
ಹುರುಪಿನಿಂದ ಕುಣದಾಡಿದರು ವಾನರರುI
ಸಂಪತಿಯಿಂದ ಸೀತೆ ಸುಳಿವು ತಿಳಿದು; II
ವಿಶ್ವದ ಪ್ರತಿಬಿಂಬಿನಂತೆ ಕಾಣುವ ಮಹಾಸಾಗರದತ್ತ I
ವಾನರರ ಹಿಂಡು ಬಂತು, ಪರ್ವತದಿಂದ ಅಡತಡೆಗಳು ದಾಟುತ; II
ಮಹಾಸಾಗರದ ಉತ್ತರದಿಕ್ಕಿನ ಕಡಲತೀರದಲಿI
ಬಿಡಾರ ಹೂಡಿತು ವಾನರರ ಸೇನೆ ಉತ್ಸುಕತೆದಿ; II
ಪರ್ವತದೇತ್ತರ ಅಲೆಗಳು, ಭೋರ್ಗರೆವ ಭಯಾನಕ ಶಬ್ದI
ಮತ್ತೊಂದೆಡೆ ಶಾಂತ, ಪಕ್ಷಿ ವ ಜಲಚರಗಳ ನೋಟ; II
ನೋಡುಗರನು ರೋಮಾಂಚನಗೊಳಿಸುವ ದೃಶ್ಯ, I
ತೀರಹೀನ ಅನಂತ ಮಹಾಸಾಗರ ಕಂಡು; ನಿರಾಶೆಯಿಂದ ಪರಸ್ಪರ II
ನುಡಿದವು:”ದಾಟುವದ್ಹೇಗೆ?” ಆದರೆ, ಅಂಗದ I
ಹೆದರಿದ ವಾನರರಿಗೆ ಧೈರ್ಯ ತುಂಬಿದ; ಅಂಗದ ನುಡಿದ II
ವಾನರರಿಗೆ:” ನಿರಾಶೆ ವ್ಯಕ್ತಿಯನು ನಾಶಪಡಿಸುವದುI
ವಿಷಸರ್ಪ ಮುಗ್ದ ಮಗುವನ್ನು ಕೊಂದಂತೆ, ಧೈರ್ಯಗುಂದಬೇಡಿ; II
ವೈಯಕ್ತಿಕ ಸಾಧನೆಗೆ ಅವಕಾಶ ಬಂದಾಗ ಉಪಯೋಗಿಸುವದುI
ಸಾಹಸಿಯ ಲಕ್ಷಣ, ನಿರಾಶೆ ಅವಕಾಶ ಕಳೆಯುವದು.”II
ರಾತ್ರಿಯಾಯಿತು, ವಾನರರು ಸಮುದ್ರ ದಾಟುವI
ಭಯ, ಚಿಂತೆಯಲ್ಲಿ ಕಳೆದರು ರಾತ್ರಿ ಕಡಲತೀರದ;II
ಮುಂಜಾವಿನಲಿ ಅಂಗದ ವಾನರರನು ಸಂಧಿಸಿದI
ನಿಂತಿತು ವಾನರ ಸೈನ್ಯ ಸಾಲುಗಳಲ್ಲಿ ಶಿಸ್ತಿನಿಂದ; II
ಹಿರಿಯ ಮುಖ್ಯಸ್ಥ ವಾನರರಿಗೆ ನುಡಿದ ಅಂಗದ:I
“ಸಮುದ್ರದಾಚೆ ಹಾರು ಸಾಹಸ ಯಾರು ಮಾಡುವಿರಿ? II
ಸುಗ್ರೀವನಾಜ್ಞೆ ಯಾರು ಹೇಗೆ ಪಾಲಿಸುವಿರಿ? ಓ ವಾನರರೇ, I
ನೂರು ಯೋಜನೆಯಾಚೆ ಜಿಗಿಯುವವರಾರು? II
ಸುಗ್ರೀವನಿಂದ ನಮ್ಮನು ಬದುಕಿಸುವವರಾರು? I
ಹೆಂಡತಿ ಮಕ್ಕಳ ನೋಡುವ ಭಾಗ್ಯ ನಮಗೆ ನೀಡುವವರ್ಯಾರು? II
ಯಾರ ಪುಣ್ಯಕಾರ್ಯದಿ ನಾವು ಹಿಂದಿರುಗಬಹುದು ರಾಮ,I
ಲಕ್ಷ್ಮಣ ವ ಸುಗ್ರೀವನ ಬಳಿ? ಮುಂದೆ ಬನ್ನಿ, II
ನಿಮ್ಮಲ್ಲಿ ಸಮುದ್ರದಾಚೆ ಹಾರು ಸಾಮರ್ಥ್ಯವಿದ್ದವರು, I
ಸುಗ್ರೀವನ ಆಜ್ಞೆ ಪಾಲನೆಗೆ”; ಕೇಳಿ ಅಂಗದನ ಕರೆ, II
ಮೂಕಸ್ಮಿತರಾದರು ವಾನರರು,ಯಾರೊಬ್ಬುನು ಮಾತಾಡುವ I
ಸಾಹಸ ಮಾಡದೆ; ಅಂಗದ ಪುನಃ ನುಡಿದ II
ವಾನರರಿಗೆ:” ನಿಮ್ಮಲ್ಲಿ ಯಾವ ಕುಂದುವಿಲ್ಲ, ಹುಟ್ಟುI
ಸಾಹಸಿಗಳು ನೀವು, ಸಬಲ ವಾನರರು ನೀವೆಲ್ಲ; II
ಬಂಧನವಿಲ್ಲ ನಿಮಗ್ಯಾವು, ಮಾತನಾಡಲು ಮುಕ್ತರು,I
ನೀಡಿರಿ ಪ್ರತಿಯೊಬ್ಬರು ಸಲಹೆ ನನಗೆ”.II
ಕಿಷ್ಕಿಂಧಕಾಂಡ ರಾಮಾಯಣ
ಸಂಪತಿಯಿಂದ ಸೀತೆಯ ಸುಳಿವು ತಿಳಿದು ವಾನರರು ಹುರುಪಿನಿಂದ ಕುಣಿದಾಡಿದ ಹಾಗು ವಾನರರ ಹಿಂಡು ಆ ಪರ್ವತದಿಂದ ಅಡತಡೆಗಳು ದಾಟುತ ವಿಶ್ವದ ಪ್ರತಿಬಿಂಬಿನಂತೆ ಕಾಣುವ ಮಹಾಸಾಗರದತ್ತ ಓಡಿ ಬಂದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ಬಣ್ಣಿಸಿರುವರು, ಅವುಗಳಲ್ಲಿಯ ಮುಖ್ಯ ಅಂಶಗಳು: (1) ವಾನರರು ಕಂಡ ಸಮುದ್ರದ ರೋಮಾಂಚ ದೃಶ್ಯ: ವಾನರರ ಸೇನೆ ಉತ್ಸುಕತೆಯಿಂದ ಮಹಾಸಾಗರದ ಉತ್ತರದಿಕ್ಕಿನ ಕಡಲತೀರದಲ್ಲಿ ಬಿಡಾರ ಹೂಡಿತು; ಪರ್ವತದೇತ್ತರ ಅಲೆಗಳು ಮತ್ತು ಅವುಗಳ ಭೋರ್ಗರೆವ ಭಯಾನಕ ಶಬ್ದ ಒಂದು ಕಡೆ ಕೇಳಿ ಬರುತಿದ್ದರೆ, ಮತ್ತೊಂದೆಡೆ ಪ್ರಶಾಂತ ವಾತಾವರಣ, ಪಕ್ಷಿ ಮತ್ತು ಜಲಚರಗಳ ರಮ್ಯ ನೋಟ—ನೋಡುಗರನು ರೋಮಾಂಚನಗೊಳಿಸುವ ದೃಶ್ಯವಾಗಿತ್ತು; (2) ಸಮುದ್ರದಾಟುವ ಚಿಂತೆ: ಎತ್ತೂ ದಡಕಾಣದ ಅನಂತ ಮಹಾಸಾಗರ ಕಂಡು ವಾನರರು ನಿರಾಶೆಯಿಂದ ಪರಸ್ಪರ “ದಾಟುವದ್ಹೇಗೆ?”ಎಂದು ಪ್ರಶ್ನಿಸಿಕೊಂಡುರು; ಸಮುದ್ರ ಕಂಡು ಹೆದರಿದ ವಾನರರಿಗೆ ಅಂಗದನು ಧೈರ್ಯ ತುಂಬಿದನು ಹಾಗು ಅವರಿಗೆ” ಧೈರ್ಯಗುಂದಬೇಡಿ, ವಿಷಸರ್ಪ ಮುಗ್ದ ಮಗುವನ್ನು ನಾಶಪಡಿಸಿದಂತೆ ನಿರಾಶೆಯು ವ್ಯಕ್ತಿಯನು ನಾಶಪಡಿಸುವದು, ವೈಯಕ್ತಿಕ ಸಾಧನೆಗೆ ಅವಕಾಶ ಬಂದಾಗ ಅದನ್ನು ಉಪಯೋಗಿಸುವದು ಸಾಹಸಿಯ ಲಕ್ಷಣ, ನಿರಾಶೆಯು ಅವಕಾಶವನ್ನು ಕಳೆಯುವದು” ತಮಗೆ ಒದಗಿಬಂದ ಅವಕಾಶ ಬಳಸಿಕೊಳ್ಳಲು ತಿಳಿಸಿದನು;(3) ಸಮುದ್ರ ದಾಟುವ ಸಾಮರ್ಥ್ಯವುಳ್ಳವನಿಗೆ ಅವಕಾಶ: ವಾನರರು ಸಮುದ್ರ ದಾಟುವ ಭಯದ ಚಿಂತೆಯಲ್ಲಿ ರಾತ್ರಿಯನ್ನು ಕಡಲತೀರದಲ್ಲಿ ಕಳೆದರು; ಮುಂಜಾವಿನಲಿ ಅಂಗದ ವಾನರರನು ಭೇಟಿಯಾದನು, ಅವನ ಮುಂದೆ ವಾನರ ಸೈನ್ಯ ಶಿಸ್ತಿನಿಂದ ಸಾಲುಗಳಲ್ಲಿ ನಿಂತಿತು; ಹಿರಿಯ ಮುಖ್ಯಸ್ಥ ವಾನರರಿಗೆ ಅಂಗದನು “ಸಮುದ್ರದಾಚೆ ಹಾರು ಸಾಹಸ ಯಾರು ಮಾಡುವಿರಿ? ಸುಗ್ರೀವನಾಜ್ಞೆ ಯಾರು ಹೇಗೆ ಪಾಲಿಸುವಿರಿ? ಓ ವಾನರರೇ, ನೂರು ಯೋಜನೆಯಾಚೆ ಜಿಗಿಯುವವರಾರು? ಸುಗ್ರೀವನಿಂದ ನಮ್ಮನು ಬದುಕಿಸುವವರಾರು? ಹೆಂಡತಿ ಮಕ್ಕಳ ನೋಡುವ ಭಾಗ್ಯ ನಮಗೆ ನೀಡುವವರ್ಯಾರು? ಯಾರ ಪುಣ್ಯಕಾರ್ಯದಿಂದ ನಾವು ಹಿಂದಿರುಗಬಹುದು ರಾಮ, ಲಕ್ಷ್ಮಣ ವ ಸುಗ್ರೀವನ ಬಳಿ? ಮುಂದೆ ಬನ್ನಿ, ನಿಮ್ಮಲ್ಲಿ ಸಮುದ್ರದಾಚೆ ಹಾರು ಸಾಮರ್ಥ್ಯವಿದ್ದವರು, ಸುಗ್ರೀವನ ಆಜ್ಞೆ ಪಾಲನೆಗೆ” ಎಂದು ಪ್ರಶ್ನಿಸುತ್ತ ಸಾಹಸಿ ವಾನರರಿಗೆ ಅಹ್ವಾನ ನೀಡಿದನು; (4) ಅಂಗದನ ಪ್ರೋತ್ಸಹ: ಅಂಗದನ ಕರೆಯನ್ನು ಕೇಳಿ ಯಾವ ವಾನರನೂ ಮಾತಾಡುವ ಸಾಹಸ ಮಾಡದೆ ಮೂಕಸ್ಮಿತರಾದರು; ಅಂಗದನು ಪುನಃ ವಾನರರಿಗೆ: ” ನಿಮ್ಮಲ್ಲಿ ಯಾವ ನ್ಯೂನತೆ ಇಲ್ಲ, ನೀವು ಹುಟ್ಟು ಸಾಹಸಿಗಳು ಮತ್ತು ನೀವೆಲ್ಲ ಸಬಲ ವಾನರರು; ನೀವು ಮಾತನಾಡಲು ಮುಕ್ತರು, ನಿಮಗ್ಯಾವು ಬಂಧನವಿಲ್ಲ, ನನಗೆ ನೀವು ಪ್ರತಿಯೊಬ್ಬರು ಸಲಹೆ ನೀಡಿರಿ”ಎಂದು ಧೈರ್ಯ ತುಂಬಿದನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು (ಅ) ವಿಷಸರ್ಪ ಮುಗ್ದ ಮಗುವನ್ನು ನಾಶಪಡಿಸಿದಂತೆ ನಿರಾಶೆಯು ಮನುಷ್ಯನನ್ನು ನಾಶಪಡಿಸುವದು— ಯಾವದೇ ಪ್ರಸಂಗ ಬಂದಾಗ ಮನುಷ್ಯ ಅದನ್ನು ದೈರ್ಯದಿಂದ ಎದುರಿಸಬೇಕು, (ಬ) ವೈಯಕ್ತಿಕ ಸಾಧನೆಗೆ ಅವಕಾಶ ಒದಗಿ ಬಂದಾಗ ಅದನ್ನು ಉಪಯೋಗಿಸುವದು ಸಾಹಸಿಯ ಲಕ್ಷಣ— ಸಾಹಸಿ ತನಗೆ ಒದಗಿ ಬಂದ ಯಾವುದೇ ಅವಕಾಶವನ್ನು ಕಳೆದುಕೊಳ್ಳುವದಿಲ್ಲ,(ಕ) ನಿರಾಶೆ ಭಾವನೆಯು ಮನುಷ್ಯನನ್ನು ಒದಗಿ ಬಂದ ಅವಕಾಶವನ್ನು ಕಳೆದುಕೊಳ್ಳುವಂತೆ ಮಾಡುವದು, ಮತ್ತು (ಡ) ಜಟಿಲ ಪ್ರಸಂಗದಲ್ಲಿ ಎಲ್ಲರೊಂದಿಗೆ ಚರ್ಚಿಸಿ ಸಲಹೆ ಪಡೆದು ನಿರ್ಣಯಿಸುವದು ಉತ್ತಮ, ಹೀಗೆ ಸಾರ್ವಕಾಲಿಕ ಪಯುಕ್ತ ನೀತಿ ಬೋಧನೆಯನ್ನು ನೀಡಿರುವರು
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
