ಸುಂದರಕಾಂಡ ರಾಮಾಯಣ ಭಾಗ-60

By admin


ಕೋಪಿಸಿಕೊಂಡಳು ಲಂಕೆ ಕೇಳಿ ಹನುಮನ ನುಡಿ,I
ಕಠೋರ ದ್ವನಿಯಲಿ ನುಡಿದಳು ಹನುಮನಿಗೆ,II
“ಮಹಾತ್ಮ ರಾಕ್ಷಸರಾಜ ರಾವಣನ ರಕ್ಷಕಳು ನಾ,I
ಆಜ್ಞೆಯಂತೆ ಅಜೇಯಳಾಗಿ ರಕ್ಷಿಸುತಿರುವೆ ನಗರ, II
ಅಸಾಧ್ಯನಿನಗೆ ನಗರ ನುಸುಳುವದು ನನ್ನ ಭೇದಿಸಿ,I
ನನ್ನ ಹೊಡೆತ್ತಕ್ಕೆ ಪ್ರಾಣ ಬಿಟ್ಟು ಚಿರನಿದ್ರೆಗೆ ಜಾರುವಿ ನೀ, II
ಓ ವಾನರಾ,ಹೇಳಿರುವೆ ಈಗಾಗಲೇ ನಿನಗೆ,I
ನಗರವನು ನಾ ಎಲ್ಲದಿಸೆಗಳಲ್ಲೂ ರಕ್ಷಿಸುವೆ”,II
ಕೇಳಿ ಲಂಕಾಳ ನುಡಿಗಳನು ಹನುಮI
ಅಟಲ ಪರ್ವತದಂತೆ ನಿಂತು ಎದುರಿಗೆ ಲಂಕಾಳ, II
ಲಂಕಾಳನ್ನು ಕುರೂಪಿ ಸ್ರ್ತಿಯಂತೆ ಕಂಡ ವಾನರಶ್ರೇಷ್ಠ,I
ಮಹಾಬಲ, ಜಾಣ ಹನುಮ ಲಂಕಾಳಿಗೆ ನುಡಿದ, II
“ ಕುತೂಹಲದಿ ಬಂದಿರುವೆ ನಾI
ನೋಡಲು ಲಂಕೆಯ ಅರಮನೆಗಳನು, ರಕ್ಷಣಾ ಗೋಡಗಳನು, II
ಕಮಾನಮಾರ್ಗಗಳನು, ಲಂಕೆಯ ಉಪವನ, ಹೂದೋಟ, I
ಅರಣ್ಯಗಳನು, ಮನೆಗಳನು ನೋಡುವದೇ ನಾ II
ಬಂದ ಉದ್ದೇಶ”, ಕೇಳಿ ಹನುಮನ ನುಡಿ ಕಾಮರೂಪಿನಿ ಲಂಕಾI
ಮೊದಲಿಗಿಂತ ಕಠೋರ ದ್ವನಿಯಲಿ II
ಹನುಮಗೆ ನುಡಿದಳು, “ಓ ಕೀಳ ಕೆಟ್ಟಬುದ್ಧಿ ವಾನರಾ, I
ಸೋಲಿಸದೇ ಮೊದಲು ನನ್ನ, ಅಸಾಧ್ಯ ನಿನಗೆ II
ರಾಕ್ಷಸ ರಾಜನ ನಗರ ವೀಕ್ಷಿಸಲು”, ವಾನರ ವ್ಯಾಘ್ರನಂತಹ I
ಹನುಮ ರಾಕ್ಷಸಿಗೆ ನುಡಿದ “ ನಗರ ನೋಡಿಯೇ ಬಂದ II
ಸ್ಥಳಕ್ಕೆ ನಾ ಹಿಂದಿರುಗುವೆ”; ಭಯಾನಕವಾಗಿ ಘರ್ಜಿಸುತ್ತI
ಲಂಕಾ ತಕ್ಷಣ ತನ್ನ ಮುಷ್ಠಿಗಳಿಂದ ಕೊಟ್ಟಳು ಪೆಟ್ಟು ಹನುಮನಿಗೆ, II
ಪೆಟ್ಟು ತಿಂದ ಹನುಮ ಕಿರುಚಿದಾ ಜೋರಾಗಿI
ಎಡಗೈ ಮುಷ್ಠಿಯಿಂದ ಲಂಕಾಳಿಗೆ ಏಟು ಕೊಟ್ಟ ಜೋರಾಗಿ, II
ಪೆಟ್ಟು ತಿಂದು ನೆಲಕ್ಕೆ ಉರುಳಿದ ಲಂಕಾಳ ಮುಖI
ಮತ್ತಿಷ್ಟು ಭಯಾನಕ ಕಂಡಿತು ತಕ್ಷಣ, II
ನೆಲಕ್ಕೆ ಬಿದ್ದ ಲಂಕಾಳನು ಕಂಡು ಹನುಮI
ಕರುಣೆ ತೋರಿದ ಹೆಣ್ಣೆಂದು,II
ತಡವರಿಸುವ ದುಃಖ ದ್ವನಿಯಲಿ ಲಂಕಾ ನುಡದಳು ಹನುಮನಿಗೆI
“ ಓ ಅಜಾನುಬಾಹು ವಾನರಶ್ರೇಷ್ಠನೇ, ನನ್ನ ರಕ್ಷಿಸು, II
ಧೈರ್ಯ ಬಲಶಾಲಿಯ ತನ್ನ ಪರಂಪರೆ ಬಿಡನು,I
ನಾನೇ ಲಂಕಾನಗರಿ, ನಿನ್ನ ಬಲಕ್ಕೆ ಸೋತಿರುವೆ, II
ವಾನರನಿಂದ ನಾ ಸೋತು ದಿನವೇI
ರಾವಣನ ಲಂಕಾ ಪತನ ಆರಂಭ, II
ಸೀತೆಯನು ಅಪಹರಿಸಿ ತಂದ ರಾವಣI
ಇಡೀ ರಾಕ್ಷಸ ಕುಲದ ನಾಶಕ್ಕೆ ಕಾರಣ, II
ಓ ಶ್ರೇಷ್ಠ ವಾನರನೇ,ರಾವಣನ ಲಂಕೆಯನು ಪ್ರವೇಶಿಸುI
ಬಂದ ನಿನ್ನ ಕಾರ್ಯವನ್ನು ನೆರೆವೇರಿಸು”. II
ಸುಂದರಕಾಂಡ

ಹನುಮನು ಲಂಕಾಳನ್ನು ಸೋಲಿಸಿದ ಮತ್ತು ಅವಳಿಂದ ಶುಭಕೋರಿಕೆಯನ್ನು ಪಡೆದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ಮುಖ್ಯಾಂಶಗಳು: (1) ಲಂಕಾಳು ಹನುಮಾನನಿಗೆ ಬೆದರಿಕೆ ಹಾಕಿದಳು: ಹನುಮನ ಪ್ರಶ್ನೆಗಳನ್ನು ಕೇಳಿದ ಲಂಕಾಳು ಕೋಪಿಸಿಕೊಂಡಳು ಹಾಗು ಕಠೋರ ದ್ವನಿಯಲಿ ಹನುಮನಿಗೆ “ನಾನು ಮಹಾತ್ಮ ರಾಕ್ಷಸರಾಜ ರಾವಣನ ರಕ್ಷಕಳು ಅವನ ಆಜ್ಞೆಯಂತೆ ಅಜೇಯಳಾಗಿ ಲಂಕಾ ನಗರವನ್ನು ರಕ್ಷಿಸುತಿರುವೆ, ನನ್ನ ಭೇದಿಸಿ ನಿನಗೆ ನಗರ ನುಸುಳುವದು ಅಸಾಧ್ಯ, ನೀನು ನನ್ನ ಹೊಡೆತ್ತಕ್ಕೆ ಪ್ರಾಣ ಬಿಟ್ಟು ಚಿರನಿದ್ರೆಗೆ ಜಾರುವಿ, ಓ ವಾನರಾ, ಹೇಳಿರುವೆ ಈಗಾಗಲೇ ನಿನಗೆ, ನಾನು ನಗರವನು ಎಲ್ಲದಿಸೆಗಳಲ್ಲೂ ರಕ್ಷಿಸುವೆ” ಎಂದು ಗದ್ದರಿಸಿದಳು; (2) ಲಂಕಾಳ ಬೆದರಿಕೆಗೆ ಸೊಪ್ಪುಹಾಕದ ಹನುಮಾನ: ಲಂಕಾಳ ಗದ್ದರಿಕೆಯನ್ನು ಕೇಳಿದ ಹನುಮ ಅಟಲ ಪರ್ವತದಂತೆ ಲಂಕಾಳ ಎದುರಿಗೆ ನಿಂತನು, ವಾನರಶ್ರೇಷ್ಠ, ಮಹಾಬಲ, ಜಾಣ ಹನುಮನು ಕುರೂಪಿ ಸ್ತ್ರೀ ಲಂಕಾಳಿಗೆ “ ಕುತೂಹಲದಿಂದ ಲಂಕಾನಗರವನ್ನು ನೋಡಲು ನಾನು ಬಂದಿರುವೆ; ಲಂಕೆಯ ಅರಮನೆಗಳನು, ರಕ್ಷಣಾ ಗೋಡಗಳನು, ಕಮಾನಮಾರ್ಗಗಳನು, ಉಪವನ, ಹೂದೋಟ, ಅರಣ್ಯಗಳನು, ಮನೆಗಳನು ನೋಡುವ ಉದ್ದೇಶದಿಂದ ನಾನು ಬಂದಿರುವೆ” ಎಂದು ಉತ್ತರಿಸುತ್ತ ಹನುಮಾನನು ತಾನು ಬಂದ ಕಾರ್ಯದ ಬಗ್ಗೆ ತಿಳಿಸಲಿಲ್ಲ, ತಾನು ಲಂಕಾನಗರದ ವೀಕ್ಷಣೆಗೆ ಬಂದಿರುವೆಂದು ಸುಳ್ಳು ಹೇಳುವನು, ಅದು ಗುಪ್ತಚರ್ಯದ ಅನಿವಾರ್ಯತೆಯು ಅಹುದು ಎಂದು ಆದಿಕವಿ ವಾಲ್ಮೀಕಿಯು ತಿಳಿಸಿರುವರು; (3) ಹನುಮಾನ ಮತ್ತು ಲಂಕಾಳ ಮಧ್ಯೆ ಘರ್ಷಣೆ: ಹನುಮನ ನುಡಿಗಳನ್ನು ಕೇಳಿದ ಕಾಮರೂಪಿನಿ (ಇಚ್ಛಾಧಾರಿ) ಲಂಕಾಳು ಮೊದಲಿಗಿಂತ ಕಠೋರ ದ್ವನಿಯಲಿ ಹನುಮಗೆ “ಓ ಕೀಳ ಕೆಟ್ಟಬುದ್ಧಿ ವಾನರಾ, ಸೋಲಿಸದೇ ಮೊದಲು ನನ್ನ ನಿನಗೆ ರಾಕ್ಷಸ ರಾಜನ ನಗರ ವೀಕ್ಷಿಸಲು ಅಸಾಧ್ಯ” ಎಂದು ಗದ್ದರಿಸಿದಳು, ಆಗ ಹನುಮಾನನು ಲಂಕಾಳ ಸೊಕ್ಕಿನ ಮಾತುಗಳನ್ನು ಕೇಳಿ ಅವಳಿಗೆ “ಲಂಕಾನಗರವನ್ನು ನೋಡಿಯೇ ನಾನು ನನ್ನ ಬಂದ ಸ್ಥಳಕ್ಕೆ ಹಿಂದಿರುಗುವೆ” ಎಂದು ದಿಟ್ಟತನದ ಉತ್ತರ ನೀಡುವನು, ಹನಮಾನನ ದಿಟ್ಟ ನಿರ್ಧಾರದ ಮಾತುಗಳನ್ನು ಕೇಳಿದ ಲಂಕಾಳು ತಕ್ಷಣ ಭಯಾನಕವಾಗಿ ಘರ್ಜಿಸುತ್ತ ತನ್ನ ಮುಷ್ಠಿಗಳಿಂದ ಹನುಮನಿಗೆ ಪೆಟ್ಟು ಕೊಟ್ಟಳು, ಲಂಕಾಳಿಂದ ಪೆಟ್ಟು ತಿಂದ ಹನುಮನು ಜೋರಾಗಿ ಕಿರುಚಿದನು ಹಾಗು ಎದಿರೇಟಾಗಿ ತನ್ನ ಎಡಗೈ ಮುಷ್ಠಿಯಿಂದ ಹನುಮಾನನು ಲಂಕಾಳಿಗೆ ಜೋರಾಗಿ ಏಟು ಕೊಟ್ಟನು, ಹನುಮನ ಪ್ರತಿಯೇಟು ಪೆಟ್ಟು ತಿಂದು ನೆಲಕ್ಕೆ ಉರುಳಿದ ಲಂಕಾಳ ಮುಖ ತಕ್ಷಣ ಮತ್ತಿಷ್ಟು ಭಯಾನಕವಾಗಿ ಕಂಡಿತು; ನೆಲಕ್ಕೆ ಬಿದ್ದ ಲಂಕಾಳನು ಕಂಡು ಹನುಮನು ಅವಳಿಗೆ ಹೆಣ್ಣೆಂದು ಕರುಣೆ ತೋರಿದನು; ಪೆಟ್ಟು ತಿಂದ ಲಂಕಾಳು ತಡವರಿಸುವ ದುಃಖ ದ್ವನಿಯಲಿ ಹನುಮನಿಗೆ “ ಓ ಅಜಾನುಬಾಹು ವಾನರಶ್ರೇಷ್ಠನೇ, ನನ್ನ ರಕ್ಷಿಸು, ಧೈರ್ಯ ಬಲಶಾಲಿ ವ್ಕಕ್ತಿಯು ತನ್ನ ಪರಂಪರೆ ಬಿಡನು, ನಾನೇ ಲಂಕಾನಗರಿ, ನಿನ್ನ ಬಲಕ್ಕೆ ಸೋತಿರುವೆ; ವಾನರನಿಂದ ನಾನು ಸೋತು ದಿನವೇ ರಾವಣನ ಲಂಕಾನಗರದ ಪತನ ಆರಂಭವಾಯಿತು, ಸೀತೆಯನು ಅಪಹರಿಸಿ ತಂದ ರಾವಣ ಇಡೀ ರಾಕ್ಷಸ ಕುಲದ ನಾಶಕ್ಕೆ ಕಾರಣವಾಗುವನು, ಓ ಶ್ರೇಷ್ಠ ವಾನರನೇ,ರಾವಣನ ಲಂಕೆಯನು ಪ್ರವೇಶಿಸು ಬಂದ ನಿನ್ನ ಕಾರ್ಯವನ್ನು ನೆರೆವೇರಿಸು” ಎಂದು ತನ್ನ ಪ್ರಾಣ ಭಿಕ್ಷೆ ಬೇಡಿ ಅವನಿಗೆ ಬಂದ ಕಾರಯಕ್ಕೆ ಶುಭಕೋರುವಳು; ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಹೆಣ್ಣಿನ ಮೇಲೆ ಹನುಮಾನನ ಕರುಣೆ ಮತ್ತು ಹೆಣ್ಣಿನ ಮೇಲೆ ಎಸಗಿದ ರಾವಣನ ದೌರ್ಜನ್ಯಗಳನ್ನು ಉಲ್ಲೇಖಿಸುತ್ತ ರಾವಣನ ಪತನದ ಭವಿಷ್ಯವನ್ನು ರಾಕ್ಷಸಿ ಲಂಕಾಳಂತಹ ಹೆಣ್ಣಿನ ಮನದಾಳದ ಸಂದೇಶ ಮೂಲಕ ವ್ಯಕ್ತ ಪಡಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ