
ಡಾ.ಬಸವರಾಜ ಎಸ್.ಕಲೆಗಾರ, ಅತಿಥಿ ಉಪನ್ಯಾಸಕರು ದೃಶ್ಯಕಲಾ ಅಧ್ಯಯನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.
ಬುದ್ಧ ಬಸವಣ್ಣನಂತಹ ಮೇಧಾವಿಗಳು ಜನಿಸಿದ ಕಾರಣಕ್ಕೆ ಈ ಮಣ್ಣಿಗೆ ವಿದೇಶಿಗರು ಹಣೆ ಹಚ್ಚಿ ನಮಸ್ಕರಿಸುತ್ತಾರೆ.ಸಾಧ್ಯವಾದರೆ ಮರು ಜನ್ಮವೆಂತಿದ್ದರೆ ಭಾರತೀಯ ಮಡಿಲಲ್ಲಿ ಜನಿಸಬೇಕೆಂಬ ಕನಸನ್ನು ಸಹ ಕಾಣುತ್ತಾರೆ ಅಂತಹ ಶಕ್ತಿ ನಮ್ಮ ತಾಯ್ನಾಡಿನ ಮಣ್ಣಿನಲ್ಲಿದೆ.ಇನ್ನೂ ಕನ್ನಡ ನಾಡು ಅಂದ್ರೆ ನಮಗೆ ನೆನಪಾಗುವುದು ಕೂಡಲ ಸಂಗಮ.ಬದುಕಿನುದ್ದಕ್ಕೂ ಅಸಮಾನತೆಯ ವಿರುದ್ಧ ಹೋರಾಡಿ ಸಮ ಸಮಾಜ ನಿರ್ಮಿಸಲು ಶ್ರಮಿಸಿದ ಬಸವಣ್ಣನವರ ಗುರು ಸಂಗಮನಾಥ ನೆಲೆಸಿದ ಪುಣ್ಯಭೂಮಿ.ಬಸವಣ್ಣನು ಅತ್ಯಂತ ಪ್ರೀತಿಪೂರ್ವಕ,ಧ್ಯಾನದ ಪ್ರತೀಕವಾಗಿ,ಅಲ್ಲದೆ ತನ್ನ ಬದುಕಿನ ಬೆಳಕಾಗಿ ಕೂಡಲ ಸಂಗಮವನ್ನು ಪ್ರೀತಿಸಿದ.ಕೊನೆಗೆ ಇಲ್ಲಿಯೇ ತನ್ನ ಕೊನೆಯ ಉಸಿರನ್ನೆಳೆದರು.

ಕ್ರಿ.ಶ.ಹನ್ನೆರಡನೇ ಶತಮಾನದ ಶರಣ ಶ್ರೀ ಬಸವಣ್ಣ ಗುರುವಿನೊಳಗೊಂದು ಭಕ್ತಿಯ ಸುಧೆಯಾಗಿ ಸಾಮಾಜಿಕ ಸಾಮರಸ್ಯದ ಕನಸನ್ನು ಕಂಡು ವಚನಗಳು ಬರೆದಂತೆ ಬದುಕಿದವರು.ಬರಹ ಮತ್ತು ಬದುಕು ಸಮ ಸಮಾಜವನ್ನು ಕಟ್ಟುವ,ಮುನ್ನಡೆಸುವ ಕ್ರಿಯೆಯಾಗಿ ತಪಸ್ಸುಗೈದವರು.ಕಂಡ ಕನಸಿನ ಫಲವೆಂಬಂತೆ ಮುಂದೆ ಸಾಮಾಜಿಕ ಅಸಮತೋಲನ ಪ್ರಕ್ರಿಯೆಯನ್ನು ನಿಲ್ಲಿಸಿ, ಎಲ್ಲರೂ ನಾವು ಒಂದೇ ಎಂಬ ಭಾವಶುದ್ದಿಯ ನಾಡನ್ನು ಕಟ್ಟಲು ಶ್ರಮಸಿದವರು.ಬದುಕಿನುದ್ದಕ್ಕೂ ಕ್ರಾಂತಿಕಾರಕ ಚಳವಳಿಯಂತೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿ ಸಾಮಾಜಿಕ ಸಾಮರಸ್ಯವನ್ನು ನಿರ್ಮಿಸಿದ ಶಿಲ್ಪಿಗಳೆನಿಸಿಕೊಂಡಿದ್ದಾರೆ. ತಮ್ಮ ವಚನ ಸಾಹಿತ್ಯ ರಚನೆಯ ಮೂಲಕ ಸಮಾಜದ ಮೌಢ್ಯ ಮತ್ತು ಕಂದಾಚಾರಗಳ ಹೊಗೆಯನ್ನು ನಿಲ್ಲಿಸಿದರು.ಸಕಲ ಜೀವಾತ್ಮರ ಲೇಸನ್ನು ಬಯಸಿದ,ಸರ್ವ ಜನಾಂಗ ಶಾಂತಿಯ ಸುಂದರ ತೋಟವಾಗಬೇಕೆಂದು ಬಯಸಿದ ಬಸವಣ್ಣನವರು ಸರ್ವ ಕಾಲಕ್ಕೂ ಸದಾ ಸ್ಮರಿಸಬೇಕಾದ ವ್ಯಕ್ತಿತ್ವವೆಂಬುದು ಸತ್ಯದ ಅರಿವು.ಅವರಿವರೆನ್ನದೆ ಅವ ನಮ್ಮವನೆಂದು ಕರೆದು ಕೂಡಿಸಿದವರು. ಕಾಯಕವೇ ಕೈಲಾಸವೆಂದು ಹೇಳುವ ಮೂಲಕ ಮಾನವ ಬದುಕಿನ ಪ್ರತಿಯೊಂದು ಕಾಯಕ ಶ್ರೇಷ್ಠತೆಯ ಬೆಳಕೆಂದು ಭಾವಿಸಿದವರು.ಎಲ್ಲ ಜಾತಿ ಜನಾಂಗದ ಶರಣರನ್ನು ಅನುಭವ ಮಂಟಪದಲ್ಲಿ ಸೇರಿಸಿ ಸಾಮಾಜಿಕ ಸಮತೋಲನದ ಕಟ್ಟೆಯನ್ನು ಕಟ್ಟಿ ಎಲ್ಲರೂ ನಾವು ಒಂದೇ ಎಂಬ ಭಾವ ಬಿತ್ತಿ ಬೆಳೆದವರು.ಇಂತಹ ಶ್ರೇಷ್ಠ ಶರಣ ಬಸವಣ್ಣನು ಹುಟ್ಟಿದ ನೆಲ ಕೂಡಲ ಸಂಗಮ.
ಬಸವಣ್ಣನ ಅತ್ಯಂತ ಪ್ರೀಯವಾದ ನೆಲ ಈ ಕೂಡಲ ಸಂಗಮವೆಂಬುದನ್ನು ನಾವು ಅರಿತಿದ್ದೇವೆ. ಈ ಭೂಮಿಗೆ ಬಸವಣ್ಣ ಚಿಕ್ಕವರಿದ್ದಾಗಲೂ ಬರುತ್ತಾರೆ.ಅಂತ್ಯದಲ್ಲಿ ತಮ್ಮ ಕೊನೆ ಉಸಿರನ್ನು ಸಹ ಇಲ್ಲಿಯೇ ಬಿಡುತ್ತಾರೆ.ಅಂದರೆ ಈ ನೆಲ ಬಸವಣ್ಣನ ಬಹು ಇಷ್ಟದ ನೆಲವೆಂಬುದು ಸ್ಪಷ್ಟ.
ಬಸವಣ್ಣನ ಹುಟ್ಟು ವಿಜಯಪುರ ಜಿಲ್ಲೆಯ ಬಾಗೇವಾಡಿಯಲ್ಲಿ ಕ್ರಿ.ಶ.೧೧೩೪ರಲ್ಲಿ ತಂದೆ ಮಾದರಸ ತಾಯಿ ಮಾದಲಾಂಬಿಕೆಯ ಪುತ್ರರಾಗಿ ಜನಿಸುತ್ತಾರೆ.ಬಸವಣ್ಣನು ಶರಣ ಸಂಸ್ಕೃತಿಯ ಚಿಂತನೆಯನ್ನು ಬಾಲ್ಯದಲ್ಲೇಯೇ ಅರಿಯಲು ಮುಂದಾದವರು ಎಂಬುದನ್ನು ಅರಿಯಬಹುದು.ಸಮಾಜದಲ್ಲಿ ನಡೆಯುವ ಭೇಧ ಭಾವದ ಸಂಗತಿಗಳನ್ನು ಅರಿತು ವೈಧಿಕ ಧರ್ಮದ ಜನಿವಾರ ನಿರಾಕರಿಸಿದ ನಂತರ ಕೂಡಲ ಸಂಗಮಕ್ಕೆ ಬರುತ್ತಾರೆ.ಸಾಮಾಜಿಕ ಚಿಂತನೆಯ ನೆಲೆಗಳೊಂದಿಗೆ ಕಾಯಕ ತತ್ವದ ನೀತಿಯನ್ನು ಪ್ರತಿಪಾದಿಸುತ್ತಾ,ವೈಧಿಕ ಪರಂಪರೆಯ ಹೊಳಹುಗಳಾಚೆ ವೈಚಾರಿಕ ವಿಚಾರಗಳನ್ನು ಜಾರಿಗೆ ತಂದು ಹರಳಯ್ಯ ಮತ್ತು ಮಧುವರಸ ದಂಪತಿಗಳ ಮಕ್ಕಳ ಅಂತರ್ಜಾತಿ ವಿವಾಹವನ್ನು ಮಾಡಿಸುತ್ತಾರೆ.ಅನೇಕ ಸಮ ಸಮಾಜದ ಕನಸಿಗೆ ದುಡಿಯುತ್ತಿರುವ ಸಂದರ್ಭದಲ್ಲಿ ಅಂದಿನ ರಾಜಕೀಯ ವ್ಯೆವಸ್ಥೆಯಲ್ಲಿ ಬಿಜ್ಜಳ ರಾಜನಿಂದ ಗಡಿಪಾರು ಮಾಡುವಂತಹ ಶಿಕ್ಷೆಯನ್ನು ಸ್ವೀಕರಿಸುವ ಹಂತಕ್ಕೆ ಬಂದಾಗ ತಮ್ಮ ಮಂತ್ರಿ ಪದವಿಯನ್ನು ಸಹ ನಿರಾಕರಿಸಿ ಕೂಡಲ ಸಂಗಮದತ್ತ ಮತ್ತೆ ಪ್ರಯಾಣ ಬೆಳೆಸುತ್ತಾರೆ.ಹೀಗೆ ಬಸವಣ್ಣನ ಮನಸ್ಸಿಗೆ ಗುರುವಿನ ಧ್ಯಾನಸ್ಥ ಸ್ಥಿತಿಯೇ ಸಮಾಧಾನ ಎಂಬಂತೆ ಅವರ ಬದುಕಿನಲ್ಲಿ ಕೂಡಲ ಸಂಗಮ ಪವಿತ್ರ ಸ್ಥಳವಾಗುತ್ತದೆ. ಕೊನೆಗೆ ಗುರುವಿನ ಅಂಗಳದಲ್ಲಿ ಹರಿವ ಮಲಭ್ರಭೆ ಮತ್ತು ಕೃಷ್ಣೆಯ ಮಡಿಲಲ್ಲಿ ಲಿಂಗೈಕ್ಯರಾಗುತ್ತಾರೆ.ಇಂತಹ ಮಹಾ ಮಾನವತಾವಾದಿ ಬಸವಣ್ಣನ ಜೀವನ ಚರಿತ್ರೆ ಮತ್ತು ವಚನಗಳ ವಸ್ತು ವಿಷಯದ ದೃಶ್ಯಾವಳಿಗಳನ್ನು ಕುಂಚ, ಬಣ್ಣ,ರೇಖೆ,ಶಿಲ್ಪಗಳಂತಹ ಮಾಧ್ಯಮಗಳಲ್ಲಿ ಅರಳಿಸಿ ಕೂಡಲ ಸಂಗಮ ಸಂಗಮದ ಬಸವ ಕಲಾ ಸಂಗ್ರಹಾಲಯದಲ್ಲಿ ಕಲಾವಿದರು ಅನಾವರಣಗೊಳಿಸಿದ್ದಾರೆ.
ಇಂತಹದೊಂದು ಮಹತ್ವ ಪೂರ್ಣ ಯೋಜನೆಯೊಂದು ಕೂಡಲ ಸಂಗಮದ ಆವರಣದಲ್ಲಿ ನಿರ್ಮಿಸುವ ಕನಸೊಂದು ಕಂಡು ನನಸು ಮಾಡುವಲ್ಲಿ ಯಶಸ್ವಿಯಾದವರು ಕಲಾವಿದರಾದ ಡಾ.ಬಸವರಾಜ ಶಿ.ಅನಗವಾಡಿ ಅವರು.ಬಸವ ಕಲಾನಿಕೇತನ ಗುಂಡನಪಲ್ಲಿ ಸಂಸ್ಥೆಯ ಮೂಲಕ ಸರ್ಕಾರದ ಗಮನ ಸೆಳೆದು ಇಂತಹ ಕಲಾ ಸಂಗ್ರಹಾಲಯ ಯೋಜನೆಯನ್ನು ಪೂರ್ಣಗೊಳಿಸಿ ಪ್ರವಾಸಿಗರಿಗೆ ಬಸವಣ್ಣನ ಬದುಕಿನ ದರ್ಶನವನ್ನು ಮಾಡಿಸಿದ್ದಾರೆ. ಸುಮಾರು ೧೬೫೯ ಚದರ ಅಡಿಯ ಜಾಗದಲ್ಲಿ ಈ ಆರ್ಟ್ ಮ್ಯೂಸಿಯಂ ಸ್ಥಾಪಿಸಿದ್ದಾರೆ.
ಈ ಬಸವ ಕಲಾ ಮ್ಯೂಸಿಯಂ ಸಿದ್ಧತೆಯಾಗಲು ಸುಮಾರು ಒಂದು ದಶಕಕ್ಕಿಂತ ಹೆಚ್ಚು ಕಾಲಾವಧಿ ಸಮಯ ಬೇಕಾಯಿತು.ಶಿಲ್ಪ, ಚಿತ್ರ, ಉಬ್ಬು ಮತ್ತು ಪೂರ್ಣ ಮಾದರಿಯ ಶಿಲ್ಪ,ಭಿತ್ತಿಯ ಮೇಲೆ ಬಣ್ಣದ ಗೆರೆಗಳ ಜಾನಪದ ಶೈಲಿಯ ಚಿತ್ತಾರ ಹೀಗೆ ಹಲವು ಬಗೆಯಲ್ಲಿ ಕಲಾ ಸಂಗ್ರಹಾಲಯ ರೂಪಗೊಂಡಿದೆ.ಸಿಮೆಂಟ್,ಕಬ್ಬಿಣ, ಕಟ್ಟಿಗೆ,ತಂತಿ,ಪ್ಲಾಸ್ಟರ್ ಆಫ್ ಪ್ಯಾರಿಸ್,ಫೈಬರ್,ಫೆವಿಕೋಲ್,ಗೋಣಿತಟ್ಟು,ಬಬ್ರೆಶ್, ಇತ್ಯಾದಿ ಸಾಮಾಗ್ರಿಗಳ ಮೂಲಕ ಕಲಾವಿದರು ಕಲಾಕೃತಿಗಳಿಗೆ ಜೀವ ತುಂಬಿದ್ದಾರೆ.
ಬಸವಕಲಾ ಸಂಗ್ರಹಾಲಯವು ಒಟ್ಟು ಏಳು ವಿಭಾಗಗಳಲ್ಲಿ ತನ್ನ ವಸ್ತು ವಿಷಯದ ಸಾರವನ್ನು ನೋಡುಗರಿಗೆ ಉಣಬಡಿಸುತ್ತದೆ.ಭಾಗ ಒಂದರಲ್ಲಿ ಬಸವಣ್ಣನವರ ವಚನಗಳ ಮೂಲಕ ಬೆಳಕನ್ನು ಚೆಲ್ಲುವ ದೃಶ್ಯ, ಲೇಖನದ ಶೀರ್ಷಿಕೆಗೆ ಸಂಬಂಧಿಸಿದಂತೆ ವಿವರಣೆಯನ್ನು ಗಮನಿಸುವುದಾದರೆ ಹೀಗೆ ಕಾಣಬಹುದು. ಎರಡು ಕಡೆ ಪ್ರವೇಶ ದ್ವಾರಗಳಿದ್ದು.ಮಧ್ಯೆ ಬಸವಣ್ಣ ವೃತ್ತಾಕಾರದ ಭೂಮಿಯ ಮೇಲೆ ವಚನ ಬರೆವ ರೀತಿಯಲ್ಲಿ ಕುಳಿತಿದ್ದಾನೆ.ಹಿಂದೆ ಪ್ರಕಾಶಮಾನವಾದ ಸೂರ್ಯನ ಕಿರಣದಂತೆ ಬಸವಣ್ಣನವರ ವಚನ ಸಾಹಿತ್ಯದ ಬೆಳಕು ಭೂಮಂಡಲ ತುಂಬಾ ಪಸರಿಸಿದಂತೆ ಕಂಡುಬರುತ್ತದೆ. ಕೆಳಗೆ ಭಕ್ತಾದಿಗಳು ಬಸವಣ್ಣನಿಗೆ ಕೈ ಮುಗಿದು ನಮಿಸುತ್ತಿರುವುದು .ಪೃಥ್ವಿಯ ಎಡ ಮತ್ತು ಬಲ ಭಾಗದಲ್ಲಿ ಪ್ರಾಚೀನ ಹಸ್ತಪ್ರತಿ ಕಟ್ಟುಗಳೆರಡು ಕಾಣುತ್ತವೆ.ಸೂರ್ಯನ ಕಿರಣದ ಮೇಲ್ಭಾಗ ಬಿಳಿ ಬಣ್ಣದ ಜಾನಪದ ಶೈಲಿಯ ಮಾನವಾಕೃತಿಯ ಸರಣಿ ಚಿತ್ರ ಆಕರ್ಷಕವಾಗಿವೆ.ಮೇಲ್ಭಾಗದ ಭಿತ್ತಿಯಲ್ಲಿ ಆನೆಯ ದಂಡು,ನಂದಿಯ ಸಮೂಹ ಚಿತ್ರಗಳು ಬಿಳಿ ಬಣ್ಣದಲ್ಲಿ ಕಣ್ಮನ ಸೆಳೆಯುತ್ತವೆ.ನಾಡಿನ ಸಾಂಸ್ಕೃತಿಕ ಚಿಂತನೆಯ ಹೊಳಹುಗಳನ್ನು ವಿಶ್ಲೇಷಣೆ ಮಾಡುವ ಹಲವು ಶಿಲ್ಪಚಿತ್ರಗಳೊಂದಿಗೆ ಹೊರ ಭಾಗದ ಈ ದೃಶ್ಯ ಪ್ರವಾಸಿಗರಿಗೆ ಒಳ ಪ್ರವೇಶಿಸುವಂತೆ ಮನ ಸೆಳೆಯುತ್ತದೆ. ಹಳ್ಳಿಯ ಬೃಹತ್ ಮನೆಯೊಂದರ ತಲೆ ಬಾಗಿಲುಗಳು ಮ್ಯೂಸಿಯಂ ಪ್ರವೇಶಕ್ಕೆ ಕೈ ಮಾಡಿ ಕರೆಯುವಂತೆ ಆಕರ್ಷಕ ಚಿತ್ರ ಸುರುಳಿಗಳನ್ನು ಹೊಂದಿವೆ.
ಭಾಗ ಎರಡು ಅತ್ಯಂತ ಮಹತ್ವದ್ದು. ಕಲಾ ಸಂಗ್ರಹಾಲಯದಲ್ಲಿ ಬಸವಣ್ಣನು ಬಾಲ್ಯದ ಬದುಕಲ್ಲಿ ಕೂಡಲ ಸಂಗಮವನ್ನು ಹೇಗೆ ಪವಿತ್ರ ಸ್ಥಳವನ್ನಾಗಿ ಮಾಡಿಕೊಂಡನು ಎಂಬ ಮಹತ್ವದ ನಿಲುವನ್ನು ಅರಿಯಬಹುದು.ಈ ದೃಶ್ಯ ನೋಡಿದಾಗ ಬಸವಣ್ಣ ಧ್ಯಾನದ ಪ್ರತೀಕವಾಗಿ ಮತ್ತು ಭಾವನಾತ್ಮಕ ಸಂಬಂಧಗಳ ಕೊಂಡಿಯಾಗಿ ಕೂಡಲ ಸಂಗಮವನ್ನು ಇವತ್ತಿಗೂ ನಾಡು ಹೇಗೆ ನೋಡುತ್ತಿದೆಯೋ ಹಾಗೆಯೇ ಅದೇ ನೈಜ ದೃಶ್ಯವನ್ನು ಈ ಕಲಾ ಸಂಗ್ರಹಾಲಯದಲ್ಲಿ ಸುವರ್ಣ ಭೂಮಿ ಎಂಬ ತಲೆ ಬರಹದ ಶಿಲ್ಪದೃಶ್ಯವನ್ನು ನೋಡಬಹುದು.ಕಲಾವಿದರು ಮತ್ತು ಕಲಾ ಸಂಗ್ರಹಾಲಯದ ನಿರ್ಮಾತೃ ಡಾ.ಬಸವರಾಜ ಶಿ.ಅನಗವಾಡಿ ಅವರ ಕಲ್ಪನೆಯೂ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.ಯೂನಿಟ್( ಭಾಗ – ೧) ಒಂದರ ಬಾಗಿಲ ಒಳಗೆ ಪ್ರವೇಶಿಸಿ ಒಳ ಬರುತ್ತಿದ್ದಂತೆ ಕೃಷ್ಣೆ ಮತ್ತು ಮಲಪ್ರಭೆ ನದಿಗಳು ಕೂಡಿಕೊಂಡು ಸಂಗಮವಾಗಿ,ಮಧ್ಯೆದಲ್ಲೇ ಬಸವಣ್ಣ ಐಕ್ಯವಾದದ್ದು,ಹಿಂದೆ ಗುರು ಸಂಗಮನಾಥನ ದೇವಾಲಯ,ಗುರುವಿನ ಮುಂದೆ ಕುಳಿತು ಬಸವಣ್ಣ ಧ್ಯಾನಿಸುವ ದೃಶ್ಯ,ಜನಿವಾರ ನಿರಾಕರಣೆ,ಮಂತ್ರಿ ಪದವಿ ನಿರಾಕರಿಸಿದ್ದು,ಬಾಲ್ಯದಲ್ಲಿ ಮತ್ತು ಕೊನೆಯದಾಗಿ ಕೂಡಲ ಸಂಗಮದತ್ತ ಪ್ರಯಾಣ ಬೆಳೆಸಿದ ದೃಶ್ಯ ಚಿತ್ರಗಳು, ಹರಿವ ನೈಜ ನೀರಿನ ನದಿಯಾಕಾರ ದೃಶ್ಯ, ನದಿಗಳ ದಂಡೆಯಲ್ಲಿ ಸಿಮೆಂಟ್ ಮಾಧ್ಯಮದ ನವಿಲು, ಮೊಲ, ಜಿಂಕೆಗಳಲ್ಲದೆ ಜಲಚರ ಜೀವಿಗಳ ಚಿಕ್ಕ ಚಿಕ್ಕಗಾತ್ರದ ಶಿಲ್ಪಗಳು ಹೀಗೆ ಕೂಡಲ ಸಂಗಮದ ನೈಜ ಸ್ಥಿತಿಯನ್ನು ಮರು ಜ್ಞಾಪಿಸಿದಂತಹ ಅನುಭವವನ್ನು ತಿಳಿಸುವ ರೀತಿಯಲ್ಲಿ ದೃಶ್ಯವನ್ನು ಸೃಷ್ಟಿಸಿದ್ದಾರೆ.ಕಲಾವಿದರ ಸೃಜನಶೀಲ ಚಿಂತನೆ ಮತ್ತು ಕಾಯಕ ಪ್ರಜ್ಞೆಯನ್ನು ಅರಿಯುವಂತಿದೆ. ಭಾಗ ಎರಡರ ಉಪ ವಿಭಾಗದಲ್ಲಿ ಬೃಹತ್ ಮತ್ತು ಚಿಕ್ಕ ಗಾತ್ರಗಳಲ್ಲಿ ಬಸವಣ್ಣನ ವಚನಗಳು ಅರ್ಥಪೂರ್ಣವಾಗುವಂತೆ ತಿಳಿಸುವ ರೀತಿಯಲ್ಲಿ ಕಲಾಕೃತಿಗಳು ಮೂಡಿ ಬಂದಿವೆ.ಈ ಭಾಗ ಕಲಾ ಸಂಗ್ರಹಾಲಯದ ಪ್ರಮುಖ ಶಕ್ತಿಯೆಂದೇ ಹೇಳಬಹುದು.ಕಲಾವಿದರ ಕೈಗಳು ಮುಂದಕ್ಕೆ ಹೋಗದಂತೆ,ಹಲವಾರು ತಿಂಗಳ ಕಾಲಾವಧಿಯಲ್ಲಿ ಅರಳಿ ನಿಂತ ಕಲಾಕೃತಿಗಳು ನೋಡುಗರಿಗೆ ವಚನ ಮನದಟ್ಟವಾಗುವಂತೆ ಚಿತ್ರಿಸಿದ್ದಾರೆ.ಸುಮಾರು ೫೨ ಕಲಾಕೃತಿಗಳು ಸಂಗ್ರಹಾಲಯದ ಭಿತ್ತಿಗೆ ನಗು ಚೆಲ್ಲುತ್ತಿವೆ.ಎಲ್ಲಾ ಕೃತಿಗಳ ಸುತ್ತಲೂ ಸಂಬಂಧ ಹೊಂದುವಂತೆ ಸುಂದರ ವಿನ್ಯಾಸಗಳುಳ್ಳ ಚೌಕಟ್ಟುಗಳನ್ನು ಹಾಕಿಸಿದಂತೆ ಗೋಡೆಗೆ ಹೊಂದಿಸಲಾಗಿದೆ.ಒಂದು ಬಾಗಿಲಿನಿಂದ ಒಳ ಹೊಕ್ಕಾಗ ಕಣ್ಣುಗಳು ಮೇಲೆ ನೋಡಿದಂತೆಲ್ಲ ತಾಸುಗಟ್ಟಲೇ ನೆಲ ನೋಡುವ ಮನಸ್ಸಾಗುವುದಿಲ್ಲ.ಕಾರಣ ಕಲಾವಿದನ ಕಲಾ ನೈಪುಣ್ಯತೆ ಮತ್ತು ಬಸವಣ್ಣನವರ ವಚನಗಳ ತಾತ್ವಿಕತೆಯನ್ನು ಅರಿಯಲು ಕಣ್ಣುಗಳು ನೆಟ್ಟಗೆ ಗೋಡೆಯ ಮೇಲಿನ ಕಲಾಕೃತಿಗಳನ್ನು ನೋಡಲು ಬಯಸುತ್ತವೆ.ಮೊದಲಿಗೆ ದಯವಿಲ್ಲದ ಧರ್ಮಯಾವುದಯ್ಯಾ,ನಾನು ಆರಂಭವ ಮಾಡುವನಯ್ಯಾ, ಮನೆಯಲ್ಲಿ ಅರಸಿಯಾಗಿಪ್ಪುದರಿಂದ,ಎಮ್ಮವರು ಬೇಸಗೊಂಡಡೆ ಶುಭಲಗ್ನವೆನ್ನಿರಯ್ಯಾ,ವ್ಯಾಧನೊಂದು ಮೊಲನ ತಂದಡೆ ಸಲುವ ಹಾಗಕ್ಕೆ ಬಿಲಿವರಯ್ಯಾ, ಚೆನ್ನಯ್ಯನ ಮನೆಯ ದಾಸನ ಮಗನು,ಹಬ್ಬಕ್ಕೆ ತಂದ ಹರಕೆಯ ಕುರಿ,ನೆರೆ ನಂಬೋ ನೆರೆ ನಂಬೋ ಧರಧುರವಿಲ್ಲದೆ ಸಾಮವೇದಿಗಳಂತೆ,ಸಂಸಾರವೆಂಬಡವಿಯಲ್ಲಿ ಹುಳಿಯುಂಟು ಕರಡಿಯುಂಟು, ಅರಿಸಿನವನೆ ಮಿಂದು ಹೊಂದೊಡಿಗೆಯೆನೆ ತೊಟ್ಟು,ಅರಸನ ಕಂಡು ಪುರುಷನ ಮರೆದಂತೆ,ನೀರ ಕಂಡಲ್ಲಿ ಮುಳುಗುವರಯ್ಯಾ ಹೀಗೆ ಸುಮಾರು ಐವತ್ತು ವಚನಗಳ ಮೇಲೆ ಚಿತ್ರಶಿಲ್ಪವನ್ನು ರಚಿಸಿದ್ದಾರೆ.ಹಲವಾರು ವರ್ಷಗಳ ನಿರಂತರ ಶ್ರಮದ ಬೆವರಿಂದರಳಿದ ಕಲಾಕೃತಿಗಳು ವಚನಗಳ ಪೂರ್ಣ ಅರ್ಥವನ್ನು ಗಮನಾರ್ಹವಾಗಿ ಮನ ಸೆಳೆಯುತ್ತವೆ.ಪ್ರತಿಯೊಂದು ದೃಶ್ಯವು ವಚನದ ಆತ್ಮವಾಗಿ,ವಚನಗಳ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ಬಸವಣ್ಣನ ಬದುಕಿನ ಜೀವಂತಿಕೆಯನ್ನು ಅರ್ಥೈಸಿಕೊಳ್ಳುವ ಹಾಗೆ ಚಿತ್ರಿಸಿದ್ದಾರೆ.ಈ ಚಿತ್ರಶಿಲ್ಪ ಕಲಾಕೃತಿಗಳು ರಚನೆಯಾಗಿದ್ದು ಹೀಗೆ : ಮೊದಲು ಕಲಾವಿದನ ಚಿತ್ತ ಭಿತ್ತಿಯ ಮೇಲೆ ಪ್ರಕಟವಾಗಿ ನಂತರ ಬಿಳಿಯ ಬಣ್ಣದ ಹಾಳೆಯ ಮೇಲೆ ರೇಖಾ ಮಾಧ್ಯಮದ ಕರಡು ಚಿತ್ರವಾಗಿ,ಮುಂದೆ ಅದೇ ರೇಖಾಚಿತ್ರ ಮಣ್ಣಿಗೆ ಪುಷ್ಟಿ ನೀಡಿ,ಕೆಸರಿನ ಕೈಯಲ್ಲಿ ಬೆರೆತು ಮಣ್ಣಿನ ಉಬ್ಬು ಮಾದರಿಯ ಶಿಲ್ಪವಾಗಿ,ಅಲ್ಲದೇ ಕೆಲವೊಂದು ಸಲ ಪ್ಲಾಸ್ಟರ್ ಆಫ್ ಪ್ಯಾರಿಸ್ನಲ್ಲಿ ಬೆರೆತು ಶಿಲ್ಪವಾಗುತ್ತವೆ.ಆದರೆ ಇಲ್ಲಿ ಕೆಸರಿನಲ್ಲಿ ಜೀವ ಪಡೆದ ನಂತರ ಫೈಬರ್ ಮೂಲಕ ಶಾಶ್ವತ ಶಿಲ್ಪವಾಗಿ ಅರಳಿ ಕೊನೆಗೆ ಅಕ್ರಲಿಕ್ ಮಾಧ್ಯಮ ಬಣ್ಣದ ಮೂಲಕ ಜೀವಂತಿಕೆಯನ್ನು ಪಡೆದಿವೆ.ಹಲವಾರು ದಿನ, ತಿಂಗಳು ಮತ್ತು ವರ್ಷಗಳ ಕಾಲದಲ್ಲಿ ಜೀವ ತುಂಬಿಕೊಂಡ ಬಸವ ಕಲಾ ಸಂಗ್ರಹಾಲಯ ನಿಜಕ್ಕೂ ಬಸವಣ್ಣನ ಬದುಕು ಮತ್ತು ವಚನಗಳ ವಿವರಣೆಯನ್ನು ಅರಿಯಲು ಅನುಕೂಲವಾಗುವಂತೆ ನಿರ್ಮಿಸಿದ್ದಾರೆ.ಉಬ್ಬು ತೆಗ್ಗುಗಳ ರಚನೆಯಲ್ಲಿ ಆಯಾ ವಸ್ತುವಿನ ಮೂಲ ಸಂವೇದನೆ ರೂಪ ಪಡೆದಿವೆ.ಬಣ್ಣಗಳ ಬೆಳಕಿನಿಂದ ಮಾನವಾಕೃತಿ ಮತ್ತು ಪರಿಸರವೆಲ್ಲವು ನೆರಳು ಬೆಳಕಿನ ವೈವಿಧ್ಯತೆಯಲ್ಲಿ ಅರ್ಥಪೂರ್ಣವಾಗಿ ಕಲಾಕೃತಿಗಳು ಜೀವ ಪಡೆದಿವೆ.
ಯೂನಿಟ್ ಮೂರರಲ್ಲಿ ( ಭಾಗ – ೩)ಬಸವಣ್ಣನವರ ಬದುಕಿನ ಕುರಿತಾದ ವಿವಿಧ ಘಟನೆಗಳು ಮತ್ತು ಆ ಕಾಲದ ಶಿವ ಶರಣರ ಭಾವನೆಗಳನ್ನು ಅಭಿವ್ಯಕ್ತಿ ಪಡಿಸುವ ಉಬ್ಬು ಮಾದರಿಯ ಶಿಲ್ಪಚಿತ್ರಗಳು ನೋಡಲು ಆಕರ್ಷಕ ಮತ್ತು ಅರ್ಥಪೂರ್ಣವಾಗಿವೆ.ಈ ಉಬ್ಬುಶಿಲ್ಪ ಕಲಾಕೃತಿಗಳು ಬ್ರೌನ್ಜ್ ವರ್ಣದ ಮಾದರಿಯಲ್ಲಿ ವರ್ಣ ಲೇಪನವಾಗಿದೆ.ನೆಲದಲ್ಲಿ ಹುದುಗಿದ ಪ್ರಾಚೀನ ವಸ್ತುಗಳಂತೆ ಕಾಣುವ,ಕಪ್ಪು ಬಣ್ಣಕ್ಕೆ ಬಂಗಾರದ ವರ್ಣ ಲೇಪಿಸಿದಂತೆ ಕಾಣುವ ಉಬ್ಬುಶಿಲ್ಪಗಳು ಸುವರ್ಣ ಭೂಮಿ ಕೂಡಲ ಸಂಗಮವೆನ್ನುವ ತಲೆ ಬರಹದ ಶಿಲ್ಪಗಳು ಹುಟ್ಟುವುದಕ್ಕಿಂತ ಮುಂಚೆಯೇ ಮಾಡಿದ್ದವು.೩.೧೧ × ೪.೧, ೪.೪×೪.೧ ಅಳತೆಯ ಸುಮಾರು ೫೨ ಉಬ್ಬುಶಿಲ್ಪ ಕಲಾಕೃತಿಗಳು ಒಂದು ಕೋಣೆಯ ಭಿತ್ತಿಗೆ ಅಂಟಿಕೊಂಡಿವೆ.ಉಬ್ಬು ಶಿಲ್ಪಗಳ ಚೆಲುವು,ಆಯಾ ಆಯಾಮದ ಸಾಂದರ್ಭಿಕ ಸನ್ನಿವೇಶದ ಜೀವಂತಿಕೆಯಂತೆ ರಚನೆಯಾಗಿವೆ.

ಯೂನಿಟ್ ನಾಲ್ಕರಲ್ಲಿ ( ಭಾಗ – ೪)ಅತ್ಯಂತ ಮಹತ್ವ ಶಿಲ್ಪವೊಂದು ತಲೆ ಎತ್ತಿದೆ.ಸಂಗ್ರಹಾಲಯಕ್ಕೆ ಕಿರಿಟಪ್ರಾಯವಾದ ಕಲಾಕೃತಿಯೆಂದೇ ನೋಡುಗರು ಭಾವಿಸುತ್ತಾರೆ. ಸುಮಾರು ೨೧೯೫ ಚದರ ಅಡಿಯಲ್ಲಿ ನಿರ್ಮಾಣವಾದ ಕಲಾಕೃತಿಯಲ್ಲಿ ಬೃಹತ್ ಭಿತ್ತಿಗೆ ೨೭೦ ಶಿವ ಶರಣರು ಒಂದೆಡೆ ಸೇರಿರುವ ರೀತಿಯಂತೆ ಮುಖ ಮತ್ತು ಅರ್ಧದೇಹ ಭಾಗವನ್ನು ಚಿತ್ರಿಸಿದ್ದಾರೆ.ಈ ಶಿಲ್ಪಚಿತ್ರದಲ್ಲಿ ಕಲಾವಿದನ ಸೃಜನಶೀಲ ಕಲಾವಂತಿಕೆಯನ್ನು ಗಮನಿಸಬಹುದು.ಆಯಾ ಶರಣರ ಮುಖಭಾವನೆಗಳನ್ನು ಗಮನಿಸುತ್ತಿದ್ದಂತೆ ಒಂದು ಶಿಲ್ಪದ ಮುಖ ಮತ್ತೊಂದು ಶಿಲ್ಪದಂತೆ ಇಲ್ಲ. ಭಿನ್ನ ವಿಭಿನ್ನ ಮಾದರಿಯಲ್ಲಿ ಶಿಲ್ಪಿಗಳು ಶಿಲ್ಪವನ್ನು ರೂಪಿಸಿದ್ದಾರೆ.ಉಡುಗೆ ತೊಡುಗೆ,ಭಾವನೆಗಳನ್ನು ವಿಭಿನ್ನತೆಯ ಮಾದರಿಯಲ್ಲಿ ಕಂಡುಬರುವಂತೆ ಚಿತ್ರಿಸಿದ ಶಿಲ್ಪಕಲಾವಿದರ ಕಲ್ಪನೆಗೆ ಕೃತಜ್ಞತಾಭಾವ ಅರ್ಪಿಸದೆ ಇರಲಾರರು.ಜಾತಿ ಮತ ಭೇಧಗಳಾಚೆ ದೂರ ಮಾಡಿ ಎಲ್ಲ ಜನಾಂಗದ ಶಿವ ಶರಣರು ಬಸವಕಲ್ಯಾಣದ ಅನುಭವ ಮಂಟಪದಲ್ಲಿ ಕುಳಿತು ಅನೇಕ ವಿಚಾರಗಳನ್ನು ಗಮನಾರ್ಹವಾಗಿ ಚರ್ಚಿಸುತ್ತಿದ್ದರು ಎಂಬ ಕಲ್ಪನಾಧಾರಿತ ಚಿತ್ರವೊಂದು ಈ ಕಲಾ ಸಂಗ್ರಹಾಲಯದಲ್ಲಿ ನಿರ್ಮಾಣವಾಗಿದ್ದು ಮಹತ್ವದ ಸಂಗತಿ.ಯೂನಿಟ್ ನಾಲ್ಕರ ಉಪವಿಭಾಗದಲ್ಲಿ ತೋರಿಸಿದಂತೆ ಅನುಭವ ಮಂಟಪದಲ್ಲಿ ಶರಣ ಅಲ್ಲಮಪ್ರಭು, ಬಸವಣ್ಣ,ಅಕ್ಕ ಮಹಾದೇವಿ ಅವರೊಂದಿಗೆ ಸುಮಾರು ೭೫ ಶಿವ ಶರಣರು ಕೆಳಬದಿಯಲ್ಲಿ ಕುಳಿತಿದ್ದಾರೆ. ಅಲ್ಲಮಪ್ರಭುಗಳು ಅವರನ್ನು ಗಮನಿಸುತ್ತಿದ್ದಾರೆ.ಪ್ರತಿಯೋಬ್ಬ ಶರಣರ ಮುಖಭಾವ,ದೈಹಿಕ ಭಂಗಿ,ಕಣ್ಣಿನ ನೋಟ ಎಲ್ಲವೂ ಚಲನಶೀಲ ಗುಣವನ್ನು ಪಡೆದಿವೆ.ಇಂತಹ ದೃಶ್ಯ ಕಲ್ಪನೆಯ ಬೃಹತ್ ಚಿತ್ರವೊಂದು ನೋಡುಗರಿಗೆ ಅಂದಿನ ಶಿವ ಶರಣರ ಅನುಭವ ಮಂಟಪವು ಹೀಗೆ ಇತ್ತು ಎಂಬ ದೃಶ್ಯವನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.
ಯೂನಿಟ್ ಐದು ಮತ್ತು ಆರರಲ್ಲಿ( ಭಾಗ-೫ ಮತ್ತು ೬ ) ಬಸವಣ್ಣನವರ ಕುರಿತು ರಚಿಸಿದ ಕಲಾಕೃತಿಗಳ ಛಾಯಾಚಿತ್ರ ಪ್ರದರ್ಶನಾಲಯ ಇದಾಗಿದೆ.ಭಿತ್ತಿಯ ಮೇಲೆ,ಕಟ್ಟಿಗೆಯ ಫಲಕಗಳ ಮೇಲೆ,ಪ್ರಾಚೀನ ಹಸ್ತಪ್ರತಿಗಳ ಮೇಲೆ,ಗಾಜಿನ ಮೇಲೆ,ಚರ್ಮದ ಮೇಲೆ,ನಾಣ್ಯದ ಮೇಲೆ,ಅಂಚೆ ಚೀಟಿಯ ಮೇಲೆ ಹೀಗೆ ಮುಂತಾದ ಬಗೆ ಬಗೆಯ ವಿವಿಧತೆಯಲ್ಲಿ ಬಸವಣ್ಣ ಮತ್ತು ಆತನ ವಿಚಾರಗಳು ಕಲಾಕೃತಿಗಳ ರೂಪದಲ್ಲಿ ಪ್ರಸಾರವಾದ ಪ್ರಕ್ರಿಯೆಯನ್ನು ಈ ಎರಡು ವಿಭಾಗದಲ್ಲಿ ಕಾಣಬಹುದು. ಭಾಗ ಐದರಲ್ಲಿ ೪೫ ಚಿತ್ರಗಳಿವೆ, ಭಾಗ ಆರರಲ್ಲಿ೧೭೪ ಚಿತ್ರಗಳನ್ನು ಗಮನಿಸಬಹುದು.ಈ ಎಲ್ಲಾ ಸಾಧ್ಯತೆಯ ಚಿತ್ರಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಕೀರ್ತಿ ಈ ಕಲಾ ಸಂಗ್ರಹಾಲಯದ ರೂವಾರಿ ಡಾ.ಬಸವರಾಜ ಶಿ.ಅನಗವಾಡಿ ಅವರಿಗೆ ಸಲ್ಲುತ್ತದೆ.ಸಂಶೋಧನೆ ಅಧ್ಯಯನ ಕೇವಲ ಕೃತಿ ರೂಪದಲ್ಲಿ ಪ್ರಕಟಿಸುವ ಮುನ್ನ ಅವುಗಳ ಛಾಯಾಗ್ರಹಣ ಚಿತ್ರಗಳನ್ನು ಈ ಕಲಾ ಸಂಗ್ರಹಾಲಯದ ಒಂದು ಭಾಗದಲ್ಲಿ ಪ್ರದರ್ಶಿಸಿದರೆ ಚಿತ್ರಕಲೆಯ ಇತಿಹಾಸದಲ್ಲಿ ಬಸವಣ್ಣ ಹೇಗೆ ರೂಪ ಪಡೆದಿದ್ದಾನೆ ಎಂಬ ಮಹತ್ವದ ಅಂಶಗಳನ್ನು ಅರಿಯಲು ವೀಕ್ಷಕರಿಗೆ ಅನುಕೂಲವಾಗಲಿದೆ ಎಂಬ ಚಿಂತನೆಯಿಂದ ಈ ಛಾಯಾಚಿತ್ರಗಳ ಪ್ರದರ್ಶನಾಲಯವನ್ನು ತೆರೆಯಲಾಗಿದೆ.ಈ ಪ್ರದರ್ಶನದಲ್ಲಿರುವ ಚಿತ್ರಕಲಾಕೃತಿಗಳನ್ನು ಅಂದಿನ ಮೈಸೂರು ಅರಮನೆಯ ಚಿತ್ರಕಲಾವಿದರಾದ ಶ್ರೀ ಸಿದ್ದಲಿಂಗಸ್ವಾಮಿ, ಶ್ರೀ ಎಂ.ವೀರಪ್ಪ, ಹಾಗೆಯೇ ಪ್ರಖ್ಯಾತ ಕಲಾವಿದರಾದ ಶ್ರೀ ಬಿ.ಆರ್.ಕೋಟ್ಯಾಳಕರ್,ಡಾ.ವಿ.ಟಿ.ಕಾಳೆ, ಶ್ರೀ ಸಿ. ಬಿ.ಸೋಮಶೆಟ್ಟಿ, ಶ್ರೀ ಬಸವರಾಜ ಮುಗಳಿ, ಶ್ರೀ ಕೆ.ಗಂಗಾಧರ, ನಾಡೋಜ ಡಾ.ಜೆ.ಎಸ್.ಖಂಡೇರಾವ್ ಸೇರಿದಂತೆ ಮುಂತಾದ ಕಲಾವಿದರು ಬಸವಣ್ಣನ ಮತ್ತು ಅವರ ಸಮಕಾಲೀನ ಶರಣರ ವಿವಿಧ ಸನ್ನಿವೇಶಗಳ ಕುರಿತು ಗಮನಾರ್ಹವಾಗಿ ಚಿತ್ರಕಲಾಕೃತಿಗಳನ್ನು ರಚಿಸಿದ್ದಾರೆ. ಆ ಕಲಾಕೃತಿಗಳ ಛಾಯಾಗ್ರಹಣವನ್ನು ಡಾ.ಬಸವರಾಜ ಅನಗವಾಡಿ ಅವರು ಕ್ಷೇತ್ರಕಾರ್ಯ ಮಾಡಿ ಈ ಕಲಾ ಸಂಗ್ರಹಾಲಯದಲ್ಲಿ ಪ್ರದರ್ಶನ ಮಾಡಿದ್ದಾರೆ.
ಹಾಗೆಯೇ ಯೂನಿಟ್ ಏಳರಲ್ಲಿ (ಭಾಗ – 7) ಬಸವಪೂರ್ವ ಸಾಮಾಜಿಕ ವ್ಯೆವಸ್ಥೆಯ ಬಗೆಗಿನ ದೃಶ್ಯವನ್ನು ರೂಪಿಸಲು ಹಲವಾರು ಬಗೆಯ ಶಿಲ್ಪಗಳನ್ನು ಹೊರ ಆಲಯದಲ್ಲಿ ನಿಲ್ಲಿಸಲಾಗಿದೆ. ಬಸವಣ್ಣ ಇರದ ಕಾಲದಲ್ಲಿ ಸಮಾಜ ಹೇಗಿತ್ತು.ಬಸವಣ್ಣ ಭುವಿಗೆ ಬಂದ ನಂತರ ಸಮಾಜ ಹೇಗೆ ಬದಲಾವಣೆ ಆಯ್ತು.ಎಂಬ ಸನ್ನಿವೇಶವನ್ನು ತಿಳಿಯಬಹುದು.ಸಮಾಜ ಬದಲಾವಣೆ ಆಗಬೇಕು,ಜಾತಿ ಮತ ಲಿಂಗ ತಾರತಮ್ಯ ಹೋಗಬೇಕು, ಸಮ ಸಮಾಜದ ಕನಸನ್ನು ಕಂಡು ಅನೇಕ ಕ್ರಾಂತಿಕಾರಿ ಹೋರಾಟದ ಮೂಲಕ ಬಸವಣ್ಣ ಸಮಾಜನ್ನು ಬದಲಾವಣೆ ಮಾಡಿದ ಆದ್ದರಿಂದ ಅನೇಕ ಪೆಟ್ಟುಗಳನ್ನು ತಿಂದು ನಗು ಚೆಲ್ಲಿದ.ವರ್ಣಾಶ್ರಮ ವ್ಯೆವಸ್ಥೆ, ಸಾಮಾಜಿಕ ಅಸಮಾನತೆಯನ್ನು ದೂರ ಮಾಡಿದ ಹೀಗೆ ಅನೇಕ ಸಂಗತಿಗಳನ್ನು ವಿಶ್ಲೇಷಣೆ ಮಾಡುವ ದೃಶ್ಯಶಿಲ್ಪಗಳು ಈ ಸಂಗ್ರಹಾಲಯದ ಆವರಣದಲ್ಲಿ ಪ್ರದರ್ಶನ ಕಂಡಿವೆ.ಹಾಗೆಯೇ ಹೊರಗಡೆ ಭಿತ್ತಿಗೆ ದೊಡ್ಡದಾದ ಆಲದ ಮರ ಹಾಗೂ ನದಿ ಬೆಟ್ಟ ಗುಡ್ಡದ ಸುಂದರ ಪರಿಸರವನ್ನು ಚಿತ್ರಿಸಲಾಗಿದೆ.ಈ ಕಲಾ ಮ್ಯೂಸಿಯಂ ನಲ್ಲಿ ಎಲ್ಲಾ ಉಬ್ಬು ಮಾದರಿಯ ಹಾಗೂ ಪೂರ್ಣ ಪ್ರಮಾಣದ ಶಿಲ್ಪಗಳಿಗೆ ಅಕ್ರಲಿಕ್ ವರ್ಣದ ಲೇಪನ ವಿನ್ಯಾಸ ಅರ್ಥಪೂರ್ಣವಾಗಿ ಚಿತ್ರಕಲಾವಿದರೆಲ್ಲರೂ ಮಾಡಿದ್ದಾರೆ. ಸಂಗ್ರಹಾಲಯವನ್ನು ಸಂಪೂರ್ಣ ವೀಕ್ಷಿಸಿ ಹೊರ ಬಂದಂತೆ ಬ್ರಾಹ್ಮಣ ವ್ಯೆವಸ್ಥೆಯ ಅಗ್ರಹಾರ,ಯಜ್ಞ,ಆಚರಣಿಯನ್ನು ತಿಳಿಯ ಪಡಿಸುವ ಶಿಲ್ಪದೃಶ್ಯ, ಕ್ಷತ್ರಿಯ ಅರಸರ ಯುದ್ಧದ ಸನ್ನಿವೇಶ, ವೈಶ್ಯರ ಮಾರುಕಟ್ಟೆಯ ದೃಶ್ಯಶಿಲ್ಪ, ಶೂಧ್ರರ ಕೇರಿಯ ದೃಶ್ಯಶಿಲ್ಪ ಹೀಗೆ ಹಲವು ಬಗೆಯ ಶಿಲ್ಪಕಲಾಕೃತಿಗಳು ನೋಡುಗರ ಮನಕ್ಕೆ ಬಸವ ಪೂರ್ವ ಯುಗದ ಸಾಮಾಜಿಕ ವ್ಯೆವಸ್ಥೆಯನ್ನು ತಿಳಿಸುತ್ತವೆ.
ಒಟ್ಟು ಏಳು ಬಗೆಯ ವಿಧಾನದಲ್ಲಿ ರೂಪ ಪಡೆದ ಕೂಡಲ ಸಂಗಮ ಬಸವ ಕಲಾ ಸಂಗ್ರಹಾಲಯ ನಿಜಕ್ಕೂ ಕನ್ನಡ ನಾಡಿಗೆ ಮಹತ್ವದ ಕೊಡುಗೆಯಾಗುವುದರಲ್ಲಿ ಎರಡು ಮಾತಿಲ್ಲ.ಈ ಸಂಗ್ರಹಾಲಯವನ್ನು ರೂಪಿಸಲು ಮಹತ್ವದ ಕನಸನ್ನು ಕಂಡು ನನಸು ಮಾಡಿದವರು ಕಲಾವಿದರಾದ ಡಾ.ಬಸವರಾಜ ಶಿ.ಅನಗವಾಡಿಯವರ ಶ್ರಮ ತಾಳ್ಮೆ ಎಲ್ಲವೂ ಗೌರವಾಯುತವಾದದ್ದು.ತಮ್ಮ ಬದುಕಿನಲ್ಲಿ ಸಾಮಾಜಿಕ ಸುಧಾರಣೆಗಾಗಿ ಶ್ರಮಿಸಿದ ಬಸವಣ್ಣ ಅವರ ಕುರಿತು ಮಹತ್ವದ ಕಲಾ ಸಂಗ್ರಹಾಲಯ ನಿರ್ಮಿಸಿ ಆ ಮೂಲಕ ನಾಡಿಗೆ ಮತ್ತು ವಿಶ್ವಕ್ಕೆ ಬಸವಣ್ಣ ಹಾಗೂ ಅವರ ವಚನಗಳ ಮಹತ್ವವನ್ನು ತಿಳಿಸಬೇಕು ಎಂಬ ಮಹಾದಾಸೆಯಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ಮಾಡಿದ್ದಾರೆ.ಇವರ ಕಲಾ ಕಾರ್ಯಕ್ಕೆ ಸದಾ ಕಾಲ ದುಡಿದು ತಮ್ಮ ಕೈ ಚಳಕದ ಮೂಲಕ ಕಲಾವಿದರು ಪ್ರಾಮಾಣಿಕ ಸೇವೆಯನ್ನು ಸಲ್ಲಿಸಿದ್ದಾರೆ.
ಇಂತಹದೊಂದು ಕಲಾ ಸಂಗ್ರಹಾಲಯ ನಿರ್ಮಿಸಲಿಕ್ಕೆ ಸರ್ಕಾರವು ಸಹ ಡಾ.ಬಸವರಾಜ ಅನಗವಾಡಿ ಅವರಿಗೆ ಆರ್ಥಿಕವಾಗಿ ಪ್ರೋತ್ಸಾಹ ಮಾಡಿದೆ.ಹಾಗಾಗಿ ಇಂತಹ ಮಹತ್ವಪೂರ್ಣ ಯೋಜನೆಯ ಕಲಾ ಸಂಗ್ರಹಾಲಯವನ್ನು ನಿರ್ಮಿಸಲು ಕಾರಣವಾಗಿದೆ ಎನ್ನುತ್ತಾರೆ ಡಾ.ಬಸವರಾಜ ಅನಗವಾಡಿ ಅವರು.
ಚಿತ್ರಕಲೆಯ ಮೂಲಕ ಏನೆಲ್ಲ ಮಾಡಬಹುದು ಎಂಬ ಕಲಾ ಪ್ರಜ್ಞೆಯ ಹೊಳಹುಗಳನ್ನು ಸಾಮಾಜಿಕ ವೆವಸ್ಥೆಗೆ ತೋರಿಸಿದ್ದಾರೆ.ನಿರ್ಲಕ್ಷ್ಯಕ್ಕೆ ಒಳಗಾದ ಕಲಾಕ್ಷೇತ್ರ ಮನಸ್ಸು ಮಾಡಿದರೆ ಇಂತಹ ಅಪರೂಪದ ಕಲಾ ಸಂಗ್ರಹಾಲಯಗಳನ್ನು ನಿರ್ಮಿಸಲು ಸಮಾಜಕ್ಕೆ ಕಲಾವಿದರು ಎಷ್ಟು ಮುಖ್ಯ ಎಂಬ ಸಂಗತಿಗಳನ್ನು ತಿಳಿಸಿದಂತಾಗಿದೆ.ಈ ಕಲಾ ಸಂಗ್ರಹಾಲಯದಿಂದ ನೋಡುಗರಿಗೆ ಆಗುವ ಪ್ರಯೋಜನವೆಂದರೆ ಬಸವಣ್ಣನ ಬದುಕು ಮತ್ತು ಅವರ ವಿಚಾರ ಚಿಂತನೆ ಹಾಗೂ ಅವರ ವಚನ ಸಾಹಿತ್ಯದ ಸ್ವಾದವನ್ನು ಚಿತ್ರಶಿಲ್ಪಕಲಾವಿದರ ಕಲಾಕೃತಿಗಳ ಮೂಲಕ ಅರಿಯಲು ಸಾಧ್ಯವಾಗುತ್ತದೆ.
ಈ ಕಲಾ ಸಂಗ್ರಹಾಲಯವನ್ನು ರೂಪ ಪಡೆಯಲು ಮುಖ್ಯ ಕಲಾ ರೂವಾರಿ ಡಾ.ಬಸವರಾಜ ಶಿ.ಅನಗವಾಡಿಯವರು.ಇವರೊಂದಿಗೆ ಹತ್ತಾರು ವರ್ಷಗಳ ಕಾಲ ಕಲಾಕೃತಿಗಳನ್ನು ರೂಪಿಸಿದ ಶಿಲ್ಪಿಗಳಾದ ಶ್ರೀ ಮಹಾಂತೇಶ ಹಿರೇಮಠ,ಸಂಭೋಜಿ ರಜಪೂತ,ಸಂಜು ರೂಢಗಿ,ಗಣೇಶ ದಿಡ್ಡಿಬಾಗಿಲ ಈ ನಾಲ್ಕು ಜನ ಕಲಾವಿದರು ಸಿಮಿಂಟ್ ಹಾಗೂ ಇತರೆ ಮಾಧ್ಯಮದಿಂದ ಶಿಲ್ಪಗಳನ್ನು ರೂಪಿಸಿದ್ದಾರೆ.ಈ ಶಿಲ್ಪಗಳು ವರ್ಣಾಧಾರಿತ ರೂಪ ಪಡೆಯಲಿಕ್ಕೆ ಮತ್ತು ಬಣ್ಣ ಗೆರೆಗಳ ಮೂಲಕ ಚಿತ್ರಕಲಾವಿದರಾಗಿ ಸೇವೆ ಸಲ್ಲಿಸಿದ ಕೀರ್ತಿ ಭವಾನಿ ಕಾಂಬಳೆ,ಭೀಮಪ್ಪ ಮನಿಗಿನಿ, ಧಿರಾಜ್ ಅವರಿಗೆ ಸಲ್ಲುತ್ತದೆ. ಇನ್ನೂ ಬಸವಣ್ಣನವರ ವಚನಗಳನ್ನು ಕಲಾವಿದರಿಗೆ ತಿಳಿಸಿ ಹೇಳುತ್ತಾ,ಅಲಲ್ಲಿ ವಚನದ ಸಾರವನ್ನು ಅರಿಯದೆ ಇದ್ದಾಗ ಸಾಹಿತ್ಯದ ಸಲಹೆಗಾರರಾಗಿ ಡಾ.ಕೊಟ್ಟೂರುಸ್ವಾಮಿ,ಡಾ.ಸುಮಂಗಲಾ ಬಿ.ಅನಗವಾಡಿ ಅವರು ಸೇವೆ ಮಾಡಿದ್ದಾರೆ.ಇವರೆಲ್ಲರ ಸೇವೆಯೊಂದಿಗೆ ಆಗಾಗ ಸಂಗ್ರಹಾಲಯಕ್ಕೆ ಭೇಟಿಕೊಟ್ಟು ಸಂಗ್ರಹಾಲಯದ ಕೆಲಸ ಕಾರ್ಯಗಳನ್ನು ಪರಿಶೀಲಿಸಿ ಅಧಿಕಾರಿಗಳಿಗೆ ಉತ್ತಮ ಪರಿಶೀಲನಾ ವರದಿಯನ್ನು ನೀಡಿದ ಕಲಾ ವಿದ್ವಾಂಸರ ಶ್ರಮ ಮತ್ತು ಸೇವೆ ಸಹ ಮರೆಯುವಂತಿಲ್ಲ.
ಕೂಡಲ ಸಂಗಮದಲ್ಲಿ ನಿರ್ಮಾಣವಾದ ಈ ಬಸವ ಕಲಾ ಸಂಗ್ರಹಾಲಯ ಬಸವಣ್ಣನವರ ಬದುಕು ಮತ್ತು ವಚನಗಳು ವಿವೇಚನೆಯೊಂದಿಗೆ,ಬಸವಪೂರ್ವ ಸಾಮಾಜಿಕ ಸಾಂಸ್ಕೃತಿಕ ವಾತಾವರಣ ಹೇಗಿತ್ತು ? ಹೇಗೆ ಬದಲಾಯಿತು,ಬದಲಾಗಲು ಬಸವಣ್ಣ ಶ್ರಮಿಸಿದ ಸೇವೆ ಇತ್ಯಾದಿ ಮಹತ್ವದ ಚಿಂತನೆಗಳನ್ನು ಅರಿಯಲು ಮ್ಯೂಸಿಯಂ ಗೆ ತಪ್ಪದೆ ಭೇಟಿ ನೀಡಿ.ಆ ಮೂಲಕ ಕೂಡಲ ಸಂಗಮ ನಾಡಿನ ಶ್ರೇಷ್ಠತೆಗೆ ಮತ್ತಷ್ಟು ಕಾರಣವಾಗಲಿ ಎಂಬ ಬಹು ದಿನದ ಕನಸೊತ್ತ ಕಲಾ ಸಂಗ್ರಹಾಲಯದ ರೂವಾರಿ ಡಾ.ಬಸವರಾಜ ಶಿ. ಅನಗವಾಡಿ ಅವರ ಕನಸು ನನಸಾಗಲಿ ಎಂದು ಈ ಸಂದರ್ಭದಲ್ಲಿ ಶುಭವನ್ನು ಹಾರೈಸುವೆ.
ಲೇಖನ : ಡಾ.ಬಸವರಾಜ ಎಸ್.ಕಲೆಗಾರ
ಅತಿಥಿ ಉಪನ್ಯಾಸಕರು
ದೃಶ್ಯಕಲಾ ಅಧ್ಯಯನ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ.
