ಕಿಷ್ಕಿಂದಕಾಂಡ ರಾಮಾಯಣ ಭಾಗ-35

By admin


ಕಪ್ಪುಜಿಂಕೆ ಚರ್ಮಧಾರಿ ತಪಸ್ವಿ ಸ್ತ್ರೀಗೆ ಪುನಃ ನುಡಿದ ಹನುಮ:I
“ನೀರಡಿಕೆ ಹಸಿವಿನಿಂದೀ ಕಗ್ಗತ್ತಲ ಗವಿ ಹೊಕ್ಕೆವು ನಾವು; II
ವಿಭಿನ್ನ ವೈಭವಭರಿತ ಅಂತಪುರಗಳ ಕಂಡುI
ರಾಕ್ಷಸರ ಗವಿಯೆಂದು ಆಶ್ಚರ್ಯಚಕಿತರಾದೆವು; II
ಹೇಮ ಹೊಳಪಿನ ಗಿಡಮರ ಅರಮನೆಗಳುI
ಯಾರವು ! ಅಳುಕುತ ಆಶ್ಚರ್ಯಚಕಿತರಾದೆವು ಕಂಡು: II
ಹಣ್ಣು ಗಡ್ಡೆಗಳು, ಚಿನ್ನದ ವಿಮಾನ ಬೆಳ್ಳ ಅರಮನೆಗಳುI
ಚಿನ್ನದ ಕಿಡಕಿಗಳು ಆಭರಣ-ಸರಮಾಲೆಗಳು; II
ಹೇಮವರ್ಣದ ಹೊಂಡ, ಮೀನ, ಕುರ್ಮೆಗಳು,I
ಸಾಧ್ಯವೇ! ಕಮಲಗಳು ಬೆಳೆದರಳಲು!! II
ಇಲ್ಲವೇ, ಸಾಧ್ಯವಾಯಿತೆ ನಿಮ್ಮ ತಪೋಬಲದಿ!I
ನೀವೇ ಸಮರ್ಥರು ಈ ವಿಷ್ಮಯ ತಿಳಿಸಲು”; II
ಕೇಳಿ ಹನುಮಾನನ ಆತಂಕ ಉತ್ಸುಕ ನುಡಿ,I
ತಪಸ್ವಿನಿ ಹನುಮನಿಗೆ ನುಡಿದಳು ಹಿತದಲಿ; II
“ಮಾಯಾ ನಾಮ ಮಹಾತೇಜಿ ಗೂಳಿಯಂತಹ ದಾನವ,I
ಮಾಯಾಬಲದಿ ನಿರ್ಮಿಸಿಹನೀ ವಿಷ್ಮಯ ಗುಹಾಲೋಕ; II
ದಾನವಲೋಕದ ವಿಶ್ವಕರ್ಮ ಮಾಯಾ ನಿರ್ಮಿಸಿಹನುI
ದಾನವ ರಾಜರಿಗೆ ಸುವರ್ಣ ಅರಮನೆಗಳು; II
ಘೋರ ಧೀರ್ಘ ತಪಗೈದೀ ಅರಣ್ಯಗಳಲಿI
ಮಾಯಾಬಲ ಪಡೆದಿಹನು ಬ್ರಹ್ಮನಿಂದ ಮಾಯಾ; II
ತನ್ನಿಚ್ಚೆಯಂತೆ ಸೌಕರ್ಯಗಳ ನಿರ್ಮಿಸಿಕೊಂಡಿಲ್ಲಿI
ಸುಖವಾಗಿದ್ದನೀ ಅರಣ್ಯಗಳಿ, ಗುಹೆಯಲ್ಲಿ; II
ಹೇಮಾ ನಾಮ ಅಪ್ಸರೆಯೊಂದಿಗೆ ಸಮಾಗಮನಿರತI
ಮಾಯಾನನ್ನು ಸಂಹರಿಸಿದ ದೇವತೆಗಳ ರಾಜ; II
ಒಡತಿಯಾದಳು ಹೇಮಾ, ಈ ಅದ್ಭುತ ಅರಣ್ಯ I
ಅರಮನೆಗಳ ಗವಿ-ಪ್ರದೇಶ ದ ಮಾಯಾ-ಹತ್ಯೆ-ನಂತರ; II
ಓ ವಾನರರೇ, ಮೇರುಸಾವರ್ಣಿ ಪುತ್ರಿ ಸ್ವಯಂಪ್ರಭ ನಾನುI
ಹೇಮಾಳ ಅರಮನೆಯ ರಕ್ಷಣೆ ಮಾಡುತಿರುವೆ ನಾನು; II
ನೃತ್ಯ ಸಂಗೀತದಲಿ ವಿಶಾರದೆ ಹೇಮಾ ನನ್ನ ಗೆಳತಿ,I
ಕೊಟ್ಟಿಹಳು ದಾನವಾಗಿ ಎನಗೆ ಈ ಗುಹೆ, ರಕ್ಷಿಸುತಿರುವೆ; II
ಯಾವ ಕಾರ್ಯಕ್ಕಾಗಿಲ್ಲೀ ಬಂದಿರುವಿರಿ!I
ಹೇಗೆ ಶೋಧಿಸಿರೀ ದುರ್ಗಮ ಅಭೇಧಾರಣ್ಯ!! II
ಹಣ್ಣು ಗೆಡ್ಡೆಗಳನು ಸೇವಿಸಿ, ಮೃದುಪಾನಿ ಸೇವಿಸಿ, I
ನಿಮ್ಮ ಬಂದ ಕಾರ್ಯ ಬಗ್ಗೆ ಎನಗೆ ತಿಳಿಸಿ” ಆತಿಥ್ಯ ತೋರಿಸಿ; II
ಕಿಷ್ಕಿಂಧಕಾಂಡ ರಾಮಾಯಣ

ಕಪ್ಪುವರ್ಣದ ರಿಕ್ಷ ಗುಹೆ ಕಥೆ ಕುರಿತು ಆದಿಕವಿ ವಾಲ್ಮೀಕಿಯು ವಿವರಿಸಿರುವರು,ಅದರಲ್ಲಿಯ ಮುಖ್ಯಾಂಶಗಳು: (1) ಕಪ್ಪುಗುಹೆ ರಹಸ್ಯ ತಿಳಿದು ಕೊಳ್ಳಲು ಹನುಮಾನನು ಸ್ವಯಂಪ್ರಭಳನ್ನು ಕೋರುವನು: ಕಪ್ಪುಜಿಂಕೆ ಚರ್ಮಧಾರಿ ತಪಸ್ವಿ ಸ್ತ್ರೀ ಸ್ವಯಂಪ್ರಭಳನ್ನು ಪುನಃ ಹನುಮಾನನು “ನಾವು ನೀರಡಿಕೆ ಹಸಿವಿನಿಂದ ಈ ಕಗ್ಗತ್ತಲ ಗವಿಯನ್ನು ಹೊಕ್ಕೆವು, ಇಲ್ಲಿಯ ವಿಭಿನ್ನ ವೈಭವಭರಿತ ಅಂತಪುರಗಳ ನೋಡಿ ಇದು ರಾಕ್ಷಸರ ಗವಿಯೆಂದು ಆಶ್ಚರ್ಯಚಕಿತರಾದೆವು, ಈ ಹೇಮ ಹೊಳಪಿನ ಗಿಡಮರ ಅರಮನೆಗಳು ಯಾರವು! ಎಂದು ಮನಸ್ಸಿನಲ್ಲಿ ಅಳುಕುತ ಆಶ್ಚರ್ಯಚಕಿತರಾದೆವು; ಹಣ್ಣು ಗಡ್ಡೆಗಳು, ಚಿನ್ನದ ವಿಮಾನ, ಬೆಳ್ಳಿ ಅರಮನೆಗಳು, ಚಿನ್ನದ ಕಿಡಕಿಗಳು ಆಭರಣ-ಸರಮಾಲೆಗಳು, ಹೇಮವರ್ಣದ ಹೊಂಡ, ಮೀನಗಳು, ಕುರ್ಮೆಗಳು, ಅದರಲ್ಲಿ ಕಮಲಗಳು ಬೆಳೆದು ಅರಳಲು ಸಾಧ್ಯವೇ! ಇಲ್ಲವೇ, ಇದು ನಿಮ್ಮ ತಪೋಬಲದಿಂದ ಸಾಧ್ಯವಾಯಿತೆ! ಈ ವಿಷ್ಮಯ ನಮಗೆ ತಿಳಿಸಲು ನೀವೇ ಸಮರ್ಥರು” ಎಂದು ಕೋರಿದನು, ಅವನ ಕೋರಿಕೆಯಲ್ಲಿ ಆ ಕಪ್ಪುಗುಹೆಯ ವಿಷ್ಮಯದ ಬಗ್ಗೆ ಆದಿಕವಿ ವಾಲ್ಮೀಕಿಯು ವಿವರಿಸಿರುವರು; (2) ಮಹಾತಪಸ್ವಿ ಮಾಯಾ ನಾಮ ಮಹಾತೇಜಿ ದಾನವಲೋಕದ ವಿಶ್ವಕರ್ಮನ ಕಥೆ: ಹನುಮಾನನ ಆತಂಕ ಮತ್ತು ಉತ್ಸುಕ ಮಾತುಗಳನ್ನು ಕೇಳಿದ ಆ ತಪಸ್ವಿನಿ ಹನುಮನಿಗೆ “ಮಾಯಾ ನಾಮ ಮಹಾತೇಜಿ ಗೂಳಿಯಂತಹ ದಾನವ ತನ್ನ ಮಾಯಾಬಲದಿಂದ ಈ ವಿಷ್ಮಯ ಗುಹಾಲೋಕವನ್ನು ನಿರ್ಮಿಸಿರುವನು, ಅವನು ದಾನವಲೋಕದ ವಿಶ್ವಕರ್ಮನು, ದಾನವ ರಾಜರಿಗೆ ಈ ಸುವರ್ಣ ಅರಮನೆಗಳು ಅವನು ನಿರ್ಮಿಸಿರುವನು, ಅವನು ಘೋರ ಧೀರ್ಘ ತಪಸ್ಸು ಮಾಡಿ ಬ್ರಹ್ಮನಿಂದ ಮಾಯಾಬಲ ಪಡೆದು ಈ ಅರಣ್ಯಗಳಲ್ಲಿ ಈ ಗುಹಾಲೋಕವನ್ನು ನಿರ್ಮಿಸಿರುವನು; ಮಾಯಾನು ತನ್ನಿಚ್ಚೆಯಂತೆ ಇಲ್ಲಿ ಸೌಕರ್ಯಗಳನ್ನು ನಿರ್ಮಿಸಿಕೊಂಡು ಈ ಅರಣ್ಯಗಳ ಗುಹೆಯಲ್ಲಿ ಸುಖವಾಗಿದ್ದನು ಆದರೆ ಮಾಯಾನು ಹೇಮಾ ನಾಮ ಅಪ್ಸರೆಯೊಂದಿಗೆ ಸಮಾಗಮನಿರತನಾಗಿದ್ದ ಸಮಯದಲ್ಲಿ ದೇವತೆಗಳ ರಾಜ ದೇವೆಂದ್ರನು ಅವನನ್ನು ಸಂಹರಿಸಿದನು; ಮಾಯಾನ ಮೃತ್ಯುವಿನ ನಂತರ ಹೇಮಾ ಈ ಅದ್ಭುತ ಅರಣ್ಯ ಗುಹೆಯ ಅರಮನೆಗಳ ಹಾಗು ಇಡೀ ಗವಿ-ಪ್ರದೇಶದ ಒಡತಿಯಾದಳು” ಎಂದು ಮಾಯಾ ಮತ್ತು ಅಪ್ಸರೆ ಹೇಮಾಳ ಕಥೆಯನ್ನು ವಿವರಿಸುವಳು; ದಾನವ ರಾಜ ಮಾಯನು ಮಹಿಷಕಪ್ರದೇಶ ಸಮ್ರಾಟನು, ಮಾಯಾವಿ ಮತ್ತು ದುಂದುಭಿ ದಾನವವೀರರು ಅವನ ಮೊದಲನೆ ಹೆಂಡತಿ ಮಕ್ಕಳು, ಅಪ್ಸರೆ ಹೇಮಾಳು ಮಾಯನ ಎರಡನೆ ಹೆಂಡತಿ, ಅವರ ಮಗಳು ರಾವಣನ ಹೆಂಡತಿ ಮಂದೋದರಿ, ಹೀಗೆ ಆದಿಕವಿ ವಾಲ್ಮೀಕಿಯು ದಾನವ ರಾಜ ಮಾಯಾನ ಕಥೆಯನ್ನು ವಿವರಿಸಿರುವರು; (3) ಅಪ್ಸರೆ ಹೇಮಾಳ ಕಥೆ: ಸ್ವಯಂಪ್ರಭಳು ಹನುಮಾನನಿಗೆ ಅಪ್ಸರೆ ಹೇಮಾಳ ಕಥೆಯನ್ನು ಹೇಳುವಳು; ತಾನು ಮೇರುಸಾವರ್ಣಿ ಪುತ್ರಿ ಸ್ವಯಂಪ್ರಭ ಹಾಗು ಹೇಮಾಳ ಗೆಳತಿ, ತಾನು ಹೇಮಾಳ ಅರಮನೆಯ ರಕ್ಷಣೆ ಮಾಡುತಿರುವದಾಗಿ ಹೇಳುವಳು, ತನ್ನ ಗೆಳತಿ ಹೇಮಾಳು ನೃತ್ಯ ಸಂಗೀತದಲ್ಲಿ ವಿಶಾರದೆ , ಅವಳು ತನಗೆ ಆ ಗುಹೆ ಪ್ರದೇಶವನ್ನು ದಾನವಾಗಿ ಕೊಟ್ಟಿರುವಳು ಎಂದು ತಿಳಿಸಿದಳು, ಅಪ್ಸರೆ ಹೇಮಳು ದಾನವರಾಜ ಮಾಯಾನೊಂದಿಗೆ ಗಂಧರ್ವ ವಿವಾಹ ಆಗುವಳು, ಅದನ್ನು ಸಹಿಸದ ದೇವೆಂದ್ರನು ದಾನವ ರಾಜಾ ಮಾಯಾನನ್ನು ಸಂವಹರಿಸಿದ ಹೀಗೆ ಹೇಮಾಳ ಕಥೆಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು; (4) ಸ್ವಯಂಪ್ರಭಳಿಂದ ವಾನರರಿಗೆ ಆತಿಥ್ಯ: ಸ್ವಯಂಪ್ರಭೆಯು ವಾನರರನ್ನು ಹೀಗೆ ವಿಚಾರಿಸುವಳು “ನೀವು ಇಲ್ಲಿಗೆ ಯಾವ ಕಾರ್ಯಕ್ಕಾಗಿ ಬಂದಿರುವಿರಿ! ಈ ದುರ್ಗಮ ಅಭೇಧಾರಣ್ಯವನ್ನು ಹೇಗೆ ಶೋಧಿಸಿರೀ!! ನೀವು ಇಲ್ಲಿಯ ಹಣ್ಣು ಗೆಡ್ಡೆಗಳನ್ನು ಸೇವಿಸಿ, ಮೃದು ನೀರನ್ನು ಕುಡಿಯಿರಿ ಹಾಗು ನನಗೆ ನೀವು ಇಲ್ಲಿಗೆ ಬಂದ ಕಾರ್ಯ ಬಗ್ಗೆ ತಿಳಿಸಿರಿ” ಎಂದು ಹಿತನುಡಿಗಳಲ್ಲಿ ನುಡಿಯುತ್ತ ತನ್ನ ಆತಿಥ್ಯವನ್ನು ವಾನರರಿಗೆ ನೀಡಿದಳು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಮಹಾತಪಸ್ವಿ ದಾನವ ಮಾಯಾ ನಿರ್ಮಿಸಿದ ರಿಕ್ಷ ಗುಹೆ ವಿವರಣೆ, ದಾನವ ರಾಜ ಮಾಯಾನ ಮತ್ತು ಅಪ್ಸರೆ ಹೇಮಾಳ ಕಥೆ ಮತ್ತು ಮೇರುಸಾವರ್ಣಿ ಪುತ್ರಿ ಸ್ವಯಂಪ್ರಭಳ ಕಥೆ ಅವಳಿಂದ ವಾನರರಿಗೆ ಆತಿಥ್ಯ, ಈ ಪ್ರಮುಖ ವಿವರಣೆಗಳನ್ನು ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ