ಯೋಚಿಸಿ ಹಲವು ಯೋಜನೆ ಹನುಮ ಆರಂಭಿಸಿದ

By admin


ಯೋಚಿಸಿ ಹಲವು ಯೋಜನೆ ಹನುಮ ಆರಂಭಿಸಿದI
ಕೇಳಿಸುವಂತೆ ಸೀತೆಗೆ ರಾಮನ ಕಥೆ ಮಧುರಾಕ್ಷರದಿ:II
“ಕುದುರೆ, ಆನೆ, ರಥ, ಖ್ಯಾತಿಯ ಇಕ್ಷ್ವಾಕು ಕುಲದI
ವೈಭವಪೂರಿತ ರಾಜನಿದ್ದ ದಶರಥ ನಾಮ, II
ರಾಜರ್ಷಿ ಗುಣಶ್ರೇಷ್ಠೋತ್ತಮ ತಪಸ್ವಿ ಸಮI
ಚಕ್ರವರ್ತಿಕುಲಜ ಇಂದ್ರ ಸಮ ಬಲನು, II
ಸದ್ಗುಣಿ, ಪರಾಕ್ರಮಿ, ರಾಜೋತ್ತಮ,ಸಕಲರಿಗೆI
ಕಲ್ಯಾಣ ಬಯಸುವವ,ಭೂಮಂಡಲ ಖ್ಯಾತಿ ದಶರಥ; II
ಶ್ರೇಷ್ಠ ಧನುರ್ಧಾರಿ, ಪುರುಶೋತ್ತಮ, ಚಂದ್ರಮುಖI
ರಾಮ, ಹಿರಿಯ ಪುತ್ರ ದಶರಥನ, II
ಶತ್ರುನಾಶಕ, ಜನ ರಕ್ಷಕ,I
ಸಕಲ ರಕ್ಷಕ ಧರ್ಮಿಷ್ಠ ರಾಮ, II
ಮಡದಿ ಸಹೋದರನೊಂದಿಗೆ ಹೋದ ವನವಾಸಕೆI
ವೃದ್ಧ ತಂದೆ ಆಜ್ಞೆಯಂತೆ ವೀರ ರಾಮ, II
ಇಚ್ಚಾರೂಪಿ ಬಲಶಾಲಿ ರಾಕ್ಷಸ ಮೃಗಗಳI
ಬೇಟೆಯಾಡಿದ ವನವಾಸದಲಿ ರಾಮ, II
ದಂಡಕಾರಣ್ಯದ ಜನಸ್ಥಾನದಲಿ I
ವಧಿಸಿದ ಖರ ವ ದೂಷಣರ ರಾಮ, II
ಪ್ರತಿಕಾರಾರ್ಥ ರಾವಣ ಅಪಹರಿಸಿದ ಸೀತೆI
ಮಾಯದ ಚಿಂಕೆ ಭ್ರಮೆ ಕುತಂತ್ರದಿ,II
ಅರಸುತ ಅರಣ್ಯದಲಿ ಸೀತೆಯನುI
ಸ್ನೇಹಿತನಾದ ರಾಮ ಅರಣ್ಯದಲಿ ವಾನರ ಸುಗ್ರೀವನ, II
ಸ್ನೇಹ-ಒಪ್ಪಂದದಂತೆ ವಾಲಿನ ವಧಿಸಿದ ರಾಮI
ರಾಜ್ಯ ವ ಮಡದಿಯನ್ನು ಹಿಂದಿರುಗಿದ ಸುಗ್ರೀವನಿಗೆ, II
ಹೊರಟರು ಭೂಮಂಡಲ ತುಂಬ ಸೀತೆ ಹುಡುಕಲು I
ಇಚ್ಚಾರೂಪಧಾರಿ ವಾನರರು, ಸುಗ್ರೀವನ ಆಜ್ಞೆಯಂತೆ,II
ಸಂಪತಿ ಸಲಹೆಯಂತೆ ಸೀತೆ ಹುಡುಕಲು ಬಂದೆI
ನೂರು ಯೋಜನೆ ಮಹಾಸಾಗರ ಹಾರಿ ನಾ, II
ರಾಮನಿಂದ ಕೇಳಿದ ಶಾಂತ,ಸದ್ರೂಪಿI
ಸೀತೆಯನು ಕಂಡೆನಿಲ್ಲಿ ನಾ”;II
ವೀರ ರಾಮನ ಕಥೆ ಹೇಳುತ ಶಾಂತನಾದ ಹನುಮI
ಆಶ್ಚರ್ಯ ಚಕಿತಳಾದಳು ಸೀತೆ ಕೇಳಿ ರಾಮಗಾಥೆಯನು, II
ಅಸ್ತವ್ಯಸ್ತ ತಲೆಗೂದಲ, ಬೆದರಿದ, ಕ್ಲಿಷ್ಟತೆಯಲ್ಲಿದ್ದ ಸೀತೆ
ತಕ್ಷಣ ನೋಡಿದಳು ಮುಖವೆತ್ತಿ ಶಿಂಶುಪವೃಕ್ಷದತ್ತ, II
ಕೇಳಿದ ತಕ್ಷಣ ರಾಮನಗಾಥೆ ಹನುಮನಿಂದI
ರಾಮನನು ನೆನೆಯುತ ಹರುಷಿತಳಾದಳು ಸೀತೆ, II
ಸುಗ್ರೀವನ ಜಾಣ ಮಂತ್ರಿ, ವಾಯುಪುತ್ರ ಹನುಮನ ಕಂಡಳು ಸೀತೆ I
ಪರ್ವತದಲಿ ಉದಯಿಸುವ ಸೂರ್ಯನಂತೆ. II
ಸುಂದರ ಕಾಂಡ

ಸೀತೆಗೆ ತಾನು ರಾಮನ ಧೂತನೆಂದು ಮನವರಿಕೆ ಮಾಡಿಕೊಡಲು ಹನುಮಾನನು ರಾಮನ ಕಥೆಯನ್ನು ಹೇಳುವ ತಂತ್ರ ಬಳಿಸಿದನ್ನು ಆದಿಕವಿ ವಾಲ್ಮೀಕಿಯು ಹನುಮಾನನ ಜಾಣ್ಮೆಯನ್ನು ಬಣ್ಣಿಸಿರುವರು. ಹಲವು ಯೋಜನೆಗಳನ್ನು ಯೋಚಿಸಿ ಹನುಮನು ಮಧುರಾಕ್ಷರಗಳಿಂದ ರಾಮನ ಕಥೆ ಸೀತೆಗೆ ಕೇಳಿಸುವಂತೆ ಹೀಗೆ ಆರಂಭಿಸಿದನು: “ಕುದುರೆ, ಆನೆ, ರಥ, ಖ್ಯಾತಿಯ ಇಕ್ಷ್ವಾಕು ಕುಲದ ದಶರಥ ಹೆಸರಿನ ವೈಭವಪೂರಿತ ರಾಜನಿದ್ದನು, ಅವನು ರಾಜರ್ಷಿ ಗುಣಶ್ರೇಷ್ಠೋತ್ತಮ ತಪಸ್ವಿಗಳಿಗೆ, ಚಕ್ರವರ್ತಿಕುಲಜ ಇಂದ್ರನಿಗೆ ಸಮ ಬಲದವನಾಗಿದ್ದನು; ಸದ್ಗುಣಿ, ಪರಾಕ್ರಮಿ, ರಾಜೋತ್ತಮ, ಸಕಲರಿಗೆ ಕಲ್ಯಾಣ ಬಯಸುವವ ದಶರಥನು ಭೂಮಂಡಲ ಖ್ಯಾತಿ ಹೊಂದಿದ್ದನು; ಶ್ರೇಷ್ಠ ಧನುರ್ಧಾರಿ, ಪುರುಶೋತ್ತಮ, ಚಂದ್ರಮುಖ ರಾಮನು ದಶರಥನ ಹಿರಿಯ ಪುತ್ರ; ರಾಮನು ಶತ್ರುನಾಶಕ, ಜನ ರಕ್ಷಕ, ಸಕಲ ರಕ್ಷಕ ಧರ್ಮಿಷ್ಠನಾಗಿರುವನು, ವೃದ್ಧ ತಂದೆ ಆಜ್ಞೆಯಂತೆ ವೀರ ರಾಮ ಮಡದಿ ಸಹೋದರನೊಂದಿಗೆ ವನವಾಸಕೆ ಹೋದನು, ವನವಾಸದಲಿ ರಾಮನು ಇಚ್ಚಾರೂಪಿ ಬಲಶಾಲಿ ರಾಕ್ಷಸ ಮೃಗಗಳ ಬೇಟೆಯಾಡಿದನು, ರಾಮನು ದಂಡಕಾರಣ್ಯದ ಜನಸ್ಥಾನದಲಿ ರಾವಣನ ಸಹೋದರ ಖರ ಮತ್ತು ದೂಷಣರನ್ನು ವಧಿಸಿದನು, ಅದರ ಸೇಡಿಗಾಗಿ ರಾವಣನು ರಾಮನ ಪತ್ನಿ ಸೀತೆಯನು ಮಾಯದ ಚಿಂಕೆ ಭ್ರಮೆ ಕುತಂತ್ರದಿಂದ ಅಪಹರಿಸಿದನು, ಅರಣ್ಯದಲಿ ಸೀತೆಯನು ಹುಡುಕುತ ಬಂದು ರಾಮನು ವಾನರ ಸುಗ್ರೀವನ ಸ್ನೇಹಿತನಾದನು ಹಾಗು ಅವರ ಸ್ನೇಹ-ಒಪ್ಪಂದದಂತೆ ರಾಮನು ಸುಗ್ರೀವನಿಗಾಗಿ ಅವನ ಅಣ್ಣ ವಾಲಿನು ವಧಿಸಿದನು ಹಾಗು ಸುಗ್ರೀವನಿಗೆ ಕಳೆದುಕೊಂಡ ರಾಜ್ಯ ಮತ್ತು ಮಡದಿಯನ್ನು ಹಿಂದಿರುಗಿದನು, ಸುಗ್ರೀವನ ಆಜ್ಞೆಯಂತೆ ಇಚ್ಚಾರೂಪಧಾರಿ ವಾನರರು ಸೀತೆ ಹುಡುಕಲು ಭೂಮಂಡಲ ತುಂಬ ಹೊರಟರು, ದಕ್ಷಿಣದಲ್ಲಿ ನಾನು ಸಂಪತಿಯ ಸಲಹೆಯಂತೆ ಸೀತೆ ಹುಡುಕಲು ನೂರು ಯೋಜನೆಯ ಮಹಾಸಾಗರ ದಾಟಿ ಹಾರಿ ಲಂಕೆಗೆ ಬಂದೆನು ಹಾಗು ರಾಮನಿಂದ ಕೇಳಿದ ಶಾಂತ, ಸದ್ರೂಪಿ ಸೀತೆಯನು ನಾನು ಇಲ್ಲಿ ಕಂಡೆನು”. ವೀರ ರಾಮನ ಕಥೆ ಹೇಳುತ ಹನುಮನು ಶಾಂತನಾದನು, ರಾಮಗಾಥೆಯನು ಕೇಳಿ ಸೀತೆಯು ಆಶ್ಚರ್ಯಚಕಿತಳಾದಳು; ಅಸ್ತವ್ಯಸ್ತ ತಲೆಗೂದಲ, ಬೆದರಿದ, ಕ್ಲಿಷ್ಟತೆಯಲ್ಲಿದ್ದ ಸೀತೆಯು ತಕ್ಷಣ ಮುಖವೆತ್ತಿ ಶಿಂಶುಪವೃಕ್ಷದತ್ತ ನೋಡಿದಳು ಹಾಗು ರಾಮನಗಾಥೆ ಹನುಮನಿಂದ ಕೇಳಿದ ತಕ್ಷಣ ಸೀತೆಯ ರಾಮನನು ನೆನೆಯುತ ಹರುಷಿತಳಾದಳು; ಸುಗ್ರೀವನ ಜಾಣ ಮಂತ್ರಿ, ವಾಯುಪುತ್ರ ಹನುಮನನ್ನು ಸೀತೆ ಕಂಡಳು, ಪರ್ವತದಲಿ ಉದಯಿಸುವ ಸೂರ್ಯನಂತೆ. ಆದಿಕವಿ ವಾಲ್ಮೀಕಿಯು ರಾಮನ ಕಥೆ ಹೇಳುವ ಮೂಲಕ ಹನುಮಾನನು ತಾನು ರಾಮನಧೂತನಾಗಿ ಲಂಕೆಗೆ ಬಂದ ಸುದ್ಧಿಯನ್ನು ಸೀತೆಗೆ ಜಾಣತನದಿಂದ ಮುಟ್ಟಿಸಿದ ತಂತ್ರವು ‘ಕಥೆಯೋಳಗೆ ಕಥೆ’ ವಿಧಾನವು, ಅದು ವಸ್ತುಸ್ಥಿತಿ ಪ್ರಸ್ತಾವಿಸುವ ಮೂಲಕ ಮುಖ್ಯ ಕಥೆ/ಚರಿತೆಯನ್ನು ಮುಂದುವರೆಸುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌