
ತೊಡಗಿದರು ವೀರ ವಾನರರು ಸುಗ್ರೀವನಾಜ್ಞೆಯಂತೆ I
ಸೀತೆ-ಶೋಧ ಕಾರ್ಯದಲಿ, ಜಾಲಾಡಿಸಿದರು ಎಲ್ಲ ತಾಣಗಳು: II
ಸರೋವರ, ನದಿದಡ, ದಟ್ಟಾರಣ್ಯ, ಜನಜಂಗುಳಿ ನಗರ,I
ದುರ್ಗಮ, ನಿರ್ಜನ, ಮರುಭೂಮಿ ಪರ್ವತ II
ಶಿಖರ ಪ್ರದೇಶಗಳು; ಮೂಲೆ ಮೂಲೆ ಹುಡುಕಿದರುI
ಸೀತೆ ರಾವಣರನು ಸಾಹಸಿ ವೀರ ವಾನರ ದಳಪತಿಗಳು; II
ಹುಡುಕಿ ಸೀತೆಯನು ದಿನ ರಾತ್ರಿ ಸಂದಿಗೊಂದಿಗಳಲ್ಲಿ,I
ಭೂಮಂಡಲದ ನಿಶ್ಚಿತ ಪ್ರದೇಶದಲಿ ಕೂಡಿದರು:II
ಹಣ್ಣು ಸೇವಿಸಿ, ವಿಶ್ರಾಂತಿ ಮಾಡಿ, ದಿನ ಎಣಿಸುತI
ನಿರತರಾದರು ಸೀತೆ-ಶೋಧ ಕಾರ್ಯದಲಿ ನಿತ್ಯ; II
ತಿಂಗಳ ಬಳಿಕ ,ಮರಳಿಬಂದ ಪೂರ್ವದಿಕ್ಕಿನಿಂದ ನಾಯಕ ವಿನತ I
ಸುಗ್ರೀವನಿಗೆ ಸೀತೆ ಸಿಗದ ವರದಿ ತಿಳಿಸಿದ; II
ಮರಳಿಬಂದ ಉತ್ತರದಿಕ್ಕಿನಿಂದ ನಾಯಕ ಶತಬಲಿI
ತಿಳಿಸಿದ ಸುಗ್ರೀವನಿಗೆ ಸೀತೆ ಸಿಗದ ವರದಿ; II
ಮರಳಿಬಂದ ಪಶ್ಚಿಮದಿಕ್ಕಿನಿಂದ ನಾಯಕ ಸುಶೇಣI
ತಿಳಿಸಿದ ಸುಗ್ರೀವನಿಗೆ ಸೀತೆ ಸಿಗದ ವರದಿ;II
ಪ್ರಸವನ-ಶಿಖರದಲಿ ರಾಮನ ಬಳಿಯಿದ್ದ ಸುಗ್ರೀವನಿಗೆ ಪೂರ್ವ,I
ಪಶ್ಚಿಮ ಉತ್ತರದ ದಂಡಯಾತ್ರಿಗಳು ನುಡಿದರು: II
“ಹುಡುಕಿದೆವು ಸಕಲ ಪರ್ವತ, ಸರೋವರ, ಸಾಗರI
ನಗರ, ಗಿಡಮರ ಬಳ್ಳಿ, ಗವಿ, ಎಲ್ಲ ತಂಗುದಾನಗಳನು; II
ರಾವಣನಂತೆ ಕಂಡ ಪ್ರಾಣಿ ದೈತರನು ಸಂಹರಿಸಿI
ದುರ್ಗಮ ತಾಣಗಳನು ಶೋಧಿಸಿದೆವು, ಹುಡುಕಿ; II
ಸಿಗಲಿಲ್ಮೆಮಗೆ ಸೀತೆ ಸುಳಿವು, ಆದರೆ ಓ ಸುಗ್ರೀವಾ I
ಸಾಹಸಿ ಧೀಮಂತ ಹನುಮಾನ ತರುವನು ಸೀತೆ ಸುಳಿವು”.II
ಕಿಷ್ಕಿಂಧಕಾಂಡ ರಾಮಾಯಣ
ಸುಗ್ರೀವನ ಆಜ್ಞೆಯಂತೆ ವಾನರವೀರರು ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳ ಪ್ರದೇಶಗಳಲ್ಲಿ ಸೀತೆಯನ್ನು ಹುಡುಕಿ ಅವಳು ಕಾಣದೇ ವಿಫಲಗೊಂಡು ಕಿಷ್ಕಿಂಧಕ್ಕೆ ಮರಳಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: ವೀರ ವಾನರರು ಸುಗ್ರೀವನಾಜ್ಞೆಯಂತೆ ಸೀತೆ-ಶೋಧ ಕಾರ್ಯದಲ್ಲಿ ತೊಡಗಿದರು, ತಾವು ತಲುಪಿದ ಎಲ್ಲ ತಾಣಗಳನ್ನು ಜಾಲಾಡಿಸಿದರು: ಸಾಹಸಿ ವೀರ ವಾನರ ದಳಪತಿಗಳು ಸರೋವರ, ನದಿದಡ, ದಟ್ಟಾರಣ್ಯ, ಜನಜಂಗುಳಿ ನಗರ, ದುರ್ಗಮ, ನಿರ್ಜನ, ಮರುಭೂಮಿ ಪರ್ವತ ಶಿಖರ ಪ್ರದೇಶಗಳ ಮೂಲೆ ಮೂಲೆಗಳಲ್ಲಿ ಸೀತೆ ಮತ್ತು ರಾವಣರನ್ನು ಹುಡುಕಿದರು; ದಿನನಿತ್ಯ ಹಗಲು ರಾತ್ರಿ ಸಂದಿಗೊಂದಿಗಳಲ್ಲಿ ಸೀತೆಯನ್ನು ಹುಡುಕಿ ಭೂಮಂಡಲದ ನಿಶ್ಚಿತ ಪ್ರದೇಶದಲ್ಲಿ ಕೂಡುತಿದ್ದರು ಹಾಗು ಹಣ್ಣು ಸೇವಿಸಿ, ವಿಶ್ರಾಂತಿ ಮಾಡಿ, ದಿನ ಎಣಿಸುತ ಸೀತೆ-ಶೋಧ ಕಾರ್ಯದಲಿ ನಿತ್ಯ ನಿರತರಾದರು, ಹೀಗೆ ಸೀತೆಯನ್ನು ಹುಡುಕುತ ಒಂದು ತಿಂಗಳ ಕಳೆದರು; ಒಂದು ಮಾಸದ ಬಳಿಕ ಪೂರ್ವದಿಕ್ಕಿನಿಂದ ನಾಯಕ ವಿನತ ಕಿಷ್ಕಿಂಧಕ್ಕೆ ಮರಳಿಬಂದು ಸೀತೆ ಸಿಗದ ವರದಿಯನ್ನು ಸುಗ್ರೀವನಿಗೆ ತಿಳಿಸಿದನು, ಅದರಂತೆ ಉತ್ತರದಿಕ್ಕಿನಿಂದ ನಾಯಕ ಶತಬಲಿ ಮರಳಿಬಂದು ಸೀತೆ ಸಿಗದ ವರದಿಯನ್ನು ಸುಗ್ರೀವನಿಗೆ ತಿಳಿಸಿದನು ಹಾಗು ಅದೇ ವೇಳೆ ಪಶ್ಚಿಮದಿಕ್ಕಿನಿಂದ ನಾಯಕ ಸುಶೇಣನು ಮರಳಿಬಂದು ಸೀತೆ ಸಿಗದ ವರದಿಯನ್ನು ಸುಗ್ರೀವನಿಗೆ ತಿಳಿಸಿದನು; ಪ್ರಸವನ-ಶಿಖರದಲಿ ರಾಮನ ಬಳಿಯಿದ್ದ ಸುಗ್ರೀವನಿಗೆ ಪೂರ್ವ, ಪಶ್ಚಿಮ ಮತ್ತು ಉತ್ತರದ ದಂಡಯಾತ್ರಿಗಳು “ಸಕಲ ಪರ್ವತ, ಸರೋವರ, ಸಾಗರ, ನಗರ, ಗಿಡಮರ ಬಳ್ಳಿ, ಗವಿ, ಎಲ್ಲ ತಂಗುದಾನಗಳಲ್ಲಿ ಸೀತೆಯನ್ನು ಹುಡುಕಿದೆವು; ರಾವಣನಂತೆ ಕಂಡ ಪ್ರಾಣಿ ದೈತರನು ಸಂಹರಿಸಿ ದುರ್ಗಮ ತಾಣಗಳಲ್ಲಿ ಸೀತೆಯನ್ನು ಹುಡುಕಿದೆವು ಆದರೆ ನಮಗೆ ಸೀತೆಯ ಸುಳಿವು ಸಿಗಲಿಲ್ಲ; ಓ ಸುಗ್ರೀವಾ, ಸಾಹಸಿ ಧೀಮಂತ ಹನುಮಾನನು ಸೀತೆ ಸುಳಿವು ತರುವನು” ಎಂದು ವರದಿ ಒಪ್ಪಿಸುತ್ತ ಸೀತೆ ಸುಳಿವುವನ್ನು ಹನುಮಾನ ತರುವನೆಂದು ವಿಶ್ವಾಸದ ಮಾತುಗಳನ್ನು ಆಡಿದರು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯನ್ನು ಹುಡುಕಲು ಹೋದ ವಾನರ ನಾಯಕರು ಮತ್ತು ಸೇನೆ ಭೂಮಂಡಲದ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕಿನ ಪ್ರದೇಶಗಳಲ್ಲಿ ಒಂದು ಮಾಸದವರೆಗೆ ಸೀತೆಯನ್ನು ಹುಡುಕಿ ಅವಳು ಸಿಗದೆಯಿದ್ದಾಗ ನಿರಾಶೆಯಿಂದ ಕಿಷ್ಕಿಂಧಕ್ಕೆ ಮರಳಿದ ಹಾಗು ಹನುಮನಲ್ಲಿಯ ಅವರ ವಿಶ್ವಾಸದ ಮಾತುಗಳನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
