
ಚಿಂತಾಕ್ರಾಂತ ಹನುಮ ತಕ್ಷಣ ನೆನೆದು ಅಶೋಕವನ I
ಕೋಟೆಗೊಡೆದಿ ಹಾರಿದ ವೇಗದಿ ಅದರತ್ತ, II
ವಸಂತದ ಚಿಗುರುವ ಸಾಲ, ಅಶೋಕ, ಉದ್ದಲಕ, ನಾಗI
ವೃಕ್ಷಗಳ ದರ್ಶನ ಕಂಡನು ಹನುಮ,II
ವಸಂತದ ಪುಷ್ಪಭರಿತ ಸಂಪಿಗೆ, ಫಲಭರಿತ ಮಾವುI
ವೃಕ್ಷಗಳ ದರ್ಶನ ಕಂಡನು ಹನುಮ, II
ಹೂ-ಬಳ್ಳಿ ಸುತ್ತಿದ ಮಾವು-ತೋಪಿಗೆI
ವೇಗದಿ ತಲುಪಿದ ಹನುಮ ನಾರಾಚ ದಂತೆ,II
ಕಂಡನು ಹನುಮ ವನ ಪ್ರವೇಶಿದ ಕ್ಷಣI
ಹರುಷಿತ ಮಾನವ,ವಿಭಿನ್ನ ಪ್ರಾಣಿ ವ ಪಕ್ಷಿಗಳ ಬೀಡು, II
ಚೈತ್ರದ ಕಾನನದ ಸೊಬಗು,ಹಕ್ಕಿಗಳ ಚಿಲಿಪಿಲಿ,I
ರಜತ ಹೊಂಬಣ್ಣದ ವೃಕ್ಷಗಳ ದೃಶ್ಯ ಕಂಡನು ಹನುಮ, II
ಸೂರ್ಯೊದಯ-ಹೊಂಬಣ್ಣ ಸಮ ಚಿತ್ತಾರ ಬಿಡಿಸುತಿದ್ದವು I
ಬಣ್ಣ ಬಣ್ಣದ ಗಿಡ ಮರ ಹೂ ಹಣ್ಣುಗಳು, ಉಣಿಸುತಿದ್ದವು II
ಫಲ ಪುಷ್ಪಗಳು ಕೋಗಿಲೆ ಭ್ರಮರಗಳಿಗೆ, ನೀಡುತಿದ್ದವು I
ಮಿಲನದ ನೃತ್ಯ ವ ಕರೆ ನವಿಲು,ಹಕ್ಕಿಗಳು ಸಂಗಾತಿಗೆ,II
ಹುಡುಕುತಿದ್ದ ಸರ್ವಾಂಗ ಸುಂದರಿ ರಾಜಪುತ್ರಿಯನ ಹನುಮI
ಎಚ್ಚರಿಸುತ ಸುಖ-ನಿದ್ರಾಸ್ಥ ಪಕ್ಷಿಗಳನು, II
ಪಕ್ಕ ಬಡಿದು ನೆಗೆದಾಗ ಹಕ್ಕಿಗಳುI
ಪುಷ್ಪವೃಷ್ಠಿ ಸುರಿಯುತಿತ್ತು ಕೊಂಬೆ ಕೊಂಬೆಗಳಿಂದ, II
ಪುಷ್ಪಮಯಗಿರಿ ಅಶೋಕ ವನ ಮಧ್ಯೆI
ವಾಯುಪುತ್ರ ಹನುಮ ಮಿಂಚಿದ ಪರ್ವತದಂತೆ,II
ಗಿಡದಿಂದ ಗಿಡಕ್ಕೆ, ಗಿಡಗಳ ಮಧ್ಯೆ ಹಾರುವ ಹನುಮI
ಕಂಡನು ಸರ್ವಜೀವಿಗಳಿಗೆ ವಸಂತದೇವ ನಂತೆ, II
ಗಿಡ ಮರಗಳಿಂದ ಭೂಮಿಗೆ ಬಿದ್ದ ವಿಭಿನ್ನ ಹೂಗಳುI
ಕಂಡವು ಶೃಂಗಾರದಿ ಸಜ್ಜಿತ ಚಲುವೆಯಂತೆ, II
ಹನುಮ ಬಲದಿ ಅಲುಗಾಡಿಸಿದ ಗಿಡ ಮರಗಳುI
ಸುರಿದವು ಭೂಮಿಗೆ ಅದ್ಭುತ ಹೂಗಳು, II
ಹಣ್ಣು ಹೂ ಎಲೆ ಕೊಂಬೆಗಳನು ಉದುರಿಸಿಕೊಂಡ ಗಿಡಮರI
ಕಂಡವು ಒಡುವೆ ಆಭರಣ ಸೋತ ಜೂಜುಗಾರನಂತೆ, II
ಹಕ್ಕಿಗಳನು ಕಳೆದುಕೊಂಡ ಗಿಡಮರಗಳು ಕಂಡವು I
ಬಿರುಗಾಳಿ ಹೊಡೆದ ತಿಂದ ಕೊಂಬೆ-ಆಶ್ರಯದಂತೆ, ಹನುಮನ II
ಬಾಲ ಕೈ ಕಾಲುಗಳ ಏಟು ತಿಂದ ಅಶೋಕವನ ಗಿಡಮರಗಳು ಕಂಡವು I
ಯುವತಿಯ ಕೆದರಿದ ತಲೆಗೂದಲಗಳಂತೆ, II
ಮಹಾಬಳ್ಳಿ ವೃತ್ತಗಳನು ಭೇದಿಸಿದ ಹನುಮ ಬಲದಿ, I
ಮಳೆಗಾಲ ಮೋಡಗಳನು ವಾಯು ಭೇದಿಸಿದಂತೆ ವಿಂದ್ಯದಲಿ, II
ರಜತ,ಚಿನ್ನ, ವಜ್ರ ಲೇಪಿತ ನೆಲಹಾಸಿಗೆI
ಕಂಡನು ಹನುಮ ಸುಂದರ ತಾಣ, II
ಅಲ್ಲಲ್ಲಿ ನಿರ್ಮಲ ಜಲ ತುಂಬಿದ ಹೊಂಡಗಳುI
ವಜೃ-ಶೃಂಗಾರದ ಸೋಪಾನಗಳು, II
ಅಮೂಲ್ಯ ರತ್ನ ಹರಳು ಮರಳುI
ಶೋಭಿತವಾಗಿತ್ತು ಅಮೂಲ್ಯ ಸ್ಪಟಿಕ ತಳ, II
ದಡದ ಹೊಂಬಣ್ಣ ವೃಕ್ಷಗಳು, ಅರಳಿದ ಕಮಲಗಳ ಹಾಸಿಗೆI
ಚಕ್ರವಾಕ, ನೀರುಗೋಳಿ, ಹಂಸಗಳ ದ್ವನಿ ತುಂಬಿದ್ದವು, II
ಎತ್ತರದ ವೃಕ್ಷಗಳು, ಅಮೃತದಂತಹ ಜಲI
ಎಲ್ಲ ದಿಸೆಗಳಿಂದ ಹರಿದು ಬರುವ ತೊರೆಗಳು,II
ಸಹಸ್ರ ಸಹಸ್ರ ಹೂಬಳ್ಳಿ, ಪುಷ್ಪವೃಕ್ಷಗಳು, ಸುತ್ತುವರೆದ ಪೋದೆ ಗಳು, I
ಮಧ್ಯದಲಿ ಕರವೀರ ,ಬಾಂವಿ,ವಿಭಿನ್ನ ಆಕಾರದಿ II
ಕಂಡನು ಹನುಮ ಗಿಡ ಗವಿ ಶಿಖರಗಳಿಂದ ಸುತ್ತುವರೆದ ಪರ್ವತ,I
ಮೋಡಗಳಂತಹ ಶಿಖರಗಳ ಸುಂದರ ಪರ್ವತ, II
ಸುಂದರ ಕಾಂಡ
ಮನಸನ್ನು ಸದೃಢಗೊಳಿಸಿಕೊಂಡು ಸೀತೆಯನ್ನು ಅಶೋಕವನದಲ್ಲಿ ಹುಡುಕಲು ಹೋದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿ ಮೂಡಿ ಬಂದ ಅಂಶಗಳು: (1)ಅಶೋಕವನದ ಸೌಂದರ್ಯ: ಚಿಂತಾಕ್ರಾಂತನಾದ ಹನುಮನು ತಕ್ಷಣ ಅಶೋಕವನವನ್ನು ನೆನೆಪಿಸಿಕೊಂಡು ಕೋಟೆಗೊಡೆಯಿಂದ ವೇಗದಲಿ ಅದರತ್ತ ಹಾರಿದನು; ವಸಂತ ಋತುವಾಗಿದ್ದರಿಂದ ಅಶೋಕವನದಲ್ಲಿ ಚೈತ್ರ ಮಾಸದ ಕಾನನದ ಸೊಬಗು, ಹಕ್ಕಿಗಳ ಚಿಲಿಪಿಲಿ, ರಜತ ಮತ್ತು ಹೊಂಬಣ್ಣದ ವೃಕ್ಷಗಳ ದೃಶ್ಯ, ಮಾನವ, ವಿಭಿನ್ನ ಪ್ರಾಣಿ ಮತ್ತು ಪಕ್ಷಿಗಳ ಬೀಡು, ಸೂರ್ಯೊದಯದ ಹೊಂಬಣ್ಣವು ಬಣ್ಣ ಬಣ್ಣದ ಗಿಡ ಮರ ಹೂ ಹಣ್ಣುಗಳ ಚಿತ್ತಾರ ಬಿಡಿಸುತಿದ್ದಂತೆ, ಕೋಗಿಲೆ ಭ್ರಮರಗಳಿಗೆ ಬಳ್ಳಿ ಗಿಡಗಳು ಫಲ ಪುಷ್ಪಗಳು ಉಣಿಸುತಿದ್ದಂತೆ, ನವಿಲು ಹಕ್ಕಿಗಳು ತಮ್ಮ ಸಂಗಾತಿಗೆ ಮಿಲನದ ನೃತ್ಯದ ಮೂಲಕ ಕರೆ ನೀಡುತಿದ್ದಂತೆ, ರಜತ, ಚಿನ್ನ, ವಜೃ ಲೇಪಿತ ನೆಲಹಾಸಿಗೆಯಂತೆ, ಅಲ್ಲಲ್ಲಿ ನಿರ್ಮಲ ಜಲ ತುಂಬಿದ ಹೊಂಡಗಳು, ವಜ್ರ-ಶೃಂಗಾರದ ಸೋಪಾನಗಳು, ಅಮೂಲ್ಯ ರತ್ನ ಹರಳು ಮರಳು, ಅಮೂಲ್ಯ ಸ್ಪಟಿಕದಂತಹ ಹೊಂಡಗಳ ತಳ; ಅಮೃತದಂತಹ ಜಲ ಎಲ್ಲ ದಿಸೆಗಳಿಂದ ಹರಿದು ಬರುವ ತೊರೆಗಳ, ಹೊಂಡಗಳ ದಡದ ಹೊಂಬಣ್ಣ ವೃಕ್ಷಗಳು, ಅರಳಿದ ಕಮಲಗಳ ಹಾಸಿಗೆ, ಚಕ್ರವಾಕ, ನೀರುಗೋಳಿ, ಹಂಸಗಳ ದ್ವನಿ, ಎತ್ತರದ ವೃಕ್ಷಗಳು, ಸಹಸ್ರ ಸಹಸ್ರ ಹೂಬಳ್ಳಿಗಳು, ಪುಷ್ಪವೃಕ್ಷಗಳು, ಸುತ್ತುವರೆದ ಪೋದೆಗಳು, ಮಧ್ಯದಲಿ ವಿಭಿನ್ನ ಆಕಾರದ ಕಣಗಿಲ ಹೂ ಗಿಡ ಮತ್ತು ಬಾಂವಿ, ಗಿಡ ಗವಿ ಶಿಖರಗಳಿಂದ ಸುತ್ತುವರೆದ ಪರ್ವತ, ಮೋಡಗಳಂತಹ ಶಿಖರಗಳ ಸುಂದರ ಪರ್ವತಗಳ ಸುಂದರ ದೃಶ್ಯ ಬಿಡಿಸಿತ್ತು,(2) ಅಶೋಕವನದಲ್ಲಿ ಕಂಡ ಹನುಮಾನ: ಸರ್ವಾಂಗ ಸುಂದರಿ ರಾಜಪುತ್ರಿ ಸೀತೆಯನ್ನು ಹುಡುಕುತಿದ್ದ ಹನುಮನು ಸುಖ-ನಿದ್ರಾಸ್ಥೆಯಲ್ಲಿದ್ದ ಪಕ್ಷಿಗಳನು ಎಚ್ಚರಿಸುತಿದ್ದ, ಎಚ್ಚತ್ತು ಪಕ್ಕ ಬಡಿದು ನೆಗೆದಾಗ ಹಕ್ಕಿಗಳು ಕೊಂಬೆ ಕೊಂಬೆಗಳಿಂದ ಪುಷ್ಪವೃಷ್ಠಿ ಸುರಿಯುತಿತ್ತು; ಹೂಗಳಿಂದ ತುಂಬಿದ ಗಿರಿಗಳ ಅಶೋಕವನದ ಮಧ್ಯೆ ವಾಯುಪುತ್ರ ಹನುಮ ಪರ್ವತದಂತೆ ಮಿಂಚಿದನು; ಗಿಡದಿಂದ ಗಿಡಕ್ಕೆ, ಗಿಡಗಳ ಮಧ್ಯೆ ಹಾರುವ ಹನುಮನು ಸರ್ವ ಜೀವಿಗಳಿಗೆ ಮನ್ಮಥನಂತೆ ಕಂಡನು; (3)ಹನುಮ ಮತ್ತು ಅವನ ತುಂಟಾಟ: ಗಿಡದಿಂದ ಗಿಡಕ್ಕೆ, ಗಿಡಗಳ ಮಧ್ಯೆ ಹಾರುವ ಹನುಮನು ಸರ್ವ ಜೀವಿಗಳಿಗೆ ಮನ್ಮಥನಂತೆ ಕಂಡನು; ಮುದದಲಿ ಹನುಮನು ತನ್ನ ಬಲದಿಂದ ಅಲುಗಾಡಿಸಿದ ಗಿಡ ಮರಗಳು ಅದ್ಭುತ ಹೂಗಳನ್ನು ಭೂಮಿಗೆ ಸುರಿದವು; ಹಣ್ಣು ಹೂ ಎಲೆ ಕೊಂಬೆಗಳನು ಉದುರಿಸಿಕೊಂಡ ಗಿಡಮರಗಳು ಜೂಜಾಟದಲ್ಲಿ ಒಡುವೆ ಆಭರಣಗಳನ್ನು ಸೋತ ಜೂಜುಗಾರನಂತೆ ಕಂಡವು. ಆದಿಕವಿ ವಾಲ್ಮೀಕಿಯು ಒಂದೆಡೆ ಅಶೋಕವನದ ಮನಮಂತ್ರಮುಗ್ಧಗೊಳಿಸುವ ವಸಂತದ ಚೆಲುವನ್ನು ವರ್ಣಿಸಿದರೆ ಮತ್ತೊಂದೆಡೆ ಹನಮಾನನ ನೋಟ ಮತ್ತು ತುಂಟಾಟಗಳನ್ನು ಬಣ್ಣಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
