
ನಿರಾಶೆದಿ ದಣಿದು ಕುಳಿತ ವಾನರರಿಗೆ ನುಡಿದ ಅಂಗದ: I
“ನಾವು ಹುಡುಕಿದೆವು ಸೀತೆನ, ದುರ್ಗಮ ಅರಣ್ಯ ನದಿ ಪರ್ವತ II
ಪ್ರದೇಶಗಳಲಿ; ಹುಡುಕುತ್ತಿಹೆವು ದೀರ್ಘಕಾಲದಿ, I
ಕಾಲಹರಣವಾಯಿತು ಸಾಕಷ್ಟು ಹುಡುಕೋಣವೀಗ ಒಟ್ಟಾಗಿ, II
ಸುಗ್ರೀವನ ಶಿಸ್ತಿನ ಸೇನೆಯಂತೆ;I
ದಣಿವಿಗೆ ಶರಣಾಗದಿರೋಣ, ದುಃಖಕ್ಕೆ ಅಣಿಯಾಗದಿರೋಣ, II
ನಿದ್ರೆ ಆಲಸ್ಯಗಳಿಗೆ ಮಣಿಯದೇ, ಸೀತೆಯನು ಹುಡುಕೋಣ; I
ಮನಸ್ಸಿನ ಅಜ್ಞಾನ, ಅನಾನುಭವ ಕಾರಣ ಅಪಜಯಕ್ಕೆ, II
ಕಾರ್ಯ ಸಾಧಿಸಬೇಕಾಗಿದೆಮಗೆ,ನಾ ಹೇಳುತಿಹೆನು ನಿಮಗೆ; I
ದಣಿವು ನಿರಾಶೆಗಳಿಂದ ಕೊಡವಿ ಎದ್ದೇಳಿ, II
ಹುಡುಕೋಣ ಸೀತೆನ ಗಿರಿ ಪರ್ವತಗಳಲಿ; ಪ್ರಯತ್ನಕ್ಕೆ ಫಲವಿದೆ,I
ಪ್ರಯತ್ನ ಮಾಡದೇ ಕೈಚಲ್ಲುವದು ಅಕ್ಷಮ್ಯ;II
ಶೀಘ್ರ-ಕೋಪಿ ಸುಗ್ರೀವ, ರಾಮನ ಕಾರ್ಯದಲಿ,I
ದಂಡಿಸುವನು ಆಜ್ಞೆ-ಉಲ್ಲಂಘಕರನು, II
ಓ ವಾನರರೇ, ಹೀಗೆ ಹೇಳುತಿರುವೆ ನಾ ನಮ್ಮೇಲರ ಹಿತಕ್ಕಾಗಿ,I
ಸುಗ್ರೀವನ ಕೋಪದಿ ಪಾರಾಗುವಾ”;II
ನೀರಡಿಕೆ ದಣಿವು ಪೀಡಿತ ಗಂಧಮಾದನI
ಮರ್ಮದಿ ನುಡಿದನು ಅಂಗದನ ಮಾತು ಕೇಳಿ: II
“ಅಂಗದ ಹೇಳಿದು,ಸೂಕ್ತಲ್ವೇ! ಹಿತಕರ ವ ಕ್ರಿಯಾತ್ಮಕ,I
ಕಾರ್ಗತಗೊಳಿಸೋಣ,ಅವನ ನುಡಿಗಳನ; II
ಹುಡುಕೋಣ ಮತ್ತೆ ನಿರ್ಜನಾರಣ್ಯ,ಪರ್ವತ,I
ಶಿಖರ, ಗುಹೆ, ಶೀಲಾ ಕಂದರಗಳ, ಮಾರ್ಗ ಮಧ್ಯೆ; II
ಸುಗ್ರೀವನ ಸಲಹೆಯಂತೆ ಅರಿಸೋಣ ಒಟ್ಟಾಗಿI
ಅರಣ್ಯ , ಪರ್ವತ, ಸಕಲ ಪ್ರದೇಶಗಳಲಿ; II
ದಕ್ಷಿಣದ ವಿಂಧ್ಯಾರಣ್ಯ ಬೆಟ್ಟ, ಪರ್ವತ, ಕಂದರI
ಗುಹೆ, ನದಿಕೊಳ್ಳಗಳ ಪುನಃ ಅರಿಸಿದರು ವಾನರರು; II
ಸೀತೆಯ ಶೋಧನೆಯಲಿ ಸುತ್ತಿ ಸುತ್ತಿ ಸುಸ್ತಾದರುI
ವಾನರರು, ಎಲ್ಲೂ ಸಿಗಲಿಲ್ಲ ಸೀತೆ ಸುಳಿವು; II
ಪರ್ವತ ತುದಿಗಳಿಂದ ಕೇಳಗಿಳಿದು, ವಿಶ್ರಾಂತಿI
ಪಡೆದು ಗಿಡ ಮರಗಳಡಿ, ಚೇತರಿಕೊಂಡರು; II
ವಿಂಧ್ಯ ಪರ್ವತಗಳಿಂದ ದಕ್ಷಿಣದತ್ತI
ಸಾಗಿದರು ವಾನರರು, ಸೀತೆ ಅರಿಸುತ.II
ಕಿಷ್ಕಿಂಧಕಾಂಡ ರಾಮಾಯಣ
ಸೀತೆಯನ್ನು ಕಾಣದೇ ನಿರಾಶೆಯಿಂದ ದಣಿದು ಕುಳಿತ ವಾನರರಿಗೆ ಅಂಗದನು ಧೈರ್ಯ ತುಂಬಿದ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ಉಪದೇಶಗಳೊಂದಿಗೆ ವಿವರಿಸಿರುವರು (1) ಸೀತೆಯನ್ನು ಕಾಣದೇ ನಿರಾಶೆಯಿಂದ ದಣಿದು ಕುಳಿತ ವಾನರರಿಗೆ ಅಂಗದನು “ಸೀತೆಯನ್ನು ದುರ್ಗಮ ಅರಣ್ಯ ನದಿ ಗವಿ ಪರ್ವತ ಪ್ರದೇಶಗಳಲ್ಲಿ ನಾವು ಹುಡುಕಿದೆವು ಹಾಗು ದೀರ್ಘಕಾಲದಿಂದ ಇನ್ನೂ ಹುಡುಕುತ್ತಿರುವೆವು; ಈಗಾಗಲೇ ಸಾಕಷ್ಟು ಕಾಲಹರಣವಾಗಿದೆ ಆದರೆ ಈಗ ಸುಗ್ರೀವನ ಶಿಸ್ತಿನ ಸೇನೆಯಂತೆ ಎಲ್ಲರೂ ಒಟ್ಟಾಗಿ ಸೀತೆಯನ್ನು ಹುಡುಕೋಣ; ನಾವೆಲ್ಲರೂ ದಣಿವಿಗೆ ಶರಣಾಗದಿರೋಣ, ದುಃಖಕ್ಕೆ ಅಣಿಯಾಗದಿರೋಣ, ನಿದ್ರೆ ಆಲಸ್ಯಗಳಿಗೆ ಮಣಿಯದೇ ಸೀತೆಯನ್ನು ಹುಡುಕೋಣ; ಮನಸ್ಸಿನ ಅಜ್ಞಾನ, ಅನಾನುಭವವು ಅಪಜಯಕ್ಕೆ ಕಾರಣ, ನಮಗೆ ಕಾರ್ಯಸಾಧಿಸಬೇಕಾಗಿದೆ; ನಾನು ನಿಮಗೆ ಹೇಳುವದೇನೆಂದರೆ ದಣಿವು ನಿರಾಶೆಗಳಿಂದ ಕೊಡವಿ ಎದ್ದು ಸೀತೆಯನ್ನು ಗಿರಿ ಪರ್ವತಗಳಲ್ಲಿ ಹುಡುಕೋಣ; ಪ್ರಯತ್ನ ಮಾಡಿದವನಿಗೆ ಫಲವಿದೆ, ಪ್ರಯತ್ನ ಮಾಡದೇ ಕೈಚಲ್ಲುವದು ಅಕ್ಷಮ್ಯ”; ಎಂಬ ದೈರ್ಯ ತುಂಬಿದ ಪ್ರಸಂಗ ಮೂಲಕ ಆದಿಕವಿ ವಾಲ್ಮೀಕಿಯು ಮನುಷ್ಯನಿಗೆ ಯಾವುಧೆ ವಿಫಲತೆಯಲ್ಲಿ ಅಧೈರ್ಯಗೊಳ್ಳದೇ ತನ್ನ ಪ್ರಯತ್ನವನ್ನು ಮುಂದುವರೆಸಬೇಕೆಂದು ಜಗಕ್ಕೆ ಉಪದೇಶ ಮಾಡಿರುವರು, (2) ಸುಗ್ರೀವನ ಕೋಪಕ್ಕೆ ಹೆದರಿ ಸೀತೆಯನ್ನು ಹುಡುಕುವ ಅನಿವಾರ್ಯತೆಯ ಮಾತುಗಳನ್ನು ಅಂಗದನು ವಾನರರಿಗೆ ತಿಳಿಸುವನು, (3) ದಕ್ಷಿಣದ ವಿಂಧ್ಯಾರಣ್ಯ ಬೆಟ್ಟ, ಪರ್ವತ, ಕಂದರ ಗುಹೆ, ನದಿಕೊಳ್ಳಗಳ ಪ್ರದೇಶ ಮತ್ತು ವಿಂಧ್ಯ ಪರ್ವತದ ದಕ್ಷಿಣದ ಬೆಟ್ಟ ಪರ್ವತ ಪ್ರದೇಶಗಳ ವಿವರಣೆ: ಇಂದಿನ ಮಹಾರಾಷ್ಟ್ರ,ತೆಲಂಗಾಣ,ಆಂಧ್ರ ಮತ್ತು ಉತ್ತರ ಕರ್ನಾಟಕದ ತಪ್ಪಲು ಭೂಮಿ, ಪಶ್ಚಿಮ ಮತ್ತು ಪೂರ್ವ ಘಟ್ಟ ಪ್ರದೇಶಗಳು,ಹೀಗೆ ವಾನರರು ಸೀತೆಯನ್ನು ಹುಡುಕಿದ ಇಂದಿನ ದಕ್ಷಿಣ ಭಾರತದ ವರ್ಣನೆ ನೀಡಿರುವರು. (4) ಎಲ್ಲೂ ಸೀತೆ ಸುಳಿವು ಸಿಗಲಿಲ್ಲ; ಸೀತೆಯ ಶೋಧನೆಯಲ್ಲಿ ವಾನರರು ಸುತ್ತಿ ಸುತ್ತಿ ಸುಸ್ತಾದರು; ಪರ್ವತ ತುದಿಗಳಿಂದ ಕೆಳಗಿಳಿದು, ಗಿಡ ಮರಗಳ ಅಡಿ ವಿಶ್ರಾಂತಿ ಪಡೆದು ಚೇತರಿಕೊಂಡರು; ವಾನರರು ಸೀತೆ ಅರಿಸುತ ವಿಂಧ್ಯ ಪರ್ವತಗಳಿಂದ ದಕ್ಷಿಣದತ್ತ ಸಾಗಿದ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
