
ಕೇಳಿ ತ್ರಿಜಟಾಳ ಮಾತು, ಭಯಭೀತ ರಾಕ್ಷಸಿಯರೆಲ್ಲI
ನುಡಿದರು ತ್ರಿಜಟಾಳಿಗೆ:” ಅದೆಂತ್ಹಾ ಕನಸು ಹೇಳು” II
ತ್ರಿಜಟಾ ನುಡಿದಳು ರಾಕ್ಷಸಿಯರಿಗೆ: “ ಹಸ್ತಿದಂತ ಶಯನದ I
ಮೇಲೆ ಶ್ವೇತ ಹಾರ, ಉಡುಪು ಧರಿತ ರಾಮ ಆಕಾಶದಿ II
ಲಂಕೆಗೆ ಬಂದ ಲಕ್ಷ್ಮಣನೊಂದಿಗೆ, ಮಹಾಸಾಗರ ಮಧ್ಯೆ I
ಪರ್ವತ ಶಿಖರ ಮೇಲೆ ಕುಳಿತಿದ್ದಳು ಸೀತೆಯನು ಕಂಡೆ ಕನಸಿನಲಿ, II
ಬೆಳಕು ಸೂರ್ಯನ ಬೆನ್ನಟ್ಟಿದಂತೆ ರಾಮನತ್ತ ಬಂದಳು ಸೀತೆ,I
ನಾಲ್ಕು-ಕೋರೆ ಆನೆ ಮೇಲೆ ವಿಹರಿಸುತಿದ್ದರು II
ರಾಮ ಲಕ್ಷ್ಮಣ; ಶ್ವೇತ ಹಾರ ವ ಉಡುಪುಗಳಲಿ ಹೊಳೆವI
ರಾಮ ಲಕ್ಷ್ಮಣರು ಬಂದರು ಸೀತೆ ಬಳಿ; II
ಕುಳಿತಳು ಸೀತೆಯೂ ಆನೆ ಮೇಲೆI
ಹೊರಟಳು ಆಕಾಶ ಮಾರ್ಗದಲಿ ಪತಿಯೊಂದಿಗೆ ಸೀತೆ;II
ರಾಮ ಸೀತೆ ಲಕ್ಷ್ಮಣರ ಹೊತ್ತ ಆನೆ ನಿಂತಿತು ಲಂಕೆಯ I
ಮೇಲೆ ಆಕಾಶದಲಿ, ಕಂಡೆ ನಾ ಕೆಂಪು ಉಡುಪು, II
ಕಣಗಿಲ-ಹೂ ಮಾಲೆ ಧರಿತ ಎಣ್ಣೆ-ಮಜ್ಜಿತ ರಾವಣ,I
ಎಣ್ಣೆ ಕುಡಿಯುತ ಮತ್ತಿನಲಿ ನೆಲದ್ಮೇಲೆ ನಿಂತ ದೃಶ್ಯ, II
ಕುಣಿಯುತ,ನಗುತ, ಎಣ್ಣೆ ಕುಡಿಯುತ, ಅಸ್ತವ್ಯಸ್ತ ಮನಸ್ಥಿತಿI
ರಾವಣ, ನಡೆದ ಕತ್ತೆಗಳ ಹೂಡಿದ ರಥವೇರಿ; II
ಕತ್ತೆ-ರಥವೇರಿ ದಕ್ಷಿಣದತ್ತ ಹೊರಟ ರಾವಣ I
ಹೆದರಿ ತಲೆಕೆಳಗಾಗಿ ಬಿದ್ದ ನೆಲಕ್ಕೆ ರಥದಿಂದ; ಬಟ್ಟೆ ಬಿಚ್ಚಿಕೊಂಡು, II
ಮೈಕೈ ಪರಿಚಿಕೊಳ್ಳುತ್ತ, ಮಲೀನಗೊಳ್ಳುತ, I
ದುರ್ವಾಸನೆ ಬೀರುತ, ನರಕ-ಕತ್ತಲಲಿ ಮುಳುಗಿದ ರಾವಣ; ಮಲೀನ ಮೈII
ಕೆಂಪು ಉಡುಗೆಯ ಕಪ್ಪು ಸ್ತ್ರೀ ಬಿಗಿದು ಹಗ್ಗ I
ರಾವಣನ ಕೊರಳಿಗೆ, ಎಳೆಯುತ ನಡೆದಳು ದಕ್ಷಿಣದತ್ತ; II
ಕನಸಿನಲಿ ಕಂಡೆ ನಾ ಕುಂಭಕರ್ಣ ವ ರಾಮಣನI
ಪುತ್ರರೆಲ್ಲರನೂ ಎಣ್ಣೆ-ಮಜ್ಜನ ರೂಪದಲಿ;II
ನಡೆದರು ದಕ್ಷಿಣದತ್ತ ರಾವಣ ಹಂದಿಯನ್ನೇರಿ, ಇಂದ್ರಜಿತI
ಮೊಸಳೆಯನ್ನೇರಿ, ಕುಂಭಕರ್ಣ ಒಂಟೆಯನ್ನೇರಿ; II
ಕಂಡೆನು ಕನಸು ನಾ , ಶ್ವೇತ ಬಟ್ಟೆ ವ ಹೂಮಾಲೆ ಧರಿತI
ಶ್ವೇತ-ಛತ್ರಿ ಹಿಡಿದು ಪರಿಮಳ ಸೂಸುವ ವಿಭೀಷಣನ ;II
ಶಂಖನಾದ, ನೃತ್ಯಗಾಯನ ಮಧ್ಯೆ ಆನೆಯನ್ನೇರಿ ನಾಲ್ಕು I
ಮಂತ್ರಿಗಳೊಂದಿಗೆ ಆಕಾಶದಲಿ ಹೊರಟ ವಿಭೀಷಣ;II
ಕಂಡೆನು ಇಡೀ ರಾಕ್ಷಸ-ಸಮಾಜ ಮುಳಗಿತ್ತು ಎಣ್ಣೆ ಕುಡಿತದಲಿI
ಕೆಂಪು ಬಟ್ಟೆ, ನೃತ್ಯ, ಗಾಯನಗಳ ಮಧ್ಯೆದಲಿ, II
ಲಂಕೆಯ ಆನೆ ಕುದುರೆ ಕಮಾನುಗಳು ದ್ವಾರಗಳುI
ಮುರಿದು ಮಹಾಸಾಗರ ಬಳಿಬಿದ್ದಿದವು, II
ಕಂಡೆನು ರಾಮದೂತ ವಾನರ ಬೆಂಕಿಹಚ್ಚಿ I
ಲಂಕೆಯನು ಭಸ್ಮ ಮಾಡುವ ದೃಶ್ಯ, ದೂರು ಓಡಿರಿ, II
ಭಸ್ಮರಾಗುವಿರಿ, ಓ ರಾಕ್ಷಸಿಯರೇ, I
ಭಸ್ಮಮಾಡಿ ರಾಕ್ಷಸರನು ರಾಮ, ಮರಳಿ ಪಡೆವನು ಸೀತೆ;II
ಸೀತೆಗೆ ಹಿಂಸೆ ಕೊಡುವದನು ಸಹಿಸಲಾರ ರಾಮ,I
ವನ ಸಹಚರೆ ಸೀತೆಯನು ರಕ್ಷಿಸಲು ಬರುವನು ರಾಮ; II
ನಿಲ್ಲಿಸಿ ನಿಮ್ಮ ಹೊಲಸು ನುಡಿಗಳನು, ಹೆದರಿರಿ ರಾಮನಿಗೆI
ಸಭ್ಯ-ಶಬ್ದಗಳಿಂದ ವರ್ತಿಸಿ ಸೀತೆಯೊಂದಿಗೆ; II
ಶೋಕದಲಿದ್ದ ಸ್ತ್ರೀ ಬಗ್ಗೆ ಕನಸ್ಸು ಕಂಡೆ ನಾI
ಮುಕ್ತಳಾಗುವಳಾ ಸ್ತ್ರಿ ಎಲ್ಲ ಶೋಕಗಳಿಂದ, II
ಓ ರಾಕ್ಷಸಿಯರೇ, ವಿನಾಶ ಬರಲಿದೆ ರಾಮನಿಂದI
ಹೆದರಿಸದರಿ ಸೀತೆಯನು, ನಿಮ್ಮ ಪ್ರಯತ್ನ ವ್ಯರ್ಥ, II
ರಕ್ಷಿಸುವಳು ಚಾರಿತ್ಯವಾನ ಸೀತೆ ನಮ್ಮನು, I
ರಾವಣನ ಅಂತ್ಯ ಸಮೀಪಿಸಿದೆ, ಸಂದಲಿದೆ ರಾಮನಿಗೆ ಜಯ; II
ಶುಭಕಾರಕ ಮುನ್ಸೂಚನೆಯಾಗಿ ಸಿಡಿಯುತ್ತಿವೆ,I
ಕಮಲಾಕ್ಷಿ ಸೀತೆ ಎಡಗಣ್ಣು,ಎಡಗೈ, ಎಡತೊಡೆಗಳು,II
ಸ್ವಾಂತನ-ಉಲಿಯು ಹಕ್ಕಿಯೊಂದು ಗೂಡುI
ಸೇರುತ್ತಿದೆ ಪದೇ ಪದೇ, ಸೀತೆಗೆ ಶುಭ-ಶಕುನ”. II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಮನುಷ್ಯನಿಗೆ ಕಾಣುವ ಕನಸ್ಸು ಮತ್ತು ಶಕುನ ಅವನಿಗೆ ಮುಂದೆ ಘಟಿಸಬಹುದಾದ ಘಟನೆಗಳನ್ನು ಬಣ್ಣ, ಉಡುಪು, ಸಂದರ್ಭ, ವಾಹನ, ದಿಕ್ಕು, ಪ್ರಾಣಿ, ಪಕ್ಷಿ, ಇತ್ಯಾದಿಗಳ ಶುಭ, ಅಶುಭಗಳ ಸೂಚಕಗಳ ಮೂಲಕ ತಿಳಿದು ಕೊಳ್ಳುವ ಅನುಭವಿಕ ಜ್ಞಾನದ ಆಧಾರ ಮೇಲೆ ‘ಕನಸ್ಸ-ಭವಿಷ್ಯಶಾಸ್ತ್ರ ಮತ್ತು ಶಕುನ ಶಾಸ್ತ್ರವನ್ನು ಮಂಡಿಸಿರುವರು:(1) ತ್ರಿಜಟಾಳಿಂದ ಕನಸಿನ ವಿವರಣೆ: ತ್ರಿಜಟಾಳ ಮಾತು ಕೇಳಿ ಭಯಭೀತ ರಾಕ್ಷಸಿಯರೆಲ್ಲ ತ್ರಿಜಟಾಳನ್ನು “ಅದೆಂತ್ಹಾ ಕನಸು ಹೇಳು”ಎಂದು ಕುತೂಹಲದಿಂದ ಕೋರಿದರು; ತ್ರಿಜಟಾಳು ತಾನು ಕಂಡ ಕನಸ್ಸು ರಾಕ್ಷಸಿಯರಿಗೆ ಹೀಗೆ ಹೇಳುವಳು “ಹಸ್ತಿದಂತ ಶಯನದ ಮೇಲೆ ಶ್ವೇತ ಹಾರ ಮತ್ತು ಉಡುಪು ಧರಿಸಿದ ರಾಮನು ಲಕ್ಷ್ಮಣನೊಂದಿಗೆ ಆಕಾಶಮಾರ್ಗವಾಗಿ ಲಂಕೆಗೆ ಬಂದನು, ಮಹಾಸಾಗರ ಮಧ್ಯೆ ಪರ್ವತ ಶಿಖರ ಮೇಲೆ ಕುಳಿತಿದ್ದ ಸೀತೆಯನು ಕನಸಿನಲಿ ಕಂಡೆನು, ಬೆಳಕು ಸೂರ್ಯನ ಬೆನ್ನಟ್ಟಿದಂತೆ ರಾಮನತ್ತ ಸೀತೆ ಬಂದಳು, ರಾಮ ಲಕ್ಷ್ಮಣ ನಾಲ್ಕು-ಕೋರೆ ಆನೆ ಮೇಲೆ ವಿಹರಿಸುತಿದ್ದರು; ಶ್ವೇತ ಹಾರ ಮತ್ತು ಉಡುಪುಗಳಲಿ ಹೊಳೆವ ರಾಮ ಲಕ್ಷ್ಮಣರು ಸೀತೆ ಬಳಿ ಬಂದರು ಹಾಗು ಸೀತೆಯೂ ಅವರ ಆನೆ ಮೇಲೆ ಕುಳಿತು ಆಕಾಶ ಮಾರ್ಗದಲಿ ಪತಿಯೊಂದಿಗೆ ಹೊರಟಳು, ರಾಮ ಸೀತೆ ಲಕ್ಷ್ಮಣರನು ಹೊತ್ತ ಆನೆ ಆಕಾಶದಲಿ ಲಂಕೆಯ ಮೇಲೆ ನಿಂತಿತು, ಅದೇ ವೇಳೆ ಕೆಂಪು ಉಡುಪು, ಕಣಗಿಲ-ಹೂ ಮಾಲೆ ಧರಿಸಿದ ಎಣ್ಣೆಯಲ್ಲಿ ಸ್ನಾನ ಮಾಡಿದ ರಾವಣನನು ಎಣ್ಣೆ ಕುಡಿಯುತ ಮತ್ತಿನಲಿ ನೆಲದ್ಮೇಲೆ ನಿಂತ ದೃಶ್ಯ ಕಂಡೆನು; ಕುಣಿಯುತ, ನಗುತ, ಎಣ್ಣೆ ಕುಡಿಯುತ, ಅಸ್ತವ್ಯಸ್ತ ಮನಸ್ಥಿತಿಯ ರಾವಣನನು ಕತ್ತೆಗಳ ಹೂಡಿದ ರಥವೇರಿ ಹೊರಟನು ಹಾಗು ಕತ್ತೆ-ರಥವೇರಿ ದಕ್ಷಿಣದತ್ತ ಹೊರಟ ರಾವಣನನು ಹೆದರಿ ತಲೆಕೆಳಗಾಗಿ ರಥದಿಂದ ಕೆಳಗೆ ನೆಲಕ್ಕೆ ಬಿದ್ದನು ಮತ್ತು ತನ್ನ ಬಟ್ಟೆ ಬಿಚ್ಚಿಕೊಂಡು, ಮೈಕೈ ಪರಿಚಿಕೊಳ್ಳುತ್ತ, ಹೊಲಸ್ಸ ಮಾಡಿಕೊಳ್ಳತ, ದುರ್ವಾಸನೆ ಬೀರುತ, ರಾವಣ ನರಕ-ಕತ್ತಲಲಿ ಮುಳಗಿದನು; ಹೊಲಸು ದೇಹದ ಕೆಂಪು ಉಡುಗೆಯ ಕಪ್ಪು ಸ್ತ್ರೀಯು (ಸಾವು)ರಾವಣನ ಕೊರಳಿಗೆ ಹಗ್ಗ ಬಿಗಿದು ಅವನನ್ನು ದಕ್ಷಿಣದತ್ತ (ಯಮಲೋಕ)ಎಳೆಯುತ ನಡೆದಳು; ಕುಂಭಕರ್ಣ ಮತ್ತು ರಾಮಣನ ಪುತ್ರರೆಲ್ಲರನೂ ಎಣ್ಣೆ(ತೈಲ) ಸ್ನಾನ ಮಾಡಿದ ರೂಪದಲಿ ಕಂಡೆನು; ರಾವಣ ಹಂದಿಯನ್ನೇರಿ, ಇಂದ್ರಜಿತ ಮೊಸಳೆಯನ್ನೇರಿ, ಕುಂಭಕರ್ಣ ಒಂಟೆಯನ್ನೇರಿ ದಕ್ಷಿಣದತ್ತ ಹೋಗುವದನ್ನು ಕಂಡೆನು; ಶ್ವೇತ ಬಟ್ಟೆ ಮತ್ತು ಹೂಮಾಲೆ ಧರಿಸಿ ಶ್ವೇತ-ಛತ್ರಿ ಹಿಡಿದು ಪರಿಮಳ ಸೂಸುವ ವಿಭೀಷಣ ಶಂಖನಾದ, ನೃತ್ಯಗಾಯನ ಮಧ್ಯೆ ಆನೆಯನ್ನೇರಿ ನಾಲ್ಕು ಮಂತ್ರಿಗಳೊಂದಿಗೆ ಆಕಾಶದಲಿ ಹೊರಟದನ್ನು ಕಂಡೆನು; ಇಡೀ ರಾಕ್ಷಸ-ಸಮಾಜ ಎಣ್ಣೆ ಕುಡಿತದಲಿ ಮುಳಗಿದನ್ನು ಕಂಡೆನು; ಕೆಂಪು ಬಟ್ಟೆ, ನೃತ್ಯ, ಗಾಯನಗಳ ಲಂಕೆಯ ಮಧ್ಯೆದಲಿ ಇರುವ ಆನೆ ಕುದುರೆ ಕಮಾನುಗಳು, ದ್ವಾರಗಳು ಮುರಿದು ಮಹಾಸಾಗರ ಬಳಿ ಬಿದ್ದಿದವು, ರಾಮದೂತ ವಾನರ ಬಂದದನ್ನು ಕಂಡೆನು ಹಾಗು ಅವನು ಬೆಂಕಿಹಚ್ಚಿ ಲಂಕೆಯನು ಭಸ್ಮ ಮಾಡುವ ದೃಶ್ಯವನ್ನು ಕಂಡೆನು”.ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಕನಸ್ಸು-ಶಾಸ್ತ್ರ ಮತ್ತು ಅದರ ಮಹತ್ವವನ್ನು ತಿಳಿಸಿರುವರು; ಕನಸ್ಸು ಅಸ್ತವ್ಯಸ್ತ ಮನಸ್ಸಿನ ಪ್ರತಿಫಲಗಳು ಮತ್ತು ಅದನ್ನು ನಂಬುವದು ಮೌಢ್ಯವೆಂದು ಇಂದಿನ ಯುಗದ ವೈಚಾರಿಕರ, ವಿಜ್ಞಾನಿಗಳ ಅಂಬೋಣಿಕೆ ಆಗಿದೆ ಆದರೆ ಆದಿಚಿಂತಕ ವಾಲ್ಮೀಕಿಯು ʼಕನಸ್ಸು ಶಾಸ್ತ್ರʼವೂ ಒಂದು ವಿಜ್ಞಾನ, ಅದು ಮನುಷ್ಯನ ಬದುಕಿನಲ್ಲಿ ಘಟಿಸ ಬಹುದಾದ ಮುನ್ಸೋಚನೆಗಳು, ಮನ್ನೆಚ್ಚರಿಕೆಗಳೆಂದು ತ್ರೇತಾಯುಗದ ಸಾಮಾಜಿಕ ಮನಶಾಸ್ತ್ರ ಸ್ಥಿತಿಯನ್ನು ಮಂಡಿಸಿರುವರು; ಕನಸ್ಸು ಮನಸ್ಸಿನೊಂದಿಗೆ ಸಂಬಂಧ ಹೊಂದಿದೆ, ಅದು ಘಟಿಸಿದ ಘಟನೆಗಳ ವಿಶ್ಲೇಷಣೆಯನ್ನು ನಿರಂತರ ಮಾಡುತ್ತಿರುತ್ತದೆ, ಅದರ ಪ್ರತಿಫಲವಾಗಿ ಕನಸ್ಸುಗಳು ಬೀಳುವವು, ಕನಸ್ಸಿನಲ್ಲಿ ಕಾಣುವ ಸ್ಥಳ, ಬಣ್ಣ, ಉಡುಪು, ಪಕ್ಷಿ ಪ್ರಾಣಿ, ಸರಿಸರ್ಪು, ವರ್ತನೆ ಇತ್ಯಾದಿಗಳು ಮುಂದೆ ಘಟಿಸ ಬಹುದಾದ ಘಟನೆಗಳ ಸಂಕೇತಗಳಾಗಿ ಕಾಣುವವು, ಅದು ಮನುಷ್ಯನ ಮನಸ್ಸಿನ ಅನುಭವವಾಗಿದೆ ಎಂಬ ಕನಸ್ಸುಶಾಸ್ತ್ರದ ತತ್ವಗಳನ್ನು ಮಂಡಿಸಿರುವರು;(2)ಭವಿಷ್ಯದ ಘಟನೆಗಳ ಬಗ್ಗೆ ತ್ರಿಜಟಾಳ ಎಚ್ಚರಿಕೆ: ತನ್ನ ಕನಸಿನ ಶುಭ, ಅಶುಭ ಸಂಕೇತ ಹೇಳುತ ತ್ರಿಜಟಾಳು ಹೀಗೆ ರಾಕ್ಷಸರನ್ನು ಎಚ್ಚರಿಸಿದಳು “ಓ ರಾಕ್ಷಸಿಯರೇ, ಓಡಿರಿ, ಭಸ್ಮರಾಗುವಿರಿ, ಭಸ್ಮಮಾಡಿ ರಾಕ್ಷಸರನು ರಾಮನು ಸೀತೆಯನ್ನು ಮರಳಿ ಪಡೆವನು, ಸೀತೆಗೆ ಹಿಂಸೆ ಕೊಡುವದನು ರಾಮ ಸಹಿಸಲಾರನು, ತನ್ನ ವನ ಸಹಚರೆ ಸೀತೆಯನು ರಕ್ಷಿಸಲು ರಾಮ ಬರುವನು; ಹೆದರಿರಿ ರಾಮನಿಗೆ, ನಿಲ್ಲಿಸಿ ನಿಮ್ಮ ಹೊಲಸು ಮಾತುಗಳನು, ಸಭ್ಯ-ಶಬ್ದಗಳಿಂದ ಸೀತೆಯೊಂದಿಗೆ ವರ್ತಿಸಿರಿ; ಶೋಕದಲಿದ್ದ ಸ್ತ್ರೀ ಬಗ್ಗೆ ನಾನು ಕನಸ್ಸು ಕಂಡೆನು, ಆ ಸ್ತ್ರಿಯು ತನ್ನೆಲ್ಲ ಶೋಕಗಳಿಂದ ಮುಕ್ತಳಾಗುವಳು, ಓ ರಾಕ್ಷಸಿಯರೇ, ರಾಮನಿಂದ ನಿಮಗೆ ವಿನಾಶ ಬರಲಿದೆ, ಹೆದರಿಸದಿರಿ ನೀವು ಸೀತೆಯನು, ಸೀತೆ ಮೇಲೆ ಒತ್ತಡ ಹೇರುವ ನಿಮ್ಮ ಪ್ರಯತ್ನ ವ್ಯರ್ಥವಾಗುವದು;ಅವಳೊಂದಿಗೆ ನಾವು ಸಭ್ಯತೆಯಿಂದ ವರ್ತಿಸಿದರೆ ಚಾರಿತ್ಯವಾನ ಸೀತೆಯು ನಮ್ಮನು ರಕ್ಷಿಸುವಳು, ರಾವಣನ ಅಂತ್ಯ ಸಮೀಪಿಸಿದೆ, ರಾಮನಿಗೆ ಜಯ ಸಿಗಲಿದೆ; ನನಗೆ ಶುಭಕಾರಕ ಮುನ್ಸೂಚನೆಯಾಗಿ ಕಮಲಾಕ್ಷಿ ಸೀತೆಯ ಎಡಗಣ್ಣು, ಎಡಗೈ, ಎಡತೊಡೆಗಳು, ಸಿಡಿಯುತ್ತಿವೆ; ಸ್ವಾಂತನ-ಉಲಿಯು ಹಕ್ಕಿಯೊಂದು ಪದೇ ಪದೇ ಗೂಡು ಸೇರುತ್ತಿದೆ, ಅದು ಸೀತೆಗೆ ಶುಭ-ಶಕುನ”.ತ್ರಿಜಾತಳು ತನ್ನ ಕನಸ್ಸಿನಲ್ಲಿ ರಾಮನ ವಿಷಯದಲ್ಲಿ ಶುಭ-ಶಕುನ/ಸಂಕೇತಗಳು ಮತ್ತು ರಾವಣ ಮತ್ತು ಅವನ ಸಂಬಂಧಿಗಳ ವಿಷಯದಲ್ಲಿ ಅಶುಭ-ಶಕುನ/ಸಂಕೇತಗಳನ್ನು ಕಂಡಳು ಅದರಂತೆ ವಾನರನ ಬರುವಿಕೆ ಹಾಗು ಅವನಿಂದ ಲಂಕಾದಹನ ಎಲ್ಲವೂ ನಂತರ ಅವಳ ಕನಸ್ಸಿನಂತೆ ಘಟನೆಗಳು ನದೆದದು ಇತಿಹಾಸ.ನಂಬಿಕೆ ಮೇಲೆ ಜಗದ ವ್ಯವಹಾರ ನಿಂತಿದೆ.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ.
