
ಕಂಡು ಸೀತೆಯ ಮಾನಸಿಕ ಅಸ್ಥಿರತೆI
ಕರ್ಣಹಿತ ಶಬ್ದಗಳ ನುಡಿದ ಹನುಮ ಸೀತೆಗೆ: II
“ರಾಮನು ಸೂರ್ಯ-ತೇಜಿ,ಚಂದ್ರ-ಉಲ್ಲಾಸ, I
ಸಂಪನ್ನ, ಶೂರ, ಸತ್ಯವಾದಿ, ಸುದ್ರೂಪಿ, ಸುದೈವಿ; II
ರಾಮನು ಸಮಯೋಚಿತ ಕೋಪಿಷ್ಟ, ಶ್ರೇಷ್ಠ ಮಹಾರಥಿ,I
ಸಕಲರಿಗೂ ನೆರಳು ನೀಡುವ ಮಾಹಾತ್ಮಾ, II
ಭ್ರಮೆ-ಚಿಂಕೆ ತೋರಿ ನಿನ್ನ ಅಪಹರಿಸಿದ ರಾವಣI
ದುಷ್ಯಕೃತ್ಯಕ್ಕೆ ರಾಮನಿಂದ ಪಡೆವನು ಶಿಕ್ಷೆ; II
ಕೋಪ-ಕಿಡಿ ಸಿಡಿಸುವ ಹೊಳಪಿನ ಬಾಣಗಳI
ರಾಮನ ಸಂದೇಶ ನೀಡಲು ನಿನಗೆ ಬಂದಿರುವೆ ನಾ; II
ನೊಂದಿರುವನು ರಾಮ ನಿನ್ನ ವಿರಹದಲಿI
ಕೇಳಲು ನಿನ್ನ ಕುಶಲತೆ ಎನ್ನ ಕಳಿಸಿಹನು; II
ಓ ರಾಮನ ಸಖಿಯೇ, ಲಕ್ಷ್ಮಣ, ಸುಗ್ರೀವI
ರಾಮಪ್ರೀಯರು ಕೇಳಿಹರು ನಿನ್ನ ಕುಶಲತೆ; II
ಓ ಸೀತೆ ನೀನು ಸುದೈವಿ, I
ಬದುಕಿರುವಿ ರಾಕ್ಷಸಿಯರ ಮಧ್ಯೆ, II
ಓ ಸೀತಾ, ಕೆಲವೇ ದಿನಗಳಲಿ ನೀ ಕಾಣುವೆI
ರಾಮ, ಲಕ್ಷ್ಮಣ ವ ಸುಗ್ರೀವ ವಾನರ ಸೈನ್ಯ ಮಧ್ಯೆ; II
ಸುಗ್ರೀವನ ದಂಡನಾಯಕ ಹನುಮ ನಾI
ಸಮುದ್ರ ಹಾರಿ ಲಂಕೆಗೆ ಬಂದಿರುವೆ ನಾ; II
ನಂಬಿ ಎನ್ನ ಬಲ, ರಾವಣನ ತುಳಿದುI
ನೋಡಲು ನಿನ್ನ ಬಂದಿರುವೆ ನಾ,II
ಓ ಸೀತಾದೇವಿ, ರಾವಣನಲ್ಲ ನಾ, ತೊರೆದು ಮನದI
ಶಂಕೆ, ನಂಬು ನನ್ನ , ಮಾತುಗಳ ನನ್ನ”.II
ಸುಂದರ ಕಾಂಡ
ಸೀತೆಯ ಪರಿಚಯ ಮತ್ತು ಮನದಿಂಗಿತ ತಿಳಿದ ಹನುಮನಿಂದ ಅವನ ಸತ್ಯ ಬಯಲು ಆದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು: ಸೀತೆಯ ಮಾನಸಿಕ ಅಸ್ಥಿರತೆಯ ಮಾತುಗಳನ್ನು ಕೇಳಿ ಹನುಮನು ಸೀತೆಗೆ ಕರ್ಣಹಿತ ಶಬ್ದಗಳಿಂದ ಮನವರಿಕೆಯ ಮಾತುಗಳನ್ನು “ರಾಮನು ಸೂರ್ಯ-ತೇಜಿ, ಚಂದ್ರ-ಉಲ್ಲಾಸ, ಸಂಪನ್ನ, ಶೂರ, ಸತ್ಯವಾದಿ, ಸುದ್ರೂಪಿ, ಮತ್ತು ಸುದೈವಿ; ಅದರಂತೆ ರಾಮನು ಸಮಯೋಚಿತ ಕೋಪಿಷ್ಟ, ಶ್ರೇಷ್ಠ ಮಹಾರಥಿ, ಸಕಲರಿಗೂ ನೆರಳು ನೀಡುವ ಮಾಹಾತ್ಮಾನು”,ಎಂದು ಹನುಮಾನನು ರಾಮನ ಗುಣಗಾನ ಮಾಡಿದನು, ಮತ್ತೆ ಮುಂದುವರೆದು “ಭ್ರಮೆ-ಚಿಂಕೆ ತೋರಿಸಿ ನಿನ್ನ ಅಪಹರಿಸಿದ ರಾವಣನ ದುಷ್ಯಕೃತ್ಯಕ್ಕೆ ರಾಮನು ಅವನಿಗೆ ಶಿಕ್ಷೆ ನೀಡುವನು; ಕೋಪ-ಕಿಡಿ ಸೀಡಿಸುವ ಹೊಳಪಿನ ಬಾಣಗಳ ರಾಮನ ಸಂದೇಶ ನಿನಗೆ ನೀಡಲು ನಾನು ಬಂದಿರುವೆನು; ನಿನ್ನಂತೆ ರಾಮನು ನಿನ್ನ ವಿರಹದಲಿ ನೊಂದಿರುವನು ಹಾಗು ನಿನ್ನ ಕುಶಲತೆಯನ್ನು ಕೇಳಲು ನನ್ನನ್ನು ನಿನ್ನ ಬಳಿ ಕಳಿಸಿರುವನು; ಓ ರಾಮನ ಸಖಿಯೇ, ಲಕ್ಷ್ಮಣ ಮತ್ತು ಸುಗ್ರೀವರು ರಾಮಪ್ರೀಯರು, ಅವರೂ ನಿನ್ನ ಕುಶಲತೆ ಕೇಳಿರುವರು; ಓ ಸೀತೆ ನೀನು ಸುದೈವಿ, ಈ ರಾಕ್ಷಸಿಯರ ಮಧ್ಯೆ ಬದುಕಿರುವಿ; ಓ ಸೀತಾ, ರಾಮ, ಲಕ್ಷ್ಮಣ ಮತ್ತು ಸುಗ್ರೀವರ ವಾನರ ಸೈನ್ಯದೊಂದಿಗೆ ಬರುವದನ್ನು ಕೆಲವೇ ದಿನಗಳಲಿ ನೀನು ಕಾಣುವಿ; ನಾನು ಸುಗ್ರೀವನ ದಂಡನಾಯಕ, ನನ್ನ ಹೆಸರು ಹನುಮಾನ; ನಾನು ನಿನ್ನನ್ನು ಹುಡುಕುತ ಸಮುದ್ರ ಹಾರಿ ಲಂಕೆಗೆ ಬಂದಿರುವೆನು, ನನ್ನ ಬಲ ನಂಬಿ ರಾವಣನ ತುಳಿದು ನಿನ್ನ ಹುಡುಕಲು ಬಂದಿರುವೆನು; ಓ ಸೀತಾದೇವಿ, ನಾನು ರಾವಣ ಅಲ್ಲ, ನಿನ್ನ ಮನದ ಶಂಕೆ ತೊರೆದು, ನನ್ನ ಮತ್ತು ನನ್ನ ಮಾತುಗಳನ್ನು ನಂಬು” ಎಂದು ಹೇಳುತ ತನ್ನ ಮೇಲೆ ನಂಬಿಕೆ ಇಡಲು ಹನುಮಾನನು ಸೀತೆಯನ್ನು ಕೋರುವನು. ಎಲ್ಲದರ ಮೆಲೆ ನಂಬಿಕೆ ಕಳೆದು ಕೊಂಡವರನ್ನು ನಂಬಿಸುವದು ಕಷ್ಟದ ಕೆಲಸ, ಆ ಕೆಲಸವನ್ನು ಹನುಮಾನನು ಜಾಣ್ಮೆಯಿಂದ ಮಾಡಿದ ಮನವರಿಕೆ ರೀತಿಯನ್ನು ಆದಿಕವಿ ವಾಲ್ಮೀಕಿಯು ಈ ಸಂದರ್ಭ ಮುಖೇನ ಜಗಕ್ಕೆ ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
