ರಾಕ್ಷಸಿಯರಿಂದ ಆಗಾಗಲೇ ಪೀಡಿತ ಸೀತೆ

By admin


ರಾಕ್ಷಸಿಯರಿಂದ ಆಗಾಗಲೇ ಪೀಡಿತ ಸೀತೆI
ಕಂಡು ಮತ್ತಷ್ಟು ಹೆದರ್ಯಾಳು ಎನ್ನ ರೂಪ ಭಾಷೆ; II
ರಾವಣನ ಇಚ್ಚಾರೂಪ ಬಲ್ಲ ಸೀತೆ,I
ಕಿರಿಚ್ಯಾಳು ನನ್ನ ಕಂಡು ರಾವಣನೆಂದು ಸೀತೆ; II
ಕೇಳಿ ಸೀತೆಯ ಕಿರುಚ್ಯಾಟ ಬಂದಾರು ಯಮನಂತೆI
ಆಯುಧಗಳೊಂದಿಗೆ ರಾಕ್ಷಸಿಯರ ಸೇನೆ; II
ಸುತ್ತುವರೆದ ನನ್ನ ಕೂರೂಪಿ ರಾಕ್ಷಸಿಯರು ಹಿಡಿದು ಕೊಲ್ಲಬಹುದು I
ಬಲದಿ ತಮ್ಮ;ಕಂಡು ನನ್ನ ಅತ್ತಿತ್ತ II
ಓಡುವದನು, ಜಿಗಿಯುವದನು ಕೊಂಬೆ ಕೊಂಬೆಗೆ ಹಾರುವದನು,I
ಅಂಜಿ ಭಯಭೀತರಾಗುವರು; II
ರಾಕ್ಷಸ ಸೇನೆ ಕರೆದು ರಾಕ್ಷಸಿಯರುI
ರಾವಣನ ಕಟ್ಟಡದಲಿ ನನ್ನ ಬಂಧಿಸುವರು; II
ಸಂಹರಿಸಿ ರಾಕ್ಷಸರನು ಎನಗೆ ಹೋಗಲಸಾಧ್ಯI
ಸಮುದ್ರದಡಕೆ, ಸುತ್ತುವರೆದ ರಾಕ್ಷಸಿಯರನು ಭೇಧಿಸಿ; II
ಬಂಧಿತನಾದರೆ ನಾ, ತಿಳಿಯದು ಸೀತೆಗೆI
ಅವಳನು ಹುಡುಕಲು ನಾ ಬಂದ ವಿಷಯ; II
ಇಲ್ಲವೇ ಕೊಲ್ಲಬಹುದು ಸೀತೆಯನು ರಾಕ್ಷಸಿಯರು,I
ವಿಫಲವಾದೀತು ರಾಮ ಸುಗ್ರೀವರ ಕಾರ್ಯ; II
ರಹಸ್ಯ ಹಾದಿ, ಸ್ಥಳದಲಿ ಇಹಳು ಸೀತೆ ಸುತ್ತುವರೆದ ರಾಕ್ಷಸಿರ,I
ಸಮುದ್ರ ಮಧ್ಯೆ; ಬಂಧಿತನಾದರೆ, II
ಹತ್ಯೆಯಾದರೆ ನಾನಿಲ್ಲಿ ಅಸಾಧ್ಯ ಈ ಕಾರ್ಯI
ರಾಮನ ಜತೆಗಾರರಿಂದ; ಯುದ್ಧ ಅನಿಶ್ಚಿತ, II
ಅನಿಶ್ಚತತೆ ನಾ ಬಯಸಲಾರೆ, ನೆರವೇರಿಸಬೇಕು ಕಾರ್ಯ ನಾ ಪ್ರಜ್ಞಾಪೂರಕ; I
ಸೀತೆಯೊಂದಿಗೆ ನಾ ಮಾತನಾಡಿದರೆ II
ಸಂಭವಿಸೀತು ತೊಂದರೆ, ಮಾತನಾಡದಿದ್ದರೆ, ತ್ಯಾಗ ಮಾಡ್ಯಾಳು ಸೀತೆ ಪ್ರಾಣ; I
ಗಡಬಿಡಿ ಕಾರ್ಯ ಕೆಡುವದು ಗಡಬಿಡಿದಿ II
ಸಂದರ್ಭ, ಸಮಯೋಚಿತ ಕಾರ್ಯ I
ಸೂರ್ಯಕಿರಣದಂತೆ ಓಡಿಸುವದು ಕತ್ತಲ; II
ಅನಿಶ್ಚಿತ ನಿರ್ಧಾರ ನೀಡದು ಫಲI
ಬಲ್ಲೆನೆಂಬ ನಟನೆ ಧೂತರು ಕೆಡಿಸುವರು ಕಾರ್ಯ; II
ಕೆಡಬಾರದು ಕಾರ್ಯ ನನ್ನಿಂದ, ಅಶಕ್ತನಾಗಬಾರದು ನಾ I
ಕೆಲಸ ನೆರವೇರಿಸದೇ ನಾ ಹಿಂದಿರುಗಬಾರದು, ಸಾಧ್ಯವೇ?II
ಅಂಜದೇ ನಂಬುವಳೆ ಸೀತೆ ಎನ್ನ ಮಾತು? ” I
ಪ್ರಶ್ನಿಸುತ ಮನದಲಿ ಮಾರ್ಗೋಪಾಯ ನುಡಿದ ಹನುಮ: II
“ಮಾಡಲು ರಾಮನ ಗುಣಗಾನ ನಾI
ಅಂಜದೆ ಸೀತೆ ಹರಿಸುವಳು ನನ್ನತ್ತ ಗಮನ, II
ಪವಿತ್ರ ಸಭ್ಯ ಶಬ್ದಗಳಿಂದ ರಾಮ ನಾಮ ಜಪಿದರೆI
ಬುದ್ಧಿವಂತಿಕೆದಿ, ಕೇಳಿ ಎನ್ನ ನಂಬುವಳು ಸೀತೆ” II
ಪ್ರಾಂಜಲ ಮನಸ್ಸಿ ಹನುಮ ನೋಡುತ ಸೀತೆಯನುI
ಯೋಜನೆ ಯೋಚಿಸುತ ಕುಳಿತ ಕೊಂಬೆಗಳ ಮಧ್ಯೆ.II
ಸುಂದರ ಕಾಂಡ

ಹನುಮಾನನ ದ್ವಂದ್ವ ಸ್ಥಿತಿಯನ್ನು ಮುಂದುವರೆಸಿ ಆದಿಕವಿ ವಾಲ್ಮೀಕಿಯು ಹೀಗೆ ವಿವರಿಸಿರುವರು: (1) ಹನುಮಾನನ ಆಲೋಚನೆ: ಸೀತೆಯನ್ನು ಕಂಡ ಹನುಮಾನನು ಹೀಗೆ ಆಲೋಚಿಸುವನು “ಈಗಾಗಲೇ ರಾಕ್ಷಸಿಯರಿಂದ ಪೀಡಿತ ಸೀತೆ ನನ್ನ ರೂಪ ಭಾಷೆ ಕಂಡು ಮತ್ತಷ್ಟು ಹೆದರಬಹುದು; ರಾವಣನ ಇಚ್ಚಾರೂಪ ಬಲ್ಲ ಸೀತೆಯು ನನ್ನ ಕಂಡು ರಾವಣನೆಂದು ಕಿರಿಚಬಹುದು, ಸೀತೆಯ ಕಿರುಚ್ಯಾಟ ಕೇಳಿ ಆಯುಧಗಳೊಂದಿಗೆ ರಾಕ್ಷಸಿಯರ ಸೇನೆ ಯಮನಂತೆ ಬರಬಹುದು, ಕೂರೂಪಿ ರಾಕ್ಷಸಿಯರು ಸುತ್ತುವರೆದ ನನ್ನನ್ನು ತಮ್ಮ ಬಲದಿಂದ ಹಿಡಿದು ಕೊಲ್ಲಬಹುದು; ನಾನು ಅತ್ತಿತ್ತ ಓಡುವದನು, ಜಿಗಿಯುವದನು, ಕೊಂಬೆ ಕೊಂಬೆಗೆ ಹಾರುವದನು ಕಂಡು ರಾಕ್ಷಸಿಯರು ಅಂಜಿ ಭಯಭೀತರಾಗುವರು ಹಾಗು ಅವರು ರಾಕ್ಷಸ ಸೇನೆ ಕರೆದು ರಾವಣನ ಕಟ್ಟಡದಲಿ ನನ್ನನು ಬಂಧಿಸುವರು; ಸುತ್ತುವರೆದ ರಾಕ್ಷಸಿಯರನು ಭೇಧಿಸಿ, ಸಂಹರಿಸಿ ಸಮುದ್ರದಡಕೆ ಮರಳಿ ಹೋಗಲು ನನಗೆ ಸಾಧ್ಯವಿಲ್ಲ”(2) ಪ್ರಜ್ಞಾಪೂರಕ ಸ್ಪಂದನೆ: ಗುಪ್ತಚಾರನು ದ್ವಂದ್ವ, ಗೊಂದಲಗಳ ಮಧ್ಯೆಯೂ ಪ್ರಜ್ಞಾಪೂರಕವಾಗಿ ಅವಸರಮಾಡದೇ ನಿಶ್ಚಿತ ನಿರ್ಧಾರ ಕೈಕೊಂಡಲ್ಲಿ ಮಾತ್ರ ಬಂದ ಕಾರ್ಯ ಯಶಸ್ವಿಯಾಗುವ ತತ್ವವನು ಆದಿಕವಿಯು ಹನುಮಾನನ ಆಲೋಚನೆ ಮಾತುಗಳಲ್ಲಿ ಹೀಗೆ ಬೋಧಿಸಿರುವನು “ ನಾನು ಬಂಧಿತನಾದರೆ ಸೀತೆಗೆ ಅವಳನು ಹುಡುಕಲು ನಾನು ಬಂದ ವಿಷಯ ತಿಳಿಯುವದಿಲ್ಲ ಇಲ್ಲವೇ ರಾಕ್ಷಸಿಯರು ಸೀತೆಯನು ಕೊಲ್ಲಬಹುದು ಇದರಿಂದ ನಾನು ಬಂದ ರಾಮ ಸುಗ್ರೀವರ ಕಾರ್ಯ ವಿಫಲವಾಗಬಹುದು,…. ಒಂದು ವೇಳೆ ಇಲ್ಲಿ ನಾನು ರಾಕ್ಷಸರಿಂದ ಬಂಧಿತನಾದರೆ, ಹತ್ಯೆಯಾದರೆ ರಾಮನ ಜತೆಗಾರರಿಂದ ಸೀತೆಯನು ಹುಡುಕುವ ಕಾರ್ಯ ಅಸಾಧ್ಯ,…. ಯುದ್ಧ ಅನಿಶ್ಚಿತ, ನಾನು ಅನಿಶ್ಚತತೆ ಬಯಸಲಾರೆ, ನಾನು ಬಂದ ಕಾರ್ಯವನ್ನು ಪ್ರಜ್ಞಾಪೂರಕವಾಗಿ ನೆರವೇರಿಸಬೇಕು; ನಾನು ಸೀತೆಯೊಂದಿಗೆ ಮಾತನಾಡಿದರೆ ತೊಂದರೆ ಸಂಭವಿಸಬಹುದು, ಒಂದು ವೇಳೆ ಮಾತನಾಡದಿದ್ದರೆ ಅವಳು ಪ್ರಾಣ ತ್ಯಾಗ ಮಾಡುವಳು,…. ಅವಸರದಿಂದ ಮಾಡಿದ ಕಾರ್ಯ ಅವಸರದ ಕೈಯಲಿ ಕೆಡುವದು, ಸಂದರ್ಭ ಸಮಯೋಚಿತ ಕಾರ್ಯ ಸೂರ್ಯಕಿರಣದಂತೆ ಕತ್ತಲನು ಓಡಿಸುವದು,…. ಅನಿಶ್ಚಿತ ನಿರ್ಧಾರ ಫಲ ನೀಡದು; ಬಲ್ಲೆನೆಂಬ ನಟನೆ ಧೂತರು ಕಾರ್ಯವನ್ನು ಕೆಡಿಸುವರು; ಈ ಕಾರ್ಯ ನನ್ನಿಂದ ಕೆಡಬಾರದು,… ನಾನು ಬುದ್ಧಿವಂತಿಕೆಯಿಂದ ಪವಿತ್ರ ಸಭ್ಯ ಶಬ್ದಗಳಿಂದ ರಾಮ ನಾಮ ಜಪಿದರೆ ಅದನ್ನು ಕೇಳಿ ಸೀತೆಯು ನನ್ನನ್ನು ನಂಬುವಳು”.(3) ಅನಿಶ್ಚಿತ ನಿರ್ಧಾರ ಫಲ ನೀಡದು; ಬಲ್ಲೆನೆಂಬ ನಟನೆ ಧೂತರು ಕಾರ್ಯವನ್ನು ಕೆಡಿಸುವರು; ತಾನು ಬಂದ ಕಾರ್ಯ ಕೆಡಬಾರದು, ತಾನು ಅಶಕ್ತನಾಗಬಾರದು ಹಾಗು ಬಂದ ಕೆಲಸ ನೆರವೇರಿಸದೇ ತಾನು ಹಿಂದಿರುಗಬಾರದು, ಅದು ಸಾಧ್ಯವೇ?” ಅಂಜದೇ ನಂಬುವಳೆ ಸೀತೆ ನನ್ನ ಮಾತು?” ಪ್ರಶ್ನಿಸುತ ಮನದಲಿಅಂದುಕೊಳ್ಳುವನು.(4) ಹೊಸ ಮಾರ್ಗೋಪಾಯದ ಚಿಂತನೆ: ಬೆರೆ ಮಾರ್ಗೋಪಾಯ ಹುಡುಕುತ ಹನುಮಾನನು “ ನಾನು ರಾಮನ ಗುಣಗಾನ ಮಾಡಬೇಕು ಅದನ್ನು ಕೇಳಿ ಸೀತೆಯು ಅಂಜದೆ ನನ್ನತ್ತ ಗಮನ ಹರಿಸುವಳು, ನಾನು ಬುದ್ಧಿವಂತಿಕೆಯಿಂದ ಪವಿತ್ರ ಸಭ್ಯ ಶಬ್ದಗಳಿಂದ ರಾಮ ನಾಮ ಜಪಿದರೆ ಅದನ್ನು ಕೇಳಿ ಸೀತೆಯು ನನ್ನನ್ನು ನಂಬುವಳು” ಹೀಗೆ ಯೋಜನೆ ಯೋಚಿಸುತ ಪ್ರಾಂಜಲ ಮನಸ್ಸಿ ಹನುಮನು ಸೀತೆಯನು ನೋಡುತ ಅಶೋಕವೃಕ್ಷದ ಕೊಂಬೆಗಳ ಮಧ್ಯೆ ಕುಳಿತನು. (5) ಪ್ರಾಂಜಲ ಮನಸ್ಸು: ಹನುಮನು ಪ್ರಾಂಜಲ ಮನಸ್ಸಿ ಸೀತೆಯನು ದೇವತೆ ರೂಪದಲ್ಲಿ ಕಂಡ ಎಂಬ ಶಬ್ದಗಳಲ್ಲಿ ಆದಿಕವಿಯು ಪರಸ್ತ್ರೀಯರನ್ನು ಕಾಣುವ ಮನ ಮತ್ತು ಕಣ್ಣುಗಳು ಪವಿತ್ರತೆಯನ್ನು ಕಾಯ್ದುಕೊಳ್ಳಬೇಕು ಹಾಗು ಗುಪ್ತಚಾರರಲ್ಲಿ ಇಂತಹ ಗುಣಗಳು ಅತೀಮುಖ್ಯವೆಂಬ ವಿಚಾರವನ್ನು ವ್ಯಕ್ತ ಪಡಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌