By admin

ವಿಧಾನಸೌಧದಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಸಲಾದಪುರ

ಪಠ್ಯಕ್ರಮದಲ್ಲಿ ಮದ್ಯಪಾನ–ಮಾದಕ ವಸ್ತುಗಳ ವಿರುದ್ಧ ಜಾಗೃತಿ ಪಾಠಗಳು ಸೇರಿಸಿ

ಸೆಕ್ಯುಲರ್ ವಾಯ್ಸ್ ನ್ಯೂಸ್ ಬೆಂಗಳೂರು
ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರನ್ನು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರು ಭೇಟಿ ಮಾಡಿ ಮಹತ್ವದ ಚರ್ಚೆ ನಡೆಸಿದರು.

ಈ ವೇಳೆ ಮಾತನಾಡಿದ ಮಂಡಳಿ ಅಧ್ಯಕ್ಷರು, ಶಾಲಾ ಮಕ್ಕಳಲ್ಲಿ ಮದ್ಯಪಾನ ಹಾಗೂ ಮಾದಕ ವಸ್ತುಗಳ ದುಷ್ಟಭಾವವನ್ನು ತಡೆಯುವ ನಿಟ್ಟಿನಲ್ಲಿ ಶಾಲಾ ಪಠ್ಯಕ್ರಮದಲ್ಲೇ ಪರಿಣಾಮಕಾರಿಯಾದ ಜಾಗೃತಿ ಪಾಠಗಳನ್ನು ಸೇರಿಸುವ ಅಗತ್ಯವಿದೆ ಎಂದು ಮನವಿ ಮಾಡಿದರು.

ಮಕ್ಕಳಿಗೆ ಕೇವಲ ಪಾಠ್ಯಮಟ್ಟದಲ್ಲಷ್ಟೇ ಅಲ್ಲದೆ, ತಜ್ಞರ ಮೂಲಕ ತಿಂಗಳಿಗೆ ಕನಿಷ್ಠ ಒಂದು‌ ವಾರ ಶಾಲೆಗಳಲ್ಲಿ ಜಾಗೃತಿ ತರಬೇತಿಗಳು ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಅಪಾಯಗಳು, ಆರೋಗ್ಯ ಹಾಗೂ ಸಾಮಾಜಿಕ ಪರಿಣಾಮಗಳ ಕುರಿತು ಸ್ಪಷ್ಟ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ಸಲಹೆಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿ, ಮಕ್ಕಳ ಭವಿಷ್ಯವನ್ನು ಕಾಪಾಡುವ ದೃಷ್ಟಿಯಿಂದ ಇಂತಹ ಜಾಗೃತಿ ಕ್ರಮಗಳು ಅತ್ಯಂತ ಅಗತ್ಯವಿದೆ ಎಂದು ತಿಳಿಸಿದರು.
ಸಂಬಂಧಿಸಿದ ಇಲಾಖೆಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಸಹ ಅವರು ನೀಡಿದರು.
ಈ ಸಂದರ್ಭದಲ್ಲಿ ಆಳಂದ ಶಾಸಕ ಬಿ.ಆರ್. ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.