ಸುಂದರಕಾಂಡ ರಾಮಯಣ ಭಾಗ-95

By admin


ಓ ಸೀತಾದೇವಿ, ರಾಮನಲಿ ಕುದಿಯುತ್ತಿದೆ ನಿನ್ನI
ವಿರಹ ಜ್ವಾಲೆ ಜ್ವಾಲಾಮುಖಿಯಂತೆ;II
ಜ್ವಾಲೆ ಮನೆ ಸುಡುವಂತೆ ರಾಮನI
ಸುಡುತ್ತಿದೆ ನಿನ್ನ ನೆನಪು-ಶೋಕ ಜ್ವಾಲೆ; II
ಭೂ-ಕಂಪನದಿ ಪರ್ವತ ನಲುಗಿದಂತೆI
ರಾಮ ನಲಗುತ್ತಿಹನು ನಿನ್ನ ಶೋಕದಲಿ; II
ಓ ಸೀತೆ,ನಿನ್ನ ಅರಸುತ್ತಿಹನು ರಾಮI
ಅರಣ್ಯ, ನದಿ ಜಲಪಾತಗಳಲ್ಲಿ; II
ಓ ಸೀತೆ, ರಾವಣ ವ ಅವನ ಸೈನ್ಯ ಸಂಹರಿಸಿI
ಹಿಂಪಡೆಯುವನು ರಾಮ ನಿನ್ನ ಶೀಘ್ರ; II
ಸ್ನೇಹ-ಒಪ್ಪಂದದಂತೆ ವಧಿಸಿದ ರಾಮ ವಾಲಿನI
ನಿನ್ನ ಹುಡುಕುವ ಹೊಣೆ ಸುಗ್ರೀವನ;II
ರಾಮ ಸುಗ್ರೀವರ ದೂತ ನಾ ಹನುಮಾನ I
ಹುಡುಕಲು ನಿನ್ನ ಬಂದಿರುವೆ ನಾನಿಲ್ಲಿ, ಅವರಾಜ್ಞೆಯಂತೆ; II
ಕಳಿಸಿಹನು ಬಲಶಾಲಿ ಸುಗ್ರೀವನು ವಾನರ ಸೈನ್ಯ I
ಭೂಮಂಡಲದೆಲ್ಲಕಡೆ ಹುಡುಕಲು ನಿನ್ನ;II
ವಾಲಿ ಪುತ್ರ ಅಂಗದನ ನೇತೃತ್ವದಲಿI
ಬಂದೆವು ದಕ್ಷಿಣದತ್ತ ಹುಡುಕಲು ನಿನ್ನ;II
ಹಗಲಿರುಳು ಹುಡುಕಿದೆವು ನಿನ್ನI
ವಿಂಧ್ಯ ಪರ್ವತ ಸುತ್ತುಮುತ್ತಣ ಪ್ರದೇಶಗಳಲಿ;II
ನೀ ಕಾಣದಾಗ ಹೆದರ ಸುಗ್ರೀವನಿಗೆI
ಪ್ರಾಣ ತ್ಯಾಗಮಾಡಲು ಇಚ್ಚಿಸಿದೆವು ನಾವು; II
ವೀರ ಗರುಡಪಕ್ಷಿ ಬಂತು ನಮ್ಮ ಹತ್ತಿರI
ಕೇಳಿ ಜಟಾಯು ಹತ್ಯೆ ಚರ್ಚೆ; II
ತಾನು ಜಟಾಯುನ ಸಹೋದರ ಸಂಪತಿಯೆಂದುI
ಪರಿಚಯಿಸಿಕೊಂಡತು, ನುಡಿಯಿತು ನಮಗೆ:II
‘ ಓ ವಾನರರೇ, ಹೇಗೆ, ಎಲ್ಲಿ,ಯಾರುI
ಹತ್ಯೆ ಮಾಡಿದರು ನನ್ನ ತಮ್ಮ ಜಟಾಯುನ’ II
ಜನಸ್ಥಾನದಲಿ ರಾವಣನಿಂದ ಹತ್ಯೆಯಾದI
ಜಟಾಯು ಪ್ರಸಂಗ ವಿವರಿಸಿದ ಅಂಗದ ಸಂಪತಿಗೆ;II
ಕೇಳಿ ಶೋಕಿಸಿದ ತಮ್ಮನ ಹತ್ಯೆ,I
ರಾವಣ ಲಂಕೆಗೆ ನಿನ್ನೊಯ್ದ ಸುದ್ಧಿ ತಿಳಿಸಿದ ಸಂಪತಿ; II
ಹರುಷ ಪಟ್ಟೆವು ತಿಳಿದು ನಿನ್ನ ಸುದ್ಧಿI
ಅಂಗದನೊಂದಿಗೆ ಬಂದೆವು ಮಹಾಸಾಗರ ದಡಕ್ಕೆ; II
ಭಯಭೀತರಾದೆವು ಮಹಾಸಾಗರ ಕಂಡುI
ಮಹಾಸಾಗರ ದಾಟುವ ಸಮಸ್ಯೆ ನಮ್ಮನು ಕಾಡಿತು; II
ನಿವಾರಿಸಿ ವಾನರರ ಸಮುದ್ರ ದಾಟುವ ಭಯ I
ಹಾರಿ ನೂರು ಯೋಜನೆ ಸಮುದ್ರ ದಾಟಿ ಬಂದೆನು ಲಂಕೆಗೆ; II
ಲಂಕೆ ಪ್ರವೇಶಿಸಿ ರಾತ್ರಿ ಕಂಡೆನು ರಾವಣ I
ಕಂಡೆನು ನೀ ಶೋಕಿಸು ದೃಶ್ಯ ಅಶೋಕ ವನದಲಿ;II
ಓ ನಿರ್ದೋಷಿ ರಾಜಕುಮಾರಿ, ಹೇಳಿರುವೆ ಎಲ್ಲವನು,I
ರಾಮನ ದೂತ ನಾ, ನನ್ನೊಂದಿಗೆ ಮಾತನಾಡು; II
ಓ ರಾಜಕುಮಾರಿ, ಬಂದಿರುವೆ ರಾಮನ ಪರವಾಗಿ ನಾ,I
ಸುಗ್ರಿವನ ಮಂತ್ರಿ, ವಾಯುಸುತ ಹನುಮ ನಾ; II
ಧನುರ್ಧಾರಿ ರಾಮ ಲಕ್ಷ್ಮಣರು ಕುಶಲ,I
ಬಂದಿರುವೆ ಸಮುದ್ರ ದಾಟಿ ನಿನ್ನ ಕಲ್ಯಾಣಕ್ಕಾಗಿ ನಾ;II
ಕಂಡಿರುವೆ ನಿನ್ನ ಸುದೈವದಿ ನಾI
ವ್ಯರ್ಥವಾಗಲಿಲ್ಲ ಸಮುದ್ರ ದಾಟಿದ ನನ್ನ ಪ್ರಯತ್ನ;II
ರಾಜಾಕೇಸರಿ ಎನ್ನ ತಂದೆ, ಅಂಜನಿ ಎನ್ನ ತಾಯಿ I
ವಾಯುದೇವನ ಕೃಪೆ-ವರದಾನದಿ ಜನಿಸಿದೆ ಅಂಜನಿ ಗರ್ಭದಿ; II
ಓ ಸೀತೆ, ತಿಳಿಸಿದೆ ನಿನಗೆ ರಾಮನ ಸ್ವಭಾವ,I
ಶೀಘ್ರದಲಿ ರಾಮ ಬರುವನು ನಿನಗಾಗಿ, ನನ್ನ ನಂಬು”;II
ವಿಶ್ವಾಸವಿಟ್ಟಳು ಸುಳಿವು ತಿಳಿದು, ಶೋಕ ತೊರೆದಳು ಸೀತೆI
ಕೇಳಿ ರಾಮ ದೂತ ಹನುಮನ ಮಾತು; II
ಅಪೂರ್ವ ಹರುಷದಿ ಸುರಿಸಿದಳು ಆನಂದ ಬಾಷ್ಪI
ಗ್ರಹಣ ಬಿಟ್ಟ ಚಂದ್ರನಂತೆ ಕಂಡಳು ವಿಶಾಲಾಕ್ಷಿ ಸೀತೆ: II
ಕಂಡು ಸೀತೆಯ ಸಂತೋಷ ಹನುಮ ನುಡಿದನು:I
“ಓ ಸೀತಾದೇವಿ, ನಾನು ಹಿಂದಿರುಗುವೆ, II
ಹೇಳಿದ್ದು ನಾ, ಮನವರಿಕೆ ಮಾಡಿಕೋI
ನಾನೇನು ಮಾಡಲಿ ನಿಮಗಾಗಿ, ಹೇಳಿ”.II
ಸುಂದರ ಕಾಂಡ

ಹನುಮಾನನ ಬಗ್ಗೆ ಸೀತೆಯಲ್ಲಿ ಮೂಡಿದ ಶಂಕೆಯನ್ನು ಹನುಮಾನ ಹೋಗಲಾಡಿಸಿದ ಪರಿಯನ್ನು ಮುಂದುವರೆಸಿ ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು:(1) ಹನುಮಾನನ ಮುಂದುವರೆದ ಪ್ರಯತ್ನ: ಹನುಮಾನನು ತಾನು ರಾಮದೂತನೆಂದು ಋಜು ಪಡಿಸಲು ಅವಳಿಗೆ ಹೀಗೆ ಹೇಳಿದನು: “ಓ ಸೀತೆ, ಅರಣ್ಯ, ನದಿ ಜಲಪಾತಗಳಲ್ಲಿ ನಿನ್ನನ್ನು ರಾಮನು ಹುಡುಕುತ್ತಿರುವನು; ಓ ಸೀತೆ, ರಾವಣ ಮತ್ತು ಅವನ ಸೈನ್ಯವನ್ನು ಸಂಹರಿಸಿ ರಾಮನು ನಿನ್ನನ್ನು ಶೀಘ್ರ ಹಿಂಪಡೆಯುವನು; ಸ್ನೇಹ-ಒಪ್ಪಂದದಂತೆ ರಾಮ ವಾಲಿನ್ನು ವಧಿಸಿದನು, ನಿನ್ನ ಹುಡುಕುವ ಹೊಣೆ ಸುಗ್ರೀವನದು; ನಾನು ರಾಮ ಸುಗ್ರೀವರ ದೂತ ಹನುಮಾನ, ಅವರಾಜ್ಞೆಯಂತೆ ನಾನು ನಿನ್ನ ಹುಡುಕಲು ಲಂಕೆಗೆ ಬಂದಿರುವೆ; ಭೂಮಂಡಲದೆಲ್ಲಕಡೆ ಹುಡುಕಲು ನಿನ್ನ ಬಲಶಾಲಿ ಸುಗ್ರೀವನು ತನ್ನ ವಾನರ ಸೈನ್ಯ ಕಳಿಸಿರುವನು, ವಾಲಿ ಪುತ್ರ ಅಂಗದನ ನೇತೃತ್ವದಲಿ ನಿನ್ನನ್ನು ಹುಡುಕಲು ನಾವು ದಕ್ಷಿಣದತ್ತ ಬಂದೆವು, ವಿಂಧ್ಯ ಪರ್ವತ ಸುತ್ತುಮುತ್ತಣ ಪ್ರದೇಶಗಳಲಿ ಹಗಲಿರುಳು ನಿನ್ನ ಹುಡುಕಿದೆವು; ನೀನು ಎಲ್ಲೂ ಕಾಣದಾಗ ನಾವು ಸುಗ್ರೀವನಿಗೆ ಹೆದರಿ ಪ್ರಾಣ ತ್ಯಾಗಮಾಡಲು ಇಚ್ಚಿಸಿದೆವು ಆದರೆ ಅದೇವೇಳೆ ನಮ್ಮನ್ನು ಭಕ್ಷಿಸಲು ವೀರ ಗರುಡಪಕ್ಷಿ ನಮ್ಮ ಹತ್ತಿರ ಬಂತು ಹಾಗು ನಾವು ಮಾಡುತಿದ್ದ ಜಟಾಯುನ ಹತ್ಯೆ ಚರ್ಚೆಯನ್ನು ಕೇಳಿ ತಾನು ಜಟಾಯುನ ಸಹೋದರ ಸಂಪತಿಯೆಂದು ನಮಗೆ ಪರಿಚಯಿಸಿಕೊಂಡತು ಮತ್ತು ನಮ್ಮನ್ನು ಪ್ರಶ್ನಿಸಿತು ʻಓ ವಾನರರೇ, ಹೇಗೆ, ಎಲ್ಲಿ,ಯಾರು ಹತ್ಯೆ ಮಾಡಿದರು ನನ್ನ ತಮ್ಮ ಜಟಾಯುನ?ʼ, ಅಂಗದನು ಸಂಪತಿಗೆ ಜನಸ್ಥಾನದಲಿ ರಾವಣನಿಂದ ಹತ್ಯೆಯಾದ ಜಟಾಯು ಪ್ರಸಂಗವನ್ನು ವಿವರಿಸಿದನು; ಸಂಪತಿಯು ತಮ್ಮನ ಹತ್ಯೆವಿಷಯ ಕೇಳಿ ಶೋಕಿಸಿದನು ಹಾಗು ರಾವಣನು ಲಂಕೆಗೆ ನಿನ್ನೊಯ್ದ ಸುದ್ಧಿ ತಿಳಿಸಿದನು; ನಿನ್ನ ಸುದ್ಧಿ ತಿಳಿದು ನಾವು ಹರುಷ ಪಟ್ಟೆವು ಮತ್ತು ತಕ್ಷಣ ಅಂಗದನೊಂದಿಗೆ ಮಹಾಸಾಗರ ದಡಕ್ಕೆ ಬಂದೆವು; ಮಹಾಸಾಗರ ಕಂಡು ನಾವು ಭಯಭೀತರಾದೆವು ಹಾಗು ಮಹಾಸಾಗರ ದಾಟುವ ಸಮಸ್ಯೆ ನಮ್ಮನು ಕಾಡಿತು; ನಾನು ನನ್ನ ಸಾಮರ್ಥ್ಯ ಅರಿತು, ವಾನರರ ಸಮುದ್ರ ದಾಟುವ ಭಯ ನಿವಾರಿಸಿ, ಹಾರಿ ನೂರು ಯೋಜನೆ ಸಮುದ್ರ ದಾಟಿ ಲಂಕೆಗೆ ಬಂದೆನು; ರಾತ್ರಿಯಲಿ ಲಂಕೆ ಪ್ರವೇಶಿಸಿ ನಾನು ರಾವಣ ಮತ್ತು ಅಶೋಕ ವನದಲಿ ನೀನು ಶೋಕಿಸು ದೃಶ್ಯ ಕಂಡೆನು; ಓ ನಿರ್ದೋಷಿ ರಾಜಕುಮಾರಿ, ನಾನು ರಾಮನ ದೂತನಾಗಿ ನಿನಗೆ ಎಲ್ಲವನ್ನೂ ಹೇಳಿರುವೆ ಇನ್ನಾದರೂ ನಿಸ್ಸಂದೇಹವಾಗಿ ನನ್ನೊಂದಿಗೆ ಮಾತನಾಡು; ಓ ರಾಜಕುಮಾರಿ, ರಾಮನ ಪರವಾಗಿ ನಾನು ಇಲ್ಲಿ ಬಂದಿರುವೆನು, ನಾನು ಸುಗ್ರಿವನ ಮಂತ್ರಿ, ವಾಯುಸುತ ಹನುಮಾನ; ಧನುರ್ಧಾರಿ ರಾಮ ಲಕ್ಷ್ಮಣರ ಕುಶಲತೆ ತಿಳಿಸಲು ನಿನ್ನ ಕಲ್ಯಾಣಕ್ಕಾಗಿ ನಾನು ಸಮುದ್ರ ದಾಟಿ ಬಂದಿರುವೆನು; ವ್ಯರ್ಥವಾಗಲಿಲ್ಲ ಸಮುದ್ರ ದಾಟಿದ ನನ್ನ ಪ್ರಯತ್ನ, ಸುದೈವದಿಂದ ನಾನು ನಿನ್ನನ್ನು ಇಲ್ಲಿ ಕಂಡಿರುವೆನು; ರಾಜಾಕೇಸರಿ ನನ್ನ ತಂದೆ, ಅಂಜನಿ ನನ್ನ ತಾಯಿ, ವಾಯುದೇವನ ಕೃಪೆ-ವರದಾನದಿಂದ ನಾನು ಅಂಜನಿ ಗರ್ಭದಲ್ಲಿ ಜನಿಸಿದೆನು; ಓ ಸೀತೆ, ನಿನಗೆ ರಾಮನ ಸ್ವಭಾವ ನಾನು ತಿಳಿಸಿದೆನು ಶೀಘ್ರದಲಿ ರಾಮನು ನಿನಗಾಗಿ ಬರುವನು, ನನ್ನ ನಂಬು”.ಹನುಮಾನನು ರಾಮನ ಕಥೆಯೊಂದಿನ ತನ್ನ ಕಥೆಯನ್ನು ಸೀತೆಗೆ ಹೇಳುವನು; (2) ಸೀತೆಗೆ ಹನುಮಾನನಲ್ಲಿ ವಿಶ್ವಾ ಮೂಡಿತು:
ಸೀತೆಯು ರಾಮ ದೂತ ಹನುಮನ ಮಾತು ಕೇಳಿ ಸುಳಿವು ತಿಳಿದು ಹನುಮನಲ್ಲಿ ವಿಶ್ವಾಸವಿಟ್ಟಳು ಹಾಗು ತನ್ನ ಶೋಕ ತೊರೆದಳು; ಅಪೂರ್ವ ಹರುಷದಿಂದ ಸೀತೆಯು ಆನಂದ ಬಾಷ್ಪ ಸುರಿಸಿದಳು ಮತ್ತು ವಿಶಾಲಾಕ್ಷಿ ಸೀತೆಯು ಗ್ರಹಣ ಬಿಟ್ಟ ಚಂದ್ರನಂತೆ ಕಂಡಳು; ಸೀತೆಯ ಸಂತೋಷ ಕಂಡು ಹನುಮ ಅವಳಲ್ಲಿ ಹೀಗೆ ಅರುಹಿದನು ”ಓ ಸೀತಾದೇವಿ, ನಾನು ರಾಮನತ್ತ ಹಿಂದಿರುಗುವೆ, ನಾನು ಹೇಳಿದನ್ನು ಮನವರಿಕೆ ಮಾಡಿಕೋ ಹಾಗು ಈಗ ನಾನೇನು ಮಾಡಲಿ ನಿಮಗಾಗಿ, ಹೇಳಿ”. ಆದಿಕವಿ ವಾಲ್ಮೀಕಿಯು ಹನುಮಾನನು ಸೀತೆಯ ವಿಶ್ವಾಸ ಗೆದ್ದಲು ಯಶಸ್ವಿಯಾಗಿ ಅವಳಿಂದ ಮುಂದಿನ ಕಾರ್ಯದ ಅಪ್ಪಣೆ ಕೇಳಿದ ಸ್ವಭಾವಮೂಲಕ ಅವನ ಸ್ವಾಮಿನಿಷ್ಠೆಯನ್ನು ವಿವರಿಸಿರುವರು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌