ಕಿಷ್ಕಿಂಧಕಾಂಡ ರಾಮಾಯಣ….

By admin


ಚೂನೆಮಳೆ ಸ್ವಾಗತಕ್ಕೆ, ಪ್ರಯಾಣಗಳು ನಿಲ್ಲುವವೀ ಮಾಸಗಳಲ್ಲಿI
ದಾರಿಯುದ್ದಕ್ಕೂ ನೀರನಾಟವೀ ಮಾಸಗಳಲ್ಲಿ, II
ಕೆಲ ಕಡೆ ಬೆಳಕು, ಕೆಲ ಕಡೆ ಕತ್ತಲ: ಮಳೆಗಾಲಾಕಾಶ, ತೊಯ್ದ ಪರ್ವತಗಳು, I
ಸಾಗರಗಳು ಶಾಂತ, ಮಳೆಗಾಲದಲಿ, II
ಸಾಗರದತ್ತ ಹರಿವ ರಾಡಿ ನೀರಿನ ತೊರೆಗಳು, ಖನಿಗಳೊಂದಿಗೆ I
ತೆಲುವ ಕಾಡು ಮಲ್ಲಿಗೆ, ಅವುಗಳಣಕಿಸುವ ನವಿಲು, II
ಭ್ರಮರದಂತೆ ಹಿಗ್ಗುವದು ರಸI
ಭರವಸೆಯಲಿ ನೇರಳ ಹಣ್ಣು, II
ಕುರೂಪಗೊಂಡು ಗಾಳಿಗುದುರುವವುI
ಭೂಮಿಗೆ ಮಾವಿನ ಹಣ್ಣು, II
ಕಾದಾಟಕ್ಕೆ ಮದಕರಿ ಘೀಳಿಟ್ಟಂತೆ ಪರ್ವತಗಳಿಗೆ ಅಪ್ಪಳಿಸಲು I
ಘೀಳಿಡುವ ಮೋಡಗಳು, ಮಧ್ಯಾಹ್ನ ಮಳೆಸುರಿಸಿ II
ಹುಲ್ಲಿನ ಹಾಸಿಗೆ ಮೇಲೆ ಮೋಡಗಳು ನಿಂತಾಗ I
ಮೋಹಿತ ನವಿಲು ಮೈಮೆರೆಯುವದು ನೃತ್ಯದಲಿ, II
ಗರ್ಭದಲಿ ನೀರ್ಹೋತ್ತು ಶಿಖರಗಳತ್ತ ಚಲಿಸು ಮೋಡಗಳು,I
ಮೊಟ್ಟೆಯಿಡಲು ಹೊರಟ ಕೊಕ್ಕರೆಗಳಂತೆ ಕಂಡವು, II
ಮದೋಲ್ಲಾಸಿತ ಕೊಕ್ಕರೆಗಳು ಮೋಡಗಳೊಂದಿಗೆ ಹಾರುವಾಗ I
ಕಂಡವು ಸುಳಿಗಾಳಿಗೆ ಸಿಕ್ಕ ಬಿಳಿ ಕಮಲದಂತೆ, II
ಹುಲ್ಲುಗಾವಲು ಚಿಗರು-ಹುಲ್ಲಿನಿಂದ ಹಸಿರಾಗಿ ಕಂಗೊಳಿಸಿದಾಗ,I
ಕೆಂಬಣ್ಣ ಬೊರಂಗಿಗಳ ಚಿತ್ತಾರ ಹರಡುವದು , II
ನಿದ್ರಾಮಲ ಹೆಚ್ಚುವದು, ಸೇರುವವು ನದಿ ಸಾಗರವ,I
ಸ್ತ್ರೀಬಯಸುವಳು ಪುರುಷನ ಸಂಗವನು, ಮಳೆಗಾಲ ಬಯಕೆ: II
ಕಾಡಿಗೆ ನವಿಲು ನೃತ್ಯ ಬಯಕೆ, ಕದಂಬವೃಕ್ಷಕೆ ಕೊನರುವI
ಬಯಕೆ, ಗೂಳಿಗೆ ಆಕಳ ಬಯಕೆ, II
ಭೂಮಿಗೆ ಧಾನ್ಯ ಹಣ್ಣು ಗರ್ಭದ ಬಯಕೆ, ನದಿಗಳಿಗೆ ಮಹಾಪೂರ,I
ನವಿಲಿಗೆ ನೃತ್ಯ, ಆನೆಗೆ ಮದ, II
ಅರಣ್ಯಕ್ಕೆ ಹೊಳಪು, ಮಂಗಳಿಗೆ ಕಡಿವಾಣ: ಮಳಿಗಾಲ ಮಹಾತ್ಮೆ, I
ಕೇದಿಗೆ ಕಂಪು ತುಂಬಿತು ಮದ ಆನೆಗಳಿಗೆ, II
ಘೀಂಕಾರಕ್ಕಂಜಿ ಚಿಲ್ಲಾಪಲ್ಲಿಯಾದವು ನವಿಲುಗಳು; ಮಳೆಧಾರೆದಿI
ಕದಂಬಕೊಂಬೆಗಳ ಜೇನು ತೊಯ್ದು ಭೂಮಿಗೆII
ಮರಳಿಸುತಿತ್ತು ಹೂವಿನ ಮಕರಂದವನು, ತುಂಬಿಕೊಂಡಿತ್ತುI
ರಸಭರಿತ ಹಣ್ಣುಗೊಂಚಲ ನೇರಳಗಿಡ ಮಸಿಬಳೆದಂತೆ, II
ಹೊಳೆಪು ತುಂಬಿದ ಜೇನಿನಂತೆ, ಮಿಂಚಿನ ಪತಾಕೆಗಳ ಆಭರಣದI
ಕಾರ್ಮೋಡಗಳು ನಿಂತವು ಆನೆಗಳಂತೆ ಯುದ್ಧಕ್ಕೆ, II
ಕದಂಬ ಸರ್ಜ ಅರ್ಜುನ ಕಂದಾಲ ಕೇದಿಗೆ ಹೂಗಳಿಂದI
ತೊಟಕುವ ಮಕರಂದ ಹರಿಸಿತು ಭೂಮಿಗೆ ಮದಿರೆ, II
ಸುರಿವ ಶುಭ್ರ ಮಳೆನೀರು ತನಿಸಿತುI
ಎಲೆಗಳನ್ನ, ತೊಳೆಯಿತು ಹಕ್ಕಿಪಕ್ಕಗಳನು, II
ಜೇನಿನ ಝೇಂಕಾರ, ಕಪ್ಪೆಗಳ ತಾಳ, ಮೋಡಗಳ ಘರ್ಜನೆ,I
ತುಂಬದವು ಅರಣ್ಯದಲಿ ಇಂಪಾದ ಸಂಗೀತ, II

ಮಳೆಗಾಲದಲ್ಲಿ ಪ್ರಕೃತಿಯಲ್ಲಿ ನಡೆಯುವ ಚಟುವಟಿಕೆಗಳನ್ನು ಆದಿಕವಿ ವಾಲ್ಮೀಕಿಯು ಕಾವ್ಯಮಯವಾಗಿ ರಾಮನ ಮುಖೇನ ಬಣ್ಣಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಚೂನೆಮಳೆ ಸ್ವಾಗತ— ಚೂನೆಮಳೆ ಸ್ವಾಗತಕ್ಕೆ ಹಂಸ, ಚಕ್ರವಾಕ ಪಕ್ಷಿಗಳು ಪ್ರೇಯಸಿ ಜೊತೆಯಲ್ಲಿಯೇ ಮಾನಸ-ಸರೋವರದತ್ತ ಹೊರಡುವವು; ಚೂನೆಮಳೆ ಸಂದರ್ಭದಲ್ಲಿ ಪರ್ವತದ ಮಗ್ಗಲಲ್ಲಿ ಬೆಳೆದ ಕಾಡ ಮಲ್ಲಿಗೆಯು ತಂಪು ಮಳೆಹನಿಗಳಿಗೆ ತನ್ನ ಮುಖ ಒಡ್ಡುತ್ತಿದೆ; ಯುದ್ದ ಬಳಿಕ ಜಯಶಾಲಿ ರಾಜನು ನಿಟ್ಟುಸಿರು ಬಿಟ್ಟಂತೆ ಬೆಸಿಗೆಕಾಲದ ಧಗೆ ಧೂಳ ಸದೆಬಡೆದ ತಂಗಾಳಿ ಬೀಸುತ್ತಿದೆ; ಚೂನೆಮಳೆ ಸ್ವಾಗತಕ್ಕೆ ಹಂಸ, ಚಕ್ರವಾಕ ಪಕ್ಷಿಗಳು ಪ್ರೇಯಸಿ ಜತೆಯಲ್ಲಿಯೇ ಮಾನಸ-ಸರೋವರದತ್ತ ಹೊರಡುವವು;ಇಡೀ ಭೂಪ್ರದೇಶವೇ ಚೂನೆಮಳೆ ಸ್ವಾಗತಕ್ಕೆ ನಿಲ್ಲುವದು, (2) ಮಳೆಗಾಲ ದೃಶ್ಯ— ಮಳೆಗಾಲದ ಮಾಸಗಳಲ್ಲಿ ದಾರಿಯುದ್ದಕ್ಕೂ ನೀರನಾಟ (ಹೊಂಡ, ಮಹಾಪೂರ ಇತ್ಯಾದಿ) ಇರುವದರಿಂದ ಪ್ರಯಾಣಗಳನ್ನು ನಿಲ್ಲಿಸುವರು; ಮಳೆಗಾಲದ ಆಕಾಶವು ಕೆಲವು ಕಡೆ ಬೆಳಕು, ಕೆಲವು ಕಡೆ ಕತ್ತಲ ಇರುವದು; ಮಳೆಗಾಲದಲ್ಲಿ ಪರ್ವತಗಳು ತೊಯ್ದದಿರುತ್ತವೆ ಮತ್ತು ಸಾಗರಗಳು ಶಾಂತವಾಗಿರುತ್ತವೆ; ಸಾಗರದತ್ತ ಹರಿವ ರಾಡಿ ನೀರಿನ ತೊರೆಗಳು ಅವುಗಳಲ್ಲಿ ಖನಿಗಳೊಂದಿಗೆ ತೆಲುವ ಕಾಡು ಮಲ್ಲಿಗೆಗಳನ್ನು ಕಂಡು ಅವುಗಳನ್ನು ನವಿಲುಗಳು ಅಣಕಿಸುವವು; ರಸ ಭರವಸೆಯಲಿ ನೇರಳ ಹಣ್ಣು ಭ್ರಮರದಂತೆ ಹಿಗ್ಗುವದು; ಮಳೆಗಾಳಿಗೆ ಕುರೂಪಗೊಂಡು ಮಾವಿನ ಹಣ್ಣು ಭೂಮಿಗೆ ಉದುರುವದು; ಕಾದಾಟಕ್ಕಾ ಮದಕರಿಗಳು ಘೀಳಿಟ್ಟಂತೆ ಮೋಡಗಳು ಪರ್ವತಗಳಿಗೆ ಅಪ್ಪಳಿಸಲು ಘೀಳಿಡುವವು; ಮಧ್ಯಾಹ್ನ ಮಳೆಸುರಿಸಿ ಹುಲ್ಲಿ ಹಾಸಿಗೆ ಮೇಲೆ ಮೋಡಗಳು ನಿಂತಾಗ ಅದನ್ನು ಕಂಡು ಮೋಹಿತ ನವಿಲು ನೃತ್ಯದಲಿ ಮೈಮೆರೆಯುವದು; ತಮ್ಮ ಗರ್ಭದಲಿ ನೀರು ಹೋತ್ತು ಶಖರಗಳತ್ತ ಚಲಿಸು ಮೋಡಗಳು ಮೊಟ್ಟೆಯಿಡಲು ಹೊರಟ ಕೊಕ್ಕರೆ ಹಕ್ಕಿಗಳಂತೆ ಕಂಡವು; ಮದೋಲ್ಲಾಸಿತ ಕೊಕ್ಕರೆಗಳು ಮೋಡಗಳೊಂದಿಗೆ ಹಾರುವಾಗ ಸುಳಿಗಾಳಿಗೆ ಸಿಕ್ಕ ಬಿಳಿ ಕಮಲ-ಹೂಗಳಂತೆ ಕಂಡವು; ಹುಲ್ಲುಗಾವಲು ಪ್ರದೇಶವು ಚಿಗರು ಹುಲ್ಲಿನಿಂದ ಹಸಿರಾಗಿ ಕಂಗೊಳಿಸಿದಾಗ ಕೆಂಬಣ್ಣ ಬೊರಂಗಿಗಳ ಚಿತ್ತಾರವು ಹುಲ್ಲುಗಾವಲಲ್ಲಿ ಹರಡುವದು; ಮಳೆಗಾಲದಲ್ಲಿ ನಿದ್ರೆಯ ಅಮಲ ಹೆಚ್ಚುವದು, ನದಿ ಸಾಗರವನ್ನು ಸೇರಿದಂತೆ ಸ್ತ್ರೀ ಪುರುಷನ ಸಂಗವನು ಬಯಸುವಳು; ಜೇನಿನ ನೋಣಗಳ ಝೇಂಕಾರ, ಕಪ್ಪೆಗಳ ತಾಳ, ಮೋಡಗಳ ಘರ್ಜನೆ, ಅರಣ್ಯದಲಿ ಇಂಪಾದ ಸಂಗೀತವನ್ನು ತುಂಬದವು; ಒಂದೆಡೆ ನವಿಲುಗಳ ನೃತ್ಯ, ಮತ್ತೊಂದೆಡೆ ಸಂಗೀತವು, ಈ ಸಂಗೀತ ಕಚೇರಿಯನ್ನು ವನದಲಿ ನಡೆಸಿದವರ್ಯಾರು?, ಹೀಗೆ ಮಳೆಗಾಲದ ಮನಮೋಹಕ ದೃಶ್ಯ ವರ್ಣನೆಯಿದೆ, (3) ಮಳೆಗಾಲ ಬಯಕೆ ಬೇಗೆ—ಮಳೆಗಾಲವು ಪ್ರಕೃತಿಯಲ್ಲಿ ಬಯಕೆ ಬೇಗೆಯನ್ನು ಹೆಚ್ಚುವದು: ಮಳೆಗಾಲದಲ್ಲಿ ಕಾಡಿಗೆ ನವಿಲಿನ ನೃತ್ಯ ನೋಡುವ ಬಯಕೆ, ಕದಂಬ ವೃಕ್ಷಕೆ ಕೊನರುವ (ಚಿಗುರುವ) ಬಯಕೆ, ಗೂಳಿಗೆ ಆಕಳೊಂದಿಗೆ ಸಮಾಗಮದ ಬಯಕೆ, ಭೂಮಿಗೆ ಧಾನ್ಯ ಹಣ್ಣು ಹಂಪಲ ಗರ್ಭ ಧರಿಸುವ ಬಯಕೆ, ನದಿಗಳಿಗೆ ಮಹಾಪೂರದ ಬಯಕೆ, ನವಿಲಿಗೆ ನೃತ್ಯದ ಬಯಕೆ, ಆನೆಗೆ ಮದದ ಬಯಕೆ, ಅರಣ್ಯಕ್ಕೆ ಸ್ವಯಂ ಹಳೆಯುವ ಮತ್ತು ಮಂಗಳಿಗೆ ಕಡಿವಾಣ ಹಾಕುವ ಬಯಕೆ (4) ಮಳೆಗಾಲ ಚಲ್ಲಾಟ— ಕದಂಬ, ಸರ್ಜ, ಅರ್ಜುನ, ಕಂದಾಲ, ಕೇದಿಗೆ ಹೂಗಳಿಂದ ತೊಟಕುವ ಮಕರಂದವು ಭೂಮಿಗೆ ಮದಿರೆ (ಮದ್ಯ/ಸೋಮರಸ) ಹರಿಸಿತು; ಮೋಡಗಳಿಂದ ಸುರಿವ ಶುಭ್ರ ಮಳೆ ನೀರು ಗಿಡ ಬಳ್ಳಿ ಸಸ್ಯಗಳ ಎಲೆಗಳನ್ನು ಮತ್ತು ಹಕ್ಕಿಗಳ ಪಕ್ಕಗಳನು ತೊಳೆಯಿತು; ಜೇನಿನ ನೋಣಗಳ ಝೇಂಕಾರ, ಕಪ್ಪೆಗಳ ತಾಳ, ಮೋಡಗಳ ಘರ್ಜನೆ, ಅರಣ್ಯದಲಿ ಇಂಪಾದ ಸಂಗೀತವನ್ನು ತುಂಬದವು; ಹೀಗೆ ಆದಿಕವಿ ವಾಲ್ಮೀಕಯು ಮಳೆಗಾಲದ ಚೇಷ್ಟೆಗಳನ್ನು ಬಣ್ಣಿಸುತ ತಮ್ಮ ಕಾವ್ಯಸೋಮರಸದ ಮಳೆ ಸುರಿಸುವದನ್ನು ಮುಂದೆ ವರೆಸುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌