
ಭೋರ್ಗರೆವ ಅಲೆಗಳತೀರ ಕಾಣದI
ಘೋರ ಮಹಾಸಾಗರ ದೃಶ್ಯ ಕಂಡರು ವಾನರರು; II
ಮುಗಿದಿತ್ತು ಸುಗ್ರೀವನ ಕಾಲ-ಗಡವು ಮಾಯ-ಗವಿಯI
ಅರಣ್ಯ ಪರ್ವತಗಳಲ್ಲಿ ; ವಿಂಧ್ಯ-ಪರ್ವತಡಿ ಸೇರಿ II
ಚಿಂತಾಕ್ರಾಂತರಾದರು, ಹೂ ಗಿಡಮರಗಳ ರಮ್ಯ ತಾಣದಲಿ I
ವಾನರರು; ಆಗಲೆ ವಸಂತನ ಆಗಮನವಾಗಿತು, II
ಹೂ ಹಣ್ಣಿನಗೊಂಚ್ಚಲು ತೂಗುತಿದ್ದವು ಗಿಡಬಳ್ಳಗಳಲಿ, I
ಸುಗ್ರೀವನ ಭಯದಲಿದ್ದರು ವಾನರರು; II
ಹಿರಿಯ ಕಿರಿಯ ವಾನರರಿಗೆ ವಂದಿಸಿದI
ಸಿಂಹ ವೃಷಭ ಬಲದ,ಅಜಾನುಬಾಹು ಯುವರಾಜ;II
ವಾನರರಿಗೆ ನುಡಿದ ಅಂಗದ:” ಓ ವಾನರರೇ,I
ನಿಮಗೂ ತಿಳಿದ ವಿಷಯ, ರಾಜ ನೀಡಿದ ಸಮಯ; II
ಕಳೆಯಿತಲ್ವೇ ನಿಗಧಿತ ಮಾಸ ಕಪ್ಪು ಗವಿಯಲಿ, ಸೀತೆಯನ ಹುಡುಕುವದರಲಿ,I
ದಾರಿ-ಶೋಧಕ ತಜ್ಞರು ನೀವು, II
ರಾಜನ ನಂಬಿಗಸ್ಥರು ನೀವು, ಸರ್ವ ಕಾರ್ಯದಲಿ ರಾಜನI
ಹಿತೈಸಿಗಳು ನೀವು; ನಡೆದಿದೆ ಸೀತೆ-ಶೋಧನೆ ಕಾರ್ಯ II
ಎನ್ನ ನೇತೃತ್ವದಲಿ, ಪ್ರಾಣತೆತ್ತಾದರೂ ರಾಜನI
ಕಾರ್ಯ ಸಾಧಿಸುವವರು ನಾವು; II
ಕಾರ್ಯ ಸಾಧಿಸದೇ ರಾಜಕ್ಕೆ ಹಿಂತಿರುಗುವದು ಅಸಾಧ್ಯ,I
ಮಾಡೋಣ ಎಲ್ಲರೂ ಆಮರಣ ಉಪವಾಸ; II
ಕಾರ್ಯ ಸಾಧಿಸದೇ ಮರಳಿದರೆ ರಾಜ್ಯಕ್ಕೆI
ಕೊಲ್ಲುವನು ನಮ್ಮನು ಸುಗ್ರೀವ ನಿರ್ದಯದಿ; II
ಬದುಕಿರಲಿ ಹೆಂಡತಿ ಮಕ್ಕಳು ಸುಖದಲಿ,I
ಮಾಡಿಕೊಳ್ಳೋಣ ಸಾಮೂಹಿಕ ಆತ್ಮಹತ್ಯೆ ನಾವಿಲ್ಲಿ;II
ನನ್ನ ಯುವರಾಜ ಮಾಡಿದ್ದು ಸುಗ್ರೀವನಲ್ಲ ನಾನು ಯುರಾಜನಾದೆ ರಾಮನಿಂದಲ್ವೇ!I
ನನ್ನ ತಂದೆಯೊಂದಿಗೆ ಹಗೆತನವಿದ್ದ II
ಸುಗ್ರೀವ, ಶತ್ರುವಿನ ಮಗನೆಂದು ನನ್ನ ಸಂಹರಿಸವನು; I
ಸಂಬಂಧಿಗಳಿದ್ದು ಪ್ರಯೋಜನವಿಲ್ಲ, II
ಹಿಂಸೆ ಪಡುವಕ್ಕಿಂತ ಲೇಸು ಪವಿತ್ರ ಕಡಲತೀರದಲಿ ಆಮರಣI
ಉಪವಾಸದ ಮರಣ”; ಕೇಳಿ ಅಂಗದನ ನುಡಿ II
ಭಾವುಕತೆದಿ ವಾನರರು ನುಡಿದರು:“ ಸುಗ್ರೀವನು ಶೀಘ್ರಗೋಪಿ, I
ಸೀತೆಯಲಿ ರಾಮನ ಆಸಕ್ತಿ; ಮುಗಿಯಿತು ಕೊಟ್ಟ II
ಸಮಯ, ಸಿಗಲಿಲ್ಲ ಸೀತೆ, ಮರಳಿದರೆ ಕಿಷ್ಕಿಂಧಕ್ಕೆ ನಾವು,
ರಾಮನ ಸಮಾಧಾನಕ್ಕಾಗಿ ಕೊಲ್ಲುವನು ಸುಗ್ರೀವ ನಮ್ಮನು.”II
ಕೇಳಿ ಭಯಭೀತ ವಾನರರ ನುಡಿ ದಂಡನಾಯಕ ತಾರ ನುಡಿದನು:I
”ನಿಲ್ಲಿಸಿ ನಿಮ್ಮ ನಿರಾಶೆ ನುಡಿಗಳ, II
ನೀವೆಲ್ಲರೂ ಬಯಸಿದಲಿ ಪುನಃ ಸೇರೋಣ ಕಪ್ಪುಗವಿ I
ಜೀವಂತವಾಗಿರೋಣ ನಾವು ಕಪ್ಪು ಗವಿಯಲಿ”;II
ಕೇಳಿ ಅಂಗದ ತಾರರ ನುಡಿ, ನುಡಿದರು ವಾನರರು:I
”ನಾವು ಜೀವಂತುಳಿವ ಮಾರ್ಗ ಸೂಕ್ತ, ಅದು ಆಗಲಿ”.II
ಕಿಷ್ಕಿಂಧಕಾಂಡ ರಾಮಾಯಣ
ಅಂಗದನಿಂದ ಆಮರಣ ಉಪವಾಸ ಪ್ರಸಂಗವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು(1) ಕಪ್ಪು ಗುಹೆಯಿಂದ ವಾನರರು ಹೊರಬಂದ ಪರ್ವತ ಪ್ರದೇಶವೂ ವಿಂಧ್ಯ-ಪರ್ವತ ವಾಗಿತ್ತು:ಕಪ್ಪು ಗುಹೆಯಿಂದ ಪಾರಾಗಿ ಬಂದ ವಾನರರು ತಮ್ಮ ಎದುರಿಗೆ ಭೋರ್ಗರೆವ ಅಲೆಗಳು ಹಾಗು ದಡಗಳು ಕಾಣದ ಘೋರ ಮಹಾಸಾಗರ ದೃಶ್ಯವನ್ನು ಕಂಡರು, ಯಮುನಾನದಿ ದಕ್ಷಿಣದಿಂದ ಪ್ರಾರಂಭವಾದ ಪರ್ವತಗಳ ಶ್ರೇಣಿ ಪ್ರದೇಶ ಹಿಂದು ಮಹಾಸಾಗರದವರೆಗೆ ಚಾಚಿದ ಪ್ರದೇಶಗಳ ದಕ್ಷಿಣದ ಎಲ್ಲ ಪರ್ವತ ಶ್ರೇಣಿಗಳನ್ನು (ಪೂರ್ವ ಮತ್ತು ಪಶ್ಚಿಮ ಘಟಗಳು ಸೇರಿ) ವಿಂಧ್ಯಪರ್ವತಗಳೆಂದೇ ಆದಿಕವಿ ವಾಲ್ಮೀಕಿಯು ವಿವರಣೆ ನೀಡಿರುವರು, (2) ವಾನರರು ಸೀತೆಯನ್ನು ಹುಡುಕಲು ಶರದ ಋತುವಿನಲ್ಲಿ ಪ್ರಾರಂಭಿಸಿದ್ದರು ಆದರೆ ಅವರು ಗುಹೆಯಿಂದ ಕಡಲತೀರದ ವಿಂಧ್ಯ ಪರ್ತಕ್ಕೆ ಬಂದಾಗ ವಸಂತ ಋತು ಆರಂಭವಾಗಿತ್ತು, ಸುಗ್ರೀವನು ಸೀತೆಯನ್ನು ಹುಡುಕಲು ಕೊಟ್ಟ ಕಾಲಾವಧಿ ಮಾಯಾ-ಗವಿಯ ಅರಣ್ಯ ಪರ್ವತಗಳಲ್ಲಿಯೇ ಮುಗಿದಿತ್ತು ; ಎಲ್ಲ ವಾನರರು ವಿಂಧ್ಯ-ಪರ್ವತದ ಅಡಿಯಲ್ಲಿ ಹೂ ಗಿಡಮರಗಳ ರಮ್ಯ ತಾಣದಲಿ ಸೇರಿದರು ಮತ್ತು ಚಿಂತಾಕ್ರಾಂತರಾದರು; ಆಗಲೇ ವಸಂತ ಋತುವಿನ ಆಗಮನವಾಗಿತು, ಗಿಡಬಳ್ಳಗಳಲ್ಲಿ ಹೂ ಹಣ್ಣಿನ ಗೊಂಚ್ಚಲು ತೂಗುತಿದ್ದವು ಆದರೆ ವಾನರರು ಅವುಗಳತ್ತ ಲಕ್ಷ ಹರಿಸದೆ ಸುಗ್ರೀವನ ಭಯದಲಿದ್ದರು; (3) ಅಂಗದನ ಪ್ರಲಾಪ: ಸಿಂಹ ವೃಷಭ ಬಲದ ಅಜಾನುಬಾಹು ಯುವರಾಜ ಅಂಗದನು ಹಿರಿಯ ಮತ್ತು ಕಿರಿಯ ವಾನರರಿಗೆ ವಂದಿಸುತ್ತ ವಾನರರಿಗೆ “ಓ ವಾನರರೇ, ನಮಗೆ ರಾಜಾ ಸುಗ್ರೀವ ನೀಡಿದ ಸಮಯ ನಿಮಗೂ ತಿಳಿದ ವಿಷಯ ಆದರೆ ನಿಗಧಿತ ಮಾಸವು ಸೀತೆಯನ ಹುಡುಕುವದರಲ್ಲಿ ಮಾಯಾನ ಕಪ್ಪು ಗವಿಯಲ್ಲಯೇ ಕಳೆಯಿತು; ನೀವು ದಾರಿ-ಶೋಧಕ ತಜ್ಞರು, ರಾಜನ ನಂಬಿಗಸ್ಥರು ಮತ್ತು ಸರ್ವ ಕಾರ್ಯದಲ್ಲಿ ರಾಜನ ಹಿತೈಸಿಗಳು; ನನ್ನ ನೇತೃತ್ವದಲ್ಲಿ ಸೀತೆ-ಶೋಧನೆ ಕಾರ್ಯ ನಡೆದಿದೆ, ನಾವು ಪ್ರಾಣತೆತ್ತಾದರೂ ರಾಜನ ಕಾರ್ಯ ಸಾಧಿಸುವವರು ಹಾಗು ನಮಗೆ ಆ ಕಾರ್ಯ ಸಾಧಿಸದೇ ರಾಜಕ್ಕೆ ಹಿಂತಿರುಗುವದು ಅಸಾಧ್ಯ, ಕಾರಣ ನಾವೆಲ್ಲರೂ ಆಮರಣ ಉಪವಾಸ ಮಾಡೋಣ ; ಒಂದು ವೇಳೆ ಕಾರ್ಯ ಸಾಧಿಸದೇ ನಾವು ರಾಜ್ಯಕ್ಕೆ ಮರಳಿದರೆ ನಮ್ಮನು ಸುಗ್ರೀವನು ನಿರ್ದಯದಿಂದ ಕೊಲ್ಲುವನು; ನಮ್ಮ ಹೆಂಡತಿ ಮಕ್ಕಳು ಸುಖದಲ್ಲಿ ಬದುಕಿರಲಿ, ನಾವು ಇಲ್ಲಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳೋಣ; ನನ್ನನ್ನು ಯುವರಾಜ ಮಾಡಿದ್ದು ಸುಗ್ರೀವನಲ್ಲ, ರಾಮನು; ನನ್ನ ತಂದೆಯೊಂದಿಗೆ ಹಗೆತನವಿದ್ದ ಸುಗ್ರೀವನು ನನ್ನನ್ನು ಶತ್ರುವಿನ ಮಗನೆಂದು ಸಂಹರಿಸವನು; ನನಗೆ ಸಂಬಂಧಿಗಳಿದ್ದು ಪ್ರಯೋಜನವಿಲ್ಲ, ನಾನು ಬದುಕಿ ಹಿಂಸೆ ಪಡುವಕ್ಕಿಂತ ಪವಿತ್ರ ಕಡಲತೀರದಲಿ ಆಮರಣ ಉಪವಾಸದ ಮರಣ ಪಡೆಯುವದು ಲೇಸು”ಎಂದು ತನ್ನ ಮನಸ್ಸಿನ ನಿರ್ಧಾರ ಮತ್ತು ದುಗುಡದ ಮಾತುಗಳನ್ನು ತೊಡಿಕೊಂಡನು; (4) ದಂಡನಾಯಕ ತಾರನ ಸಲಹೆ:ಯುವರಾಜ ಅಂಗದನ ದುಗುಡದ ಮಾತುಗಳನ್ನು ಕೇಳಿದ ವಾನರರು ಭಾವುಕತೆಯಿಂದ “ಸುಗ್ರೀವನು ಶೀಘ್ರ ಕೋಪಿ, ಸೀತೆಯಲ್ಲಿ ರಾಮನ ಆಸಕ್ತಿ ಇದೆ; ಸುಗ್ರೀವನು ನಮಗೆ ಕೊಟ್ಟ ಸಮಯ ಮುಗಿಯಿತು, ಸೀತೆಯೂ ಸಿಗಲಿಲ್ಲ, ಒಂದುವೇಳೆ ನಾವು ಬರಿಗೈಯಿಂದ ಕಿಷ್ಕಿಂಧಕ್ಕೆ ಮರಳಿದರೆ ಅವನು ನಮ್ಮನು ರಾಮನ ಸಮಾಧಾನಕ್ಕಾಗಿ ಕೊಲ್ಲುವನು” ಭಯಭೀತ ವಾನರರ ನೋವಿನ ಮಾತುಗಳನ್ನು ಕೇಳಿದ ದಂಡನಾಯಕ ತಾರನು ವಾನರರಿಗೆ “ನಿಮ್ಮ ನಿರಾಶೆ ನುಡಿಗಳನ್ನು, ನಿಲ್ಲಿಸಿರಿ, ನೀವೆಲ್ಲರೂ ನಾವು ಬಯಸಿದಲ್ಲಿ ಪುನಃ ಸೇರೋಣ ಕಪ್ಪುಗವಿಯನ್ನು, ಜೀವಂತವಾಗಿರೋಣ” ಎಂದು ಸುಗ್ರೀವನ ವಿರುದ್ಧ ಬಂಡೆಳುವ ಮತ್ತು ವಾನರರ ರಕ್ಷಣಾ ಮಾರ್ಗೋಪಾಯದ ಸಲಹೆ ನೀಡಿದನು; ಅಂಗದ ಮತ್ತು ತಾರರ ಮಾತುಗಳನ್ನು ತಿಳಿದು ಅಂಗದನಿಗೆ ವಾನರರು “ಅದು ನಾವು ಜೀವಂತುಳಿವ ಮಾರ್ಗ, ಸೂಕ್ತ ಹಾಗೇ ಆಗಲಿ”ಎಂದು ಸಮ್ಮತಿ ಕೊಟ್ಟರು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯನ್ನು ಹುಡುಕುವದರಲ್ಲಿ ವಿಫಲರಾದ ವಾನರ ನಾಯಕರ ಸಹಜ ಮನಸ್ಥಿತಿಯನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
