
ಗಳಿಸಿ ಸೀತೆಯ ವಿಶ್ವಾಸ ಹನುಮI
ವಿನಮ್ರತೆದಿ ಸೀತೆಗೆ ನುಡಿದನು: “ ಮಹಾಭಾಗ್ಯ ನನ್ನದು, II
ಆಗಿರುವೆ ರಾಮನ ದೂತ ರಾಮ ನಾಮ ಮುದ್ರೆಯ ಉಂಗುರವಿದು,I
ಓ ಸೀತೆ, ಗಳಿಸಲು ನಿನ್ನ ನಂಬಿಕೆ II
ಉಂಗುರ ಕೊಟ್ಟಿಹನು ಎನಗೆ ರಾಮ, ನಿನಗಾಗಿ ,I
ನೋಡು, ಸಮಾಧಾನಳಾಗು, ಮುಕ್ತಳಾಗು ಶೋಕದಿ”;II
ಆಕರ್ಷಣಿಯ ಮುಖಗೆಂಪು, ಶ್ವೇತ-ವಿಶಾಲಾಕ್ಷI
ಹೊಳೆದವು ಗ್ರಹಬಿಟ್ಟ ಚಂದ್ರನಂತೆ, II
ಕೇಳಿ ಪತಿಯ ಸಂದೇಶ ಲಜ್ಜಿತಳಾದಳು ಯುವ ಸೀತೆ,I
ಹೊಗಳುತ ಹನುಮನ ಹಿತ ವಚನ ನುಡಿದಳು: II
“ಓ ವಾನರಸ್ರೇಷ್ಠನೇ, ಏಕಾಂಗಿ ಬಂದಿರುವೆ ರಾಕ್ಷಸರ ಮಧ್ಯೆ,I
ಶೂರ ನೀ, ಸಕ್ಷಮ ನೀ, ಚತುರ ನೀ;II
ಮೊಸಳೆ ತುಂಬಿದ ನೂರು ಯೋಜನೆ ಮಹಾಸಾಗರI
ದಾಟಿದಿ ಸಣ್ಣ ಹೊಂಡದಂತೆ, ವಿಕ್ರಮ ನೀ; II
ಸಾಧಾರಣ ವಾನರನಲ್ಲ ನೀ, ರಾವಣನ ಭಯವಿಲ್ಲ,I
ಪೀಡನೆಗೆ ಹೆದರುವನಲ್ಲ, ಓ ವಾನರಶ್ರೇಷ್ಠ; II
ಕಳಿಸಿಹನು ರಾಮ ಹುಡುಕಲು ನನ್ನI
ಕಂಡು ನಿನ್ನ ಸಾಹಸ, ಶೌರ್ಯವನು; II
ವಚನಬದ್ಧ, ಧರ್ಮನಿಷ್ಠ ರಾಮI
ಶೂರ ಲಕ್ಷ್ಮಣ ಕುಶಲರು ಸುದೈವದಿ; II
ಕುಶಲವಾಗಿದ್ದರೇ ರಾಮ ಸುಡಲಿಲ್ಲವೇಕೆI
ತನ್ನ ಕೋಪದಿ ಸಾಗರ ಭೂಮಂಡಳ?II
ರಾಮ ಲಕ್ಷ್ಮಣರು ಕೆಳಗಿಳಿಸಬಲ್ಲರು ಆಕಾಶ-ಕಾಯಗಳ,I
ಆದರೆ ಅಂತ್ಯವಿಲ್ಲದಂತೆ ಕಾಣುತದೆ ನನ್ನ ತೊಂದರೆಗಳ;II
ದುಃಖಿಸುತ್ತಿಲ್ಲವೇ ರಾಮ? ದುಃಖ ಪೀಡಿಸುತ್ತಿಲ್ಲವೇ ರಾಮನ?I
ಸಂಹರಿಸುತಿಹನೆ ರಾಮ ವೈರಿಗಳ? II
ಶೋಕ ಗೊಂದಲಕ್ಕಿಡಾಗಿರುವನೇ ರಾಮ? ಕರ್ತವ್ಯ ತಪ್ಪಿಹನೇI
ರಾಮ? ಮಾಡುತ್ತಿರಬೇಕು ಮಾನವ ಪ್ರಯತ್ನ ರಾಮ; II
ಮಾಡುತಿರಬೇಕು ರಾಮ ದ್ವಿವಿಧಮ , ತ್ರಿವಿಧ ಉಪಾಯI
ಮಿತ್ರರಿಗೆ ಕರುಣಾಮಯಿ, ಶತ್ರು ಸಂಹಾರಕ ರಾಮ; II
ಮೈತ್ರಿ ಮಾಡಿಕೊಳ್ಳುವನೇ? ಇತರರ ಮುಖೇನ ಸಂಧಾನಮಾಡಿ ಕೊಳ್ಳುವನೇ? I
ಒಳ್ಳೆ ಸ್ನೇಹ ಗೌರವ ಸಿಕ್ಕಿದೆ ರಾಮನಿಗೆ;II
ಓ ಹನುಮಾ, ಕಳಕೊಂಡಿಲ್ಲವೇ ನನ್ನ ಸ್ನೇಹ ರಾಮ?I
ಮುಕ್ತಗೊಳಿಸುವನೇ ದುಷ್ಟರಿಂದ ನನ್ನ ರಾಮ? II
ಸದಾ ಸಂತೋಷ ಬಯಸುವ ರಾಮI
ನನ್ನ ವಿರಹ ಶೋಕದಲಿ ಮುಳುಗಿಹನೇ?II
ನಿರಂತರ ಪಡೆಯುತ್ತಿರುವೆಯಾ ಕುಶಲೋಪಹಾರI
ಸುದ್ಧಿ, ಕೌಶಲ್ಯ ಸುಮಿತ್ರ ಭರತರ? II
ಕಳಿಸುವನೇ ಭ್ರಾತೃ ವತ್ಸಲ ಭರತ ಅಕ್ಷೋಹಿಣಿ ಸೈನ್ಯI
ಮಂತ್ರಿ ಧ್ವಜಗಳೊಂದಿಗೆ, ನನ್ನ ಮುಕ್ತಿಗೆ; ||
ತರುವನು ನನ್ನ ರಕ್ಷಣೆಗೆ ಸುಗ್ರೀವ ವಾನರ ಸೈನ್ಯ,I
ಹಲ್ಲು ಉಗುರು ಆಯುಧಗಳಿಂದ ಕಾದುವ ವೀರರ; II
ಸುಮಿತ್ರಾನಂದ ಆಯುಧ ನಿಪುಣ ಲಕ್ಷ್ಮಣI
ಸಂಹರಿಸುವನು ರಾಕ್ಷಸರನು ತನ್ನ ಬಾಣಗಳಿಂದ; II
ಸಂಹರಿಸುವರು ಕೆಲವೇ ಕ್ಷಣಗಳಲ್ಲಿ ರಾವಣನI
ತಮ್ಮ ಅದ್ಭುತ ಬಾಣಗಳಿಂದ ರಣರಂಗದಲಿ; II
ವಿರಹ ಶೋಕದಿ ಕಳೆಗುಂದಿದ, ನಿರ್ಜಲಗೊಂಡ ಸೂರ್ಯಶಾಖ ಬಾಧಿಸಿದಂತೆ I
ಕಮಲ ಬಾಧಿಸದಿರಲಿ ರಾಮನಿಗೆ; II
ರಾಜ್ಯ ತೊರೆದು ನನ್ನೊಂದಿಗೆ ವನವಾಸ ಅನುಭವಿಸಿದI
ರಾಮ, ಹೊಂದಿರಬೇಕು ಅದೇ ಪ್ರೀತಿ ಶೌರ್ಯ”; II
ಸುಂದರಕಾಂಡ
ಆದಿಕವಿ ವಾಲ್ಮೀಕಿಯು ಸೀತೆ ಮತ್ತು ಹನುಮಾನರ ಸಂವಾದದಲ್ಲಿ ಒಂದೆಡೆ ರಾಮನ ಗುರುತು ಉಂಗರ ಕಂಡ ಸೀತೆಯ ಸಂತೋಷ ಮತ್ತು ಸಂದೇಹಗಳನ್ನು ವ್ಯಕ್ತ ಪಡಿಸಿದನ್ನು ವಿವರಿಸಿರುವರು ಹಾಗು ಮತ್ತೊಂದೆಡೆ ಹನುಮನಿಂದ ಸೀತೆಗೆ ಭರವಸೆ ಪ್ರಯತ್ನಗಳ ವಿವರವನ್ನು ನೀಡಿರುವರು: (1) ರಾಮನ ಉಂಗುರ ಗುರುತು: ಸೀತೆಯನ್ನು ನೆನಪಿಸಲು ರಾಮನು ಹನುಮಾನನಿಗೆ ಕೊಟ್ಟ ಉಂಗುರವನ್ನು ಹನುಮಾನನು ಸೀತೆಗೆ ಅದನ್ನು ಕೊಟ್ಟು ಸಮಾಧಾನ ಪಡಿಸುವನು “ರಾಮ ನಾಮ ಮುದ್ರೆಯ ಉಂಗುರವಿದು, ನಿನ್ನ ನಂಬಿಕೆ ಗಳಿಸಲು ರಾಮನು ನಿನಗೆ ಕೊಡಲು ಉಂಗುರ ನನಗೆ ಕೊಟ್ಟಿರುವನು, ನೋಡು ರಾಮನ ಗುರುತವನ್ನು, ಸಮಾಧಾನಳಾಗು, ಶೋಕದಿಂದ ಮುಕ್ತಳಾಗು”.(2) ಹನುಮಾನನ ಸಾಮರ್ಥ್ಯದ ಪುಷ್ಠಿ: ರಾಮನ ಉಂಗುರ ಕಂಡು ಸೀತೆ ಹನುಮಾನನ ಸಾಮರ್ಥ್ಯವನ್ನು ಹೀಗೆ ಮೆಚ್ಚಿದಳು “ನೀನು ಮೊಸಳೆಗಳು ತುಂಬಿದ ನೂರು ಯೋಜನೆ ಅಂತರದ ಮಹಾಸಾಗರವನ್ನು ಸಣ್ಣ ಹೊಂಡದಂತೆ ದಾಟಿ ಬಂದ ವಿಕ್ರಮನು; ಓ ವಾನರಶ್ರೇಷ್ಠ, ನೀನು ಸಾಧಾರಣ ವಾನರನಲ್ಲ, ನಿನಗೆ ರಾವಣನ ಭಯವಿಲ್ಲ, ನೀನು ಪೀಡನೆಗೆ ಹೆದರುವನಲ್ಲ; ರಾಮನು ನಿನ್ನ ಸಾಹಸ, ಶೌರ್ಯವನು ಗುರುತಿಸಿ ನನ್ನ ಹುಡುಕಲು ಕಳಿಸಿರುವನು”.(3) ಅಸ್ಥಿರ ಮನಸ್ಸಿನ ತಾಪತ್ರಯ: ರಾಮನ ಗುರುತ ಕಂಡ ಸೀತೆ ಸಂತೋಷಪಟ್ಟರೂ ಅವಳು ಮನಸ್ಸಿನಲ್ಲಿಯ ತಾಪತ್ರಯ ಮತ್ತು ಸಂದೇಹವನ್ನು ಹೀಗೆ ಆಡಿಕೊಳ್ಳುವಳು “ರಾಮ ಕುಶಲವಾಗಿದ್ದರೇ ತನ್ನ ಕೋಪದಿಂದ ಸಾಗರ ಭೂಮಂಡಳ ಸುಡಲಿಲ್ಲವೇಕೆ? ರಾಮ ಲಕ್ಷ್ಮಣರು ಆಕಾಶ-ಕಾಯಗಳನ್ನು (ಗ್ರಹ, ನಕ್ಷತ್ರ, ಉಲ್ಕೆ ಇತ್ಯಾದಿ) ಹೊಡೆದು ಕೆಳಗಿಳಿಸಬಲ್ಲರು; ಆದರೆ ನನಗೆ ನನ್ನ ತೊಂದರೆಗಳ ಅಂತ್ಯವಿಲ್ಲದಂತೆ ಕಾಣುತದೆ; ನನಗಾಗಿ ರಾಮ ದುಃಖಿಸುತ್ತಿಲ್ಲವೇ? ರಾಮನಿಗೆ ನನ್ನ ದುಃಖ ಪೀಡಿಸುತ್ತಿಲ್ಲವೇ? ರಾಮನು ತನ್ನ ವೈರಿಗಳನ್ನು ಸಂಹರಿಸುತಿರುವನೆ? ಇಲ್ಲವೆ ರಾಮನು ಶೋಕ ಗೊಂದಲಕ್ಕಿಡಾಗಿರುವನೇ? ಮೈತ್ರಿ ಮಾಡಿಕೊಳ್ಳುತಿಹನೇ? ಇತರರ ಮುಖೇನ ಸಂಧಾನ ಮಾಡಿಕೊಳ್ಳುತಿರುವನೇ? ರಾಮನಿಗೆ ಒಳ್ಳೆ ಸ್ನೇಹ ಗೌರವ ಸಿಕ್ಕಿರಬೇಕು; ಓ ಹನುಮಾ, ರಾಮನು ನನ್ನ ಸ್ನೇಹ ಕಳಕೊಂಡಿಲ್ಲವೇ? ರಾಮನು ನನ್ನನ್ನು ದುಷ್ಟ ರಾವಣನಿಂದ ಮುಕ್ತಗೊಳಿಸುವನೇ? ಸದಾ ಸಂತೋಷ ಬಯಸುವ ರಾಮನು ನನ್ನ ವಿರಹ ಶೋಕದಲಿ ಮುಳುಗಿರುವನೇ?” ಮುಂದುವರೆಸುತ ಸೀತೆಯು ಮರುಕ್ಷಣ ಹನುಮನಿಗೆ ಪ್ರಶ್ನಿಸುವಳು “ವಚನಬದ್ಧ, ಧರ್ಮನಿಷ್ಠ ರಾಮ ಮತ್ತು ಶೂರ ಲಕ್ಷ್ಮಣರು ಸುದೈವದಿಂದ ಕುಶಲರಾಗಿರುವರು ಆದರೆ ರಾಮ ಕುಶಲವಾಗಿದ್ದರೇ ತನ್ನ ಕೋಪದಿಂದ ಸಾಗರ ಭೂಮಂಡಳ ಸುಡಲಿಲ್ಲವೇಕೆ? ರಾಮ ಲಕ್ಷ್ಮಣರು ಆಕಾಶ-ಕಾಯಗಳನ್ನು ಹೊಡೆದು ಕೆಳಗಿಳಿಸಬಲ್ಲರು; ಆದರೆ ನನಗೆ ನನ್ನ ತೊಂದರೆಗಳ ಅಂತ್ಯವಿಲ್ಲದಂತೆ ಕಾಣುತದೆ; ನನಗಾಗಿ ರಾಮ ದುಃಖಿಸುತ್ತಿಲ್ಲವೇ? ರಾಮನಿಗೆ ನನ್ನ ದುಃಖ ಪೀಡಿಸುತ್ತಿಲ್ಲವೇ? ರಾಮನು ತನ್ನ ವೈರಿಗಳನ್ನು ಸಂಹರಿಸುತಿರುವನೆ? ಇಲ್ಲವೆ ರಾಮನು ಶೋಕ ಗೊಂದಲಕ್ಕಿಡಾಗಿರುವನೇ? ರಾಮನು ನನ್ನ ರಕ್ಷಿಸುವ ತನ್ನ ಕರ್ತವ್ಯ ತಪ್ಪಿಹನೇ? ಇಲ್ಲವೆ ರಾಮನು ನನ್ನ ಹುಡುಕುವ ಮಾನವ ಪ್ರಯತ್ನ ಮಾಡುತ್ತಿರಬೇಕು: ರಾಮನು ದ್ವಿವಿಧಮ ಉಪಾಯ—1.ಸಂಧಾನ 2.ನೇರ ಭಾಗವಹಿಸುವದು, ತ್ರಿವಿಧ ಉಪಾಯ—1. ನೇರ ಭಾಗ ವಹಿಸುವದು, 2. ಒಪ್ಪಿಗೆ ತೋರಿಸುವದು, 3. ಮುಕ್ತ ಆಕ್ರಮಣ ಮಾಡುವ ಉಪಾಯಗಳನ್ನು ಮಾಡುತ್ತಿರಬೇಕು; ರಾಮನು ಮಿತ್ರರಿಗೆ ಕರುಣಾಮಯಿ, ಶತ್ರುಗಳಿಗೆ ಸಂಹಾರಕನು, ಮೈತ್ರಿ ಮಾಡಿಕೊಳ್ಳುತಿಹನೇ? ಇತರರ ಮುಖೇನ ಸಂಧಾನ ಮಾಡಿಕೊಳ್ಳುತಿರುವನೇ? ರಾಮನಿಗೆ ಒಳ್ಳೆ ಸ್ನೇಹ ಗೌರವ ಸಿಕ್ಕಿರಬೇಕು;ಓ ಹನುಮಾ, ರಾಮನು ನನ್ನ ಸ್ನೇಹ ಕಳಕೊಂಡಿಲ್ಲವೇ? ರಾಮನು ನನ್ನನ್ನು ದುಷ್ಟ ರಾವಣನಿಂದ ಮುಕ್ತಗೊಳಿಸುವನೇ? ಸದಾ ಸಂತೋಷ ಬಯಸುವ ರಾಮನು ನನ್ನ ವಿರಹ ಶೋಕದಲಿ ಮುಳುಗಿರುವನೇ?” ಎಂದು ಸೀತೆ ತನ್ನ ಮನಸ್ಸಿನ ಸಂದೇಹಗಳನ್ನು ಬಿಚ್ಚಿಟ್ಟಿರುವಳು, ತದ್ಮೂಲಕ ಆದಿಕವಿ ವಾಲ್ಮೀಕಿಯು ನೊಂದ ಮತ್ತು ಹೌಹಾರಿದ ಹೆಣ್ಣಿನ ಮನದ ಅಸ್ಥಿರತೆಯನ್ನು ತಿಳಿಸಿರುವರು ;(4) ಸೈನ್ಯ ದ ಮಾಹಿತಿ: ಸೀತೆಯು ಹನುಮಾನನ ವಿಚಾರಿಸುವ ಸಂದರ್ಭದಲ್ಲಿ ಸೈನ್ಯದ ಮಾಹಿತಿಯನ್ನು ಸೀತೆ ಶಬ್ದಗಳಲ್ಲಿ ಹೀಗಿದೆ “ಕೌಶಲ್ಯ ಸುಮಿತ್ರ ಭರತರ ಕುಶಲೋಪಹಾರ ಸುದ್ಧಿ ರಾಮನು ನಿರಂತರ ಪಡೆಯುತ್ತಿರುವನೇ? ನನ್ನ ಮುಕ್ತಿಗೆ ಭ್ರಾತೃ ವತ್ಸಲ ಭರತನು ಮಂತ್ರಿ ಧ್ವಜಗಳೊಂದಿಗೆ ತನ್ನ ಅಕ್ಷೋಹಿಣಿ (21870 ಆನೆಗಳು,21870 ರಥಗಳು, 65610 ಕುದುರೆಗಳು ಮತ್ತು 109350 ಕಾಲ-ದಳ ಬಲದ ಸೈನ್ಯ) ಸೈನ್ಯ ಕಳಿಸುವನೇ? ತರುವನು ನನ್ನ ರಕ್ಷಣೆಗೆ ಸುಗ್ರೀವನು ಹಲ್ಲು ಉಗುರು ಆಯುಧಗಳಿಂದ ಕಾದುವ ವೀರ ವಾನರರ ಸೈನ್ಯ? ಸುಮಿತ್ರಾನಂದ ಆಯುಧ ನಿಪುಣ ಲಕ್ಷ್ಮಣನು ತನ್ನ ಬಾಣಗಳಿಂದ ರಾಕ್ಷಸರನು ಸಂಹರಿಸುವನು; ರಾಮ ಲಕ್ಷ್ಮಣರು ರಣರಂಗದಲಿ ತಮ್ಮ ಅದ್ಭುತ ಬಾಣಗಳಿಂದ ಕೆಲವೇ ಕ್ಷಣಗಳಲ್ಲಿ ರಾವಣನನ್ನು ಸಂಹರಿಸುವರು”. (5) ರಾಮನ ಕುರಿತು ಸೀತೆಯ ಚಿಂತೆ: ಸ್ವತಃ ತಾನೇ ಎಷ್ಟೇ ತೊಂದರೆಯಲಿದ್ದರೂ ಸೀತೆಯು ತನ್ನ ಪತಿ ರಾಮನ ಬಗ್ಗೆ ಹೀಗೆ ಕಾಳಜಿ ತೋರಿಸುವಳು “ವಿರಹ ಶೋಕದಿಂದ ಕಳೆಗುಂದಿದ, ನಿರ್ಜಲಗೊಂಡ ರಾಮನಿಗೆ ಸೂರ್ಯಶಾಖವು ಕಮಲವನ್ನು ಬಾಧಿಸಿದಂತೆ ಬಾಧಿಸದಿರಲಿ; ರಾಜ್ಯ ತೊರೆದು ನನ್ನೊಂದಿಗೆ ವನವಾಸ ಅನುಭವಿಸಿದ ರಾಮನು ಅದೇ ಪ್ರೀತಿ ಶೌರ್ಯ ಹೊಂದಿರಬೇಕು”. ತದ್ಮೂಲಕ ಆದಿಕವಿ ವಾಲ್ಮೀಕಿಯು ಪತ್ನಿಯಲಿದ್ದ ಪತಿಯ ಕಾಳಜಿಯನ ಭರತ ಖಂಡದ ಸ್ತ್ರೀಯರ ಸಾಮಾಜಿಕ ಮನಸ್ಥತಿಯನ್ನು ತಿಳಿಸಿರುವರು.
…. ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
