
ವಾನರ ನಾಯಕರು ವಿಶ್ರಾಂತಿಸಿ, ಚೇತರಿಸಿಕೊಂಡ ಬಳಿಕI
ಏಕಾಗ್ರತೆಯ ಧರ್ಮನಿಷ್ಠೆ ತಪಸ್ವಿನಿ ನುಡಿದಳವರಿಗೆ: II
“ಹಣ್ಣು ಸೇವಿಸಿ, ವಿಶ್ರಾಂತಿಸಿ ಚೇತರಿಸಿಕೊಂಡಿರಿ, I
ಓ ವಾನರರೇ, ಎನಗೆ ನಿಮ್ಮ ಬಂದ ಕಾರ್ಯವನು ತಿಳಿಸಿರಿ”II
ತಪಸ್ವಿನಿ ನುಡಿ ಕೇಳಿ ಹನುಮ ನುಡಿದ:I
“ಕೋಸಲರಾಜ ದಶರಥಪುತ್ರ ರಾಮನು ಸಹೋದರ ಲಕ್ಷ್ಮಣII
ಪತ್ನಿ ಸೀತೆ ಜತೆ ದಂಡಕಾರಣ್ಯ ಜನಸ್ಥಾನಲಿದ್ದಾಗ,I
ಸೀತೆ-ಅಪರಿಸಿದ ರಾವಣ; ವಾನರರಾಜ ವೀರ ಸುಗ್ರೀವನ ಸ್ನೇಹಿತ ರಾಮII
ಸೀತೆ ಅರಸಲು ಬಂದಿಹೆವು ಸುಗ್ರೀವನ ಆಜ್ಞೆಯಂತೆ; I
ವೀರ ಅಂಗದನ ನೇತೃತ್ವದಲಿ ನಾವು ಹುಡುಕುತಿಹೆವು II
ದಕ್ಷಿಣದಲಿ ಸೀತೆ ವ ಇಚ್ಚಾರೂಪಿ ರಾಕ್ಷಸ ರಾವಣರನು; I
ಹುಡುಕಿ ಹುಡುಕಿ ಸೀತೆ ಸಿಗದ ನಿರಾಶೆ-ಮನಾಳದಿ ಸೇರಿದೆವು II
ಗಿಡಗಳ ಬುಡದಲಿ, ಚಿಂತಿಸುತ; ಬಿತ್ತು ನಮ್ಮ ದೃಷ್ಠಿಗೀ I
ವಿಶಾಲ ಗವಿ ಕಗ್ಗತ್ತಲು ಅದ್ಭುತ ಗಿಡಮರ ಅರಣ್ಯ ಅರಮನೆಗಳ ಗವಿ;II
ಗವಿಯಿಂದ ಹೊರಬರುವ ತೊಯ್ದ ಹಂಸ ನೀರ್ಗೋಳಿ ಕಂಡುI
ನೀರಿರಬಹುದೆಂದು ವಾನರರಿಗೆ ಹೇಳಿದೆ ಗವಿ ಸೇರಲು; II
ಒಬ್ಬೊಬ್ಬರ ಕೈಹಿಡಿದು ನಾವು ಹೊಕ್ಕೆವುI
ಕಗ್ಗತ್ತಲ ವಿಶಾಲ ಧೀರ್ಘ ಕಪ್ಪು ಗವಿಯನು; II
ನಿಮ್ಮ ಬಳಿ ಬಂದೆವಿ ನೀರಡಿಕೆ ಹಸಿವಿನಿಂದI
ನಿಮ್ಮ ಆತಿಥ್ಯದಿಂದಾಗಿ ಬಾಯಾರಿಕೆ ಹಸಿವು ತಣಿಸಿತು; II
ರಕ್ಷಿಸಿರುವಿ ಹಸಿವು-ಸಾವಿನಿಂದ ನಮ್ಮನುI
ಪ್ರತಿಯಾಗಿ ನಾವು ನಿಮಗೇನು ಮಾಡಬೇಕು ತಿಳಿಸು”; II
ಕೇಳಿ ಹನುಮನ ಮಾತು ಸ್ವಯಂಪ್ರಭೆ ನುಡಿದಳು:I
“ಸಾಹಸಿ ವಾನರರನು ಕಂಡು ಸಂತೋಷವಾಯಿತು, II
ನಿಮಗೆ ಸಹಾಯ ಮಾಡಿದ್ದು ನನ್ನ ಕರ್ತವ್ಯ,I
ಪ್ರತಿಯಾಗಿ ನನಗೆ ನೀವು ಮೆಚ್ಚಿಸವ ಅಗತ್ಯವಿಲ್ಲ”; 4.52.13
ಕೇಳಿ ತಪಸ್ವಿನಿಯ ನುಡಿ ಹನುಮ ನುಡಿದ: I
“ ಓ ಧರ್ಮಮಯಿ, ನಾವು ನಿನ್ನ ಶರಣದಲ್ಲಿಹೆವು, ತಡಮಾಡದೆ, II
ಅರಸುವೆವು ಗವಿಯನ್ನು; ಸುಗ್ರೀವನಗಡುವು ಮುಗಿದಿದೆ, ಬೇಗI
ದಾಟಿಸು ನಮ್ಮನ್ನು ಈ ಗವಿಯಾಚೆ”;II
ಕೇಳಿ ಹನುಮನ ನುಡಿ ತಪಸ್ವಿನಿ ನುಡಿದಳು: “ನನಗೆ ಗೊತ್ತು, I
ಜೀವಂತ ನಿರ್ಗಮಿಸುವದು ಗವಿಯಿಂದ ಆಸಾಧ್ಯ, II
ತಪಸ್ಸಿನ ಬಲವಿಲ್ಲದೆ ಗವಿ ದಾಟುವದು ಅಸಾಧ್ಯ,I
ಗವಿ ದಾಟಿಸುವೆ ನಿಮ್ಮನು ನನ್ನ ತಪಸ್ಸಿನ ಬಲದಿಂದ; II
ತೆರೆದ ಕಣ್ಣುಗಳಿಂದ ದಾಟಲು ಅಸಾಧ್ಯ, ವಾನರರೇ,I
ರೆಪ್ಪೆಗಳಿಂದ ಕಣ್ಣು ಮುಚ್ಚಿಕೊಳ್ಳಿ”;II
ಸಂತೋಷದಿ ತಕ್ಷಣ ಕಣ್ಣು ಮುಚ್ಚಿಕೊಂಡರು I
ವಾನರರು ಹೊರ ದಾಟಿಸಿದಳು ಗವಿಯಿಂದ ತಪಸ್ವಿನಿ; II
ಗವಿಯಿಂದ ಹೊರಬಂದ ವಾನರರಿಗೆ ತಪಸ್ವಿನಿ ನುಡಿದಳು:I
“ ಬಂದಿರುವಿರಿ ವಿಂಧ್ಯ, ಪ್ರಸವನ ಪರ್ವತಗಳII
ದಾಟಿ ದಕ್ಷಿಣ ಮಹಾಸಾಗರಕ್ಕೆ; ನಾನು ಪುನಃ ಗವಿ ಸೇರುವೆ”,I
ರಿಕ್ಷ ಗವಿ ಸೇರಿದಳು ಸ್ವಯಂಪ್ರಭ.II
ಕಿಷ್ಕಿಂಧಕಾಂಡ ರಾಮಾಯಣ
ಕಪ್ಪುಗವಿಯಿಂದ ವಾನರರನ್ನು ತಪಸ್ವಿ ಸ್ವಯಂಪ್ರಭಳು ಪಾರುಮಾಡಿದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಗಮನಾರ್ಹ ಅಂಶಗಳು (1) ಅತಿಥಿ ದೇವ ಸ್ವರೂಪಿ: “ನಿಮಗೆ ಸಹಾಯ ಮಾಡಿದ್ದು ನನ್ನ ಕರ್ತವ್ಯ, ಅದರ ಪ್ರತಿಯಾಗಿ ನನಗೆ ನೀವು ಮೆಚ್ಚಿಸವ ಅಗತ್ಯವಿಲ್ಲ” ಎಂದು ಸ್ವಯಂಪ್ರಭಾ ತನ್ನ ಕರ್ತವ್ಯ ಮನೋಭಾವನೆಗಳನ್ನು ವ್ಯಕ್ತಪಡಿಸಿದಳು, ಅತಿಥಿಗಳಿಗೆ ಸೇವೆಸಲ್ಲಿಸುವ ಭಾರತೀಯ ಸಾಮಾಜಿಕ ಮಾನಸಿಕ ಪರಂಪರೆಯು ತ್ರೇತಾಯುಗಪೂರ್ವ ಕಾಲದಿಂದ ಬಂದದನ್ನು ಆದಿ ಸಮಾಜ ಶಾಸ್ತ್ರಜ್ಞ ವಾಲ್ಮೀಕಿಯು ತಿಳಿಸಿರುವರು, (2) ಸ್ವಯಂಪ್ರಭಾಳ ಜಿಜ್ಞಾಸೆ: ತಪಸ್ವಿ ಸ್ವಯಂಪ್ರಭಳಿಂದ ವಾನರ ನಾಯಕರು ಮತ್ತು ವಾನರರು ಆತಿಥ್ಯ ಪಡೆದು ಹಣ್ಣ ಗೆಡ್ಡೆ ಮತ್ತು ಜಲ ಸೇವಿಸಿ ವಿಶ್ರಾಂತಿ ಪಡೆದರು; ವಾನರರು ವಿಶ್ರಾಂತಿಯಿಂದ ಚೇತರಿಸಿಕೊಂಡ ಬಳಿಕ ಏಕಾಗ್ರತೆಯ ಧರ್ಮನಿಷ್ಠೆ ತಪಸ್ವಿನಿ ಸ್ವಯಂಪ್ರಭ ವಾನರರಿಗೆ “ಓ ವಾನರರೇ, ನೀವು ಹಣ್ಣು ಸೇವಿಸಿ, ವಿಶ್ರಾಂತಿಸಿ, ಚೇತರಿಸಿಕೊಂಡಿರಿವಿರಿ, ನನಗೆ ನೀವು ಬಂದ ಕಾರ್ಯವನು ತಿಳಿಸಿರಿ” ಎಂದು ಕೋರಿದಳು, ಅತಿಥಿಗಳು ಬಂದ ವಿಷಯವನ್ನು ತಿಳಿದು ಕೊಳ್ಳುವ ಸಹಜ ಜಿಜ್ಞಾಸೆ ಮನೋಭಾವಣೆಯನ್ನು ಆದಿಚಿಂತಕ ವಾಲ್ಮೀಕಿಯು ಸ್ವಯಂಪ್ರಭಾಳ ಮುಖೇನ ತಿಳಿಸಿರುವರು; (3) ಹನುಮಾನನಿಂದ ವಾನರರು ಬಂದ ವಿಷಯದ ಪ್ರಸ್ತಾವಣೆ ಮತ್ತು ಕೃತಜ್ಞತೆ ಸಲ್ಲಿಕೆ; ತಪಸ್ವಿನಿ ಸ್ವಯಂಪ್ರಭ ಕೋರಿಕೆ ಕೇಳಿದ ಹನುಮನು ಅವಳಿಗೆ “ಕೋಸಲರಾಜ ದಶರಥಪುತ್ರ ರಾಮನು ಸಹೋದರ ಲಕ್ಷ್ಮಣ ಪತ್ನಿ ಸೀತೆ ಜತೆ ದಂಡಕಾರಣ್ಯ ಜನಸ್ಥಾನಲಿದ್ದಾಗ ಸೀತೆಯನ್ನು ರಾವಣ ಅಪರಿಸಿರುವನು, ವೀರ ಅಂಗದನ ನೇತೃತ್ವದಲಿ ನಾವು ವಾನರರಾಜ ವೀರ ಸುಗ್ರೀವನ ಆಜ್ಞೆಯಂತೆ ಅವನ ಸ್ನೇಹಿತ ರಾಮನ ಪತ್ನಿ ಸೀತೆಯನ್ನು ಹುಡುಕಲು ಬಂದಿರುವೆವು ಹಾಗು ನಾವು ದಕ್ಷಿಣದ ಪ್ರದೇಶಗಳಲ್ಲಿ ಸೀತೆ ಮತ್ತು ಇಚ್ಚಾರೂಪಿ ರಾಕ್ಷಸ ರಾವಣರನ್ನು ಸೀತೆಯನ್ನು ಹುಡುಕುತಿರುವೆವು; ಹುಡುಕಿ ಹುಡುಕಿ ಸೀತೆ ಸಿಗದೆ ಇರುವದರಿಂದ ನಿರಾಶೆ ಮನಸ್ಸಿನಿಂದ ನಾವು ಚಿಂತಾಕ್ರಾಂತರಾಗಿ ಗಿಡಗಳ ಬುಡದಲಲ್ಲಿ ಸೇರಿದೆವು, ಆವಾಗ ಈ ಕಗ್ಗತ್ತಲು ಅದ್ಭುತ ಗಿಡಮರ ಅರಣ್ಯ ಅರಮನೆಗಳ ವಿಶಾಲ ಗವಿ ನಮ್ಮ ದೃಷ್ಠಿಗೆ ಬಿತ್ತು ಹಾಗು ಗವಿಯಿಂದ ಹೊರಬರುವ ತೊಯ್ದ ಹಂಸ ನೀರ್ಗೋಳಿ ಕಂಡೆವು ಮತ್ತು ಇಲ್ಲಿ ನೀರಿರಬಹುದೆಂದು ನಾನು ವಾನರರಿಗೆ ಗವಿ ಸೇರಲು ಹೇಳಿದೆನು; ಒಬ್ಬೊಬ್ಬರ ಕೈಹಿಡಿದು ನಾವು ಕಗ್ಗತ್ತಲ ವಿಶಾಲ ಧೀರ್ಘ ಕಪ್ಪು ಗವಿಯನು ಹೊಕ್ಕೆವು ಹಾಗು ನೀರಡಿಕೆ ಹಸಿವಿನಿಂದ ಬಳಲುತ್ತ ನಿಮ್ಮ ಬಳಿ ಬಂದೆವು; ನಿಮ್ಮ ಆತಿಥ್ಯದಿಂದಾಗಿ ನಮ್ಮ ಬಾಯಾರಿಕೆ ಮತ್ತು ಹಸಿವು ತಣಿಸಿತು, ನೀವು ನಮ್ಮನ್ನು ಹಸಿವು-ಸಾವಿನಿಂದ ರಕ್ಷಿಸಿರುವಿ ಅದರ ಪ್ರತಿಯಾಗಿ ನಾವು ನಿಮಗೆ ಏನು ಮಾಡಬೇಕು ತಿಳಿಸಿರಿ” ಎಂದು ಕೃತಜ್ಞತೆ ಅರ್ಪಿಸುತ್ತಾ ನುಡಿದನು; ಅತಿಥಿಗಳಿಗೆ ಸತ್ಯವನ್ನು ನುಡಿಯುವದು ಮತ್ತು ಅವರ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸುವ ಸಾಮಾಜಿಕ ಮನಸ್ಥಿತಿ ಪರಂಪರೆಯು ಮೊದಲಿನಿಂದಲೂ ಭಾರತೀಯ ಸಮಾಜದಲ್ಲಿ ಇದದ್ದನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು; (4) ಕರ್ತವ್ಯ ಮನೋಭಾವ: ಹನುಮನ ಕೃತಜ್ಞೆತೆ ಮಾತುಗಳನ್ನು ಕೇಳಿದ ಸ್ವಯಂಪ್ರಭೆ ಹನುಮನಿಗೆ “ಸಾಹಸಿ ವಾನರರನು ಕಂಡು ನನಗೆ ಸಂತೋಷವಾಯಿತು, ನಿಮಗೆ ಸಹಾಯ ಮಾಡಿದ್ದು ನನ್ನ ಕರ್ತವ್ಯ, ಅದರ ಪ್ರತಿಯಾಗಿ ನನಗೆ ನೀವು ಮೆಚ್ಚಿಸವ ಅಗತ್ಯವಿಲ್ಲ”ಎಂದು ತನ್ನ ಕರ್ತವ್ಯ ಮನೋಭಾವನೆಗಳನ್ನು ವ್ಯಕ್ತಪಡಿಸಿದಳು; ತಪಸ್ವಿನಿಯ ಪರೋಪಕಾರಿ ಭಾವಾರ್ಥ ಮಾತುಗಳನ್ನು ಕೇಳಿದ ಹನುಮನು ಅವಳಿಗೆ “ಓ ಧರ್ಮಮಯಿ, ನಾವು ನಿನ್ನ ಶರಣದಲ್ಲಿ ಇರುವೆವು, ಸುಗ್ರೀವನು ನಮಗೆ ಕೊಟ್ಟ ಅವಧಿ ಮುಗಿದಿದೆ ತಡಮಾಡದೆ ಬೇಗ ಗವಿಯನ್ನು ಅರಸುವೆವು ನಂತರ ನಮ್ಮನ್ನು ಈ ಗವಿಯಾಚೆ ದಾಟಿಸು ” ಎಂದು ಪ್ರಾರ್ಥನೆ ಮಾಡಿದನು; (5) ರಿಕ್ಷ ಗುಹೆಯು ವಿಶಾಲತೆ ಮತ್ತು ಜಟಿಲ ಮಾರ್ಗಗಳಿಂದ ಕೂಡಿತ್ತು: ಆ ಗವಿ ಪ್ರವೇಶಿಸಿದ ನಂತರ ಆಲ್ಲಿಂದ ಜೀವಂತ ನಿರ್ಗಮಿಸುವದು ಆಸಾಧ್ಯವಿತ್ತು, ಹನುಮನ ಪ್ರಾರ್ಥನಾರ್ಥ ನುಡಿಗಳನ್ನು ಕೇಳಿದ ತಪಸ್ವಿನಿ ಹನುಮನಿಗೆ “ನನಗೆ ಗೊತ್ತು, ಈ ಗವಿಯಿಂದ ಜೀವಂತ ನಿರ್ಗಮಿಸುವದು ಆಸಾಧ್ಯ, ತಪಸ್ಸಿನ ಬಲವಿಲ್ಲದೆ ಈ ಗವಿ ದಾಟುವದು ಅಸಾಧ್ಯ, ನಾನು ನನ್ನ ತಪಸ್ಸಿನ ಬಲದಿಂದ ಈ ಗವಿಯನ್ನು ದಾಟಿಸುವೆ ಆದರೆ ತೆರೆದ ಕಣ್ಣುಗಳಿಂದ ದಾಟಲು ಅಸಾಧ್ಯ ಕಾರಣ ಓ ವಾನರರೇ, ರೆಪ್ಪೆಗಳಿಂದ ನಿಮ್ಮ ಕಣ್ಣು ಮುಚ್ಚಿಕೊಳ್ಳಿರಿ”ಎಂದು ವಾನರರನ್ನು ಆ ಗವಿ ದಾಟಿಸುವ ಭರವಸೆ ಮಾತುಗಳನ್ನು ಆಡಿದಳು; (6) ವಾನರರನ್ನು ಗವಿಯಿಂದ ಹೊರ ದಾಟಿಸಿದ್ದು: ಸ್ವಯಂಪ್ರಭಳ ಸೂಚನೆ ಕೇಳಿ ಸಂತೋಷದಿಂದ ತಕ್ಷಣ ವಾನರರು ತಮ್ಮ ಕೈಗಳಿಂದ ಕಣ್ಣುಗಳನ್ನು ಮುಚ್ಚಿಕೊಂಡರು ಹಾಗು ತಪಸ್ವಿನಿ ಸಯಂಪ್ರಭಳು ಎಲ್ಲ ವಾನರರನ್ನು ಆ ಗವಿಯಿಂದ ಹೊರ ದಾಟಿಸಿದಳು; ಗವಿಯಿಂದ ಹೊರಬಂದ ವಾನರರಿಗೆ ತಪಸ್ವಿನಿ “ ಈಗ ನೀವೇಲ್ಲರೂ ವಿಂಧ್ಯ, ಪ್ರಸವನ (ಕಿಷ್ಕಿಂಧ) ಪರ್ವತಗಳನ್ನು ದಾಟಿ ದಕ್ಷಿಣ ಮಹಾಸಾಗರಕ್ಕೆ ಬಂದಿರುವಿರಿ; ನಾನು ಪುನಃ ನನ್ನ ಗವಿ ಸೇರುವೆ” ಎಂದು ವಿದಾಯ ಹೇಳುತ ಸ್ವಯಂಪ್ರಭ ರಿಕ್ಷ ಗವಿಯನ್ನು ಸೇರಿದಳು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸ್ವಯಂಪ್ರಭಾ ಎಲ್ಲ ವಾನರರನ್ನು ನನ್ನ ತಪಸ್ಸಿನ ಬಲದಿಂದ ರಿಕ್ಷ ಗವಿಯನ್ನು ದಾಟಿಸಿದ, ರಿಕ್ಷ ಗವಿಯಿಂದ ವಾನರರು ಹೊರಬಂದಾಗ ದಕ್ಷಿಣ ಮಹಾಸಾಗರ (ಹಿಂದು ಮಹಾಸಾಗರ) ಕಂಡ ಪ್ರದೇಶವನ್ನು ವಿವರಿಸಿರುವರು ಆ ಪ್ರದೇಶವು ಇಂದಿನ ತಮಿಳನಾಡಿನ ಚನೈದಿಂದ ರಾಮೇಶ್ವರದ ವರೆಗಿನ ಸಮುದ್ರತೀರ ಪ್ರದೇಶವಾಗಿದೆ; ಮಹಾಬಲಿಪುರಂ ಗುಹೆಗಳಿಗಿಂತ ಪುಡುಕೊತ್ತೈ ಜಿಲ್ಲೆ ‘ಸೀತ್ ತನವಸಲ ಹಳ್ಳಿಯ ಗುಹೆಗಳು ಈ ವಿವರಣೆಯನ್ನು ಹೆಚ್ಚು ಹೋಲುತ್ತವೆ, ಹೀಗೆ ಆಂಧ್ರ ಪ್ರದೇಶ ಗವಿಗಳಿಂದ ತಮಿಳ ನಾಡಿನ ಗವಿಗಳ ಮಧ್ಯೆ ಭೂಗರ್ಭದಲ್ಲಿ ಸಹಜ ರಂಧ್ರಮಾರ್ಗವಿರುವ ಅದ್ಭುತ ಭೌಗೋಳಿಕ ಭೂ-ಪರ್ವತಗಳ ರಚನೆಯ ವಿವರಣೆಯನ್ನು ಆದಿಭೂಗೋಳಶಾಸ್ತ್ರಜ್ಞ ವಾಲ್ಮೀಕಿಯು ನೀಡಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
