
ರಾಕ್ಷಸಿಯರ ಬಿರ್ನುಡಿಗಳ ಮಧ್ಯೆ, ರಾವಣನ ಧಮಕಿಗೆ I
ಹೆದರಿ ರೋಧಿಸಿದಳು ಸೀತೆ ಕಾಡಿನಲಿ ಬಿಟ್ಟ ಬಾಲಕಿಯಂತೆ,II
“ಪಾಪಿಗಳಿಗೆ ಅಕಾಲ ಮೃತ್ಯಬಾರದು: ಹೆದರಿಕೆ ಮಧ್ಯೆಯೂ I
ಸಾವು ಬಾರದೇ ಬದುಕಿದವಳು ನಾ ಪಾಪಿ; II
ಸಿಡಲಿಗೆ ಪುಡಿ ಪುಡಿಯಾದಂತೆ ಬೆಟ್ಟ ಛೀಧ್ರ ಛೀಧ್ರವಾಗುತ್ತಿಲ್ಲೇಕೇI
ನನ್ನ ಹೃದಯ ಶೋಕದಿ? ನಿರ್ದೋಷಿ ನಾನು, II
ಯೋಗ್ಯಳು ರಾವಣನಿಂದ ಹತ್ಯೆಗೆ, ಕೊಡಲಾರೆ ಪ್ರೀತಿ ನಾ ರಾವಣನಿಗೆ I
ಬ್ರಾಹ್ಮಣ ಅಬ್ರಾಹ್ಮಣನಿಗೆ ವಿದ್ಯೆಕೊಟ್ಟಂತೆ II
ಬಾರದಿದ್ದರೆ ರಕ್ಷಣೆಗೆ ಎನ್ನ ಲೋಕನಾಥ, I
ತುಂಡರಿಸುವನು ಎನ್ನ ಅಂಗಗಳ ರಾವಣ ಗರ್ಭದಲಿ ಭ್ರೂಣ ತುಂಡರಿಸಿದಂತೆ; II
ಎನ್ನನು ಒಂದೇ ರಾತ್ರಿ ಸೆರೆಯಲಿಟ್ಟು ಕಳ್ಳನ ಶಿಕ್ಷಿಸಿದಂತೆ ಶಿಕ್ಷಸಿದರೆI
ಒಳ್ಳೆಯದು, ಎರಡು ಮಾಸಾವಧಿ ಹಿಂಸಕ ಎನಗೆ; II
ಓ ರಾಮಾ, ಲಕ್ಷ್ಮಣಾ, ಸುಮಿತ್ರಾ, ಕೌಶಲ್ಯ, ಕೊನೆಗೊಂಡಿತು ಎನ್ನ ಜೀವ, I
ಬಿರುಗಾಳಿಗೆ ಹಡಗು ಮುಳುಗಿದಂತೆ; II
ಮೃಗವೇಶಿಯು ನನಗಾಗಿ ಹತ್ಯೆಗೈದನೆ ವೀರ ದಶರಥಪುತ್ರರನುI
ಹತ್ಯೆಗೈದಂತೆ ಸಿಡಿಲು ಜೊಡಿಸಿಂಹಗಳನು; ||
ಮೃಗವೇಶದಲಿ ಬಂತೇ ಕಾಲವೇ ಎನ್ನ ಬಳಿ,I
ಬಲಿಯಾದರೆ ಎನ್ನ ಮೂರ್ಖತನಕ್ಕೆ ದಶರಥಪುತ್ರರು; II
ಜೀವಲೋಕ ಜ್ಞಾನಿ,ಚಂದ್ರತೇಜಸ್ವಿ, ಅಜಾನುಬಾಹು ರಾಮನೇ,I
ರಾಕ್ಷಸನಿಂದ ಎನ್ನ ಹತ್ಯೆ ನಿನಗೆ ತಿಳಿಯಲಿಲ್ಲವೇ? II
ಎನ್ನ ಪತಿನಿಷ್ಠೆ, ಧರ್ಮನಿಷ್ಠೆ, ತಾಳ್ಮೆ,ವ್ಯರ್ಥವಾಯಿತೇ I
ಕೃತಘ್ನನಿಗೆ ಮಾಡಿದ ಸಹಾಯ ವ್ಯರ್ಥವಾದಂತೆ; ನಿನಗೆ ಕಾಣದ, II
ನಿನ್ನ ಬಳಿ ಬಾರದ,ಧ್ಯಾನದಲಿ ಕೊರಗುವ ಎನಗೆI
ವ್ಯರ್ಥ ಧರ್ಮಾಚರಣೆ ನಿನಗೆ ಏಕಪತ್ನಿ ವ್ರತ ವ್ಯರ್ಥವಿದ್ದಂತೆ;II
ತಂದೆಯ ವಚನ ಪಾಲಿಸಿ, ವನವಾಸದಿಂದ ಮರಳಿI
ವಿಶಾಲಾಕ್ಷಿಯರೊಂದಿಗೆ ಸುಖವಾಗಿರು ನೀ;II
ಓ ರಾಮಾ, ವ್ಯರ್ಥವಾದವು ಎನ್ನ ಪ್ರೇಮ ವ ನಿಷ್ಠೆI
ದುರ್ದೈವಿ ನಾ ಆತ್ಮಹತ್ಯೆಗೆ ಶರಣಾಗುವೆ; II
ರಾವಣನ ಅಂತಪುದಲಿ ಎನಗೆ ಯಾರಾದರು ಸಹಾಯ ಮಾಡುವರೆ
ವಿಷ ಇಲ್ಲವೆ ಹರಿತ ಆಯುಧ ಕೊಟ್ಟುII
ಎನ್ನ ಆತ್ಮಹತ್ಯೆಗೆ”; ಹೀಗೆ ಶೋಕಿಸುತ, ರಾಮನ ನೆನೆಸುತ, I
ಸಪ್ಪೆ ಮುಖದ ಸೀತೆ ಬಂದಳು ಬಳಿ ಪುಷ್ಪಿತವೃಕ್ಷದ; II
ಹೀಗೆ ನರಳುತ ಸೀತೆ ತನ್ನ ಕೂದಲ ಹೆಳಲನು ಕುತ್ತಿಗೆಗೆ ಬಿಗಿದು I
ಗೊಣಗಿದಳು: “ಬೇಗ ಹೋಗುವೆ ಯಮನ ಬಳಿ”, II
ಕೋಮಲಾಂಗ ಸೀತೆ ಕೊಂಬೆ ಹಿಡಿದು ನಿಂತಳು,I
ಆದರೆ ಕಂಡಳು ಅನೇಕ ಶುಭ ಶಕುನಗಳನು.II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಸೀತೆಯು ತನ್ನ ಅಸಹಾಯಕತೆ ನೆನೆದು ಪ್ರಲಾಪಿಸುತ್ತ, ತನ್ನ ತಪ್ಪುಗಳನ್ನು ನೆನಪಿಸಿಕೊಳ್ಳುತ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡ ಪ್ರಸಂಗದಲ್ಲಿ ತ್ರೇತಾಯುಗದ ಅನೇಕ ಸಾಮಾಜಿಕ ರೂಢಿ ಕಟ್ಟಳೆಗಳನ್ನು ವಿವರಿಸಿರುವರು: (1) ಕಾಡಿನಲ್ಲಿ ಸ್ತ್ರೀ/ಬಾಲಕಿಯರನ್ನು ಬಿಡುವ ಹೇಯ ಪದ್ಧತಿ: ಜನ್ಮದೋಷ, ನಡತೆದೋಷ, ಇತ್ಯಾದಿ ಅಪರಾಧಗಳ ಹೇರಿ ಬಾಲಕಿ/ಸ್ತ್ರೀಯರನ್ನು ದಟ್ಟಾರಣ್ಯದಲ್ಲಿ ಬಿಡುವ ಹೇಯ ಅನಿಷ್ಠ ಸಾಮಾಜಿಕ ಪದ್ಧತಿಯನ್ನು ಆದಿಕವಿ ಹೀಗೆ ಉಲ್ಲೇಖಸಿರುವರು “ರಾಕ್ಷಸಿಯರ ಬಿರ್ನುಡಿಗಳ ಮಧ್ಯೆ ರಾವಣನ ಧಮಕಿಗೆ ಹೆದರಿದ ಸೀತೆ ಕಾಡಿನಲಿ ಬಿಟ್ಟ ಬಾಲಕಿಯಂತೆ’ ಹೀಗೆ ರೋಧಿಸಿದಳು ‘ಪಾಪಿಗಳಿಗೆ ಅಕಾಲ ಮೃತ್ಯಬಾರದು: ನಾನು ಪಾಪಿ’, ಹೆದರಿಕೆ ಮಧ್ಯೆಯೂ ಸಾವು ಬಾರದೇ ಬದುಕಿದವಳು”. ತನ್ನ ತಪ್ಪಿನ ಅರಿವಾಗಿ ಸೀತೆ ಪ್ರಾಯಶ್ಚಿತ್ತ ಪಟ್ಟದನ್ನು ಆದಿಕವಿ ತಿಳಿಸಿರುವರು, (2) ಶಿಕ್ಷೆ-ಪದ್ಧತಿ: ತಾನು ನಿದೋಷಿಯಾಗಿದ್ದರೂ ರಾವಣನ ಶತ್ರು ರಾಮನ ಪತ್ನಿಯಾಗಿದ್ದರಿಂದ ಮರಣದಂಡನೆಗೆ ಅರ್ಹಳು, ರಾವಣನು ಆದಷ್ಟು ಬೇಗ ತನಗೆ ಮರಣದಂಡನೆ ವಿಧಿಸಲಿವೆಂಬದನ್ನು ಸೀತೆ ಹೀಗೆ ಅರುಹುವಳು “ ನಾನು ನಿರ್ದೋಷಿ, ರಾವಣನ ಶತ್ರುಪತ್ನಿಯಾಗಿದ್ದರಿಂದ ನಾನು ಅವನಿಂದ ಹತ್ಯೆಗೆ ಯೋಗ್ಯಳು, …. ರಾವಣನು ನನ್ನನು ಒಂದೇ ರಾತ್ರಿ ತನ್ನ ಸೆರೆಯಲಿಟ್ಟು ಕಳ್ಳನನ್ನು ಶಿಕ್ಷಿಸಿದಂತೆ ಶಿಕ್ಷಸಿದರೆ ಒಳ್ಳೆಯದು ಆದರೆ ಎರಡು ಮಾಸಾವಧಿ ನನಗೆ ದೀರ್ಘ ಮತ್ತು ಹಿಂಸಕ ಶಿಕ್ಷೆ ನೀಡಿದಂತೆ, ಅದು ಮರಣದಂಡನೆಗಿಂತ ಭಯಾನಕ”.ರಾಮನೊಂದಗಿನ ಹಗೆತನಕ್ಕೆ ರಾವಣ ತನಗೆ ಶಿಕ್ಷೆ ವಿಧಿಸಿದನ್ನು ಪ್ರಶ್ನಿಸುವಳು,ಅದರ ಮೂಲಕ ಆದಿಕವಿ ತ್ರೇತಾಯುಗದ ದಂಡನೀತಿಶಾಸ್ತ್ರದ ಲೋಪದೋಷಗಳನ್ನು ಉಲ್ಲೇಖಿಸಿರುವರು. (3) ವಿದ್ಯೆ ಹಂಚಿಕೊಂಡಂತೆ ಪ್ರೀತಿ ಹಂಚಿಕೊಳ್ಳುವದು ಅಸಾಧ್ಯ: ಪತಿನಿಷ್ಠೆ ಹೆಣ್ಣು ತನ್ನ ಪತಿಯೊಂದಿಗೆ ಹಂಚಿಕೊಂಡ ಪ್ರೀತಿಯನ್ನು ಪರಪುರುಷನೊಂದಿಗೆ ಹಂಚಿಕೊಳ್ಳುವದಿಲ್ಲವೆಂಬ ಸಾಮಾಜಿಕ ಮನೋಶಾಸ್ತ್ರ ಸ್ಥಿತಿಯನ್ನು ಆದಿಕವಿ ವಾಲ್ಮೀಕಿಯು ಸೀತೆ ಮೂಲಕ ಹೀಗೆ ಹೇಳಿರುವರು “ಬ್ರಾಹ್ಮಣ ಅಬ್ರಾಹ್ಮಣನಿಗೆ ವಿದ್ಯೆಕೊಟ್ಟಂತೆ ಕೊಡಲಾರೆ ರಾವಣನಿಗೆ ನಾನು ನನ್ನ ಪ್ರೀತಿ”: ಅರ್ಥಾತ್ ಬ್ರಾಹ್ಮಣ ತನ್ನ ವಿದ್ಯೆಯನ್ನು ಯಾರಿಗಾದರೂ ಹಂಚಬಹುದು ಆದರೆ ಸ್ತ್ರೀಯ ಪತಿ-ಪ್ರೇವನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಲು ಅಸಾಧ್ಯ. (4) ಶಸ್ತ್ರಚಿಕಿತ್ಸೆ ವಿದ್ಯೆ: ತಾಯಿ ಗರ್ಭದಲ್ಲಿ ಮಗು ಮರಣಹೊಂದಿದಾಗ ಅದು ತಾಯಿ ಪ್ರಾಣಕ್ಕೆ ಅಪಾಯ ಕಾರಣ ಅವಳನ್ನು ಪ್ರಾಣಾಪಾಯದಿಂದ ಪಾರುಮಾಡಲು ನಾಟಿ/ಬುಡಕಟ್ಟು ವೈದ್ಯರು ಹರಿತಾದ ವಸ್ತುವಿನಿಂದ ತಾಯಿಗರ್ಭದಲ್ಲಿಯ ಮೈತ ಶಿಶುವನ್ನು ತುಂಡರಿಸಿ ಹೊರ ತೆಗೆಯುತಿದ್ದರು, ಇದು ಇಂದಿಗೂ ಕೆಲವು ಕುಗ್ರಾಮಗಳಲ್ಲಿ, ವಿಶೇಷವಾಗಿ ಬುಡಕಟ್ಟುಗಳಲ್ಲಿ ಆಚರಣೆಯಲ್ಲಿದೆ; ಕೆಲವೊಂದು ಸಲ ಅವಿವಾಹಿತ ಯುವತಿ ಅನೈತಿಕ ಸಂಬಂಧದಿಂದ ಗರ್ಭ ಧರಿಸಿದ್ದರೆ ಮರ್ಯಾದೆಗಾಗಿ ಈ ನಾಟಿ ಶಸ್ತ್ರಚಿಕಿತ್ಸೆ ವಿಧಾನ ಮೂಲಕ ಶಿಶುಹತ್ಯೆ ಮಾಡುವ ದುಷ್ಟ ಆಚರಣೆಗಳೂ ಇವೆ; ಇಂತಹ ಒಂದು ವೈಜ್ಞಾನಿಕ ವೈದಿಕೀಯ ವಿಧಾನವು ತ್ರೇತಾಯುಗದಲ್ಲಿ ಆಚರಣೆಯಲಿದ್ದದ್ದನು ಆದಿಕವಿಯು ಸೀತೆ ಮೂಲಕ ಹೀಗೆ ಉಲ್ಲೇಖಿಸಿರುವರು “ರಾಮನು ನನ್ನ ರಕ್ಷಣೆಗೆ ಬರದಿದ್ದರೆ ಗರ್ಭದಲಿ ಭ್ರೂಣ ತುಂಡರಿಸಿದಂತೆ ರಾವಣನು ನನ್ನ ಅಂಗಗಳನ್ನು ತುಂಡರಿಸುವನು”.(5) ಸಾವಿನ ರೂಪಗಳು: ಮನುಷ್ಯನಿಗೆ ವಿವಿಧ ರೂಪದಲ್ಲಿ ಸಾವು ಬಂದೆರಗುವದು, ಈ ಊಹೆಯು ಮಾನವ-ಪರಂಪರೆಯಲ್ಲಿ ಆದಿಕಾಲದಿಂದಲೂ ಜನಪದರ ನಂಬಿಕೆಯಲಿದೆ, ಅದನ್ನು ಆದಿಕವಿಯೂ ಸೀತೆಯ ನುಡಿಗಳಲ್ಲಿ ಹೀಗೆ ಉಲ್ಲೇಖಿಸಿರುವರು “ ಸಿಡಿಲು ಜೊಡಿಸಿಂಹಗಳನು ಹತ್ಯೆಗೈದಂತೆ ಮೃಗವೇಶಿಯು ನನಗಾಗಿ ವೀರ ದಶರಥಪುತ್ರರನು ಹತ್ಯೆಗೈದನೆ? ಮೃಗವೇಶದಲಿ ಬಂತೇ ಕಾಲವೇ(ಸಾವು) ನನ್ನ ಬಳಿ, ನನ್ನ ಮೂರ್ಖತನಕ್ಕೆ ದಶರಥಪುತ್ರರು ಬಲಿಯಾದರೆ?” ಸೀತೆಯಂತೆ ಮನುಷ್ಯನ ಹಠವು ಅವರ ಪ್ರಾಣಕ್ಕೆ ಕಂಠಕವಾಗುವದು.(6) ಊಹೆ ವಿಧಾನ: ಭವಿಷ್ಯದಲ್ಲಿ ಘಟನೆಗಳ ಸಂಭವಿತೆ ತಿಳಿಯಲು ಈಗಾಗಲೆ ಸಂಭವಿಸಿದ ಘಟನೆಗಳ ಆಧಾರದ ಮೇಲೆ. ಅವುಗಳನ್ನು ವಿಶ್ಲೇಷಿಸಿ ಊಹಿಸುವ/ಅಂದಾಜು ಮಾಡುವ ಸಂಶೋಧನೆ-ಅಧ್ಯಯನ ವೈಜ್ಞಾನಿಕ ವಿಧಾನದ ಬಳಕೆಯನ್ನು ಆದಿಕವಿ ವಾಲ್ಮೀಕಿಯು ಸೀತೆಯ ಶಬ್ದಗಳಲ್ಲಿ ಋಜುವಾತ ಪಡಿಸಿದ್ದು ಹೀಗೆ “ರಾಕ್ಷಸನಿಂದ ನನ್ನ ಹತ್ಯೆ ವಿಷಯವು ಜೀವಲೋಕ ಜ್ಞಾನಿ, ಚಂದ್ರತೇಜಸ್ವಿ, ಅಜಾನುಬಾಹು ರಾಮನಿಗೆ ತಿಳಿಯಲಿಲ್ಲವೇ?”. (7)ಸತ್ಕರ್ಮಗಳು ಆಪತಕಾಲದಲ್ಲಿ ಅಸಹಾಯಕವೇ?: ಮನುಷ್ಯ ಏಷ್ಟೆ ಸತ್ಕಾರ್ಯಗಳನ್ನು ಮಾಡಿದ್ದರೂ ಅವನಿಗೆ ಆಪತ್ತಕಾಲದಲ್ಲಿ ಅವುಗಳಿಂದ ರಕ್ಷಣೆ ಸಿಗದಿದ್ದರೆ ಮನ ನೊಂದವನ ಸಾಮಾಜಿಕ ಮನೋಶಾಸ್ತ್ರಸ್ಥತಿಯನ್ನು ಆದಿಕವಿಯು ಸೀತೆ ಶಬ್ದಗಳಲ್ಲಿ ಹೀಗೆ ವ್ಯಕ್ತಪಡಿಸಿರುವರು “ ನನ್ನ ಪತಿನಿಷ್ಠೆ, ಧರ್ಮನಿಷ್ಠೆ, ತಾಳ್ಮೆಗಳು ಕೃತಘ್ನನಿಗೆ ಮಾಡಿದ ಸಹಾಯ ವ್ಯರ್ಥವಾದಂತೆ ವ್ಯರ್ಥವಾಯಿತೇ? ನಿನಗೆ ಕಾಣದ ನಾನು, ನಿನ್ನ ಬಳಿ ಬಾರದ ನಾನು, ನಿನ್ನ ಧ್ಯಾನದಲಿ ಕೊರಗುವ ನನಗೆ ಧರ್ಮಾಚರಣೆ ವ್ಯರ್ಥ ನಿನಗೆ ಏಕಪತ್ನಿ ವ್ರತ ವ್ಯರ್ಥವಿದ್ದಂತೆ” ಇದು ಸೀತೆಯ ಶೋಕಿತ ಮನದ ಕ್ಷಣಿಕ ವಿಚಾರ, ಕರ್ಮಫಲ ಸಿದ್ಧಾಂತವನ್ನು ಪ್ರಶ್ನಿಸುವದು. (8) ಪತ್ನಿ ಆದರ್ಶ: ತಾನು ಕಷ್ಟದಲ್ಲಿ ಇದ್ದರೂ ಪತಿಗೆ ಸುಖಬಯಸುವ ಸ್ತ್ರೀಯ ಸಾಮಾಜಿಕ ಮನೋಶಾಸ್ತ್ರಸ್ಥಿತಿಯನ್ನು ಆದಿಕವಿಯು ಸೀತೆ ಶಬ್ದಗಳಲ್ಲಿ ಹೀಗೆ ವ್ಯಕ್ತ ಪಡಿಸಿರುವರು “ ರಾಮಾ ನೀನು ತಂದೆಯ ವಚನ ಪಾಲಿಸಿ, ವನವಾಸದಿಂದ ಅಯೋಧ್ಯೆಗೆ ಮರಳಿ ವಿಶಾಲಾಕ್ಷಿಯರೊಂದಿಗೆ (ಮರುವಿವಾಹವಾಗಿ ಪತ್ನಿಯರೊಂದಿಗೆ) ಸುಖವಾಗಿರು” ಆದರೆ ತಾನು ಪರಪುಷನಿಗೆ ಶರಣಾಗದೆ ಸಾವು ಅಪ್ಪುವ ನಿರ್ಧಾರವನ್ನು ಆದಿಕವಿಯು ಹೀಗೆ ಉಲ್ಲೆಖಿಸಿರುವರು “ಸೀತೆ ತನ್ನ ಕೂದಲ ಹೆಳಲನು ಕುತ್ತಿಗೆಗೆ ಬಿಗಿದು ಹಗ್ಗದಂತೆ ಗೊಣಗಿದಳು: ಬೇಗ ಹೋಗುವೆ ಯಮನ ಬಳಿ”. ಪತಿ ಮತ್ತು ಪತ್ನಿಯರ ಪರಸ್ಪರ ಸಹಕಾರ, ವಿಶ್ವಾಸ ಹೊಂದುವದು ಮುಖ್ಯವೆಂಬದು ಆದಿಗುರು ವಾಲ್ಮೀಕಿಯ ಸಂದೇಶವಾಗಿದೆ;ಸಾಮಾನ್ಯವಾಗಿ ಹೆಣ್ಣು ತಾನು ಬದುಕಿರಲು ಅಸಾಧ್ಯ ಎಂದು ತಿಳಿದಾಗ ಗಂಡನಿಗೆ ಮತ್ತೊಂದು ಮದುವೆ ಆಗಿ ಸುಖವಾಗಿರಲು ಆಶಿಸುವವನು, ಆದರೆ ಕೆಲವು ಕವಿಗಳು, ಭಾಷ್ಯಕಾರರು ಸೀತೆ ಯ ಮಾತನ್ನು ತಪ್ಪಾಗಿ ಅರ್ಥೈಸಿ ರಾಮನಿಗೆ ಅನೇಕ ಪತ್ನಿಯರು ಇದ್ದರೆಂದು ಮೊಂಡ ವಾದ ಮಾಡುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
