ಸೀತೆಯೆಂದು ಭಾವಿಸಿದ ಸ್ತ್ರೀ ಕಂಡು ಹನುಮ ಭಾಗ-67

By admin


ಸೀತೆಯೆಂದು ಭಾವಿಸಿದ ಸ್ತ್ರೀ ಕಂಡು ಹನುಮI
ತಕ್ಷಣ ಮನ ಬದಲಿಸಿ ಚಿಂತಿತನಾದ ಸೀತೆ ವಿಷಯದಲಿ, II
ಪರಪುರುಷನ ಬಳಿ ಮಲಗಿದ ಪಾನಮತ್ತ ಅಲಂಕೃತ I
ಸುಖನಿದ್ರೆಯ ಸ್ತ್ರೀ ರಾಮನಿಂದ ಬೇರ್ಪಟ್ಟ ಸೀತೆ ಅಲ್ಲ, II
ಮದ್ಯಮಸ್ತ ನೃತ್ಯ ಗಾಯನ ಸಂಭ್ರಮದಿI
ಸುಸ್ತಾಗಿ ಮಲಗಿದ ರಾವಣನ ಪತ್ನಿಯರಿವರು,II
ಪತ್ನಿಯರ ಮಧ್ಯೆ ಸಂಭ್ರಮಿಸಿ ರಾವಣI
ಕೊಬ್ಬಿದ ಆಕಳೊಂದಿಗೆ ಮಲಗಿದ ಗೂಳಿಯಂತೆ ಕಂಡ, II
ಮಧು, ಮಾಂಸ, ಮಾನನಿಯರು ಮುತ್ತಿಕೊಂಡ ಆವರಣ,I
ರಾವಣನ ಅಂತಪುರ ಪುನಃ ಪುನಃ ಕಂಡ ಹನುಮ: II
ಜಿಂಕೆ ಕೋಣ ಕಾಡುಹಂದಿ ನವಿಲು ಕೋಳಿ ಹೋಂತ ಬೆಂದ ಹುರಿದ I
ಅರ್ಧತಿಂದ ಮಾಂಸ ಭಕ್ಷಗಳ ಚಿನ್ನ-ಪಾತ್ರೆಗಳು, II
ಕ್ರಕರಾ-ಪಕ್ಷಿ, ಏಕಶ್ಲೇಯ-ಮೀನ, ವಿಭಿನ್ನ I
ಪಕ್ವಾನಗಳ ತುಂಬಿದ ಚಿನ್ನ ಪಾತ್ರೆಗಳು, II
ಅತ್ತಿತ್ತ ಬಿದ್ದಿದ್ದವು ಮಾಂಸದ ತುಂಡುಗಳು, I
ಮದ್ಯಪಾತ್ರೆ, ಉಪ್ಪು, ಆಭರಣ ವಾದ್ಯ ನೆಲದ ಮೇಲೆ, II
ಶೃಂಗರಿಸಿದ ಹಾಸಿಗೆ, ಆಸನ, ಮಧುಕಕ್ಷI
ದ್ವೀಪಗಳ ಹೊಂಗಿರಣ ಬೆಳಕು,ಸಂಭ್ರಮ ಸೋಪಾನ, II
ಸುರ, ಸಕ್ಕರೆ-ಮದ್ಯ, ಜೇನು-ಮದ್ಯ, ಹೂ-ಮದ್ಯ,I
ಫಲ-ಮದ್ಯ, ನಾಟಿ-ಮದ್ಯ, ವಿಭಿನ್ನ ಮದ್ಯಗಳ ರಾಶಿ, II
ಚಿನ್ನ ವ ಬೆಳ್ಳಿ ಸಣ್ಣ ದೊಡ್ಡ ಪಾತ್ರಗಳಲಿI
ತುಂಬಿದ, ಅರೆ-ಖಾಲಿ ವಿಭಿನ್ನ ಮದ್ಯಗಳು, II
ವಿಭಿನ್ನ ಪರಿಮಳ ಬೀರುವ ಹೂಗಳುI
ಹೂ-ಮಾಲೆಗಳು ತುಂಬಿದ ಚಿನ್ನ ಪಾತ್ರೆಗಳು,II
ಒಂದೆಡೆ ಭಕ್ಷಗಳ ವ್ಯವಸ್ಥೆ, ಮತ್ತೊಂದೆಡೆ ಅಕ್ಕಿ-ಅನ್ನ,I
ಮಗದೊಂದೆಡೆ ಮದ್ಯ-ಪಾನಿಗಳ ವ್ಯವಸ್ಥೆ, II
ಹೂ ಗಂಧಗಳ ಪರಿಮಳ,ಮದ್ಯಗಳ ಸಿಹಿ-ವಾಸನೆ ಸೇರಿ I
ಎಲ್ಲ ವಾಸನೆ ಧೂಪ-ವಾಸನೆಯಾಗಿ ಹೊರಸುಸಿದವು, II
ಶ್ವೇತವರ್ಣ,ಕಪ್ಪುವರ್ಣ, ಸುವರ್ಣದ ಚಲುವೆ I
ರಾವಣನ ಪತ್ನಿಯರು,ನಿದ್ರಾಮಗ್ನರಾಗಿದ್ದರು; II
ನಿದ್ರಾವಸ್ಥೆ ಪರ ಸ್ತ್ರೀಯರನು ನೋಡುದು ಅಧರ್ಮ, I
ನಿಷ್ಕಲಂಕ ಮನದಿ, ಪ್ರಚೋದಿಸದೇ ನೋಡುದು ಅಲ್ಲ ಅಧರ್ಮ; II
“ನಾನು ಪರಸ್ತ್ರೀ ನೋಡುದು, ನನ್ನಿಂದವರಿಗೆ ಅಹಿತವಾಗI
ದಿರುವದು ಅಧರ್ಮ ಅಲ್ಲ”ನೆಂದುಕೊಂಡ ಹನುಮ;II
“ಎಲ್ಲ ಇಂದ್ರಿಗಳ ನಡತೆ ಶುದ್ಧವೋ ಅಶುದ್ಧವೋ ಮನದ ನಿರ್ಧಾರ, I
ನನ್ನ ಮನ ಅಚಲ” ನೆಂದುಕೊಂಡ ಹನುಮ; II
“ಸೀತೆಯನು ಹುಡುಕುವದು ಅಸಾಧ್ಯI
ಪರಸ್ತ್ರೀಯರ ಮಧ್ಯೆ ಹೋಗದೇ, ಅವರ ಮುಖ ಅರಸದೇ, II
ಸ್ತ್ರೀಯಳನ್ನು ಸ್ತ್ರೀಯರ ಮಧ್ಯೆ ಹುಡುಕಬೇಕುI
ಹೆಣ್ಣು ಪ್ರಾಣಿ ಜಿಂಕೆಗಳ ಮಧ್ಯೆ ಅಲ್ಲ, II
ಪವಿತ್ರ ಮನದಿ ಹುಡುಕಿದೆ ಸೀತೆಯನು ರಾವಣನ ಪತ್ನಿಯರ ಮಧ್ಯೆ I
ಅಂತಪುರದಲಿ” ನೆಂದುಕೊಂಡ ಹನುಮ; II
ಹುಡುಕಿದ ಹನುಮ ಸೀತೆಯನು ಅಂತಪುರ ಸ್ತ್ರೀಯರಲಿI
ಸಿಗಲಿಲ್ಲ ಸೀತೆ ಹನುಮಗೆ ಯಾರ ಮಧ್ಯೆಯೂ; II
ಅಲ್ಲಿಂದ ಬೇರೆಡೆ ಹುಡುಕಲು ಸೀತೆಯನುI
ನಡೆದ ಹನುಮ ಮನೆ ಮನೆಗೆ. II
ಸುಂದರ ಕಾಂಡ

ಒಂದು ಕ್ಷಣ ಮಂದೋದರಿಯನ್ನು ಸೀತೆಯೆಂದು ಭಾವಿಸಿದ ಹನುಮನು ತಕ್ಷಣ ಮನ ಬದಲಿಸಿ ಸೀತೆ ವಿಷಯದಲಿ ಚಿಂತಿತನಾದನು, ಪರಪುರುಷನ ಬಳಿ ಮಲಗಿದ ಪಾನಮತ್ತ ಅಲಂಕೃತ ಸುಖನಿದ್ರೆಯ ಆ ಸ್ತ್ರೀಯು ರಾಮನಿಂದ ಬೇರ್ಪಟ್ಟ ಸೀತೆ ಅಲ್ಲ ಎಂದು ಹನುಮಾನ ತರ್ಕಿಸಿದನು ಮತ್ತು ಹನುಮಾನ ಸೀತೆಯನ್ನು ಹುಡುಕುವ ಕಾರ್ಯ ಮುಂದೆವರಸಿದನ್ನು ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಹೀಗೆ ವಿವರಿಸಿರುವರು, “ಮದ್ಯಮಸ್ತ ನೃತ್ಯ ಗಾಯನ ಸಂಭ್ರಮದಿಂದ ಸುಸ್ತಾಗಿ ಮಲಗಿದವರು ರಾವಣನ ಪತ್ನಿಯರು, ಪತ್ನಿಯರ ಮಧ್ಯೆ ಸಂಭ್ರಮಿಸಿ ರಾವಣ ಹನುಮನಿಗೆ ಕೊಬ್ಬಿದ ಆಕಳೊಂದಿಗೆ ಮಲಗಿದ ಗೂಳಿಯಂತೆ ಕಂಡನು. ಮಧು, ಮಾಂಸ, ಮಾನನಿಯರು ಮುತ್ತಿಕೊಂಡ ರಾವಣನ ಅಂತಪುರ ಆವರಣವನ್ನು ಪುನಃ ಪುನಃ ಹನುಮನು ವೀಕ್ಷಿಸಿದನು: ಒಂದೆಡೆ ಜಿಂಕೆ ಕೋಣ ಕಾಡುಹಂದಿ ನವಿಲು ಕೋಳಿ ಹೋಂತಗಳ ಬೆಂದ ಹುರಿದ ಅರ್ಧ-ತಿಂದ ಮಾಂಸ ಭಕ್ಷಗಳ ಚಿನ್ನ-ಪಾತ್ರೆಗಳು, ಮತ್ತೊಂದೆಡೆ ಕ್ರಕರಾ-ಪಕ್ಷಿ, ಏಕಶ್ಲೇಯ-ಮೀನ, ವಿಭಿನ್ನ ಪಕ್ವಾನಗಳ ತುಂಬಿದ ಚಿನ್ನ ಪಾತ್ರೆಗಳು ಕಂಡವು; ನೆಲದ ಮೇಲೆ ಮಾಂಸದ ತುಂಡುಗಳು, ಮದ್ಯಪಾತ್ರೆ, ಉಪ್ಪು, ಆಭರಣ ವಾದ್ಯಗಳು ಅತ್ತಿತ್ತ ಬಿದ್ದಿದ್ದವು; ಶೃಂಗರಿಸಿದ ಹಾಸಿಗೆ, ಆಸನ, ಮಧುಕಕ್ಷ, ದೀಪಗಳ ಹೊಂಗಿರಣ ಬೆಳಕು,ಸಂಭ್ರಮ ಸೋಪಾನಗಳಿಂದ ರಾವಣನ ಕೊಠಡಿ ತುಂಬಿತ್ತು; ಸುರ, ಸಕ್ಕರೆ-ಮದ್ಯ, ಜೇನು-ಮದ್ಯ, ಹೂ-ಮದ್ಯ, ಫಲ-ಮದ್ಯ, ನಾಟಿ-ಮದ್ಯ, ವಿಭಿನ್ನ ಮದ್ಯಗಳ ರಾಶಿ ರಾವಣನ ಕೊಠಡಿಯಲ್ಲಿ ಕಂಡವು, ಚಿನ್ನ ಮತ್ತು ಬೆಳ್ಳಿಯ ಸಣ್ಣ ದೊಡ್ಡ ಪಾತ್ರಗಳಲಿ ಅರೆ-ಖಾಲಿ ವಿಭಿನ್ನ ಮದ್ಯಗಳು ತುಂಬಿದ್ದವು; ವಿಭಿನ್ನ ಪರಿಮಳ ಬೀರುವ ಹೂಗಳು, ಹೂ-ಮಾಲೆಗಳು ಚಿನ್ನದ ಪಾತ್ರೆಗಳಲ್ಲಿ ತುಂಬಿದ್ದವು; ಒಂದೆಡೆ ಭಕ್ಷಗಳ ವ್ಯವಸ್ಥೆ, ಮತ್ತೊಂದೆಡೆ ಅಕ್ಕಿ-ಅನ್ನ, ಮಗದೊಂದೆಡೆ ಮದ್ಯ-ಪಾನಿಗಳ ವ್ಯವಸ್ಥೆಗಳು ಇದ್ದವು; ಹೂ ಗಂಧಗಳ ಪರಿಮಳ, ಮದ್ಯಗಳ ಸಿಹಿ-ವಾಸನೆ ಹೀಗೆ ಎಲ್ಲ ವಾಸನೆಗಳು ಸೇರಿ ಧೂಪ-ವಾಸನೆಯಾಗಿ ಹೊರಸುಸುತಿದ್ದವು. ಶ್ವೇತವರ್ಣ, ಕಪ್ಪುವರ್ಣ, ಸುವರ್ಣದ ಚಲುವೆ ರಾವಣನ ಪತ್ನಿಯರು ನಿದ್ರೆಯಲ್ಲಿ ಮಗ್ನರಾಗಿದ್ದರು; ನಿದ್ರಾವಸ್ಥೆಯಲ್ಲಿದ್ದ ಪರ ಸ್ತ್ರೀಯರನು ನೋಡುವದು ಅಧರ್ಮ ಆದರೆ ನಿಷ್ಕಲಂಕ ಮನದಿಂದ, ಪ್ರಚೋದಿಸದೇ ನೋಡುವದು ಅಧರ್ಮ ಅಲ್ಲ; ಸರಿಯೋ, ತಪ್ಪೋ ಎಂಬ ಪ್ರಜ್ಞೆಯಲ್ಲಿ ʻನಾನು ಪರಸ್ತ್ರೀ ನೋಡುವದು, ನನ್ನಿಂದವರಿಗೆ ಅಹಿತವಾಗದಿರುವದು ಅಧರ್ಮ ಅಲ್ಲʼಎಂದು ಹನುಮನು ತನ್ನ ಮನಸ್ಸಿಗೆ ಹೀಗೆ ಮನವರಿಕೆ ಮಾಡಿಕೊಟ್ಟನು ʻಎಲ್ಲ ಇಂದ್ರಿಗಳ ನಡತೆ ಶುದ್ಧವೋ ಅಶುದ್ಧವೋ ಮನದ ಅದು ನಿರ್ಧಾರ, ನನ್ನ ಮನ ಅಚಲವಾಗಿದೆʼ ಎಂದುಕೊಳ್ಳುತ ಹನುಮನು ʻಪರಸ್ತ್ರೀಯರ ಮಧ್ಯೆ ಹೋಗದೇ, ಅವರ ಮುಖ ಅರಸದೇ, ಸೀತೆಯನು ಹುಡುಕುವದು ಅಸಾಧ್ಯʼ ಎಂಬ ಸಮರ್ಥನೆಯ ಮಾತುಗಳನ್ನು ಹನುಮಾನ ತನ್ನಲ್ಲಿ ಆಡಿಕೊಂಡನು ಮುಂದುವರೆದು ಹನುಮಾನನು ʻಸ್ತ್ರೀಯಳನ್ನು ಸ್ತ್ರೀಯರ ಮಧ್ಯೆ ಹುಡುಕಬೇಕೆ ವಿನಃ ಹೆಣ್ಣು ಪ್ರಾಣಿ ಜಿಂಕೆಗಳ ಮಧ್ಯೆ ಅಲ್ಲ, ಅಂತಪುರದಲಿ ರಾವಣನ ಪತ್ನಿಯರ ಮಧ್ಯೆ ಸೀತೆಯನು ಪವಿತ್ರ ಮನಸ್ಸಿನಿಂದ ಹುಡುಕಿದೆʼಎಂದು ಹನುಮನು ತನ್ನ ಮನಸ್ಸಿಗೆ ಸಮಾಧಾನ ಮಾಡಿಕೊಂಡನು.” ರಾವಣನ ಅಂತಪುರದಲ್ಲಿ ಸ್ತ್ರೀಯರ ಮಧ್ಯೆ ಹನುಮನು ಸೀತೆಯನು ಹುಡುಕಿದನು ಆದರೆ ಹನುಮಗೆ ಯಾರ ಮಧ್ಯೆಯೂ ಸೀತೆ ಸಿಗಲಿಲ್ಲ , ಅಲ್ಲಿಂದ ಸೀತೆಯನು ಬೇರೆಡೆ ಮನೆ ಮನೆಗೆ ಹುಡುಕಲು ಹನಮಾನ ನಡೆದನು.
ಒಟ್ಟಿನಲ್ಲಿ ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಮತ್ತಿನಲಿ ರಾವಣನ ಬಳಿ ಮಲಗಿದ್ದ ಯುವ ಸುಂದರಿ ಸೀತೆಯಲ್ಲವೆಂಬ ಮನವರಿಕೆ ಮಾಡಿಕೊಂಡ ಹನುಮನ ವಿಷಯ ಪ್ರಸ್ತಾವಣೆ ಮಾಡುತ್ತ (ಅ) ರಾವಣನ ಕೊಠಡಿ ಹೆಣ್ಣು, ಮದ್ಯ ಮತ್ತು ಮಾಂಸ ಭಕ್ಷಗಳ ರಾಶಿಯಗಳ ದಾಸ್ತಾನು ಆದ ವಿವರಣೆ, (ಬ) ಮಾಂಸ ಭಕ್ಷ ಮತ್ತು ಮದ್ಯಗಳ ಪ್ರಕಾರಗಳ ವಿವರಣೆ,ಅಂದಿನ ಆಹಾರ ಕ್ರಮ ರೂಢಿ (ಕ) ಕೊಠಡಿ ತುಂಬಿದ ಹೂ, ಮದ್ಯಗಳ ವಾಸನೆಗಳ ಆಗರವಾದ ರಾವಣನ ಕೊಠಡಿಯ ಕಾವ್ಯಾಲಂಕಾರಯುಕ್ತ ವರ್ಣನೆ ಒಂದೆಡೆ ನೀಡಿದರೆ ಮತ್ತೊಂದೆಡೆ ನಿದ್ರಾವಸ್ಥೆಯಲ್ಲಿದ್ದ ಪರಸ್ತ್ರೀಯರ ಮುಖ ನೋಡಿದ ಪಾಪ ಪ್ರಜ್ಞೆವು ಹನುಮನನ್ನು ಕಾಡಿದ ಮತ್ತು ನಿಷ್ಕಲಂಕ ಮನದಿಂದ ಹಾಗು ಸೀತೆಯನ್ನು ಹುಡುಕುವ ಉದ್ಧೇಶದಿಂದ ಪರಸ್ತ್ರೀಯರ ಮುಖ ನೋಡಿದ್ದು ಪಾಪ ಅಲ್ಲವೆಂಬ ಸಮರ್ಥನೆ ಮಾಡಿಕೊಂಡ ಹನುಮಾನನ ನಿಲುವುಗಳ ವಿವರಣೆ ನೀಡಿರುವರು.ಇಂದ್ರಿಗಳು ಮನದ ನಿಯಂತ್ರಣದಲ್ಲಿ ಇರುವವು, ಅವುಗಳಿಂದ ನಡೆಯುವ ಧರ್ಮ, ಅಧರ್ಮ ಕಾರ್ಯಗಳು ಮನದ ನಿರ್ಧಾರವನ್ನು ಅವಲಂಬಿಸುವುದು ಎಂಬದನ್ನು ಆದಿಚಿಂತಕ ವಾಲ್ಮೀಕಿ ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ