ಸಾವಿರದ ತಾಯಿ ಸಾವಿತ್ರಿಬಾಯಿ ಈ ನೆಲದ ಶಿಕ್ಷಕಿ

By admin

ಗಜಲ್

ಸಾವಿರದ ತಾಯಿ ಸಾವಿತ್ರಿಬಾಯಿ ಈ ನೆಲದ *ಶಿಕ್ಷಕಿ* ಅಕ್ಷರದವ್ವ
ನೊಂದ ನಾಲಗೆಯ ಮೇಲೆ ಅಕ್ಷರ ಬೀಜ ಬಿತ್ತಿದ *ಸಾಧಕಿ* ಅಕ್ಷರದವ್ವ

ಬೀಡೆವಾಡಿಯಲಿ ಶೂರುವಾಯಿತು ಅಕ್ಷರ ಕ್ರಾಂತಿಯ ಅರಿವಿನ ಹಬ್ಬ
ವಿಧವೆಯರೆದೆಗೆ ಅಕ್ಷರ ಬೆಸೆದು ನಗೆ ಬೀರಿದ *ನಾಯಕಿ* ಅಕ್ಷರದವ್ವ

ಮೂಕ ಜನಕೋಟಿಯ ಕಣ್ಣೀರ ಹರವಿನ ಸಾತ್ವಾಂನದ ತೊಟ್ಟಿಲು ನೀನು
ನೋವುಂಡ ಮೊಗದಲಿ ಮಂದಹಾಸ ಮೂಡಿಸಿದ *ಪ್ರೇರಕಿ* ಅಕ್ಷರದವ್ವ

ಹೆಣ್ಣು ಹೆರವ ಹೊರುವ ಪೊರೆವ ಯಂತ್ರವೆಂಬ ಭ್ರಮೆ ಬೇದಿಸಿದೆ
ತಳತುದಿಯಿಲ್ಲದ ಜೀವಗಳಿಗೆ ಜ್ಞಾನದ ಬುತ್ತಿ ಹಂಚಿದ *ರಕ್ಷಕಿ* ಅಕ್ಷರದವ್ವ

ಸಗಣಿ ಮಣ್ಣರೇಚಿ ಅವಮಾನಿಸಿದರೂ ಛಲ ಬಿಡದ ಧಾತೆ ನೀನು
ಸೋತ ಜೀವಕೆ ಸೈರಣೆ ಶಕ್ತಿ ತುಂಬಿದ *ನಿರೂಪಕಿ* ಅಕ್ಷರದವ್ವ

ಮರುಕವಿಲ್ಲದ ಮನುಜರ ನಡುವೆ ಮಾನವೀಯತೆ ಹುಡುಕಿ ಗೆದ್ದವಳು
ಅಸಮಾನತೆ ಅಳಿಸಿ ಅರಿವಿನ ಬಳಪ ತೀಡಿದ *ಸೇವಕಿ* ಅಕ್ಷರದವ್ವ

ನೀಲಾ ನೋವುಂಡ ನಾರಿ ನೀಲಾಕಾಶಕೆ ಅವಳೇ ಹಾದಿ
ನಿನ್ನ ಅಡಿಯಾಳದಲಿ ನೀಲಿ ಹೂವು ಅರಳಿಸಿದ *ಚಿಂತಕಿ* ಅಕ್ಷರದವ್ವ

-ನೀಲಾ ಬಿ.ಮಲ್ಲೆ ಯಾದಗಿರಿ ಜಿಲ್ಲೆ*
ಸ..ಮಾ.ಪ್ರಾ.ಶಾಲೆ ಕೆಂಭಾವಿ