
ರಾಮನ ಹೃದಯದಲಿ ಸುರಕ್ಷಿತಳು ನಾ, ಇಂದು ಅಸುರಕ್ಷಿತಳೇ? I
ಹೇಳು ಎನ್ನ ಕರುಣಿಸಲು; ‘ಕರುಣೆಯೇ ಧರ್ಮ’II
ಎಂದು ಎನಗೆ ಬೋಧಿಸಿದ ರಾಮ ರಾಕ್ಷಸರಿಂದ ಮುಕ್ತಗೊಳಿಸಿ I
ಎನ್ನ ತೋರಿಸುವನೆ ಕರುಣೆ? II
ಎನ್ನ ರಕ್ಷಿಸಲು ಶತ್ರು ನಾಶಕ ಲಕ್ಷ್ಮಣ I
ಕಾಯುತಿಹನೆ ಅಣ್ಣ ರಾಮನ ಆಜ್ಞೆ, II
ಗಾಳಿ ಬೆಂಕಿಗೆ ಸಮ ನರವ್ಯಾಘ್ರರುI
ರಾಮ ಲಕ್ಷ್ಮಣ, ನನ್ನ ನಿರ್ಲಕಷಿಸಿರುವರೇ? II
ಪಾಪು ಎಸಗಿರಬೇಕು ನಾI
ನಿರ್ಲಕ್ಷಿಸಲ್ಪಟ್ಟಿರುವೆ ರಾಮ ಲಕ್ಷ್ಮಣರಿಂದ ನಾ”;II
ಕೇಳಿ ಸೀತೆಯ ಶೋಕದ, ಸಂದೇಹದ ನುಡಿಗಳI
ವೀರ ಹನುಮ ಸೀತೆಗೆ ನುಡಿದನು:II
“ ಓ ದೇವಿ, ಮುಳುಗಿಹರು ರಾಮ ಲಕ್ಷ್ಮಣ ನಿನ್ನ ಶೋಕದಲಿ, I
ಹೇಳುವೆ ನಾ ಸತ್ಯದ ಮೇಲೆ ಪ್ರತಿಜ್ಞೆ ಮಾಡಿ, II
ಓ ನಿರ್ದೋಷಿ ಸೀತೆ, ಹುಡಿಕಿರುವೆ ನಿನ್ನ ಹೇಗೊI
ಶೋಕಿಸುವ ಸಮಯ ಅಲ್ಲಾ,ಶೀಘ್ರ ಶೋಕಮಕ್ತಳಾಗುವಿ ನೀ; II
ರಾಮ ಲಕ್ಷ್ಮಣರು ಶೀಘ್ರ ಸಂಹರಿಸಿ ರಾವಣನ,I
ಹಿಂಪಡೆಯುವರು ನಿನ್ನ, ದ್ವಂಸವಾದೀತು ಲಂಕೆ; II
ರಾಮ ಲಕ್ಷ್ಮಣ ಸುಗ್ರೀವರಿಗೆ ನೀಡಬೇಕು ಏನುI
ಸಂದೇಶ ತಿಳಿಸು, ಆತುರದಲ್ಲಿಹರು”; II
ಕೇಳಿ ಹನುಮನ ನುಡಿ ಸೀತೆ ಶೋಕದಿ ನುಡಿದಳು:I
“ಎನ್ನ ಪರವಾಗಿ ಕೈಮುಗಿ ಕೌಶಲ್ಯಾಪುತ್ರ ರಾಮನಿಗೆ, II
ಎನ್ನ ಪರವಾಗಿ ಕೇಳು ರಾಮ ಲಕ್ಷ್ಮಣರ ಕುಶಲತೆ, I
ತಿಳಿಸು ಎನ್ನ ನಮನ ಸುಮಿತ್ರಾನಂದ ಲಕ್ಷ್ಮಣನಿಗೆ, II
ಅರಣ್ಯದಲಿ ರಾಮನಿಗಾಗಿ ಅದೆಷ್ಟೋ ಕಷ್ಟಗಳನು ಸಹಿಸಿದI
ಲಕ್ಷ್ಮಣ, ಕಂಡ ಎನಗೆ ತಾಯಿ ಸುಮಿತ್ರಿಯಂತೆ; II
ತಂದೆ ದಶರಥರಿಗೆ ವಿಧೇಯಿಕನಾಗಿದ್ದಂತೆ ಲಕ್ಷ್ಮಣI
ಸಹೋದರ ರಾಮನಿಗೂ ವಿಧೇಯಿಕನಾಗಿದ್ದ; II
ರಾಮನ ತಮ್ಮ ಲಕ್ಷ್ಮಣ ಪ್ರೀಯ ಯಾವಾಗಲೂ ಎನಗೆ,I
ರಾವಣ ಎನ್ನ ಹೃತ ಘಟನೆ ಗೊತ್ತಿಲ್ಲ ಲಕ್ಷ್ಮಣನಿಗೆ, II
ದುಃಖದಲ್ಲಿದ್ದಾಗ ತಂದೆ ಮರಣದ ರಾಮ,I
ಎನ್ನ ಪರವಾಗಿ ಲಕ್ಷ್ಮಣ ಸಂತೈಸುತಿದ್ದ ರಾಮನ; II
ಓ ಹನುಮಾ, ಹೇಳಿ ಈ ಎನ್ನ ಸಂದೇಶಗಳI
ಸಂತೈಸು ರಾಮ ಲಕ್ಷ್ಮಣರ, ನೀನು ಸಮರ್ಥ;II
ಸತ್ಯ ನುಡಿಯುವೆ, ಪದೇ ಪದೇ ತಿಳಿಸು ರಾಮನಿಗೆI
ಒಂದು ಮಾಸ ಮಾತ್ರ ರಾಮನಿಗಾಗಿ ಜೀವಿಸುವೆ”;II
ತನ್ನ ತಲೆ ಮೇಲಿನ ಚೂಡಾಮಣಿ-ಆಭರಣ ಬಿಚ್ಚಿI
ರಾಮನಿಗೆ ಕೊಡಲು ಸೀತೆ ಹನುಮಗೆ ಕೊಟ್ಟುಳು; II
ಕಟ್ಟಿಕೊಂಡನು ಸೀತೆ-ಆಭರಣ ತನ್ನ ಬೆರಳುಗಳಿಗೆ ಹನುಮ, I
ತನ್ನ ಕಾಯ ಬದಲಾವಣೆಯಿಂದ ಕಳೆಯದಂತೆ; II
ಬದಿಗೆ ಸರಿದು ಸೀತೆಗೆ ಸಲ್ಲಿಸಿ ನಮನI
ಹನುಮ, ಸೀತೆ-ಹುಡುಕಿದ ಹರುಷದಲಿ ಮಿಂದ, II
ರಾಮನಿಗೆ ಶುಭ ಸಂದೇಶ ತಿಳಿಸಲು ಹನುಮ ಸಮುದ್ರದತ್ತ I
ಹಿಂದಿರುಗಲು ಸಿದ್ದನಾದ ಸೀತೆ ಆಭರಣದೊಂದಿಗೆ.II
ಸುಂದರ ಕಾಂಡ
ಆದಿಕವಿ ವಾಲ್ಮೀಕಿಯು ಸೀತೆಯು ಹನುಮಾನನೊಂದಿಗೆ ರಾಮನ ಬಳಿ ಹಿಂದಿರುಗಲು ಒಪ್ಪದಿದ್ಧಾಗ ಅವಳಿಂದ ಪ್ರತಿಯಾಗಿ ರಾಮನಿಗೆ ಗುರುತ ಕೊಡಲು ಹನುಮಾನನು ಸೀತೆಯಲ್ಲಿ ಅರುಹಿದಾಗ ಅವರ ಮಧ್ಯೆ ನಡೆದ ಸಂವಾದದ ವಿವರಣೆ ನೀಡಿದ ಹಾಗು ಕೆಲವು ಮಹತ್ವದ ವಿಚಾಗಳನ್ನೂ ಹಂಚಿಕೊಂಡ ಸಂಗತಿಗಳ ವಿವರಣೆಯನ್ನು ಆದಿಕವಿ ವಾಲ್ಮೀಕಿಯು ನೀಡಿರುವರು, ಅದರಲ್ಲಿಯ ಮುಖ್ಯಾಂಶಗಳು:(1) ಅಸುರಕ್ಷತೆ ಭಾವ ಸ್ತ್ರೀ ದುರ್ಬಲ ಮನಕ್ಕೆ ಕಾರಣ: ಸೀತೆಯು ರಾಮ ಲಕ್ಷ್ಮಣರು ತನ್ನನ್ನು ನಿರ್ಲಕ್ಷಿಸಿರಬಹುದೆಂಬ ಸಂದೇಹವನ್ನು ಬೆಳೆಸಿಕೊಂಡು ದುರ್ಬಲ ಮನಸ್ಸಿನಲ್ಲಿ ಮಾತುಗಳನು “ ನಾನು ರಾಮನ ಹೃದಯದಲಿ ಸುರಕ್ಷಿತಳು, ಆದರೆ ಇಂದು ಅಸುರಕ್ಷಿತಳೇ? ಹೇಳು ನನ್ನ ಮೇಲೆ ರಾಮನು ಕರುಣಿಸಲು ಹೇಳು, ‘ಕರುಣೆಯೇ ಧರ್ಮ’ ಎಂದು ನನಗೆ ಬೋಧಿಸಿದ ರಾಮನು ರಾಕ್ಷಸರಿಂದ ಮುಕ್ತಗೊಳಿಸಿ ನನ್ನ ಮೇಲೆ ತೋರಿಸುವನೆ ಕರುಣೆ? ನನ್ನ ರಕ್ಷಿಸಲು ಶತ್ರು ನಾಶಕ ಲಕ್ಷ್ಮಣನು ಅಣ್ಣ ರಾಮನ ಆಜ್ಞೆ ಕಾಯುತಿರುವನೆ! ಗಾಳಿ ಬೆಂಕಿಗೆ ಸಮ ನರವ್ಯಾಘ್ರರಾದ ರಾಮ ಲಕ್ಷ್ಮಣರು ನನ್ನನ್ನು ನಿರ್ಲಕಷಿಸಿರುವರೇ? ನಾನು ಪಾಪ ಎಸಗಿರಬೇಕು ಕಾರಣ ರಾಮ ಲಕ್ಷ್ಮಣರಿಂದ ನಾನು ನಿರ್ಲಕ್ಷಿಸಲ್ಪಟ್ಟಿರುವೆನು” ಹನುಮಾನನ ಮುಂದೆ ಆಡುವಳು, ಅವಳ ಅಸುರಕ್ಷಿತ ಭಾವ ಅದಕ್ಕೆ ಕಾರಣ. (2) ಅಸ್ಥಿರ ಮನಕ್ಕೆ ಭರವಸೆ ಆಧಾರ: ಸೀತೆಯ ಅಸುರಕ್ಷಿತ, ಅಸ್ಥಿರ ಮನ ದೆಸೆ ಕಂಡು ಹನುಮಾನನು “ ಓ ದೇವಿ, ನಾನು ಸತ್ಯದ ಮೇಲೆ ಪ್ರತಿಜ್ಞೆ ಮಾಡಿ ಹೇಳುವೆ, ರಾಮ ಲಕ್ಷ್ಮಣರೂ ನಿನ್ನ ಶೋಕದಲಿ ಮುಳುಗಿರುವರು; ಓ ನಿರ್ದೋಷಿ ಸೀತೆ, ನಾನು ನಿನ್ನನ್ನು ಹೇಗೊ ಹುಡಿಕಿರುವೆನು, ಇದು ಶೋಕಿಸುವ ಸಮಯ ಅಲ್ಲಾ, ನೀನು ಶೀಘ್ರ ಶೋಕಮಕ್ತಳಾಗುವಿ; ರಾಮ ಲಕ್ಷ್ಮಣರು ಶೀಘ್ರ ರಾವಣನನ್ನು ಸಂಹರಿಸಿ ನಿನ್ನ ಹಿಂಪಡೆಯುವರು,ಲಂಕೆ ದ್ವಂಸವಾಗುವದು” ಎಂದು ಸೀತೆಯನ್ನು ಸಂತೈಸುವನು. (3) ಅತ್ತಿಗೆ ತಾಯಿಗೆ ಸಮ: ತಾಯಿ ಸುಮಿತ್ರ ಲಕ್ಷ್ಮಣನಿಗೆ ರಾಮನನ್ನು ದಶರಥರೂಪದಲ್ಲಿ ಸೀತೆಯನ್ನ ತನ್ನ ರೂಪದಲ್ಲಿ ಕಾಣಲು ತಿಳಿಸಿದಂತೆ ಲಕ್ಷ್ಮಣನು ತಮ್ಮೊಂದಿಗೆ ನಡೆದುಕೊಂಡದನ್ನು ಸೀತೆಯು “ ಸುಮಿತ್ರಾನಂದ ಲಕ್ಷ್ಮಣನು ಅರಣ್ಯದಲಿ ರಾಮನಿಗಾಗಿ ಅದೆಷ್ಟೋ ಕಷ್ಟಗಳನು ಸಹಿಸಿದನು, ನನ್ನನು ತನ್ನ ತಾಯಿ ಸುಮಿತ್ರಿಯಂತೆ ಕಂಡನು, ತಂದೆ ದಶರಥರಿಗೆ ವಿದೇಯಿಕನಾಗಿದ್ದಂತೆ ಲಕ್ಷ್ಮಣ ಸಹೋದರ ರಾಮನಿಗೂ ವಿದೇಯಿಕನಾಗಿದ್ದನು, ರಾಮನ ತಮ್ಮ ಲಕ್ಷ್ಮಣ ಯಾವಾಗಲೂ ನನಗೆ ಪ್ರೀಯನು” ಎಂದು ಲಕ್ಷ್ಮಣನ ಮೇಲಿನ ತನ್ನ ತಾಯಿ-ವಾತ್ಸಲ್ಯವನ್ನು ತೋಡಿಕೊಂಡಳು.(4) ರಾಮನಿಗೆ ಕೊಟ್ಟ ಸೀತೆಯ ಗುರುತು: ಸೀತೆಯು ಲಕ್ಷ್ಮಣನ ಗುಣಗಾನ ಮಾಡುತ ಹನುಮಾನನಿಗೆ ಹೀಗೆ ಹೇಳಿದಳು ” ರಾಮನ ತಮ್ಮ ಲಕ್ಷ್ಮಣ ಯಾವಾಗಲೂ ನನಗೆ ಪ್ರೀಯನು, ರಾವಣನು ನನ್ನ ಅಪಹರಿಸಿದ ಘಟನೆ ಲಕ್ಷ್ಮಣನಿಗೆ ಗೊತ್ತಿಲ್ಲ, ತಂದೆ ಮರಣದ ದುಃಖದಲ್ಲಿದ್ದಾಗ ರಾಮನು ನನ್ನ ಪರವಾಗಿ ಅವನನ್ನು ಲಕ್ಷ್ಮಣ ಸಂತೈಸುತಿದ್ದನು ರಾಮನ; ಓ ಹನುಮಾ, ಈ ನನ್ನ ಸಂದೇಶಗಳನ್ನು ಹೇಳಿ ರಾಮ ಲಕ್ಷ್ಮಣರನು ಸಂತೈಸು ಸಾಮರ್ಥ್ಯ ನಿನ್ನಲಿದೆ;ನಾನು ಸತ್ಯ ನುಡಿಯುವೆ, ಪದೇ ಪದೇ ತಿಳಿಸು ರಾಮನಿಗೆ ಒಂದು ಮಾಸ ಮಾತ್ರ ರಾಮನಿಗಾಗಿ ನಾನು ಜೀವಿಸುವೆನು” ಎಂದು ಉಸುರುತ ಸೀತೆಯು ತನ್ನ ತಲೆ ಮೇಲಿನ ಚೂಡಾಮಣಿ-ಆಭರಣ ಬಿಚ್ಚಿ ಗುರುತಿಗಾಗಿ ರಾಮನಿಗೆ ಕೊಡಲು ಹನುಮನಿಗೆ ಕೊಟ್ಟುಳು.
ಪದೇ ಪದೇ ತನ್ನ ದೇಹ ಬದಲಾವಣೆಯಿಂದ ಸೀತೆ-ಆಭರಣ ಕಳೆಯದಂತೆ ಹನುಮಾನನು ಅದನ್ನು ತನ್ನ ಬೆರಳುಗಳಿಗೆ ಕಟ್ಟಿಕೊಂಡನು, ಬದಿಗೆ ಸರಿದು ಸೀತೆಗೆ ನಮನ ಸಲ್ಲಿಸಿ, ಸೀತೆ-ಹುಡುಕಿದ ಹರುಷದಲಿ ಮಿಂದ ಹನುಮನು ರಾಮನಿಗೆ ಶುಭ ಸಂದೇಶ ತಿಳಿಸಲು ಸಮುದ್ರದತ್ತ ಹಿಂದಿರುಗಲು ಸೀತೆ ಆಭರಣದೊಂದಿಗೆ ಸಿದ್ದನಾದನು. ಆ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಸೀತೆಯ ಮುಖೇನ ಸ್ತ್ರೀಯ ಸ್ವಭಾವ ಮತ್ತು ವೀಕ್ಷಕ ಬುದ್ದಿಯನ್ನು ವಿವರಿಸಿರುವರು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
