🟠DISTRICT NEWS :” ಯಾದಗಿರಿ| ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ : ಮಧ್ಯರಾತ್ರಿಯಿಂದ ಮಹಾಪೂಜೆ.!ಲಕ್ಷಾಂತರ ಭಕ್ತರ ನಿರೀಕ್ಷೆ, ಭಾರಿ ಪೊಲೀಸ್ ಬಂದೋಬಸ್ತ್!
• ಸೆಕ್ಯುಲರ್ ವಾಯ್ಸ್ ನ್ಯೂಸ್ ಯಾದಗಿರಿ :
ನಾಡಿನ ಆರಾಧ್ಯ ದೈವಗಳಲ್ಲಿ ಒಂದಾದ ಮೈಲಾಪುರದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಸೋಮವಾರದಿಂದಲೇ ಸಕಲ ಪೂಜಾ ಕೈಂಕರ್ಯಗಳೊಂದಿಗೆ ಆರಂಭಗೊಂಡಿದ್ದು, ಜ.14 ಮತ್ತು 15ರಂದು ಪ್ರಮುಖ ಸಂಪ್ರದಾಯಗಳು ಜರುಗಲಿವೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕ್ಷೇತ್ರದತ್ತ ಹರಿದುಬರುತ್ತಿದ್ದಾರೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಭಕ್ತರು ಮಲ್ಲಯ್ಯನ ಪಲ್ಲಕ್ಕಿ ಹಾಗೂ ಮಲ್ಲಯ್ಯನ ಮೂರ್ತಿಯನ್ನು ಹೊತ್ತುಕೊಂಡು ಕಳೆದ ನಾಲ್ಕೈದು ದಿನಗಳಿಂದ ಪಾದಯಾತ್ರೆ ಮೂಲಕ ಮೈಲಾಪುರಕ್ಕೆ ಆಗಮಿಸುತ್ತಿರುವುದು ಗಮನಸೆಳೆದಿದೆ.
ನೂರಾರು ಗ್ರಾಮಗಳಿಂದ ಸಾವಿರಾರು ಭಕ್ತರು ಕಾರು, ಜೀಪ್, ಕ್ರೂಸರ್ ಮತ್ತು ಬಸ್‌ಗಳ ಮೂಲಕ ಕ್ಷೇತ್ರಕ್ಕೆ ಆಗಮಿಸಿದ್ದು, ಜ.14ರ ಮಕರ ಸಂಕ್ರಾಂತಿ ದಿನ ನಡೆಯುವ ಸರಪಳಿ ಹರಿಯುವ ಸಂಪ್ರದಾಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಜಾತ್ರೆಯ ಯಶಸ್ಸಿಗಾಗಿ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆಯೊಂದಿಗೆ ಟೊಂಕ ಕಟ್ಟಿ ನಿಂತಿದೆ. ಜಿಲ್ಲಾಧಿಕಾರಿ ಹರ್ಷಲ್ ಬೋಯರ್, ಸಹಾಯಕ ತಹಸಿಲ್ದಾರ ಸುರೇಶ ಅಂಕಲಗಿ, ಎಸ್ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್ಪಿ ಧರಣೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಕಳೆದ ಒಂದು ವಾರದಿಂದಲೇ ಮೈಲಾಪುರದಲ್ಲಿ ಠಿಕಾಣಿ ಹೂಡಿ ವ್ಯವಸ್ಥೆಗಳನ್ನು ಪರಿಶೀಲಿಸುತ್ತಿದ್ದಾರೆ.
ತಹಸಿಲ್ದಾರ ಸುರೇಶ ಅಂಕಲಗಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸುಮಾರು 1000ಕ್ಕೂ ಅಧಿಕ ಸರ್ಕಾರಿ ನೌಕರರು, 1200 ಪೊಲೀಸ್ ಸಿಬ್ಬಂದಿ, 200 ಹೋಂಗಾರ್ಡ್ಸ್ ಹಾಗೂ ಕೆಕೆಆರ್‌ಟಿಸಿ ಅಧಿಕಾರಿಗಳು–ಸಿಬ್ಬಂದಿ ಜಾತ್ರಾ ಬಂದೋಬಸ್ತಿಗೆ ನಿಯೋಜಿತರಾಗಿದ್ದಾರೆ.
• ಮಧ್ಯರಾತ್ರಿಯಿಂದಲೇ ಮಹಾಪೂಜೆ
ಮಕರ ಸಂಕ್ರಾಂತಿ ಅಂಗವಾಗಿ ಮಂಗಳವಾರ ಮಧ್ಯರಾತ್ರಿಯಿಂದಲೇ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಗೆ ಮಹಾಪೂಜೆ ಆರಂಭವಾಗಲಿದೆ ಎಂದು ದೇವಸ್ಥಾನದ ಪ್ರಮುಖ ಖಂಡಪ್ಪ ಪೂಜಾರಿ ತಿಳಿಸಿದ್ದಾರೆ.
ರಾತ್ರಿ 12 ಗಂಟೆಯಿಂದ ಮಹಾಪೂಜೆ, ರುದ್ರಾಭಿಷೇಕ, ಭಂಡಾರ ಪೂಜೆ ಹಾಗೂ ಭಂಡಾರ ಅಲಂಕಾರ ಬೆಳಗಿನವರೆಗೆ ನಡೆಯಲಿದೆ ಎಂದು ಹೇಳಿದರು.• ಮದ್ಯಪಾನ–ಮದ್ಯ ಮಾರಾಟ ನಿಷೇಧ
ಜಾತ್ರೆಯ ಅಂಗವಾಗಿ ಜ.13ರ ಮಧ್ಯರಾತ್ರಿಯಿಂದ ಜ.15ರ ಮಧ್ಯರಾತ್ರಿವರೆಗೆ ಮೈಲಾಪುರ, ಅರಕೇರಾ ಹಾಗೂ ರಾಮನಮುದ್ರ ಗ್ರಾಮ ವ್ಯಾಪ್ತಿಯಲ್ಲಿ ಮದ್ಯಪಾನ ಮತ್ತು ಮದ್ಯ ಮಾರಾಟ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಎಲ್ಲ ವೈನ್‌ಶಾಪ್, ಬಾರ್, ನಗಟು ಮತ್ತು ಚಿಲ್ಲರೆ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಆದೇಶ ಹೊರಡಿಸಿದ್ದಾರೆ.
“ಮೈಲಾಪುರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. 1200 ಪೊಲೀಸ್ ಸಿಬ್ಬಂದಿಯನ್ನು ಜಾತ್ರಾ ಭದ್ರತೆಗೆ ನಿಯೋಜಿಸಲಾಗಿದೆ.”
— ಪೃಥ್ವಿಕ್ ಶಂಕರ್, ಪೊಲೀಸ್ ಅಧೀಕ್ಷಕರು
🟠DISTRICT NEWS :” ಯಾದಗಿರಿ| ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ : ಮಧ್ಯರಾತ್ರಿಯಿಂದ ಮಹಾಪೂಜೆ.!ಲಕ್ಷಾಂತರ ಭಕ್ತರ ನಿರೀಕ್ಷೆ, ಭಾರಿ ಪೊಲೀಸ್ ಬಂದೋಬಸ್ತ್!

