ಕೇಳಿ ಅಂಗದನ ಕೋರಿಕೆ ಗಜ, ಗವಾಕ್ಷ, ಗವಯ, ಶರಭ,I
ಗಂಧಮಾದನ ಮೈಂದ, ದ್ವಿವಿದ, ಒಬ್ಬೊಬ್ಬರಾಗಿ ಬಂದು II
ನುಡಿದರು:ಗಜ ಹೇಳಿದ “ಹತ್ತು ಯೋಜನೆ ಹಾರಬಲ್ಲೆ ನಾ”I
ಗವಾಕ್ಷ ಹೇಳಿದ “ಇಪ್ಪತ್ತು ಯೋಜನೆ ಹಾರಬಲ್ಲೆ ನಾ”; II
ಗವಯ ಹೇಳಿದ “ಮೂವತ್ತು ಯೋಜನೆ ಹಾರಬಲ್ಲೆ ನಾ”;I
ಶರಭ ಹೇಳಿದ “ನಾಲ್ವತ್ತು ಯೋಜನೆ ಹಾರಬಲ್ಲೆ ನಾ”; II
ಗಂಧಮಾದನ ಹೇಳಿದ “ಐವತ್ತು ಯೋಜನೆ ಹಾರಬಲ್ಲೆ ನಾ”;I
ಮೈಂದ ಹೇಳಿದ “ಅರವತ್ತು ಯೋಜನೆ ಹಾರಬಲ್ಲೆ ನಾ”;II
ದ್ವಿವಿದ ಹೇಳಿದ “ಏಪ್ಪತ್ತು ಯೋಜನೆ ಹಾರಬಲ್ಲೆ ನಾ”;I
ಶುಶೇಣ ಹೇಳಿದ “ಎಂಬತ್ತು ಯೋಜನೆ ಹಾರಬಲ್ಲೆ ನಾ”;II
ಕೇಳಿ ವಾನರರ ಹಾರಬಲ್ಲ ಸಾಮರ್ಥ್ಯ ವಾಗ್ದಾನI
ಹೀಗೆ ನುಡಿದ ವೃದ್ಧ ಹಿರಿಯ ಜಾಂಬವಂತ: II
“ಹಿಂದೆ ಇಂಥಹ ಸಾಹಸ ಮಾಡುತಿದ್ದೇವು I
ಆದರೆ ಇಂದು ಕಾಲದ ಇನ್ನೊಂದು ತೀರದಲಿದ್ದೇವೆ ನಾವು; II
ಕೂಡಿ ನಿರ್ಣಯಿಸೋಣ ಇಂಥಹ ಪ್ರಸಂಗದಲಿI
ಕಡೆಗೆಣಿಸದೇ ರಾಮ ಸುಗ್ರೀವರ ಕೊಟ್ಟ ಗುರಿ; II
ನಿಸ್ಸಂದೇಹ, ಹೋಗಬಹುದು ತೊಂಬತ್ತು ಯೋಜನೆI
ನಾನೀ ವಯಸ್ಸಿನಲಿ, ಹೋಗಬಹುದು ಇನ್ನೂ ಹೆಚ್ಚಿಗೆ; II
ಆದರೆ ಗುರಿ ಅಪೂರ್ಣಗೊಳ್ಳುವದು,ಹಿಂತಿರುಗುವದು ಅಸಾಧ್ಯ I
ನನ್ನೀ ಮುದಿ ವಯಸ್ಸಿನಲಿ, ಓ ವಾನರಾ”; II
ಮುತ್ಸದಿ ಜಾಂಬವಂತ ಪುನಃ ಅಂಗದನಿಗೆ ನುಡಿದ: “ಓ ಅಂಗದಾ,I
ನರಕರಡಿಗಳಲ್ಲಿ ಹೆಚ್ಚು ಸಾಮರ್ಥ್ಯ ನಿನ್ನದು, II
ನೂರೇಕೆ,ಸಹಸ್ರ ಯೋಜನೆ ಹಾರಬಲ್ಲೆ ನೀ;I
ಆದರೆ ನಿನ್ನ ಕಳಿಸುದು ಅಸಮಯೋಚಿತ ವಿಧಿ; II
ನೀನೀ ಹೊಣೆ-ಕಾರ್ಯದ ನಾಯಕ,I
ನಿನಗೀ ಕಾರ್ಯ ನೀಡುವದು ಅಸೂಕ್ತ; II
ಓ ಅಂಗದಾ, ನಿನ್ನ ರಕ್ಷಣೆಯಲ್ಲಿಹೆವು ನಾವುI
ಯೋಗ್ಯವಲ್ಲಾ ನೀ ಹೋಗುವದೆಮೆಗೆ”; II
ಕೇಳಿ ಜಾಂಬವಂತನ ಮಾತು ಅಂಗದ ಉತ್ತರಿಸಿದ:I
“ಹೋಗದಿದ್ದರೆ ನಾನಾಗಲೀ, ವಾನರರಾಗಲೀ ಲಂಕೆಗೆ, II
ಆತ್ಮಹತ್ಯೆಯೊಂದೇ ಮಾರ್ಗ ನಮಗೆ, ಕಿಷ್ಕಿಂಧಕ್ಕೆ II
ನಿಮ್ಮನು ಸುಗ್ರೀವನ ಕೋಪದಿಂದ ರಕ್ಷಿಸಲಾರೆ; 4.65.16
ಮುಂದಾಗುವ ಅನಾಹುತ ನೆನೆದುI
ಹುಡುಕಿರಿ ಮಾರ್ಗೋಪಾಯ ಇಂದು”. II
ಕೇಳಿ ಅಂಗದನ ನುಡಿ ಜಾಂಬವಂತ ಉತ್ತರಿಸಿದ:I
“ಓ ಅಂಗದಾ, ನೀನ್ಹಿಡಿದ ಕಾರ್ಯ ವಿಫಲವಾಗದು, II
ಹನುಮನಲ್ಲಿದೆ ಸೀತೆ-ಶೋಧಿಸುವ ಸಾಮರ್ಥ್ಯI
ಸಮುದ್ರದಾಚೆ ಹಾರಿ,ಅವನಿಗೆ ಹುರುದುಂಬಿಸುವೆ”.II
ಕಿಷ್ಕಿಂಧಕಾಂಡ ರಾಮಾಯಣ
ವಾನರ ವೀರರೆಲ್ಲರೂ ತಾವು ದೂರ-ಜಿಗಿಯವ ತಮ್ಮತಮ್ಮ ಸಾಮರ್ಥ್ಯವನ್ನು ಅಂಗದನ ಮುಂದೆ ಹೇಳುತ್ತ ತಾವೆಲ್ಲರೂ ಲಂಕೆಗೆ ಜಿಗಿಯುವ ಸಾಮರ್ಥ್ಯ ಹೊಂದಿಲ್ಲವೆಂಬ ಸತ್ಯವನ್ನು ತಿಳಿಸುವಾಗ ಮುದಿ ಜಾಂಬವಂತ ಮಾತ್ರ ಸಮುದ್ರದಾಚೆ ಹಾರುವ ಸಾಮರ್ಥ್ಯ ಹನುಮಾನನಲ್ಲಿದ್ದ ತಿಳಿಸಿದ ಸಂಗತಿ ಸಂರ್ಬಧ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ನೀಡಿರುವರು. ಅದರಲ್ಲಿಯ ಮುಖ್ಯ ಅಂಶಗಳು:(1) ವಾನರರರು ತಮ್ಮ ತಮ್ಮ ಜಿಗಿತದ ಸಾಮರ್ಥ್ಯವನ್ನು ಅಂಗದನ ಮುಂದೆ ಹೀಗೆ ಹೇಳಿಕೊಂಡರು: ಗಜ, ಗವಾಕ್ಷ, ಗವಯ, ಶರಭ, ಗಂಧಮಾದನ ಮೈಂದ, ದ್ವಿವಿದ, ಒಬ್ಬೊಬ್ಬರಾಗಿ ಬಂದು ಅಂಗದನಿಗೆ ಹೇಳಿದರು—ಗಜ ಹೇಳಿದ “ಹತ್ತು ಯೋಜನೆ ಹಾರಬಲ್ಲೆ ನಾ”; ಗವಾಕ್ಷ ಹೇಳಿದ “ಇಪ್ಪತ್ತು ಯೋಜನೆ ಹಾರಬಲ್ಲೆ ನಾ”; ಗವಯ ಹೇಳಿದ “ಮೂವತ್ತು ಯೋಜನೆ ಹಾರಬಲ್ಲೆ ನಾ”; ಶರಭ ಹೇಳಿದ “ನಾಲ್ವತ್ತು ಯೋಜನೆ ಹಾರಬಲ್ಲೆ ನಾ”; ಗಂಧಮಾದನ ಹೇಳಿದ “ಐವತ್ತು ಯೋಜನೆ ಹಾರಬಲ್ಲೆ ನಾ”; ಮೈಂದ ಹೇಳಿದ “ಅರವತ್ತು ಯೋಜನೆ ಹಾರಬಲ್ಲೆ ನಾ”; ದ್ವಿವಿದ ಹೇಳಿದ “ಏಪ್ಪತ್ತು ಯೋಜನೆ ಹಾರಬಲ್ಲೆ ನಾ”; ಶುಶೇಣ ಹೇಳಿದ “ಎಂಬತ್ತು ಯೋಜನೆ ಹಾರಬಲ್ಲೆ ನಾ”; ಹೀಗೆ ಪ್ರತಿಯೊಬ್ಬ ವಾನರ ವೀರ ತನ್ನ ಜಿಗಿತದ ಸಾಮರ್ಥ್ಯವನ್ನು ಹೇಳಿಕೊಂಡರು.(2) ಜಾಂಬವಂತನು ತನ್ನ ಸಾಮರ್ಥ್ಯದ ಬಗ್ಗೆ ಹೇಳಿಕೊಂಡನು ಹಾಗು ಸಲಹೆ ನೀಡಿದನು: ವಾನರರ ಹಾರಬಲ್ಲ ಸಾಮರ್ಥ್ಯದ ಮಾತುಗಳನ್ನು ಕೇಳಿದ ವೃದ್ಧ ಹಿರಿಯ ಜಾಂಬವಂತ “ಓ ವಾನರಾ, ಈ ಹಿಂದೆ ಇಂಥಹ ಸಾಹಸ ಮಾಡುತಿದ್ದೇವು ಆದರೆ ನಾವು ಇಂದು ಕಾಲದ ಇನ್ನೊಂದು ತೀರದಲಿದ್ದೇವೆ; ಇಂಥಹ ಪ್ರಸಂಗದಲ್ಲಿ ರಾಮ ಸುಗ್ರೀವರ ಕೊಟ್ಟ ಗುರಿಯನ್ನು ಕಡೆಗೆಣಿಸದೇ ಎಲ್ಲರೂ ಕೂಡಿ ನಿರ್ಣಯಿಸೋಣ; ನಾನು ಈ ಮುದಿವಯಸ್ಸಿನಲ್ಲಿ ನಿಸ್ಸಂದೇಹ ತೊಂಬತ್ತು ಯೋಜನೆಯಷ್ಟು ಇಲ್ಲವೆ ಇನ್ನೂ ಹೆಚ್ಚಿಗೆ ದೂರ ಜಿಗಿಯ ಬಹುದು ಆದರೆ ನಮ್ಮ ಗುರಿ ಅಪೂರ್ಣಗೊಳ್ಳುವದು ಹಾಗು ನಾನು ಹಿಂತಿರುಗುವದು ಅಸಾಧ್ಯ”ವೆಂದು ತನ್ನ ಸಾಮರ್ಥ್ಯದ ಬಗ್ಗೆ ಅಂಗದನಿಗೆ ಹೇಳಿದನು; ಮುಂದುವರೆದು ಮುತ್ಸದಿ ಜಾಂಬವಂತನು ಪುನಃ ಅಂದನಿಗೆ “ಓ ಅಂಗದಾ, ನರವಾನರ ಮತ್ತು ನರಕರಡಿಗಳಲ್ಲಿ ಹೆಚ್ಚು ದೂರ ಜಿಗಿಯುವ ಸಾಮರ್ಥ್ಯವನ್ನು ನೀನು ಹೊಂದಿರುವಿ, ನೀನು ನೂರಕ್ಕಿಂತ ಅಧಿಕವಾಗಿ ಸಹಸ್ರ ಯೋಜನೆ ಹಾರಬಲ್ಲೆ ಆದರೆ ನಿನ್ನನ್ನು ಕಳಿಸುದು ಅಸಮಯೋಚಿತ ವಿಧಿ ಯಾಕೆಂದರೆ ನೀನೇ ಹೊಣೆ-ಕಾರ್ಯದ ನಾಯಕನು,ನಿನಗೆ ಈ ಕಾರ್ಯ ನೀಡುವದು ಅಸೂಕ್ತ; ಓ ಅಂಗದಾ, ನಾವು ನಿನ್ನ ರಕ್ಷಣೆಯಲ್ಲಿ ಇದ್ದೇವೆ,ನೀನು ನಮ್ಮನ್ನು ಬಿಟ್ಟು ಹೋಗುವದು ಯೋಗ್ಯ ಅಲ್ಲ”ಎಂದು ಜವಾಬ್ದಾರಿ ನೆನಪಿಸುವ ಮಾತುಗಳನ್ನು ಹೇಳಿದನು ಹಾಗು ಉಪದೇಶಿಸಿದನು;(3) ಹನುಮಾನನಲ್ಲಿ ಸೀತೆ ಹುಡುಕುವ ಸಾಮರ್ಥ್ಯದ ಬಗ್ಗೆ ಜಾಂಬವಂತ ಹೇಳಿದನು: ಜಾಂಬವಂತನ ಉಪದೇಶ ಕೇಳಿದ ಅಂಗದನು” “ನಾನಾಗಲೀ, ವಾನರರಾಗಲೀ ಲಂಕೆಗೆ ಹೋಗದಿದ್ದರೆ ನಮಗೆ ಆತ್ಮಹತ್ಯೆಯೊಂದೇ ಮಾರ್ಗ, ನಾನು ಕಿಷ್ಕಿಂಧಕ್ಕೆ ಮರಳಿ ನಿಮ್ಮನು ಸುಗ್ರೀವನ ಕೋಪದಿಂದ ರಕ್ಷಿಸಲಾರೆನು, ಇಂದು ಮುಂದಾಗುವ ಅನಾಹುತ ನೆನೆದು ಮಾರ್ಗೋಪಾಯ ಹುಡುಕಿರಿ” ಎಂದು ವಾನರರಿಗೆ ಕೋರಿದನು; ಅಂಗದನ ಮಾತುಗಳನ್ನು ಕೇಳಿದ ಜಾಂಬವಂತನು ಅಂಗದನಿಗೆ “ಓ ಅಂಗದಾ, ನೀನು ಹಿಡಿದ ಕಾರ್ಯ ವಿಫಲವಾಗದು, ಸೀತೆ-ಶೋಧಿಸುವ ಸಾಮರ್ಥ್ಯ ಹನುಮಾನನಲ್ಲಿ ಇದೆ, ನಾನು ಅವನನ್ನು ಸಮುದ್ರದಾಚೆ ಹಾರುವಂತೆ ಹುರುದುಂಬಿಸುವೆನು”ಎಂದು ಮಾರ್ಗೋಪಾಯ ಸೂಚಿಸುತ್ತ ಹೇಳಿದನು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ

ಕೇಳಿ ಅಂಗದನ ಕೋರಿಕೆ ಗಜ, ಗವಾಕ್ಷ, ಗವಯ, ಶರಭ,I