ಸುಂದರಕಾಂಡ ಭಾಗ-101

By admin


ಕೇಳಿ ಹನುಮನ ದೃಢ ವಾಕ್ಯಗಳನುI
ಸೀತೆ ತನ್ನ ನೆಮ್ಮದಿಗಾಗಿ ನುಡಿದಳು: II
“ಓ ವಾನರವ್ಯಾಘ್ರನೇ, ಕೇಳಿ ನಿನ್ನ ಹಿತ-ನುಡಿI
ಹರುಷಿತಳಾದೆ ಮಳೆಗೆ ಚಿಗುರುವ ಬೆಳೆಯಂತೆ; II
ಚಿಂತೆಯಲಿ ಸೊರಗಿದ ಎನ್ನ ಅಂಗಾಂಗI
ಬಯಸುತಿಹವು ರಾಮನ ಸ್ಪರ್ಷ,ಕರುಣಿಸು; II
ಓ ವಾನರ ನಾಯಕಾ, ಜ್ಞಾಪಿಸು ರಾಮನಿಗೆ ಕಾಗೆ-ಪ್ರಸಂಗ I
ವ ಎನ್ನ ಹಣೆ ಗಲ್ಲ ಮೇಲೆ ರಾಮ ಬಿಡಿಸಿದ ಚಿತ್ರ; II
ರಾಕ್ಷಸರ ಮಧ್ಯೆ ಸೀತೆಗೊಳಾಡುವಾಗI
ನೀ ಹೇಗಿರುವಿ? ವಿಚಾರಿಸು ರಾಮನ; II
ಓ ನಿರ್ದೋಷಿ ರಾಮಾ,ರಕ್ಷಿಸಿರುವೆ ಎನ್ನ ಆಭರಣಗಳI
ಕಂಡು ನಿನ್ನ ಅವುಗಳಲಿ ಸಮಾಧಾನ ಪಡುತಿರುವೆ; II
ಎನ್ನ ಕಣ್ಣೀರಲಿ ತೊಯ್ದ ಆಭರಣI
ಕಳಿಸಿರುವೆ ನಿನಗೆ,ಇನ್ನು ಜೀವಿಸಲಾರೆ; II
ದಿನಗಳಿಯುವೆ ರಾಕ್ಷಸಿಯರ ಯಾತನೆ ಮನಚುಚ್ಚುವ I
ಬೈಗಳ ಮಧ್ಯೆ,ನೀವು ಬರುವರೆಗೆ; ಭಯಾನಕನಿರುವನು II
ರಾವಣ,ಕೆಟ್ಟ ಮನಸ್ಸಿನವ, ತಡಮಾಡಿದರೆ ನೀವು, ಜೀವಿಸಲಾರೆ ದಾಟಿ ಒಂದು ಮಾಸ”;I
ಕೇಳಿ ಹನುಮ ಸೀತೆಯ ಗಡವು,II
ನುಡಿದ: “ಓ ಸೀತಾದೇವಿ, ತೊರೆದು ದುಃಖ ಸಂದೇಹ ನಿಶ್ಚಿಂತವಾಗಿರು,I
ನಿನ್ನ ಬಿಡುಗಡೆಗೆ ಬರುವರುII
ರಾಮ ಲಕ್ಷ್ಮಣ ಮತ್ತೇನಾದರು ಗುರುತು ಕೊಡು, I
ರಾಮನ ಮೆಚ್ಚಿಸಲು; ನಂಬಲು ನನ್ನ ವಾರ್ತೆ, II
ಓ ಮಾತೆ”; ಕೇಳಿ ಹನುಮನ ಕೋರಿಕೆ, ಸೀತೆ ಕೊಟ್ಟಳು ತಕ್ಷಣI
ತಲೆಗೂದಲಾಭರಣ “ ರಾಮ ನಂಬುವನು” ಎನ್ನುತ;II
ಪಡೆದು ಆಭರಣ ಸೀತೆಯಿಂದ ಹನುಮI
ನಮಿಸುತ ಸೀತೆಗೆ, ಹಾರಿದನು ಹನುಮ; II
ಕಂಡು ಹನುಮನ ನಿರ್ಗಮನ ಸೀತೆI
ಉಸಿರುಗಟ್ಟಿದ ದ್ವನಿಯಲಿ ಉಲಿದಳು ಅಳುತ: II
“ ಓ ಹನುಮಾನ, ಸಿಂಹದಂತಹ ರಾಮ ಲಕ್ಷ್ಮಣರಿಗೆ,I
ಸುಗ್ರೀವ ವ ಮಂತ್ರಿಗಳಿಗೆ ಕೇಳು ಕುಶಲ, II
ತಿಳಿಸಿ ಎನ್ನ ಶೋಚನೀಯ ಸ್ಥಿತಿ ರಾಮನಿಗೆ,I
ಕೇಳು ಶೋಕ ಸಾಗರದಿ ಮುಕ್ತಿನೀಡಲು ಎನಗೆ, II
ಸುಖಕರವಾಗಲಿ ನಿನ್ನ ಪಯಣ,”I
ಕೇಳುತ ಸೀತೆ ಉಲಿವು ಪಯಣ ಹನುಮ ಬೆಳಸಿದ; II
ಬಂದ ಕಾರ್ಯ ಸಾಧನೆಯಲಿ,ಹುರುಪಿನಲಿI
ಜಾಣ ಹನುಮ ಉತ್ತರದಿಸೆಯತ್ತ ಬೆಳೆಸಿದ ಪಯಣ. II
ಸುಂದರ ಕಾಂಡ

ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ಹನುಮನು ಉತ್ತರದಿಸೆಯತ್ತ ತನ್ನ ಮರಳಿಕೆ ಪಯಣ ಪ್ರಾರಂಭಿಸುವಾಗೆ ಪುನಃ ಸೀತೆಯು ಹನಮನಿಗೆ ತನ್ನ ಕಾಣಿಕೆ ನೆನೆಪಿಸುತ್ತ ಹನುಮನಿಗೆ ರಾಮನನ್ನು ಬೇಗ ಲಂಕೆಗೆ ಕರೆದುಕೊಂಡು ಬಂದು ರಾವಣನ್ನು ಸಂಹರಿಸಿ ತನ್ನನ್ನು ಪುನಃ ಅಯೋಧ್ಯೆಗೆ ಕರೆದೊಯ್ಯುವಂತೆ ಬೇಡಿಕೊಂಡ ಮತ್ತು ಅದಕ್ಕೆ ಪ್ರತಿಯಾಗಿ ಹನುಮಾನನ ಭರವಸೆಯ ಮಾತುಗಳನ್ನು ವಿವರಿಸಿರುವರು. (1) ಹನುಮನಲ್ಲಿ ಸೀತೆಯ ಕೋರಿಕೆ: ಹನುಮನ ದೃಢ ವಾಕ್ಯಗಳನು ಕೇಳಿ ಸೀತೆಯು ತನ್ನ ನೆಮ್ಮದಿಗಾಗಿ ಹನುಮನಿಗೆ ಪುನಃ ಅರುಹಿದಳು “ ಓ ವಾನರವ್ಯಾಘ್ರನೇ, ನಿನ್ನ ಹಿತ-ನುಡಿ ಕೇಳಿ ಮಳೆಗೆ ಚಿಗುರುವ ಬೆಳೆಯಂತೆ ನಾನು ಹರುಷಿತಳಾದೆ; ರಾಮನ ಚಿಂತೆಯಲಿ ಸೊರಗಿದ ನನ್ನ ಅಂಗಾಂಗಗಳ್ಲಿ ಚೈತನ್ಯ ತುಂಬು ಅವು ರಾಮನ ಸ್ಪರ್ಷ ಬಯಸುತಿರುವವು; ಓ ವಾನರ ನಾಯಕಾ, ನನ್ನ ಮೇಲೆ ಕರುಣಿಸು ಜ್ಞಾಪಿಸು ರಾಮನಿಗೆ ಕಾಗೆ-ಪ್ರಸಂಗ ಮತ್ತು ನನ್ನ ಹಣೆ ಗಲ್ಲಗಳ ಮೇಲೆ ರಾಮ ಬಿಡಿಸಿದ ಚಿತ್ರ; ರಾಕ್ಷಸರ ಮಧ್ಯೆ ಸೀತೆಗೊಳಾಡುವಾಗ ನೀನು ಯಾಕೆ ಸುಮ್ಮನೆ ಇರುವಿಯೆಂದು ರಾಮನನ್ನು ವಿಚಾರಿಸು; ಓ ನಿರ್ದೋಷಿ ರಾಮಾ, ನನ್ನ ಆಭರಣಗಳನ್ನು ರಕ್ಷಿಸಿರುವೆನು ಹಾಗು ಅವುಗಳಲ್ಲಿ ನಿನ್ನ ಕಂಡು ಸಮಾಧಾನ ಪಡುತಿರುವೆನು; ನನ್ನ ಕಣ್ಣೀರಲಿ ತೊಯ್ದ ಆಭರಣ ನಿನಗೆ ಕಳಿಸಿರುವೆನು, ಇನ್ನು ನಿನ್ನಿಂದ ದೂರವಿದ್ದು ಜೀವಿಸಲಾರೆ; ರಾಕ್ಷಸಿಯರ ಯಾತನೆ ಮನಚುಚ್ಚುವ ಬೈಗಳ ಮಧ್ಯೆ ನೀವು ಬರುವರೆಗೆ ಹೇಗೊ ದಿನಗಳಿಯುವೆನು; ಕೆಟ್ಟ ಮನಸ್ಸಿನ ರಾವಣನು ಭಯಾನಕನಿರುವನು,ಇನ್ನು ನೀವು ತಡಮಾಡಿದರೆ ದಾಟಿ ಒಂದು ಮಾಸ ನಾನು ಜೀವಿಸಲಾರೆ”.ಎಂದು ಸೀತೆ ಹನುಮನಲ್ಲಿ ಕೋರಿದಳು,(2) ಹನುಮಾನನು ಸೀತೆಯನ್ನು ಸಂತೈಸುವನು: ಸೀತೆಯ ಗಡುವಿನ ಮಾತುಗಳನ್ನು ಕೇಳಿ ಹನುಮನು ಸೀತೆಗೆ ಸಂತೈಸುವನು “ ಓ ಸೀತಾದೇವಿ, ನಿನ್ನ ದುಃಖ ಸಂದೇಹಗಳನ್ನು ತೊರೆದು ನಿಶ್ಚಿಂತವಾಗಿರು; ರಾಮ ಲಕ್ಷ್ಮಣ ನಿನ್ನ ಬಿಡುಗಡೆಗೆ ಬರುವರು; ಓ ಮಾತೆ, ರಾಮನನ್ನು ಮೆಚ್ಚಿಸಲು, ನನ್ನ ವಾರ್ತೆಯನ್ನು ನಂಬಿಸಲು ಮತ್ತೇನಾದರು ಗುರುತು ಕೊಡು”; ಹನುಮನ ಕೋರಿಕೆ ಕೇಳಿ ತಕ್ಷಣ ಸೀತೆಯು ತನ್ನ ತಲೆಗೂದಲಾಭರಣ “ ರಾಮ ನಂಬುವನು” ಎನ್ನುತ ಕೊಟ್ಟಳು; ಸೀತೆಯಿಂದ ಮತ್ತೊಂದು ಆಭರಣ ಪಡೆದು ಹನುಮನು ನಮಿಸುತ ಸೀತೆಗೆ ಆಕಾಶಕ್ಕೆ ಹಾರಿದನು, (3) ಹನುಮಾನನಿಗೆ ಹಾರೈಕೆ: ಹನುಮನ ನಿರ್ಗಮನ ಕಂಡು ಸೀತೆಯು ಉಸಿರುಗಟ್ಟಿದ ದ್ವನಿಯಲಿ ಉಲಿದಳು ಅಳುತ “ ಓ ಹನುಮಾನ, ಸಿಂಹದಂತಹ ರಾಮ ಲಕ್ಷ್ಮಣರಿಗೆ ಮತ್ತು ಸುಗ್ರೀವ ಹಾಗು ಅವನ ಮಂತ್ರಿಗಳಿಗೆ ನನ್ನ ಪರವಾಗಿ ಕುಶಲತೆ ಕೇಳು, ನನ್ನ ಶೋಚನೀಯ ಸ್ಥಿತಿ ರಾಮನಿಗೆ ತಿಳಿಸಿಸು ಹಾಗು ನನಗೆ ಈ ಶೋಕ ಸಾಗರದಿಂದ ಮುಕ್ತಿನೀಡಲು ಹೇಳು; ಸುಖಕರವಾಗಲಿ ನಿನ್ನ ಪಯಣ” ಕೇಳುತ ಸೀತೆಯ ಉಲಿವು ಜಾಣ ಹನುಮನು ತನ್ನ ಪಯಣವನ್ನು ಬಂದ ಕಾರ್ಯ ಸಾಧನೆ ಹುರುಪಿನಲಿ ಉತ್ತರದಿಸೆಯತ್ತ ಬೆಳಸಿದನು. ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯ ಸೀತೆಯ ಮೂಲಕ ಅಸಹಾಯಕ ಸ್ಥ್ರೀಯ ಮನಸ್ಥಿತಿಯನ್ನು ತಿಳಿಸಿರುವರು.
..ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌