ಸುಂದರಕಾಂಡ ರಾಮಾಯಣ ಭಾಗ-97

By admin


ಮಾತು ತಡೆದಳು ಸೀತೆ ತನ್ನI
ಕೇಳಲು ರಾಮನ ಗುಣಗಾನ ಹನುಮನಿಂದ; II
ಕೇಳುತ ಸೀತೆ ನುಡಿಗಳನು ಕೈ ಮುಗಿದI
ಹನುಮ ಸೀತೆಗೆ ನುಡಿದನು ಮೃದು ಭಾಷೆಯಲಿ: II
“ ಓ ಕಮಲಾಕ್ಷಿ, ನೀನಿದ್ದ ಸ್ಥಳ ರಾಮನಿಗೆ ಗೊತ್ತಿಲ,I
ಗೊತ್ತಾದರೇ, ಸಂಹರಿಸಿ ರಾವಣನ ಹಿಂಪಡೆವನು ನಿನ್ನ; II
ನನ್ನಿಂದ ನಿನ್ನ ಸುದ್ಧಿ ತಿಳಿದ ಕ್ಷಣ ರಾಮ, ವಾನರ I
ಸೈನ್ಯದೊಂದಿಗೆ ಬರುವನು,ಮುಕ್ತಗೊಳಿಸಲು ನಿನ್ನ; II
ಬತ್ತುವದು ಸಮುದ್ರ ವಿನಾಶವಾಗುವದು ಲಂಕೆಯI
ರಾಕ್ಷಸಕುಲ,ರಾಮನ ಬಾಣಗಳಿಂದ;II
ಓ ಸಭ್ಯಳೇ, ನೆಮ್ಮದಿ ವಂಚಿತ ರಾಮ ನಿನ್ನ ಕಾಣದೇ, |ನರಳುತ್ತಿಹನು ರಾಮ ಸಿಂಹ ಗಾಯಗೊಳಿಸಿದ ಆನೆಯಂತೆ; II
ಓ ವೈದೇಹಿ, ಪ್ರತಿಜ್ಞಿಸುವೆ ಮಲಯ,ವಿಂದ್ಯ,ಮೇರು, ದರ್ದುರಾI
ಪರ್ವತಗಳ ವ ಗಡ್ಡೆ ಹಣ್ಣುಗಳ ಮೇಲೆ, II
ಕಾಣುವಿ ನೀ ಪುನಃ ಕೆಂದುಟಿಗಳ, ಕೆಂಗಣ್ಣುಗಳ,I
ಚಂದ್ರನಂತೆ ಹೊಳೆವ ರಾಮನ ಮುಖ; II
ತ್ಯಜಿಸಿಹನು ರಾಮ ಸುಖ ಭೋಜನ, ಪೇಯಿಗಳ,I
ಓಡಿಸುತ್ತಿಲ್ಲ ರಾಮ ತನ್ನ ಬಳಿ ಬಂದ ಹುಳ, ಸೊಳ್ಳೆ ಸರ್ಪಗಳ;II
ಋಷ್ಯಮುಖ ಪರ್ವತ ಶಿಖರದ್ಮೇಲೆ ಏಕಾಗ್ರತೆಯಲಿ ಬೆಂದುತಿಹನು ‘I
ಸದಾ ನಿನ್ನ ಚಿಂತನೆಯಲಿ”; ಕೇಳಿ ರಾಮನ ದೆಶೆ II
ಇಮ್ಮಡಿಸಿತು ಸೀತೆ ಶೋಕ, ಹೇಮಂತ-ರಾತ್ರಿಯಲಿ I
ಮೋಡ ಮುಸಿಕಿದ ಚಂದ್ರನಂತಾದಳು ಸೀತೆ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಸೀತೆ ಮತ್ತು ಹನುಮಾನರ ಸಂವಾದದಲ್ಲಿ ಒಂದೆಡೆ ರಾಮನ ಗುರುತು ಉಂಗರ ಕಂಡ ಸೀತೆಯ ಸಂತೋಷ ಮತ್ತು ಸಂದೇಹಗಳನ್ನು ವ್ಯಕ್ತ ಪಡಿಸಿದನ್ನು ವಿವರಿಸಿದರೆ ಮತ್ತೊಂದೆಡೆ ಹನುಮನಿಂದ ಸೀತೆಗೆ ಭರವಸೆ ಪ್ರಯತ್ನಗಳ ವಿವರವನ್ನು ನೀಡಿರುವರು: (1) ಸೀತೆಯಲ್ಲಿ ರಾಮನ ಬಗ್ಗೆ ಕಾಳಜಿ: ಸೀತೆಯು ಹನುಮಾನಿಂದ ರಾಮನ ಸ್ಥಿತಿ ತಿಳಿಯಲು ಅವನಿಗೆ ಹೀಗೆ ನುಡಿಯುವಳು “ವಿರಹ ಶೋಕದಿಂದ ಕಳೆಗುಂದಿದ, ನಿರ್ಜಲಗೊಂಡ ರಾಮನಿಗೆ ಸೂರ್ಯಶಾಖವು ಕಮಲವನ್ನು ಬಾಧಿಸಿದಂತೆ ಬಾಧಿಸದಿರಲಿ; ರಾಜ್ಯ ತೊರೆದು ನನ್ನೊಂದಿಗೆ ವನವಾಸ ಅನುಭವಿಸಿದ ರಾಮನು ಅದೇ ಪ್ರೀತಿ ಶೌರ್ಯ ಹೊಂದಿರಬೇಕು” ಎಂದು ಪುಃನ ಹನುಮನಿಂದ ರಾಮನ ಗುಣಗಾನ ಕೇಳಲು ಸೀತೆ ತನ್ನ ಮಾತುಗಳನ್ನು ನಿಲ್ಲಿಸಿದಳು;(2) ಬಿಡುಗಡೆ ಭರವಸೆ: ಸೀತೆಯ ಮನಸ್ಸಿನಾಳದ ಮಾತುಗಳನ್ನು ಕೇಳುತ ಹನುಮಾನು ಕೈ ಮುಗಿದು ಸೀತೆಗೆ ಮೃದು ಭಾಷೆಯಲಿ ಹೀಗೆ ಅರುಹಿದನು “ ಓ ಕಮಲಾಕ್ಷಿ, ಈಗ ನೀನಿದ್ದ ಸ್ಥಳ ರಾಮನಿಗೆ ಗೊತ್ತಿಲ, ಅದು ಅವನಿಗೆ ಗೊತ್ತಾದರೇ, ಅವನು ರಾವಣನನ್ನು ಸಂಹರಿಸಿ ನಿನ್ನನ್ನು ಹಿಂಪಡೆವನು; ಈಗ ನನ್ನಿಂದ ನಿನ್ನ ಸುದ್ಧಿ ತಿಳಿದ ತಕ್ಷಣ ರಾಮನು ವಾನರ ಸೈನ್ಯದೊಂದಿಗೆ ನಿನ್ನ ಮುಕ್ತಗೊಳಿಸಲು ಬರುವನು; ರಾಮನ ಬಾಣಗಳಿಂದ ಬತ್ತುವದು ಸಮುದ್ರ, ವಿನಾಶವಾಗುವದು ಲಂಕೆಯ ರಾಕ್ಷಸಕುಲ; ಓ ಸಭ್ಯಳೇ, ರಾಮನು ನಿನ್ನ ಕಾಣದೇ ನೆಮ್ಮದಿ ಕಳೆದುಕೊಂಡಿರುವನು, ಸಿಂಹ ಗಾಯಗೊಳಿಸಿದ ಆನೆಯಂತೆ ರಾಮನು ನಿನ್ನ ವಿರಹಗಾಯದಿಂದ ನರಳುತ್ತಿರುವನು; ಓ ವೈದೇಹಿ, ನಾನು ಪ್ರತಿಜ್ಞೆಮಾಡುವೆ ಮಲಯ, ವಿಂದ್ಯ, ಮೇರು, ದರ್ದುರಾ ಪರ್ವತಗಳ(ಹಿಮಾಲಯ ಪರ್ವತ ಶ್ರೇಣಿಗಳು) ಮತ್ತು ಗಡ್ಡೆ ಹಣ್ಣುಗಳ ಮೇಲೆ, ನೀನು ಪುನಃ ಕೆಂದುಟಿಗಳ, ಕೆಂಗಣ್ಣುಗಳ, ಚಂದ್ರನಂತೆ ಹೊಳೆವ ರಾಮನ ಮುಖ ನೋಡುವಿ; ರಾಮನು ಸುಖ, ಭೋಜನ, ಪೇಯಿಗಳನ್ನು ತ್ಯಜಿಸಿರುವನು, ರಾಮನು ತನ್ನ ಬಳಿ ಬಂದ ಹುಳ, ಸೋಳ್ಳೆ, ಸರ್ಪಗಳ ಓಡಿಸುವ ಮನೋಸ್ಥಿತಿ ಹೊಂದಿಲ್ಲ; ರಾಮನು ಸದಾ ನಿನ್ನ ಚಿಂತೆನೆಯಲಿ ಋಷ್ಯಮುಖ ಪರ್ವತ ಶಿಖರದ್ಮೇಲೆ ಏಕಾಗ್ರತೆಯಲಿ ಬೆಂದುತಿರುವನು”; ರಾಮನ ದುರ್ದೆಶೆಯನ್ನು ಕೇಳಿದ ಸೀತೆಯ ಶೋಕ ಇಮ್ಮಡಿಸಿತು, ಹೇಮಂತ-ರಾತ್ರಿಯಲಿ ಮೋಡದಲಿ ಮುಸಿಕಿದ ಚಂದ್ರನಂತಾದಳು ಸೀತೆ. ಒಟ್ಟಿನಲ್ಲಿ ಸೀತೆಗೆ ಹನುಮಾನನಿಂದ ರಾಮನ ವಾರ್ತೆ ಸಿಗುವದರ ಜೊತೆ ಅವಳ ಬಿಡುಗಡೆಯ ಸುಳಿಯು ಸಿಗುವದು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌