ಸುಂದರಕಾಂಡ ರಾಮಾಯಣ ಭಾಗ-92

By admin


ಶೋಕಗಳ ಅಪ್ಪಳಿಕೆಗೆ ನೊಂದ ಸೀತೆಯI
ನುಡಿ ಕೇಳಿ ನುಡಿದನು ವಿಮ್ರತೆಯಿಂದ ಹನುಮ:II
“ರಾಮದೂತ ನಾ, ಸಂದೇಶ ತಂದಿರುವೆ ನಿನಗೆ ಓ ವೈದೇಹಿ,I
ರಾಮ ಕುಶಲವಾಗಿಹನು, ಕೇಳಿಹನು ನಿನ್ನ ಕುಶಲತೆ,II
ನಿನ್ನ ಪತಿ ಸಹೋದರ ಲಕ್ಷ್ಮಣ, ಶೋಕಿತ,I
ಶಿರಬಾಗಿ ನಮಸ್ಕರಿಸಿ ಹೇಳಿಹನು ನಿನಗೆ ಕುಶಲ”, II
ಕೇಳಿ ರಾಮ ಲಕ್ಷ್ಮಣರ ಕುಶಲತೆ, ಹನುಮಗೆ I
ನುಡಿದಳು ಪುಲಕಿತ ಅಂಗಾಂಗಳ ಸೀತೆ: II
“ಲೌಕಿಕ ಕಲ್ಯಾಣದ ಅನುಭವವಾಗುತಿದೆ ಎನಗೆI
ಜೀವ ತುಂಬಿದಂತಾಯಿತು ಶತಾಯು ಮಾನವನಿಗೆ”, II
ಕೇಳಿ ಶೋಕಿತ ಸೀತೆಯ ಉತ್ತರ I
ವಾನರನಾಯಕ ಸೀತೆ ಹತ್ತಿರ ಬಂದ, II
ಬಳಿ ಬರುತಿದ್ದಂತೆ ಹನುಮI
ರಾವಣನಿರಬೇಕೆಂದು ಸಂದೇಹಿಸಿದಳು ಸೀತೆ, II
“ಓ ಎಂತಹ ನಾಚಿಕೆಗೇಡಿ ಕೆಲಸ ಮಾಡಿದೆ, ಹೇಳಿ ಅವನಿಗೆ,I
ನಿಜವಾಗಿ ವಾನರ ರೂಪದಲಿ ಬಂದಿಹನು ರಾವಣ”, II
ಮನದಲ್ಲಿ ನೊಂದು ಅಶೋಕವೃಕ್ಷ ಕೊಂಬೆ ಬಿಟ್ಟು ಶೋಕದಿI
ನೆಲಕ್ಕೆ ಕುಸಿದು ಕುಳಿತಳು ಸೀತೆ, II
ಕೈಮುಗಿದು ನಮಸ್ಕರಿಸಿದ ಹನುಮ ಅಂಜಿದ ಶೋಕಿತ ಸೀತೆಗೆ,I
ತಲೇತ್ತಿ ನೋಡಲಿಲ್ಲ ಹನುಮನ ಅಂಜಿಕೆಯಲಿ ಸೀತೆ;II
ದೀರ್ಘ ಉಸಿರೆಳೆದು ಚಂದ್ರಮುಖಿ ಸೀತೆI
ಮೃದು ಶಬ್ದಗಳಲಿ ನುಡಿದಳು ಹನುಮಗೆ, II
“ಮಾಯಾರೂಪಿ ರಾವಣನಾಗಿದ್ದರೆ ನೀI
ಶೋಭಿಸದು, ಹೀಗೆ ಎನಗೆ ಹಿಂಸಿಸುವದು ನೀ,II
ತೋರಿಸು ಜನಸ್ಥಾನದಲಿ ತೋರಿದ ರೂಪವI
ರಾವಣನಾಗಿದ್ದರೆ, ತೋರು ನಿನ್ನ ನಿಜರೂಪ,II
ಆಥವಾ ಸುಳ್ಳಾಗಿರಬಹುದು ಎನ್ನ ಸಂದೇಹ, ಯಾಕೆಂದರೆ,I
ಕೇಳಿ ನಿನ್ನ ಸಂದೇಶ ಎನ್ನ ಮನ ಪುಲಕಿತವಾಗಿದೆ; II
ರಾಮನ ದೂತನಾಗಿದ್ದರೇ ನೀ, ಮಂಗಲಕರI
ಹೇಳು ರಾಮಗಾಥೆ ಪ್ರೀಯ ಎನಗೆ ಶ್ರೇಷ್ಠವಾನರ, II
ಬಹಳ ಹಿಂದೆ ಹೃತ ನಾ, ರಾಮದೂತ ವಾನರನI
ಕಾಣಿತಿರುವದು, ಓಹೋ, ಸುಖ ಸ್ವಪನವೇ ? II
ಕಂಡರೂ ದುಸ್ವಪದಲಿ ರಾಮ ಲಕ್ಷ್ಮಣ I
ವಿಚಲಿತವಾಗದು ಎನ್ನ ಮನ, II
ಶುಭವಾಗದು ಕಂಡರೆ ಕನಸಿನಲಿ ವಾನರ I
ಕನಸಲ್ಲವಿದು, ಶುಭ ಬಂದಿದೆ ಬಳಿ ಎನ್ನ, II
ವಿಚಲಿತವಾಗಿದೆಯೇ ಮನ? ಉನ್ಮಾದ ವಿಕಾರವೇ?I
ಅಸೀಮಿತ ಮನಸ್ಸಿನ ಮರಚಿಕೇಯೇ?II
ಮನಸ್ಸಿನ ವಿಕಾರವೂ ಅಲ್ಲ, ಹುಚ್ಚತನವೂ ಅಲ್ಲ,I
ಯಾಕೆಂದರೆ, ಎನಗೆ ಗೊತ್ತು ಎನ್ನ ವ ವಾನರ ಬಗ್ಗೆ, II
ಬಹು ರೀತಿ ಬಲ, ಅಬಲಗಳ ಇಚ್ಚಾರೂಪಿI
ರಾವಣನೇ ಈ ವಾನರ” ಎಂದಳು ಸೀತೆ;II
ಸುಂದರ ಕಾಂಡ

ಸೀತೆಯ ಪರಿಚಯ ಮತ್ತು ಮನದಿಂಗಿತ ತಿಳಿದ ಹನುಮನಿಂದ ಅವನ ಸತ್ಯ ಬಯಲು ಆದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ರಾಮದೂತ ಹನುಮಾನನ ಪರಿಚಯ: ಶೋಕಗಳ ಸರುವುಗಳ ಅಪ್ಪಳಿಕೆಗೆ ನೊಂದ ಸೀತೆಯ ಮಾತುಗಳನ್ನು ಲಾಲಿಸಿದ ಹನುಮನು ಅವಳಿಗೆ ವಿಮ್ರತೆಯಿಂದ “ ನಾನು ರಾಮದೂತ ನಿನಗೆ ರಾಮನ ಸಂದೇಶ ತಂದಿರುವೆನು; ಓ ವೈದೇಹಿ, ರಾಮ ಕುಶವಾಗಿರುವನು ಹಾಗು ಅವನು ನಿನ್ನ ಕುಶಲತೆಯನ್ನು ಕೇಳಿರುವನು; ನಿನ್ನ ಪತಿಯ ಸಹೋದರ ಲಕ್ಷ್ಮಣನು ಶೋಕದಿಂದ ಶಿರಬಾಗಿ ನಮಸ್ಕರಿಸಿ ನಿನಗೆ ಶುಭ-ಕುಶಲ ಕೋರಿರುವನು” ಎಂದು ಹನುಮಾನನು ಸೀತೆಗೆ ತನ್ನ ಪರಿಚಯ ನೀಡುತ ತಾನು ರಾಮನದೂತ ಸೀತೆಯನ್ನು ಹುಡುಕಲು ಲಂಕೆಗೆ ಬಂದ ವಿಷಯವನ್ನು ತಿಳಿಸುವನು; (2) ಸೀತೆಯ ಹರುಷ: ರಾಮ ಲಕ್ಷ್ಮಣರ ಕುಶಲತೆ ಮಾತುಗಳನ್ನು ತಿಳಿದು ಪುಲಕಿತಗೊಂಡ ಸೀತೆಯು ಹನುಮಗೆ “ ನನಗೆ ಲೌಕಿಕ ಕಲ್ಯಾಣದ ಅನುಭವವಾಗುತಿದೆ, ರಾಮನ ಸುದ್ಧಿ ತಿಳಿದು ನನಗೆ ಜೀವ ತುಂಬಿದಂತಾಯಿತು, ಶತಾಯು ಮಾನವನಿಗೆಯಾದಂತೆ” ಎಂದು ತನ್ನ ಹರುಷವನ್ನು ವ್ಯಕ್ತ ಪಡಿಸಿದಳು, ಇದೇ ಸಂದರ್ಭದಲ್ಲಿ ತ್ರೇತಾಯುಗದ ಮನುಷ್ಯರು ಶತಾಯುಷಿಗಳಾದ ಸಂಗತಿಯನ್ನು ಆದಿಕವಿ ವಾಲ್ಮೀಕಿಯು ತಿಳಿಸಿರುವರು, ಅಂದಿನ ಜನ ಶತ, ಸಹಸ್ರ ವರ್ಷಗಳ ವರೆಗೆ ಜೀವಿಸುತಿದ್ದರು ಮತ್ತು ಅವರು ದೈತಾಕಾರದವರು, ಇಚ್ಚಾರೂಪಿಗಳಿ ಆಗಿದ್ದ ವಿಷಯವನ್ನು ಆದಿಮಾನವಶಾಸ್ತ್ರಜ್ಞ ವಾಲ್ಮೀಕಿಯು ತ್ರೇತಾಯುಗದ ಮನುಷ್ಯ ಪ್ರಭೇದ ಲಕ್ಷಣಗಳನ್ನು ತಿಳಿಸಿರುವರು; (3) ನೊಂದ ಸೀತೆಯಲ್ಲಿ ಮನೆ ಮಾಡಿದ ಶಂಕೆ: ಶೋಕಿತ ಸೀತೆಯ ಉತ್ತರ ಕೇಳಿ ವಾನರ ನಾಯಕ ಹನುಮಾನನು ಅವಳ ಹತ್ತಿರ ಬಂದನು, ಆದರೆ ತನ್ನ ಬಳಿ ಬರುತ್ತಿರುವ ಹನುಮಾನನ ನೋಡಿ ಸೀತೆಯು ಅವನೂ ಬಹುರೂಪಿ ರಾವಣನಿರಬೇಕೆಂದು ಸಂದೇಹಿಸಿದಳು ಹಾಗು ಅವಳು ಮನಸ್ಸಿನಲ್ಲಿ ಅಂದುಕೊಂಡಳು “ ಓ ಎಂತಹ ನಾಚಿಕೆಗೇಡಿ ಕೆಲಸ ಮಾಡಿದೆ, ಅವನಿಗೆ ನನ್ನ ಕಥೆ ಹೇಳಿ, ರಾವಣನು ನಿಜವಾಗಿ ವಾನರ ರೂಪದಲಿ ಬಂದಿರಬೇಕು” ಹಾಗು ಸೀತೆಯು ಅಶೋಕವೃಕ್ಷ ಕೊಂಬೆ ಬಿಟ್ಟು ಶೋಕದಿಂದ ನೆಲಕ್ಕೆ ಕುಸಿದು ಕುಳಿತಳು; ರಾವಣನು ಬರುರೂಪಿ ಆಗಿದ್ದನು ಹೀಗಾಗ ಸೀತೆಗೆ ರಾವಣನ ಭಯ ಕಾಡುತಿತ್ತು ಹೀಗಾಗಿ ಅವಳು ಅಪರಿಚಿತರಿಗೆ ತನ್ನ ಪರಿಚಯ ನೀಡಿದ್ದು ತಪ್ಪೆಂದು ಒಂದು ಕ್ಷಣ ಮನದಲ್ಲಿ ನೊಂದುಕೊಳ್ಳುವಳು, ಈ ಸನ್ನಿವೇಶದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯ ಮುಖೇನ ನೊಂದ ಹೆಣ್ಣಿನ ಮನಸ್ಥಿತಿಯನ್ನು ತಿಳಿಸಿರುವರು; (4) ಹನುಮಾನ ಯಾರೆಂದು ತಿಳಿಯಲು ಸೀತೆಯ ಮರು ಪ್ರಯತ್ನ: ಅಂಜಿದ ಶೋಕಿತ ಸೀತೆಯ ಸ್ಥಿತಿ ತಿಳಿದು ಹನುಮಾನನು ಅವಳಿಗೆ ಕೈಮುಗಿದು ನಮಸ್ಕರಿಸಿದನು ಆದರೆ ಸೀತೆಯು ಅಂಜಿಕೆಯಲಿ ಹನುಮನತ್ತ ತಲೇತ್ತಿ ನೋಡಲಿಲ್ಲ; ಒಂದು ಕ್ಷಣ ದೀರ್ಘ ಉಸಿರೆಳೆದು ಚಂದ್ರಮುಖಿ ಸೀತೆಯು ಮೃದು ಶಬ್ದಗಳಲಿ ಹನುಮಗೆ “ನೀನು ಮಾಯಾರೂಪಿ ರಾವಣನಾಗಿದ್ದರೆ ಅದು ಹೀಗೆ ನನಗೆ ಹಿಂಸಿಸುವದು ನಿನಗೆ ಶೋಭಿಸದು, ನೀನು ರಾವಣನಾಗಿದ್ದರೆ ಜನಸ್ಥಾನದಲಿ ತೋರಿಸಿದ ನಿನ್ನ ನಿಜರೂಪವನ್ನು ತೋರಿಸು ಆದರೆ ನಿನ್ನ ಸಂದೇಶ ಕೇಳಿ ನನ್ನ ಮನ ಪುಲಕಿತವಾಗಿದ್ದರಿಂದ ನಿನ್ನ ಮೇಲಿನ ನನ್ನ ಸಂದೇಹ ಸುಳ್ಳಾಗಿರಬಹುದು ಯಾಕೆಂದರೆ ಓ ಶ್ರೇಷ್ಠವಾನರ, ನನಗೆ ರಾಮನಗಾಥೆ ಪ್ರೀಯವಾದದು ನೀನು ರಾಮನ ದೂತನಾಗಿದ್ದರೇ ಮಂಗಲಕರ ರಾಮಗಾಥೆಯನ್ನು ಹೇಳು; ಬಹಳ ಹಿಂದೆ ರಾವಣನಿಂದ ಅಪಹೃತನಾದ ನಾನು ರಾಮದೂತ ವಾನರನನ್ನು ಕಾಣತಿರುವದು ನನ್ನ ಸುಖ ಸ್ವಪನವೇ ? ದುಸ್ವಪದಲಿ ರಾಮ ಲಕ್ಷ್ಮಣ ಕಂಡರೂ ನನ್ನ ಮನ ವಿಚಲಿತವಾಗದು; ಕನಸಿನಲಿ ವಾನರ ಕಂಡರೆ ಶುಭವಾಗದು ಎಂಬ ನಂಬಿಕೆಯಿದೆ, ನಾನು ಸಮಕ್ಷಮ ವಾನರನನ್ನು ನೋಡುತ್ತಿರುವದು ಕನಸಲ್ಲ ಅದು ನನ್ನ ಬಳಿ ಬಂದ ಶುಭ; ನನ್ನ ಮನ ವಿಚಲಿತವಾಗಿದೆಯೇ? ಉನ್ಮಾದದ ವಿಕಾರವೇ? ಅದು ಅಸೀಮಿತ ಮನಸ್ಸಿನ ಮರಚಿಕೇಯೇ? ಇದು ನನ್ನ ಮನಸ್ಸಿನ ವಿಕಾರವೂ ಅಲ್ಲ, ಹುಚ್ಚತನವೂ ಅಲ್ಲ ಯಾಕೆಂದರೆ ನನಗೆ ನನ್ನ ಮತ್ತು ವಾನರ ಬಗ್ಗೆ ಗೊತ್ತು, ಬಹು ರೀತಿ ಬಲ, ಅಬಲಗಳ ಇಚ್ಚಾರೂಪಿ ರಾವಣನೇ ನೀನು ವಾನರಾ”. ಒಟ್ಟಿನಲ್ಲಿ, ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಎಂದಿನಂತೆ ಉಪಮಾಲಂಕಾರ ಬಳಿಸಿ ಹನುಮಾನ ಸೀತೆಯ ಮಧ್ಯೆ ನಡೆದ ಸಂವಾದದಲ್ಲಿ ಒಂದೆಡೆ ‘ವಾನರನೂ ರಾವಣನಾಗಿರಬೇಕೆಂಬ ನೊಂದ ಸೀತೆಯ ಅಸ್ಥಿರ ಮನಸ್ಸಿನ ಸಂದೇಹ’ ಮರುಕ್ಷಣ ‘ರಾಮಗಾಥೆ ಹೇಳಿದ ವಾನರ ರಾವಣನೆಂದು ಊಹಿಸಿದ್ದ ತನ್ನ ಮನಸ್ಸಿನ ಭ್ರಮೆ’ಎಂಬ ಸಮಾದಾನ ಹೊಂದುವ ಸೀತೆಯ ಮನೋಸ್ಥಿತಿಯನ್ನು ಹಾಗು ಮತ್ತೊಂದೆಡೆ ಸೀತೆಗೆ ಮನವರಿಕೆ ಮಾಡಿಕೊಡುವ ಹನುಮಾನನ ಯತ್ನಗಳನ್ನು ವಿವರಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌