ಎಲ್ಲ ವಾನರರಿಗೆ ಸುಗ್ರೀವ ನುಡಿದ | ಕಿಷ್ಕಿಂದಕಾಂಡ ರಾಮಾಯಣ ಭಾಗ -28

By admin


ಎಲ್ಲ ವಾನರರಿಗೆ ಸುಗ್ರೀವ ನುಡಿದ:” ಓ ವಾನರರೇ,I
ನಾ ಹೇಳಿಕೊಟ್ಟಂತೆ ಇಡೀ ಭೂಮಂಡಲವನ್ನು ಜಾಲಾಡಿಸಿ”; II
ಕೇಳುತ್ತಲೆ ಸುಗ್ರೀವನ ಆಜ್ಞೆ ವಾನರರುI
ಸಿಡಿದ್ಹಬ್ಬಿದರು ನೆಗೆಯುತ ಮಿಡತಿಗಳಂತೆ; II
ಲಕ್ಷ್ಮಣನೊಂದಿಗೆ ರಾಮ ಪ್ರಸವನ ಪರ್ವತದಲಿI
ಕಾಯ್ದರು ಸೀತೆ ಸುಳುವಿಗಾಗಿ ಒಂದು ಮಾಸ; II
ಉತ್ತರದ ಪರ್ವತಗಳ ರಾಜ್ಯಗಳತ್ತ ಸಾಗಿದI
ವಾನರ ಸೇನೆಯೊಂದಿಗೆ ಸಾಹಸಿ ವೀರ ಶತಬಲಿ; ಸಾಗಿದರು II
ಪೂರ್ವದಿಕ್ಕಿನತ್ತ ಯುವ ವಿನತ ವಾನರ ಸೇನೆಯೊಂದಿಗೆ,I
ತಾರ, ಹನುಮ ದಕ್ಷಿಣ ಅಗಸ್ತ್ಯ-ಭೂಮಿಯತ್ತ ಅಂಗದನೊಂದಿಗೆ;II
ಸಾಗಿದ ಸುಶೇಣ ಭಯಾನಕ ವರುಣಭೂಮಿ ಪಶ್ಚಿಮದತ್ತ, I
ಎಲ್ಲ ವಾನರರೂ ಸಾಗಿದರು ಎಲ್ಲ ದಿಕ್ಕುಗಳತ್ತ; 4.45.6
ಹೊರಟರು ತಮ್ಮ ತಮ್ಮ ಸಾಹಸ ಬಲದೊಂದಿಗೆ ವಾನರ ವೀರರು,I
ಕೇಕೇ ಗದ್ದಲದಿ ಸಿಂಹದ ಘರ್ಜನೆಯಂತೆ ಘರ್ಜಿಸಿದರು; II
“ರಾವಣನ ವಧಿಸಿ ಸೀತೆಯನ ತರುವೆವು” ಘೋಷಣೆI
ಹಾಕುತ ಸಾಗಿದರು ವಾನರ ಯುವ ದಳಪತಿಗಳು; II
“ವೃಕ ಪರ್ವತಗಳನ್ನು ಬಗೆದು, ಭೂಮಿ ಬಿರುಗಾಳಿ ಸಾಗರ ಭೇಧಿಸಿI
ಸೀತೆಯನ ಅರಸಿ ತರುವೆವವು”ವೆಂದರು ವಾನರರು; II
“ನೂರು ಯೋಜನೆ ಜಿಗಿಯಬಲ್ಲೆ”ನೆಂದ ಒಬ್ಬI
“ನೂರು ಯೋಜನೆ ಗಿಂತ ಹೆಚ್ಚಿಗೆ ಜಿಗಿಯಬಲ್ಲೆ”ನೆಂದ ಮತ್ತೋಬ್ಬ; II
“ಭೂಮಿ, ಸಾಗರ ,ಅರಣ್ಯ,ಪಾತಾಳ ಪರ್ವತಗಳಲಿI
ಸಂಚರಿಸಿದರೂ ಗೋಚರಿಸೆನು”ನೆಂದ ಮಗದೋಬ್ಬ; II
ಕೇಕೆ ಹಾಕುತ ಘೋಷಿಸುತ ಸಾಗಿದರು,I
ವಿದಾಯ ಹೇಳಿ ಸುಗ್ರೀವನಿಗೆ ವಾನರ ವೀರರು. II
ಕಿಷ್ಕಿಂಧಕಾಂಡ ರಾಮಾಯಣ

ಜಂಬುದ್ವೀಪದ ನಾಲ್ಕೂ ದಿಕ್ಕುಗಳ ಪ್ರದೇಶಗಳತ್ತ ಸೀತೆಯನ್ನು ಹುಡುಕಲು ಹೊರಟ ವಾನರ ವೀರರನ್ನು ಸಂಬೋಧಿಸಿ ಸುಗ್ರೀವನು ನುಡಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ಬಣ್ಣಿಸಿರುವರು:(1) ದಂಡಯಾತ್ರೆಗೆ ಹೊರಡುವಾಗ ರಾಜನು ಸಾಮಾನ್ಯವಾಗಿ ವೀರ ಸೈನಿಕರಿಗೆ ಬೋಧಿಸುವ ಪರಂಪರೆ, “ಓ ವಾನರರೇ, ನಾನು ಹೇಳಿಕೊಟ್ಟಂತೆ ಇಡೀ ಭೂಮಂಡಲವನ್ನು ಜಾಲಾಡಿಸಿ”ಎಂದು ಆಜ್ಞೆ ನೀಡುತ ಸುಗ್ರೀವನು ವಾನರ ವೀರರಿಗೆ ನುಡಿದನು, (2) ಕೇಳುತ್ತಲೆ ಸುಗ್ರೀವನ ಆಜ್ಞೆ ವಾನರರು ನೆಗೆಯುತ ಮಿಡತಿಗಳಂತೆ ಚದುರಿ ಹರಡಿದರು(ಅ) ಸಾಹಸಿ ವೀರ ಶತಬಲಿಯು ವಾನರ ಸೇನೆಯೊಂದಿಗೆ ಉತ್ತರದ ಪರ್ವತಗಳ, ರಾಜ್ಯಗಳತ್ತ ಸೀತೆಯನ್ನು ಹುಡುಕಲು ಸಾಗಿದರು; (ಆ) ಯುವ ವಿನತನು ವಾನರ ಸೇನೆಯೊಂದಿಗೆ ಪೂರ್ವದಿಕ್ಕಿನತ್ತ ಸಾಗಿದರು; (ಇ) ತಾರ, ಹನುಮ ಅಂಗದನೊಂದಿಗೆ ದಕ್ಷಿಣ ಅಗಸ್ತ್ಯ-ಭೂಮಿಯತ್ತ ಸಾಗಿದರು; (ಈ) ಸುಶೇಣನು ಭಯಾನಕ ವರುಣಭೂಮಿ ಪಶ್ಚಿಮದತ್ತ ತನ್ನ ಸೇನೆಯೊಂದಿಗೆ ಸಾಗಿದನು; ರಾಮನ ಕಾರ್ಯಕ್ಕಾಗಿ ಎಲ್ಲ ವಾನರರೂ ಎಲ್ಲ ದಿಕ್ಕುಗಳತ್ತ ಸಾಗಿದರು; ತಮ್ಮ ತಮ್ಮ ಸಾಹಸ ಬಲದೊಂದಿಗೆ ವಾನರ ವೀರರು ಸೀತೆಯನ್ನು ಹುಡುಕಲು ಹೊರಟರು, ವಾನರರು ಕೇಕೇ ಗದ್ದಲ ಹಾಕುತ್ತ ಸಿಂಹದ ಘರ್ಜನೆಯಂತೆ ಘರ್ಜಿಸಿದರು: “ರಾವಣನನ್ನು ವಧಿಸಿ ಸೀತೆಯನ್ನು ಮರಳಿ ತರುವೆವು” ಎಂದು ಘೋಷಣೆ ಹಾಕುತ ವಾನರ ಯುವ ದಳಪತಿಗಳು ಮುಂದೆ ಮುಂದೆ ಸಾಗಿದರು; “ವೃಕ ಪರ್ವತಗಳನ್ನು ಬಗೆದು, ಭೂಮಿ ಬಿರುಗಾಳಿ ಸಾಗರಗಳನ್ನು ಭೇಧಿಸಿ ಸೀತೆಯನ್ನು ಹುಡುಕಿ ತರುವೆವವು”ಎಂದು ವಾನರ ವೀರರು ಕೂಗಿದರು. (3) ವಾನರರು ಪರಸ್ಪರ ತಮ್ಮ ತಮ್ಮ ಸಾಮರ್ಥ್ಯವನ್ನು ಹೇಳಿಕೊಂಡರು: “ನೂರು ಯೋಜನೆ ಜಿಗಿಯಬಲ್ಲೆ”ನೆಂದನು ಒಬ್ಬ ವಾನರ, “ನೂರು ಯೋಜನೆಗಿಂತ ಹೆಚ್ಚಿಗೆ ಜಿಗಿಯಬಲ್ಲೆ”ನೆಂದನು ಮತ್ತೋಬ್ಬ ವಾನರ, “ಭೂಮಿ, ಸಾಗರ ,ಅರಣ್ಯ,ಪಾತಾಳ ಪರ್ವತಗಳಲ್ಲಿ ನಾನು ಸಂಚರಿಸಿದರೂ ಗೋಚರಿಸೆನು”ನೆಂದ ಮಗದೋಬ್ಬ ವಾನರ; ಹೀಗೆ ಕೇಕೇ ಹಾಕುತ, ಘೋಷಿಸುತ ವಿದಾಯ ಹೇಳಿ ಸುಗ್ರೀವನಿಗೆ ವಾನರ ವೀರರು ಸಾಗಿದರು. ಇತ್ತ ಲಕ್ಷ್ಮಣನೊಂದಿಗೆ ರಾಮನು ಪ್ರಸವನ ಪರ್ವತದಲ್ಲಿಯೇ ಸೀತೆಯ ಸುಳುವಿಗಾಗಿ ಒಂದು ಮಾಸದವರೆಗೆ ಕಾಯ್ದರು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ದಂಡೋಪದಂಡಗಳಲ್ಲಿ ನಾಲ್ಕೂ ದಿಕ್ಕುಗಳಿಗೆ ಹೊರಟ “ವೃಕ ಪರ್ವತಗಳನ್ನು ಬಗೆದು, ಭೂಮಿ ಬಿರುಗಾಳಿ ಸಾಗರಗಳನ್ನು ಭೇಧಿಸಿ ಸೀತೆಯನ್ನು ಹುಡುಕಿ ತರುವೆವವು”ಎಂಬ ವಾನರ ವೀರರ ಕೂಗು ಅವರ ದೃಢವಿಶ್ವಾಸ ತೋರ್ಪಡಿಸಿದನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ