸಿಸುವವರ ಮಧ್ಯೆಯೇ ಬದುಕಿ ಗೆಲ್ಲಬೇಕು.ಆಗ ನಮಗೆ ಬೈದವರೆ ಮತ್ತೆ ನಮ್ಮನ್ನು ಸನ್ಮಾನಿಸಿದಂತಾಗುತ್ತದೆ ಎಂಬ ನಿಲುವನ್ನು ಸ್ಪಷ್ಟಪಡಿಸುತ್ತಾರೆ.

ಕೊರೊನಾ ರೋಗದ ಕಾರಣಕ್ಕೆ ಇಡೀ ವಿಶ್ವವೇ ನಲುಗಿ ಹೋಗಿತ್ತು.ಭಾರತವಂತೂ ಕಂಪ್ಲೀಟ್ ಬಂದಾಗಿ ಎಲ್ಲರೂ ಮನೆಯಲ್ಲಿ ಸೇರಿ ಅನೇಕ ತೊಂದ್ರೆ.ನೋವು,ನಲಿವುಗಳನ್ನು ಅನುಭವಿಸಿದರು.ಹೊಟ್ಟೆ ತುಂಬ ಅನ್ನ ಇದ್ದವರು ಖುಷಿಯ ಜಾತ್ರೆ ಮಾಡಿದರೆ,ದುಡಿದು ತಿನ್ನುವವರ ನರಳಾಟ ಮುಗಿಲಿಗೆ ಮುಟ್ಟಿದಂತೆ ಆಗಿತ್ತು.ಇಂತಹ ಪರಸ್ಥಿತಿಯಲ್ಲಿ ಲೇಖಕರು ಕಲಾವಿದರು ತಮ್ಮ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಂಡವರು ಇದ್ದಾರೆ.ಅಷ್ಟೇ ನಿರಾಶೆಗೊಂಡು ಅತ್ತವರು ಇದ್ದಾರೆ.ಆದರೆ ಮಾರುತಿ ಬಾಣದ ಅವರು ಮಾತ್ರ ಲಾಕ್ ದೌನ್ ಮಾತ್ರ ಮನೆಯಲ್ಲಿ ತುಂಬಾ ಅರ್ಥಪೂರ್ಣವಾಗಿ ಕಳೆದಿದ್ದಾರೆ ಅನ್ನುವುದಕ್ಕೆ ಈ ಕಲಾ ಪ್ರದರ್ಶನವೇ ಸಾಕ್ಷಿ.

ಪರಿಸರ ಮನುಷ್ಯನಿಗೆ ಎಷ್ಟೊಂದು ಪರಿಣಾಮಕಾರಿ.ಪ್ರಕೃತಿ ನಾಶವಾದರೆ ಮಾನವನು ವಿನಾಶದತ್ತ ಮುಖ ಮಾಡಿಕೊಳ್ಳುತ್ತಾನೆಂಬ ಸೂಕ್ಷ್ಮ ಗ್ರಹಿಕೆಯ ಚಿಂತನೆಗಳು ಬಾಣದ ಅವರ ಮನಸಲ್ಲಿ ಪ್ರಕಟಗೊಂಡಿರಬೇಕು ಅನಿಸುತ್ತೆ.ತಾನು ನೋಡಿದ,ಹಚ್ಚ ಹಸಿರ ಸ್ವಚ್ಛಂದದ ಗಾಳಿಯನ್ನು ಸ್ವೀಕರಿಸಿದ,ಕಣ್ತುಂಬಿಕೊಂಡ ನಿಸರ್ಗದೇವತೆಯ ಆತ್ಮವನ್ನೇ ತನ್ನ ಕ್ಯಾನವಾಸ್ ಗಳಿಗೆ ಜೀವ ತುಂಬಿದಂತೆ ಚಿತ್ರಿಸಿದ ಬಣ್ಣದ ಚಿತ್ರಗಳು ಬಾಣದ ಅವರ ಬದುಕಿನ ಅಮೂಲ್ಯ ಬೆಳಕೆಂದೇ ಕಾಣುತ್ತದೆ. ಪ್ರಕೃತಿ ವಿಕೋಪಗೊಂಡರೆ ಇಂತಹ ಭಯಾನಕ ಕಾಯಿಲೆಗಳು ಮಾನವನನ್ನು ಮತ್ತೆ ಮತ್ತೆ ಕಾಡುತ್ತವೆ ಎಂಬ ಹಿನ್ನಲೆಯಲ್ಲಿ ಪ್ರಕೃತಿ ಪ್ರೀತಿಯ ಚೆಲುವನ್ನು ಸಮಾಜಕ್ಕೆ ಮಾರ್ಗದರ್ಶನದ ನೆಲೆಯಲ್ಲಿ ಚಿತ್ರಿಸಿ ತೋರಿಸಿದಂತಿದೆ.ಕೊರೊನಾ ಕಾಲದಲ್ಲಿ ಮನೆಯಲ್ಲಿ ಕಾಲ ಹೇಗೆ ಕಳೆಯಬೇಕು ಅನ್ನುವವರಿಗೆ ತನ್ನ ಕಲಾ ರಚನೆಯ ತತ್ವ ವಿವೇಚನೆಯೊಂದಿಗೆ ಹೀಗೆಯೂ ಕಾಲವನ್ನು ಬಳಸಿಕೊಳ್ಳಬೇಕು ಎಂಬ ಅರಿವನ್ನು ಭಿತ್ತರಿಸಿದಂತಿದೆ.ನಿಜಕ್ಕೂ ಮಾರುತಿ ಬಾಣದ ಅವರ ಕಲಾಯಾನ ನಾವೆಲ್ಲರೂ ಮೆಚ್ಚಲೇಬೇಕು.

ಅವರಿವರ ಬಗ್ಗೆ ಕೆಟ್ಟದಾಗಿ ಮಾತಾಡುವ ಮುನ್ನ,ಮಾತಿಗಿಂತ ಕೃತಿ ಮೇಲು ಎಂಬ ಚಿಂತನೆ ಸಾಧಕನದು ಆಗಬೇಕು ಅನ್ನುತ್ತಾರೆ.ಇವರ ಪ್ರತಿಯೊಂದು ನಿಸರ್ಗ ಚಿತ್ರವು ಒಂದಕ್ಕೊಂದು ಭಿನ್ನವಾಗಿ, ನೋಡುವ ಕಣ್ಣುಗಳಿಗೆ ಹೊಸದೊಂದು ವಿಚಾರ ನೀಡುವ,ಮನೆಯ,ಕಚೇರಿಯ ಭಿತ್ತಿಗೆ ಈ ಚಿತ್ರಗಳನ್ನು ನೇತಾಕಿದರೆ ಮನಕ್ಕೆ ಶಾಂತಿ ಸಹನೆ ಪ್ರೀತಿ ಗೌರವ ಏನೆಲ್ಲ ಚಿಂತನೆಗಳಿಗೆ ಹಚ್ಚುತ್ತವೆ ಎಂಬ ಆಶಾಭಾವ ಮೊಳಕೆಯೊಡೆಯದೆ ಇರದು ಎಂದೆನಿಸುತ್ತದೆ.

ಧಾರವಾಡದ ಸರಕಾರಿ ಆರ್ಟ್ ಗ್ಯಾಲರಿಯಲ್ಲಿ 5 ಜನೇವರಿ 2022 ರಿಂದ 7 ಜನೇವರಿ 2022 ರವರೆಗೆ ಪ್ರದರ್ಶನ ಕಂಡ ಈ ಕಲಾಕೃತಿಗಳು ನೋಡುವ ಕಣ್ಣಿಗೆ ಅನಂದವನ್ನಷ್ಟೇ ನೀಡುವುದಲ್ಲದೆ ಈ ಪರಿಸರದಲ್ಲಿ ನಾವು ಕುಳಿತು ನಲಿದಾಡಬೇಕಲ್ಲವೇ ?ಎಂದೆನಿಸುತ್ತದೆ.ಹಾಗಾದರೆ ಈ ಪ್ರಕೃತಿ ಎಲ್ಲಿದೆ ಎಂದು ಪ್ರಶ್ನಿಸುವ ಮನಸ್ಸುಗಳಿಗೆ ಬಾಣದವರ ಉತ್ತರ ಈ ಚಿತ್ರದ ಪರಿಸರ ನನ್ನೆದೆಯೊಳಗೆ ಇರುವುದು. ಒಮ್ಮೆ ನಾನು ಸಿಕಾಗೋ ದೇಶಕ್ಕೆ ಪ್ರವಾಸ ಮಾಡಿದ್ದೆ.ಅಲ್ಲಿ ನೋಡಿದ ಪ್ರಕೃತಿ ಇವಾಗ ನನ್ನೆದೆಯ ಗೂಡಿನಲ್ಲಿ ಹಚ್ಚ ಹಸಿರಾಗಿ ಅರಳಿವೆ.ಆ ನೆನಪಿನ ಎದೆಯ ಛಾಯೆಯೇ ಇವಾಗ ಕ್ಯಾನವಾಸ್ ಮೇಲೆ ನಗು ಚೆಲ್ಲಿವೆ ಎಂದು ಹೇಳುತ್ತಾರೆ.ಅಂದ್ರೆ ಯಾವುದೇ ಫೋಟೋಗ್ರಾಫಿಯ ಯಥಾವತ್ತಾದ ಪ್ರತಿಕೃತಿಯಲ್ಲ.ಅಂದು ನೋಡಿದ,ಅನುಭವಿಸಿದ ಪ್ರಕೃತಿ ಪ್ರೀತಿಯ ಪಯಣದ ಚಿತ್ತಾರಗಳೆಂದು ನುಡಿಯುತ್ತಾರೆ.ಸ್ಮರಣದನುಭವದ ಮರು ಸೃಷ್ಟಿ.ಬಹು ಕಾಡಿದ ಪರಿಸರ ನನ್ನೆದೆಯೊಳಗೆ ಹಸಿರಾಗಿ ಇಂದಿಗೂ ಕಾಡಿದ ಕಾರಣಕ್ಕಾಗಿ ಈ ಪರಿಸರ ಚಿತ್ರಗಳು ರಚನೆಯಾಗಿವೆ ಎಂದು ಉತ್ತರಿಸುತ್ತಾರೆ.ಆದರೂ ಇಂತಹ ಪ್ರಕೃತಿ ಧ್ಯಾನದ ಕಡೆ ಮನಸ್ಸು ಮಾಡಿದ ಚಿಂತನೆ ಕಾಲದ ವಾಸ್ತವದಲ್ಲಿ ಪ್ರಕೃತಿಯನ್ನು ಮಾನವ ಸದಾ ಕಾಲ ಪ್ರೀತಿಸಬೇಕು ಎಂಬ ಪರಿಕಲ್ಪನೆಯ ಕಲಾ ರಚನೆ ಬಾಣದವರದು ಎಂದೆನಿಸುತ್ತದೆ ಅಲ್ಲವೇ ?

ಸರಕಾರಿ ಕಲಾ ಮಹಾವಿದ್ಯಾಲಯದಲ್ಲಿ ಮೂರು ಗ್ಯಾಲರಿಗಳಿದ್ದು ಸಂಪೂರ್ಣ ಮೂರು ಗ್ಯಾಲರಿಗಳು ನಿಸರ್ಗ ಚಿತ್ರಗಳ ಕ್ಯಾನವಾಸ್ ತುಂಬಿವೆ.ಸುಮಾರು ಎಪ್ಪತ್ತು ವರ್ಣಕಲಾಕೃತಿಗಳು ಪ್ರದರ್ಶನಗೊಂಡಿವೆ.ಅದರಲ್ಲಿ ನೈಜ ಮತ್ತು ಸೃಜನಶೀಲ ನಿಸರ್ಗಚಿತ್ರ ಪಯಣ ಎದ್ದು ಕಾಣುತ್ತದೆ.ನೈಜತೆಯಲ್ಲಿ ಹಾಗೂ ಸೃಜನಶೀಲತೆಯಲ್ಲಿ ತನ್ನ ಕ್ರಿಯಾಶೀಲತೆಯ ಚೆಲುವು ಅನಾವರಣಗೊಂಡಿದೆ.ಹಾಗಾಗಿ ಈ ಪ್ರದರ್ಶನ ಅರ್ಥಪೂರ್ಣ ಎಂಬುದಕ್ಕೆ ಎರಡು ಮಾತಿಲ್ಲ.

ಪ್ರತಿಯೊಂದು ಕಲಾಕೃತಿಗಳ ಆಂತರಿಕ ಭಾವನೆ ಭಿನ್ನ ಮಾದರಿಯಲ್ಲಿ ಚಿಂತನೆಗೀಡುಮಾಡುತ್ತವೆ.ಎಳೆದ ಗೆರೆ,ತುಂಬಿದ ಬಣ್ಣ,ಗುಡ್ಡಗಾಡು,ನೀರು,ಗಿಡ,ಮರ,ಬಂಡೆಗಲ್ಲು,ಸಾಲು ಮರಗಳು,ಚಿಕ್ಕ ಚಿಕ್ಕ ಚಿಗುರು,ಎಲೆ,ಬಳ್ಳಿ,ಎಲ್ಲವೂ ಆಯಾ ವಸ್ತು ವಿನ್ಯಾಸದ ಹಿನ್ನೆಲೆಯಲ್ಲಿ ಚೆಲುವನ್ನು ಝೇಂಕರಿಸಿವೆ. ಅಕ್ರಲಿಕ್ ವರ್ಣದಿಂದ ರಚಿಸಿದರೂ ಆಯಿಲ್ ಪೇಂಟಿಂಗ್ ಮಾದರಿಯ ನೈಜತೆಯಲ್ಲಿ ಮೂಡಿ ಬಂದ ಚಿತ್ರಗಳು ಆಕರ್ಷಕ.ಅಪ್ಪಟ ನೀರು ಬಣ್ಣದಿಂದಲೇ ಮತ್ತು ಪ್ರಕೃತಿಯ ಆಲಯದ ಮಧ್ಯೆ ಕುಳಿತು ಬಿಡಿಸುವ ನಿಸರ್ಗಚಿತ್ರಯಾನದ ಪರಂಪರೆಯನ್ನು ಮುರಿದು,ಹೀಗೂ ಹೀಗೆ ಚಿತ್ರ ಬರೆಯಬಹುದು ಎಂಬ ಹೊಸ ಬಗೆಯ ನಿಲುವನ್ನು ತೋರಿಸಿದ ಸಾಹಸಕ್ಕೆ ಸಾಕ್ಷಿಯಾದಂತೆ ಕಂಡುಬರುತ್ತದೆ.

ಎತ್ತರ ಗಾತ್ರದ ಮರಗಳ ಬುಡವು ನೈಫ್ನಿಂದ ಬಣ್ಣ ಲೇಪನ ಶೈಲಿ,ಕಪ್ಪು ,ಬಿಳಿ,ಕೆಂಪು,ಹಳದಿ ಇತ್ಯಾದಿ ಬಣ್ಣಗಳ ಮಿಶ್ರಣದೊಂದಿಗೆ ತೈಲ ಮಾದರಿಯ ಚಿತ್ರಗಳಂತೆ ಗೋಚರಿಸುವ,ಆದರೂ ತೈಲವಲ್ಲದ ನಿಸರ್ಗ ಚಿತ್ರವಾಗಿ ನಿರ್ಮಿಸಿದ ಹೊಸ ದಾಖಲೆ ಮಾರುತಿಯವರ ಹೊಸ ಪ್ರಯತ್ನದ ಹಾದಿಯಂತೆ ಕಾಣುತ್ತದೆ.ಕುಂಚದ ತುದಿಗೆ ಮೆತ್ತಿದ ಗಟ್ಟಿಯಾದ ಬಣ್ಣದ ಲೇಪ,ಎಲೆ ಹೂ ಆಕಾರದ ಮೂಡುವಿಕೆ ವಿಶೇಷ.ದಪ್ಪ.ತೆಳುವು. ನಿರೀನಾಕಾರ.ಗಿಡ,ಮರ,ರಂಬೆ, ಕೊಂಬೆ,ಬೆಟ್ಟ,ಹಸಿರು ಮರಗಳ ಮಧ್ಯೆ,ಕಪ್ಪು ಕಲ್ಲಿನ ನಡುವೆ ಹರಿವ ಹಾಲಿನ ಬಣ್ಣದ ನೀರು.ಬುರುಗ,ಬಗ್ಗೆ,ಜೋರಾದ ಬಿಳುವಿಕೆಯ ಸೆಳೆತ,ಒಂದಾ ಎರಡಾ ನೂರೆಂಟು ಬಗೆಯ ಚಿತ್ತಾರನ್ನಿಲ್ಲಿ ಕ್ಯಾನವಾಸ್ ಗೆ ಬರೆದು ಬಿಟ್ಟಿದ್ದಾರೆ.ನೋಡಿದಷ್ಟು ಆನಂದ.ಬರೆದಷ್ಟು ಪುಟ ಮೀರುವ ತವಕ.ಹೀಗೆ ಏನೆಲ್ಲ ಸಂಗತಿಗಳನ್ನು ನೋಡುಗನ ಎದೆಗೆ ಒದಗಿಸಿದ ಗೌರವ ಮಾರುತಿ ಬಾಣದವರ ಪ್ರಕೃತಿ ಕಲಾ ಪ್ರದರ್ಶನಕ್ಕಿದೆ.

ಕಲಾ ಪ್ರದರ್ಶನ ಮುಗಿವ ಮುನ್ನವೇ ದೀಪ ಹಚ್ಚಿದ ದಿನದಂದೇ ಹನ್ನೊಂದು ಕಲಾಕೃತಿಗಳು ಮಾರಾಟವಾಗಿ ಬಾಣದವರ ರಚನೆಗೆ ಮತ್ತಷ್ಟು ಮೆರಗನ್ನು ನೀಡಿದಂತಾಗಿದೆ.ಆ ಕಲಾಕೃತಿ ಮಾರಾಟ ಮಾಡಬಾರದಿತ್ತು ಅನ್ನುವ ಪ್ರಶ್ನೆಗೆ ಮತ್ತೆ ಮಾಡೋಣ ಬಿಡಿ ! ಇಂತಹ ಕಲಾಕೃತಿಗಳು ಮತ್ತೆ ಮತ್ತೆ ಸೃಷ್ಟಿಸುವೆ ಅನ್ನುವ ಭರವಸೆಯನ್ನು ನೀಡುತ್ತಾರೆ.ಇಂತಹ ಮಾತುಗಳನ್ನಾಡುವವರು ಕೇವಲ ನಿರಂತರ ಕಲಾ ರಚನೆಯಲ್ಲಿ ತೊಡಗುವ ಕೈ ಬೆರಳುಗಳು ಮಾತ್ರ ಮಾತನಾಡುತ್ತವೆ.ಕೈಲಾಗದ,ಇವೆ ನಮ್ಮ ಅಂತಿಮ ರಚನೆ ಅನ್ನುವ ಮನಸ್ಥಿತಿಯುಳ್ಳ ಕಲಾವಿದರು ತನ್ನ ಕೃತಿಯನ್ನು ಮಾರುವ ಮುನ್ನ ಹಲವು ಸಲ ಹಲಭುತ್ತಾರೆ. ಮತ್ತೆ ಈ ಕೃತಿಗಳನ್ನು ಮಾಡುತಿನೊ ಇಲ್ಲೊ? ಎಂಬಂತೆ.ಆದರೆ ಮಾರುತಿಯವರ ಮಾತಿನಲ್ಲಿ ಮತ್ತೆ ಮತ್ತೆ ಸೃಷ್ಟಿಸುವೆ ಅನ್ನುವ ಅಚಲ ನಿರ್ಧಾರ ಪ್ರಕಟಿಸಿದ್ದು ಅವರ ಕಲಾ ಕ್ರಿಯಾಶೀಲತೆ ಮುಂದುವರಿಕೆಯಾಗಿ ನುಡಿದ ಪ್ರತೀಕದಂತೆ ಆಯಿತು.

ಅಲ್ಲದೆ ಮಾರುತಿ ಬಾಣದವರು ತಮ್ಮ ಕಲಾ ರಚನೆಯೊಂದಿಗೆ ಕಲಾ ಸಮಾಜದ ಸೇವೆಗಾಗಿ ತಮ್ಮನ್ನು ತಾವು ದುಡಿಸಿಕೊಂಡಿದ್ದಾರೆ.ಚಿತ್ತಾರ ಕಲಾ ಬಳಗ,ಕಲಾ ತಪಸ್ವಿ ಡಿ.ವಿ.ಹಾಲಭಾವಿ ಟ್ರಸ್ಟಿನ ಸದಸ್ಯರಾಗಿ, ಸೇವೆಯನ್ನು ತೊಡಗಿಕೊಂಡು ಹಲವಾರು ಕ್ರಿಯಾಶೀಲ ಚಟುವಟಿಕೆಗಳನ್ನು ಮಾಡುತ್ತಾ,ಕಲಾ ಸಾಧಕರ ಸೇವೆಗೆ ಉತ್ತರ ಪ್ರಶಸ್ತಿ ಪುರಸ್ಕಾರವನ್ನು ಕೊಡಿಸುವಲ್ಲಿ ಇವರ ಪಾತ್ರ ಬಹುಮುಖ್ಯವಾಗಿದೆ ಎಂಬುದು ಮರೆಯುವಂತಿಲ್ಲ.

ಹಾಗಾಗಿ ಇವರ ಕಲಾ ಬದುಕು ಎಲ್ಲರಿಗೂ ಮಾದರಿಎಂಬುದು ಮರೆಯದೆ ಇರದು. ಇಂತಹ ಸಾಮಾಜಿಕ,ಸಾಂಸ್ಕೃತಿಕ, ಕಾಳಜಿಯುಳ್ಳ ಕಲಾವಿದ ಮಾರುತಿ ಬಾಣದ ಅವರಿಗೆ ಕರ್ನಾಟಕ ಲಲಿತಕಲಾ ಅಕಾಡೆಮಿ ತನ್ನ ವಾರ್ಷಿಕ ಕಲಾ ಪ್ರದರ್ಶನದಲ್ಲಿ ಗೌರವ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದು ತನ್ನ ಹೀರಿಮೆಯನ್ನು ಗಳಿಸಿಕೊಂಡಿದೆ ಅಂತ ಅನಿಸುತ್ತದೆ.

ಲೇಖನ :ಡಾ.ಬಸವರಾಜ ಎಸ್.ಕಲೆಗಾರ
ಸಹಾಯಕ ಅಧ್ಯಾಪಕರು
ಸ್ನಾತಕೋತ್ತರ ದೃಶ್ಯಕಲಾ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ