ಅಂಜನಿಪುತ್ರ ಹನುಮ ಕಂಡನು-ಭಾಗ 63

By admin


ಅಂಜನಿಪುತ್ರ ಹನುಮ ಕಂಡನು: ಎತ್ತರ ವಿಶಾಲ ಸುಂದರ ಭವನI
ಸುಂದರ ಮನೆಗಳ ಗುಂಪಿನ ಮಧ್ಯೆ, II
ಒಂದು ಯೋಜನೆ ಉದ್ದ ಅರ್ಧ ಯೋಜನೆ ಅಗಲI
ಪ್ರದೇಶದಲ್ಲಿ ಪಸರಿಸಿತ್ತು ರಾವಣನ ಭವನ; II
ಹುಡುಕಿದ ಹನುಮ ವಿಶಾಲಾಕ್ಷಿ ಸೀತೆಯನುI
ರಾವಣ-ಭವನ ಸುತ್ತುಮುತ್ತ, II
ಸಾಗರದಲಿ ಮೀನ ಮೊಸಳೆ ಹಾವು ಜಲಚರಗಳು ತುಂಬಿದಂತೆ,I
ರಾವಣನ ಪತ್ನಿ, ರಾಜಕುಮಾರಿರಿಂದ ತುಂಬಿತ್ತು ಭವನ,II
ಹಸಿರು-ಕುದುರೆ,ವಿಭಿನ್ನ ಜಾತಿ ಆನೆಗಳು,I
ಎಲ್ಲ ವೈಢೂರ್ಯ,ಸಿರಿಮಂತಿಕೆ, ಭವನದಲಿ ತುಂಬಿತ್ತು, II
ಯಕ್ಷ ರಾಜ ಕುಬೇರ, ಯಮ ವ ವರುಣನI
ಸಿರಿವಂತಿಕೆ ಸಮ ಸಿರಿಯಿಂದ ತುಂಬಿತ್ತು ಭವನ , II
ಕುಬೇರನಿಂದ ಸಿರಿವಂತಿಕೆ, ಪುಷ್ಪಕವಿಮಾನ,I
ಎಲ್ಲವನ್ನೂ ಸೋಲಿಸಿ ಕಸಿದು ಕೊಂಡಿದ್ದ ರಾವಣ; II
ಮೇರುಪರ್ವತ-ಶಿಖರಗಳಂತಹ ದೈತ ಕಂಭಗಳು,I
ಚಿನ್ನ ರಜತ ವರ್ಣ ತೋಳಗಳ ಚಿತ್ರ ಕಂಭಗಳ ತುಂಬ, II
ಚಿನ್ನ ರಜತ ಅಲಂಕೃತ ಸೋಪಾನಗಳುI
ತುಂಬಿದ್ದವು ಬಹುಮಹಡಿ ಕಟ್ಟಡ ತುಂಬ, II
ಬೆಳಕಿಂಡಿ ಗಾಳಿಕಿಂಡಿ, ಕಿಡಕಿ, ದಾರಿಗಳುI
ಶೋಭಿತವಾಗಿದ್ದವು ಸ್ಪಟಿಕ ಹವಳ ರತ್ನಗಳಿಂದ, II
ವಿಚಿತ್ರ ವರ್ಣಗಳ ಹವಳಗಳಿಂದ ಹಾಸಿದI
ನೆಲ, ಅತೌಲನಿಕ ವಿಶಾಲ ಆವರಣ,||
ಎತ್ತ ನೋಡಿದರು ಹೊಂಬಣ್ಣ, ಶ್ರೀಗಂಧ-ವಾಸನೆ,I
ಸೂರ್ಯ ಚಂದ್ರರ ಬೆಳಕು ಬಂಧಿಸಿಟ್ಟ ಅಂತಪುರ, II
ಅಲಂಕೃತ ಸುಸಜ್ಜಿತ ಮಹಡಿಗಳ ಸಾಲಿನI
ಪುಷ್ಪಕ ವಿಮಾನ ಮನಗೆದ್ದಿತು ಹನುಮನ, II
ಅಕ್ಕಿ-ಅನ್ನ,ಆಹಾರ, ಮದ್ಯಗಳ ವಾಸನೆI
ಆಗಾಗ ಮುತ್ತುತಿತ್ತು ಹನುಮನ ಮೂಗಿಗೆ, II
“ರಾವಣನ ಸುಳಿವು ನೀಡು ಬಾ” ಎಂದುI
ಕರೆಯುತಿದ್ದ ರುಚಿ-ವಾಸನೆಗಳನು ಹನುಮ, II
ರಾವಣ ಹೃದಯ ಬಳಿ ವೈಯಾರಿ ಸ್ತ್ರಿಯಂತೆI
ಕಂಡಿತು ಆವರಣ,ರಾವಣ-ಅಂತಪುರದ, II
ಚಿನ್ನ ಬೆಳ್ಳಿ ವಜೃ ಅಲಂಕೃತ ಸೋಪಾನ,ಕಂಭ,I
ಕಿಟಕಿ, ಹವಳದ ನೆಲಹಾಸಿಗೆಗಳಿಂದ ತುಂಬಿತ್ತು ಭವನ’II
ನದಿ,ಪರ್ವತ,ಸರೋವರ, ಸಾಗರಗಳ ವರ್ಣ ಚಿತ್ರI
ತುಂಬಿದ್ದವು ನೆಲ-ಹಾಸಿಗೆ ಕಂಬಳಿಯಲಿ, II
ನಿನಾದ ಸ್ವರ ಸುಗಂಧ ಪರಿಮಳI
ತುಂಬಿದ್ದವು ಅಂತಪುರ ಆವರಣ, II
ಆವರಿಸಿತ್ತು ಹಂಸವರ್ಣ ಧೂಪದ ಪರಿಮಳ-ಹೊಗೆI
ವಿಭಿನ್ನ ಹೂಗಳ ಶೃಂಗಾರ ಅಂತಪುರ ಆವರಣ, II
ಅಂದ ಅಲಂಕಾರ ಪರಿಮಳ ಭರಿತI
ಆವರಣ ಆನಂದ ನೀಡಿತು ಮನದ ದುಃಖ ತೊಡೆದು;II
ತಾಯಿಯಂತೆ ನೀಡಿತು ಹಿತ ಪಂಚೇಂದ್ರಿಗಳಿಗೆI
ರಾವಣನ ಅಂತಪುರ ಆವರಣ ತಾಣ, II
“ಇದೇ ಸ್ವರ್ಗ, ದೇವಲೋಕ, ಅಮರಾವತಿ”I
ಕೊಂಡಾಡಿದ ಹನುಮ,ಅಂತಪುರ ಆವರಣ; II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಪ್ರಸಂಗದಲ್ಲಿ ಒಂದೆಡೆ ಉಪಮಾಲಂಕಾರ, ರೂಪಕಾಲಂಕಾರ, ದೃಷ್ಠಾತಾಲಂಕಾರ ಇತ್ಯಾದಿ ಕಾವ್ಯಾಲಂಕರದ ಕಾವ್ಯತ್ವದ ಸಿರಿಮಂತಿಕೆ ಪರಿಚಯ ನೀಡಿದರೆ ಮತ್ತೊಂದೆಡೆ ರಾವಣನ ಮತ್ತು ಅವನ ಅಂತಪುರದ ಸ್ವಭಾವದ ನೈಜ್ಯ ಚಿತ್ರಾಂಶಗಳನ್ನು ಹೀಗೆ ಬಣ್ಣಿಸಿರುವರು: (1) ರಾವಣನ ಅರಮನೆ ಭವನದ ಸೌಂದರ್ಯ: ಎತ್ತರ ವಿಶಾಲ ರಾವಣನ ಸುಂದರ ಭವನವು ಸುಂದರ ಮನೆಗಳ ಗುಂಪಿನ ಮಧ್ಯೆ ಒಂದು ಯೋಜನೆ ಉದ್ದ ಅರ್ಧ ಯೋಜನೆ ಅಗಲ ಪ್ರದೇಶದಲ್ಲಿ ಪಸರಿಸಿತ್ತು, ಸಾಗರದಲಿ ಮೀನ ಮೊಸಳೆ ಹಾವು ಜಲಚರಗಳು ತುಂಬಿದಂತೆ ರಾವಣನ ಭವನವು ರಾವಣನ ಪತ್ನಿ, ರಾಜಕುಮಾರಿರಿಂದ ತುಂಬಿತ್ತು; ಹಸಿರು-ಕುದುರೆ, ವಿಭಿನ್ನ ಜಾತಿ ಆನೆಗಳು, ಎಲ್ಲ ವೈಢೂರ್ಯಗಳ ಸಿರಿಮಂತಿಕೆ ಆ ಭವನದಲಿ ತುಂಬಿತ್ತು; ರಾವಣನ ಭವನವು ಬಹುಮಹಡಿ ಕಟ್ಟಡವಾಗಿದ್ದು ಮೇರುಪರ್ವತ-ಶಿಖರಗಳಂತಹ ದೈತ ಕಂಭಗಳು, ಅವುಗಳ ತುಂಬ ಚಿನ್ನ ರಜತ ವರ್ಣ ತೋಳಗಳ ಚಿತ್ರಗಳು, ಚಿನ್ನ ರಜತ ಅಲಂಕೃತ ಸೋಪಾನಗಳು ಭವನದಲ್ಲಿ ತುಂಬಿದ್ದವು; ಬೆಳಕಿಂಡಿ, ಗಾಳಿಕಿಂಡಿ, ಕಿಡಕಿ, ದಾರಿಗಳು ಸ್ಪಟಿಕ ಹವಳ ರತ್ನಗಳಿಂದ ಶೋಭಿತವಾಗಿದ್ದು ವಿಚಿತ್ರ ವರ್ಣಗಳ ಹವಳಗಳಿಂದ ಹಾಸಿದ ನೆಲ, ಅತೌಲನಿಕ ವಿಶಾಲ ಆವರಣವಾಗಿತ್ತು; ಎತ್ತ ನೋಡಿದರೂ ಹೊಂಬಣ್ಣ, ಶ್ರೀಗಂಧ-ವಾಸನೆ, ಸೂರ್ಯ ಚಂದ್ರರ ಬೆಳಕು ಬಂಧಿಸಿಟ್ಟ ಅಂತಪುರವಾಗಿತ್ತು. ಯಕ್ಷ ರಾಜ ಕುಬೇರ, ಯಮ ಮತ್ತು ವರುಣರ ಸಿರಿವಂತಿಕೆಗೆ ಸಮ ಸಿರಿಯಿಂದ ರಾವಣನ ಭವನ ತುಂಬಿತ್ತು; ಕುಬೇರನನ್ನು ಸೋಲಿಸಿ ರಾವಣನು ಅವನಿಂದ ಸಿರಿವಂತಿಕೆ, ಪುಷ್ಪಕವಿಮಾನ, ಎಲ್ಲವನ್ನೂ ಕಸಿದು ಕೊಂಡಿದ್ದನು. ರಾವಣನ ಅರಮನೆ ಭವನ ಸಂಪತ್ತು ಪರರಿಂದ ಕಸಿದುಕೊಂಡ ಸಂಪತ್ತೇ ಆಗಿತ್ತು, ರಾವಣನೊಬ್ಬ ಧನಲೋಭಿ. (2) ರಾವಣನ ಅಂತಪುರ ಆವರಣದ ಸೊಬಗು: ರಾವಣ-ಅಂತಪುರದ ಆವರಣವು ರಾವಣ ಹೃದಯ ಬಳಿ ನೆಲೆಸಿದ ವೈಯಾರಿ ಸ್ತ್ರಿಯಂತೆ ಹನುಮನಿಗೆ ಕಂಡಿತು; ಚಿನ್ನ ಬೆಳ್ಳಿ ವಜ್ರ ಅಲಂಕೃತ ಸೋಪಾನ, ಕಂಭ, ಕಿಟಕಿ, ಹವಳದ ನೆಲಹಾಸಿಗೆಗಳಿಂದ ರಾವಣನ ಭವನ ತುಂಬಿತ್ತು; ನದಿ,ಪರ್ವತ,ಸರೋವರ, ಸಾಗರಗಳ ವರ್ಣ ಚಿತ್ರಗಳು ನೆಲ-ಹಾಸಿಗೆ ಕಂಬಳಿಯಲಿ ತುಂಬಿದ್ದವು; ಅಂತಪುರ ಆವರಣವು ಸದ್ದು ಗದ್ದಲ, ಸ್ವರ, ಸುಗಂಧ ಪರಿಮಳಗಳಿಂದ ತುಂಬಿತ್ತು; ಹಂಸವರ್ಣ ಧೂಪದ ಪರಿಮಳ-ಹೊಗೆ, ವಿಭಿನ್ನ ಹೂಗಳ ಶೃಂಗಾರ ಅಂತಪುರ ಆವರಣದಲ್ಲಿ ಆವರಿಸಿತ್ತು; ಅಂದ ಅಲಂಕಾರ ಪರಿಮಳ ಭರಿತ ಆವರಣವು ಒಂದು ಕ್ಷಣ ಹನುಮನ ಮನದ ದುಃಖ ತೊಡೆದು ಆನಂದ ನೀಡಿತು, ರಾವಣನ ಅಂತಪುರ ಆವರಣ ತಾಣವು ಹನುಮನನ ಪಂಚೇಂದ್ರಿಗಳಿಗೆ ತಾಯಿಯಂತೆ ನೀಡಿತು ಹಿತ; ಅಂತಪುರ ಆವರಣದ ಸೊಬಗು ನೋಡಿ “ಇದೇ ಸ್ವರ್ಗ, ದೇವಲೋಕ, ಅಮರಾವತಿ” ಎಂದು ಹನುಮಾನನು ಉಧ್ಗರಿಸಿದನು;ವಿಶಾಲ ಆವರಣದಲ್ಲಿ ಒಂದೆಡೆ ದ್ವೀಪಗಳು ಮತ್ತೊಂದೆಡೆ ಪ್ರತಿಬಿಂಬಿಸುವ ಅಲಂಕಾರಗಳು ಹೊಂಗಿರಣದಿಂದ ತುಂಬಿಸಿದ್ದವು ಹಾಗು ಜೂಜಾಟದಲಿ ಮಹಾ ಜೂಜುಕೋರನು ಜೂಜುಕೋರರನ್ನು ಸೋಲಿಸಿದಂತೆ ಹೊಂಗಿರಣ ದ್ವೀಪಗಳು ಚಿಂತನೆಯಲ್ಲಿ ಸ್ತಬ್ಧವಿದಂತೆ ಹನುಮಗೆ ಕಂಡವು; ಆಗಾಗ ಆ ಆವರಣದಲ್ಲಿ ಅಕ್ಕಿ-ಅನ್ನ, ಆಹಾರ, ಮದ್ಯಗಳ ರುಚಿ-ವಾಸನೆಗಳು “ರಾವಣನ ಸುಳಿವು ನೀಡುವೆ ಬಾ” ಎಂದು ಹನುಮನನ್ನು ಕರೆಯುವಂತೆ ಭಾಸವಾಗುತಿತ್ತು. ಆದಿಕವಿ ವಾಲ್ಮೀಕಿಯು ರಾವಣನ ಅಂತಪುರ ಮತ್ತು ಅದರ ಆವರಣಗಳ ಅಂದ ಚಂದದ ವೀಕ್ಷಿಕ ವಿವರಣೆಯನ್ನು ಕಾವ್ಯದೃಶ್ಯರೂಪದಲ್ಲಿ ಚನ್ನಾಗಿ ಹರಿಸಿರುವರು, ಅದನ್ನು ಕಲ್ಪಿಸಿ ಬರೆಯಲು ಅಸಾಧ್ಯ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌