
ಸರ್ವೋಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರನ್ನು ಕರ್ನಾಟಕ ಗಡಿ ಹಾಗೂ ನದಿ ರಕ್ಷಣಾ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯ ಸರಕಾರ ನೇಮಕ ಮಾಡಿದ ಪ್ರಯುಕ್ತ ಈ ಲೇಖನ.

•ಡಾ.ಶಿವರಾಜ ಯತಗಲ್, ಉಪನ್ಯಾಸಕರು ರಾಯಚೂರು ವಿವಿ ರಾಯಚೂರು
ಕಲ್ಯಾಣ ಕರ್ನಾಟಕವೆಂತಲೇ ಕರೆಯಿಸಿಕೊಳ್ಳುವ ಹೈದರಾಬಾದ ಕರ್ನಾಟಕದ ಬಿಸಿಲ ನಾಡಿನಲ್ಲಿ ಕವಿಗಳು, ವಚನಕಾರರು, ದಾಸರು, ತತ್ವಪದಕಾರರು ತಮ್ಮ ತಪೋ ಕಾಯಕ ನಿಷ್ಠೆಯಿಂದ ಕೀರ್ತಿ ಪಡೆದಿದ್ದಾರೆ. ಇದೇ ನೆಲದಲ್ಲಿ ಸುಮಾರು ಹನ್ನೊಂದನೇ ಶತಮಾನದಲ್ಲಿದ್ದ ವಿಜ್ಞಾನೇಶ್ವರರು ಬರೆದ ‘ಮಿತಾಕ್ಷರ’ ಈ ದೇಶದ ಪ್ರಪ್ರಥಮ ಕಾನೂನು ಸಂಹಿತೆಯ ಕೃತಿಯಾಗಿ ಕಲ್ಯಾಣ ಕರ್ನಾಟಕದ ಹೆಸರನ್ನು ಜಾಗತಿಕ ಮಟ್ಟಕ್ಕೆ ತಂದು ನಿಲ್ಲಿಸಿದೆ. ಇವರೋರ್ವ ಶ್ರೇಷ್ಠ ಕಾನೂನು ಪಂಡಿತರಾಗಿ ನ್ಯಾಯಾಂಗದ ಅಂಗಳದಲ್ಲಿ ಅದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ. ಅಂತೆಯೇ ಇದೇ ನೆಲದಲ್ಲಿ ಕಠಿಣ ಪರಿಶ್ರಮ, ದೃಢಸಂಕಲ್ಪ ಹಾಗೂ ಸತ್ಯ ಶುದ್ಧ ಕಾಯಕದಿಂದ ನ್ಯಾಯಾಂಗ ಕ್ಷೇತ್ರದಲ್ಲಿ ಪರಮೋಚ್ಛ ಸಾಧನೆ ಮಾಡಿ ಸವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾಗಿ ಸಾಧನೆಯ ಶಿಖರವನ್ನು ಮುಟ್ಟಿದರವರು ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲರು. ಬಸವಣ್ಣ ನಡೆದಾಡಿದ ಈ ನೆಲವು ಇವರನ್ನು ‘ಬಸವಶ್ರೀ’ ಪ್ರಶಸ್ತಿ ಪುರಸ್ಕೃತರನ್ನಾಗಿ ಮಾಡಿದೆ. ಕನ್ನಡ ನಾಡು ‘ಕರ್ನಾಟಕದ ರಾಜ್ಯೋತ್ಸವ’ದ ಸನ್ಮಾನವನ್ನು ಮಾಡಿದೆ. ಇಂಥ ಗೌರವ-ಸನ್ಮಾನಗಳಿಗೆ ಲೆಕ್ಕವಿಲ್ಲ. ಅವುಗಳು ಇವರನ್ನು ಅರಸುತ್ತಾ ಬಂದಿವೆ; ಇನ್ನೂ ಬರುತ್ತಲೂ ಇವೆ.
ನೆತ್ತಿಯ ಮೇಲೆ ಕತ್ತಲು ಭಯಂಕರವಾಗಿ ಆರ್ಭಟಿಸುತ್ತಿದ್ದರೂ ಹತ್ತಿಯ ಚಕ್ಕಡಿಯ ಹಿಂದೆ ಕುಳಿತುಕೊಂಡು ಅಕ್ಷರ ಕಲಿಯಲು ಹರಸಾಹಸಪಟ್ಟು, ಇಡೀ ದೇಶವೇ ನ್ಯಾಯಾಂಗ ಕ್ಷೇತ್ರದಲ್ಲಿ ನಿಬ್ಬೆರಗಾಗಿ ನೋಡುವಂತೆ ಸಾಧನೆ ಮಾಡಿದವರು ಮಲದಕಲ್ ಹಳ್ಳಿಯ ಪ್ರತಿಭೆ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲ ಅವರು. ಈ ಹಳ್ಳಿ ರಾಯಚೂರು ಜಿಲ್ಲೆಯ ದೇವದುರ್ಗ ಸೀಮೆಗೆ ಸೇರಿದ್ದು. ಬರಡು ನೆಲವೆಂಬ ಸಿರಿವಂತಿಕೆ ಬಿಟ್ಟರೆ, ಇನ್ನಾವುದೇ ಸಿರಿಯಂತಿಕೆಯ ನಾಮಾಂಕಿತವಿಲ್ಲದ ಹಳ್ಳಿ. ಈ ಹಳ್ಳಿಯಲ್ಲಿ ಹುಟ್ಟಿ, ಅದೇ ಹಳ್ಳಿಯ ಹೆಸರನ್ನು ದಿಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟಕ್ಕೆ ಹೊತ್ತೊಯ್ದು, ಕಲ್ಯಾಣ ಕರ್ನಾಟಕವನ್ನು ಸಾಧನೆಯ ಸಿರಿವಂತಿಕೆಯ ನೆಲವನ್ನಾಗಿ ಮಾಡಿದವರು ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ ಅವರು. ಇವರು ಶ್ರೀ ವಿರುಪಣ್ಣ ಹಾಗೂ ಶ್ರೀಮತಿ ಮಲ್ಲಮ್ಮ ಎಂಬ ಶರಣ ದಂಪತಿಗಳ ಮಗನಾಗಿ ೧೨ನೇ ಜನವರಿ ೧೯೪೦ ರಂದು ಜನಿಸಿದರು. ದಿಲ್ಲಿಯ ಚಿತ್ತವೇ ಈ ಹಳ್ಳಿಯತ್ತ ವಾಲಿದ್ದು, ಪಾಟೀಲರ ಹಚ್ಚ ಹಸಿರಿನ ಸ್ವಚ್ಛಂದದ ಸಾಧನೆಗಳ ಮೂಲಕವೇ ಅಗಿದೆ. ಎಳೆಯರಾಗಿದ್ದಾಗಲೇ ಮಾತೃ ವಾತ್ಸಲ್ಯದ ಮಡಿಲಿನಿಂದ ದೂರವಾಗಿ, ವಿದ್ಯಾ ದೇವತೆಯನ್ನು ಸ್ಮರಿಸುತ್ತ, ನ್ಯಾಯ ದೇವತೆಯನ್ನು ಆರಾಧಿಸುತ್ತ ಸಾಗಿದವರು. ಜೀವನದುದ್ದಕ್ಕೂ ಶುದ್ಧವಾದ ಚಾರಿತ್ರ್ಯವನ್ನು ಯಾರಿಗೂ ಯಾವ ರಾಜಿಗೂ ಮಾರಿಕೊಂಡವರಲ್ಲ; ಅಂತಹ ಉದಾಹರಣೆಗಳು ಇಂದಿಗೂ ಸಿಕ್ಕಿಲ್ಲ. ಅದನ್ನು ಇಂದಿಗೂ ಮುಂದುವರೆಸಿಕೊಂಡು ಬಂದ ಬದ್ಧತೆಯ ಮಹಾನ್ ವ್ಯಕ್ತಿ ಡಾ.ಶಿವರಾಜ ವಿ.ಪಾಟೀಲರು.
ಹಳ್ಳಿಗಾಡಿನ ಗಾಢ ಅನುಭವಗಳನ್ನು ಮರೆಯದ ಇವರಿಗೆ ಬಸವಣ್ಣ, ಸ್ವಾಮಿ ವಿವೇಕಾನಂದ ಹಾಗೂ ಬಾಲ್ಯದಲ್ಲಿ ಕಲಿಸಿದ ಗುರುಗಳ ಆದರ್ಶದ ಹಾದಿ ಕಣ್ಣ ಮುಂದಿದೆ. ‘ಕಾಯಕವೇ ಕೈಲಾಸ’ವೆಂಬ ಮಾತಿನಂತೆ, ಶುದ್ಧ ಕಾಯಕದ ಮೂಲಕವೇ ಮುಖ್ಯವಾಹಿನಿಗೆ ಬಂದವರು. ಕಾಯಕದ ಛಾತಿ ಇವರಲ್ಲಿ ನಾಟಿದೆ. ನ್ಯಾಯದೇವತೆಯನ್ನು ನಂಬಿದ ಇವರು ನ್ಯಾಯಾಂಗ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದ ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿದ್ದಾರೆ. ದಾಸ ಸಾಹಿತ್ಯ ಪರಂಪರೆಯ ಜಿಲ್ಲೆಯಲ್ಲಿ ಜನಿಸಿ, ಕಲಬುರ್ಗಿಯ ಶರಣಬಸವೇಶ್ವರರ ನೆಲದಲ್ಲಿ ಕಾನೂನು ಶಿಕ್ಷಣ ಕಲಿತು, ಅಧ್ಯಾಪನ ಹಾಗೂ ಪ್ರಾಂಶುಪಾಲರ ವೃತ್ತಿಯೊಂದಿಗೆ ವಕೀಲಿ ಸೇವೆಯನ್ನೂ ಕೈಗೊಂಡು, ಮುಂದೆ ನ್ಯಾಯಾಂಗ ಕ್ಷೇತ್ರದ ಅತ್ಯುನ್ನತ ಪದವಿಯನ್ನು ಸ್ವೀಕರಿಸಿ ‘ಭಾರತ ಶಿರೋಮಣಿ’ಯಾದವರು. ಹುಟ್ಟಿದ್ದು ಎಲ್ಲಿಯೇ ಆದರೂ ಸಾಧನೆ ಮಾಡಬೇಕೆಂಬ ಸಂಕಲ್ಪ ಹಾಗೂ ಪ್ರಾಮಾಣಿಕತೆಗಳೇ ಇವರನ್ನು ಮುಗಿಲೆತ್ತರಕ್ಕೆ ಕರೆದೊಯ್ದಿವೆ. ನ್ಯಾಯಾಂಗ ಕ್ಷೇತ್ರದ ಉನ್ನತ ಪರಿಶ್ರಮದ ಏಣಿ ಇವರನ್ನು ಮೇಲೆತ್ತುವಂತೆ ಮಾಡಿದೆ. ಸಾಧನೆಯ ಬೆನ್ನು ಹತ್ತಿ ಮುನ್ನಡೆಯುವಾಗ ವಿರೋಧಿ ಅಲೆಗಳ ಅಡೆತಡೆಗಳಿಗೆ ಲೆಕ್ಕವಿಲ್ಲ. ಜೀವನದೊಂದಿಗೆ ಗುದ್ದಾಡಿ, ಪ್ರಜಾವಲಯಕ್ಕೆ ನ್ಯಾಯಾಂಗದ ನಾಡಿಯನ್ನಿಡಿದು ನ್ಯಾಯವನ್ನು ಉಸಿರಿಸುವ ಉಚ್ಛಸ್ಥಾನವಾದ ‘ನ್ಯಾಯಮೂರ್ತಿ’ ಪೀಠವನ್ನು ಅಲಂಕರಿಸಿದವರು. ಜೀವನದ ಹಲವು ಮೆಟ್ಟಿಲುಗಳನ್ನು ಒಂದೊಂದಾಗಿ ಹತ್ತಿ, ಕೊನೆಗೆ ಇವರಿಗೆ ಒಲಿದು ಬಂದ ಲೋಕಾಯುಕ್ತ ಹುದ್ದೆಯನ್ನು ನಿರಾಧಾರದ ಆರೋಪಗಳು ಜನ್ಮತಾಳಿದಾಗ ತಕ್ಷಣವೆ ತ್ಯಜಿಸಿ, ಲೋಕಕ್ಕೆ ಮಾದರಿ ನಡೆಯ ಚಾರಿತ್ರಿಕ ಸಂದೇಶವನ್ನು ರವಾನೆ ಮಾಡಿದ ‘ಪುರುಷೋತ್ತಮ’ ಇವರಾಗಿದ್ದಾರೆ. ಜಾತಿ ಹಾಗೂ ಅಧಿಕಾರವನ್ನು ಬಂಡವಾಳ ಮಾಡಿಕೊಳ್ಳದೇ, ಏಣಿಯಾಗಿಯೂ ಬಳಸಿಕೊಳ್ಳದೇ ಸ್ವಸಾಮರ್ಥ್ಯದಿಂದ ನ್ಯಾಯಾಂಗದ ಗುಮ್ಮಟವನ್ನು ಹತ್ತಿದವರು. ಹಲವು ವಿದ್ಯಾರ್ಥಿಗಳಿಗೆ ಗೌರವಾನ್ವಿತ ಗುರುವಾಗಿ, ಸಮಾಜಕ್ಕೆ ಆದರ್ಶ ವ್ಯಕ್ತಿಯಾಗಿ ಬೆಳೆದವರು. ಶುದ್ಧ ಹಸ್ತದ ಸರಳತೆಯ ಸಾಕಾರ ಮೂರ್ತಿವೆತ್ತವರು. ಪಂಚತಾರ ಸಂಸ್ಕೃತಿಯಿಂದ ದೂರವಿರುವ, ಜನಸಾಮಾನ್ಯರ ಹೃದಯಕ್ಕೆ ಹತ್ತಿರವಿರುವ ಅಪರಂಜಿ ವ್ಯಕ್ತಿತ್ವವನ್ನು ಹೊಂದಿದವರು.
ಅಕ್ಷರ ಕಲಿಯುವುದೇ ದುಸ್ತರವಾಗಿದ್ದ ಮತ್ತು ಕನಸಾಗಿದ್ದ ಅಂದಿನ ದಿನಮಾನದಲ್ಲಿ ಡಾ.ಶಿವರಾಜ ಪಾಟೀಲರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಾದ ಮಲದಕಲ್‌ನಲ್ಲಿಯೇ ಪೂರೈಸುತ್ತಾರೆ. ಮಾಧ್ಯಮಿಕ ಶಿಕ್ಷಣವನ್ನು ರಾಯಚೂರಿನ ಹಮದರ್ದ್ ಪ್ರೌಢಶಾಲೆಯಲ್ಲಿ ಮುಗಿಸಿ, ಬಿ.ಎಸ್ಸಿ. ಪದವಿಯನ್ನು ಕಲಬುರ್ಗಿಯ ಸರಕಾರಿ ಕಾಲೇಜಿನಲ್ಲಿ ಹಾಗೂ ಸೇಠ್‌ಲಾಲ್ ಶಂಕರ್‌ಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಿಂದ ಕಾನೂನು ಪದವಿಯನ್ನು ಗಳಿಸಿಕೊಂಡರು. ಅಂದು ಅವರು ಪಟ್ಟ ಪಾಡು, ಅವರನ್ನು ವಿನಯವಂತರನ್ನಾಗಿ ಮಾಡಿದೆ. ಆರಂಭಿಕ ಹಂತದಲ್ಲಿ ಬಸ್ಸಿಗೆ ಕಾಸಿಲ್ಲದೆ ಬಂಡಿಯ ಮೇಲಿನ ಪಯಣ ಇವರನ್ನು ಎತ್ತರಕ್ಕೆ ಬೆಳೆಸಿದೆ. ‘ದೃಢಸಂಕಲ್ಪ, ಪರಿಶ್ರಮ, ಪ್ರಾಮಾಣಿಕತೆ, ವಿನಯ ಮತ್ತು ದೈವಿಕೃಪೆ ಇದ್ದರೆ ಮನುಷ್ಯ ಆಕಾಶದೆತ್ತರಕ್ಕೆ ಏರಬಲ್ಲ; ಸಾಧಕರ ಅಗ್ರಪಂಕ್ತಿಯಲ್ಲಿ ಪ್ರಥಮನಾಗಬಲ್ಲ’ ಎಂಬ ಮಾತಿಗೆ ನ್ಯಾಯಮೂರ್ತಿ ಡಾ.ಶಿವರಾಜ ವಿ.ಪಾಟೀಲರೇ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಇವರು ೧೯೬೭ ರಿಂದ ೧೯೭೫ ರವರೆಗೆ ತಾವು ಕಲಿತ ಕಾನೂನು ಮಹಾವಿದ್ಯಾಲಯದಲ್ಲಿ ಹಂಗಾಮಿ ಉಪನ್ಯಾಸಕರಾಗಿ ಸೇವೆಗೆ ಸೇರಿಕೊಂಡರು. ೧೯೭೫ ರಿಂದ ೧೯೭೮ರವರೆಗೆ ಅದೇ ಮಹಾವಿದ್ಯಾಲಯದ ಪ್ರಾಚಾರ್ಯರಾಗಿಯೂ ಕಾರ್ಯ ನಿರ್ವಹಿಸುವುದರೊಂದಿಗೆ, ನ್ಯಾಯವಾದಿಯಾಗಿಯೂ ವೃತಿಯನ್ನು ನಿರ್ವಹಿಸಿದರು. ತದನಂತರ ಕರ್ನಾಟಕದ ಉಚ್ಛನ್ಯಾಯಾಲಯದಲ್ಲಿ ೧೯೭೯ನೇ ಫೆಬ್ರುವರಿಯಿಂದ ಮಾರ್ಚ್ ೧೯೯೦ರವರೆಗೆ ನ್ಯಾಯವಾದಿಯಾಗಿ ಸೇವೆ ಸಲ್ಲಿಸಿದರು. ೧೫ನೇ ಮಾರ್ಚ್ ೧೯೯೦ರಂದು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾಯಾಧೀಶರಾಗಿ ನಿಯೋಜಿತರಾದರು. ಮತ್ತೆ ೧೯೯೪ರಿಂದ ೧೯೯೮ ರವರೆಗೆ ಮದ್ರಾಸ್‌ನ ಉಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿ ೧೯ನೇ ಡಿಸೆಂಬರ್ ೧೯೯೮ ರಿಂದ ೨೧ನೇ ಜನೇವರಿ ೧೯೯೯ ರವರೆಗೆ ಅದೇ ಉಚ್ಛ ನ್ಯಾಯಾಲಯದ ಹಂಗಾಮಿ ನ್ಯಾಯಾಧೀಶರಾಗಿ ನೇಮಕಗೊಂಡರು. ನ್ಯಾಯಾಂಗದಲ್ಲಿ ಇವರ ಪಾರದರ್ಶಕತೆಯ ನಡೆಯಿಂದ ೧೯೯೯ ಮಾರ್ಚ್ ತಿಂಗಳಲ್ಲಿ ರಾಜಸ್ಥಾನದ ಉಚ್ಛ ನ್ಯಾಯಾಲಯದ ‘ಮುಖ್ಯ ನ್ಯಾಯಮೂರ್ತಿ’ಗಳಾಗಿ ಅಧಿಕಾರವನ್ನು ಸ್ವೀಕರಿಸುತ್ತಾರೆ. ಮತ್ತೇ ಅದೇ ಮಾರ್ಚ್ ೧೫, ೨೦೦೦ ರಂದು ‘ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ’ಗಳಾಗಿ ನೇಮಕಗೊಳ್ಳುತ್ತಾರೆ. ‘ನೀನು ಈಗ ಏನಾಗಿದ್ದೀಯೋ ಅದು ನೀನೇ ಮಾಡಿಕೊಂಡದ್ದು’ ಎಂಬಂತೆ ಶಿವರಾಜ ಪಾಟೀಲರು ಸ್ವಸಾಮರ್ಥ್ಯದ ಮೂಲಕವೇ ಸಾಧನೆ ಮಾಡಿದ ಸಾಧಕರಾಗಿದ್ದಾರೆ. ಖಡಕ್ ವಾಕ್ ಚಾತರ‍್ಯವುಳ್ಳ, ಮಾಧುರ್ಯದ ನಿರರ್ಗಳತೆಯನ್ನೂ ಹೊಂದಿದ ಇವರು ೨೦೦೫ ಜನವರಿ ೧೧ ರಂದು ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಹುದ್ದೆಯಿಂದ ನಿವೃತ್ತಿಯನ್ನು ಹೊಂದುತ್ತಾರೆ.
ದಣಿವರಿಯದ ದೇಹದ ಇವರ ವಿದ್ವತ್ತಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಲವು ಜವಾಬ್ದಾರಿಯುತವಾದ ಹುದ್ದೆಗಳು ಹರಸಿ ಬಂದವು. ಅವುಗಳಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾಗಿ, ಹಂಗಾಮಿ ಅಧ್ಯಕ್ಷರಾಗಿ ೨೦೦೮ ವರೆಗೆ ಸೇವೆಯನ್ನು ಸಲ್ಲಿಸುತ್ತಾರೆ. ಮುಂದೆ ಕೇಂದ್ರ ಸರ್ಕಾರದ ೨ಜಿ ಸ್ಪೆಕ್ಟ್ರಂ ಅವ್ಯವಹಾರದ ತನಿಖಾ ಆಯೋಗದ ಏಕಪೀಠದ ಸದಸ್ಯರಾಗಿ ನೇಮಕಗೊಂಡು, ನಡೆದ ಸಂಗತಿಯನ್ನೆಲ್ಲ ಸರ್ಕಾರಕ್ಕೆ ವರದಿ ರೂಪದಲ್ಲಿ ನೀಡಿ ಸತ್ಯದ ನಿಷ್ಠುರತೆಯನ್ನು ಕಾಪಾಡಿಕೊಂಡರು. ಇದುವೇ ಇವರ ನ್ಯಾಯವಲ್ಲರಿಯ ಸ್ಪೂರಣವನ್ನು ಪಸರಿಸುತ್ತದೆ. ಮುಂದೆ ಕರ್ನಾಟಕದ ಬಾಲ್ಯವಿವಾಹ ನಿಷೇಧ ಅಧ್ಯಕ್ಷರಾಗಿ ನೇಮಕಗೊಂಡು ಬಾಲ್ಯವಿವಾಹವನ್ನು ನಿಯಂತ್ರಿಸುವ ಕಟ್ಟುನಿಟ್ಟಿನ ನಿಯಮಗಳನ್ನೊಳಗೊಂಡ ವರದಿಯನ್ನು ಘನವೆತ್ತ ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಘನವೆತ್ತ ನಾಯಮೂರ್ತಿ ಶಿವರಾಜ ಪಾಟೀಲರು. ಇಂದು ಈ ವರದಿಯು ಕರ್ನಾಟಕ ಸರ್ಕಾರದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಇನ್ನೂ ಮುಂತಾದ ಸಾಮಾಜಿಕ ಸಮಸ್ಯೆಗಳ ಕುರಿತಾದ ಆದೇಶಗಳನ್ನು ಹೊರಡಿಸುವಾಗ “ಭಾರತದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀ ಶಿವರಾಜ ವಿ.ಪಾಟೀಲ ಅವರ ನೇತೃತ್ವದಲ್ಲಿ ಸಮುದಾಯಿಕ(ಕೋರ್) ಸಮಿತಿ ಸಿದ್ಧಪಡಿಸಿದ ಕರ್ನಾಟಕ ರಾಜ್ಯದಲ್ಲಿನ ಬಾಲ್ಯವಿವಾಹ ತಡೆ ಬಗೆಗಿನ ವರದಿ” ಎಂದು ಉಲ್ಲೇಖಿಸುತ್ತಿರುವುದು ಈ ವರದಿಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.
ಇವರು ಬರೀ ನ್ಯಾಯಾಂಗ ಕ್ಷೇತ್ರದಲ್ಲಿ ಸಾಧನೆ ಮಾಡದೇ ಹಲವು ಕೃತಿಗಳನ್ನು ರಚಿಸಿದ್ದಾರೆ. ನುಡಿಮುತ್ತುಗಳನ್ನು ಉದ್ಧರಿಸುವ ಕೃತಿಗಳನ್ನು ಕನ್ನಡಕ್ಕೆ ಕೊಡಮಾಡಿದ್ದಾರೆ.
ಹಲವು ಮನಸುಗಳಿಗೆ ಕನಸಿನ ಗೂಡು ಕಟ್ಟುವುದಕ್ಕೆ ಪ್ರೇರಣೆ ನೀಡಿದ ಇವರಿಗೆ ಶಿಷ್ಯ ಬಳಗವು ‘ಶರಣಪಥ’ದಂತೆಯೇ ಇದೆ. ಹಲವು ಶಿಷ್ಯರುಗಳ ಹುಟ್ಟಿಗೆ ‘ಶಿವಕೃಪೆ’ಯನ್ನು ತೋರಿದ್ದಾರೆ. ಯಾರನ್ನೂ ನೋಯಿಸದ, ಎಲ್ಲರ ಸುಖ-ದುಃಖಗಳನ್ನು ಅರ್ಥಮಾಡಿಕೊಂಡು ಮಾನವೀಯ ನೆಲೆಯ ಆಗರವಾಗಿದ್ದಾರೆ. ಆ ಹೆಜ್ಜೆ ಗುರುತಿನ ಜಾಡನ್ನು ಹಿಡಿದು ಇಂದಿಗೂ ವೈಯ್ಯಾರವಿಲ್ಲದ ಸರಳ ನಡೆ-ನುಡಿಯ ನಿಧಿಯಾಗಿದ್ದಾರೆ.
ಇವರ ಕುರಿತಾಗಿ ಅಭಿನಂದನ ಗ್ರಂಥಗಳು, ಜೀವನಚರಿತ್ರೆಗಳು ಹಾಗೂ ಲೇಖನಗಳು ಹೊರಬಂದಿವೆ. ಅವುಗಳಲ್ಲಿ ‘ಕಾಯಕ ರತ್ನ’ ಸಂಪುಟ, ಡಾ.ಅಮರೇಶ ಯತಗಲ್ ಅವರು ರಚಿಸಿದ ‘ಶಿವಕೃಪೆ’ ಜೀವನ ಚರಿತ್ರೆ, ಇವರೇ ಸಂಪಾದಿಸಿದ ‘ಶರಣ ಪಥ’ ಎಂಬ ಹೆಸರಿನ ಅಭಿನಂದನ ಗ್ರಂಥ ಲೋಕಾರ್ಪಣೆಗೊಂಡು ನ್ಯಾಯಮೂರ್ತಿಗಳ ಸಾಧನೆಯನ್ನು ಲೋಕಕ್ಕೆ ಸಾರಿವೆ. ‘ಶಿವಕೃಪೆ’ ಜೀವನ ಚರಿತ್ರೆಯು ಇಂಗ್ಲಿಷ್ ಭಾಷೆಗೆ ಪ್ರೊ.ನಂಜುಂಡಶಾಸ್ತ್ರಿ ಬೆಂಗಳೂರು ಇವರಿಂದ ಭಾಷಾಂತರಗೊಂಡಿದೆ. ಹಾಗೇಯೆ ಚಂದ್ರಯ್ಯ ನಾಯ್ಡು ಅವರು ‘ವಚನ ಶಿವ’ ಹಾಗೂ ಪ್ರೊ.ಶಿವರಾಜ ಪಾಟೀಲ ಕಲಬುರ್ಗಿ ಅವರು ‘ನ್ಯಾಯಮೂರ್ತಿ ಡಾ.ಶಿವರಾಜ ವಿ. ಪಾಟೀಲ್’ ಈ ಕೃತಿಗಳು ಪಾಟೀಲ ಅವರ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುತ್ತವೆ.
ಇವರು ರಾಷ್ಟ್ರದ, ರಾಜ್ಯದ ಮೂಲೆ ಮೂಲೆಯಲ್ಲಿ ಹಲವಾರು ಉಪನ್ಯಾಸಗಳನ್ನು ನೀಡಿದ್ದಾರೆ. ಅವುಗಳಲ್ಲಿ ೩೦ನೇ ಸೆಪ್ಟಂಬರ್, ೧೯೯೪ರಂದು ಡಾ. ರಾಜಾ ಸರ್ ಅಣ್ಣಾಮಲೈ ಚೆಟ್ಟಿಯಾರ್ ಅವರ ೧೧೪ನೇ ಜನ್ಮದಿನಾಚರಣೆಯ ನಿಮಿತ್ಯ ಉಪನ್ಯಾಸ, ೨೬ನೇ ನವಂಬರ್, ೧೯೯೪ರಲ್ಲಿ ಸೆಂಟ್ ಜಾನ್ ಅಂಬುಲೆನ್ಸ್ ಅಸೋಸಿಯೆಷನ್ಸ್ ಪ್ರತಿನಿಧಿಗಳ ವಾರ್ಷಿಕ ಸ್ನೇಹ ಸಮ್ಮೇಳನದ ಭಾಷಣ, ೧೭ನೇ ಡಿಸೆಂಬರ್ ೧೯೯೪ ಮದ್ರಾಸ್‌ನಲ್ಲಿ ನಡೆದ ೨೨ನೇ ಜ್ಞಾನ ಪ್ರಶಸ್ತಿ ಸಮಾರಂಭದಲ್ಲಿ ಮಾಡಿದ ಭಾಷಣ, ೧೭ನೇ ಜನೇವರಿ ೧೯೯೫ ರಂದು ಮದ್ರಾಸ್‌ನಲ್ಲಿ ನ್ಯಾಷನಲ್ ಇಂಗ್ಲಿಷ್ ಮಾಧ್ಯಮ ಶಾಲೆಯ ಬೆಳ್ಳಿ ಮಹೋತ್ಸವದ ವಾರ್ಷಿಕೋತ್ಸವದ ಭಾಷಣ, ೧೦ನೇ ಫೆಬ್ರವರಿ ೧೯೯೫ರಂದು ನವದೆಹಲಿಯ ಭಾರತೀಯ ನ್ಯಾಯ ನಿರ್ಣಾಯಕರ ಸಂಘಟನೆಯ ಆಶ್ರಯದಲ್ಲಿ ಅಂತರರಾಷ್ಟ್ರೀಯ ವ್ಯವಹಾರ ಒಪ್ಪಂದ ಮತ್ತು ನ್ಯಾಯ ನಿರ್ಣಯ ಸಂಘಟನೆ ಕುರಿತು ಭಾಷಣ, ೧೮ನೇ ಸೆಪ್ಟಂಬರ್ ೧೯೯೫ರಂದು ಮದ್ರಾಸಿನ ರಾಷ್ಟ್ರೀಯ ಸುಂಕ, ಅಬಕಾರಿ ಮತ್ತು ಮಾದಕ ವಸ್ತುಗಳ ಅಕಾಡೆಮಿಯ ಆಶ್ರಯದಲ್ಲಿ ಭಾರತೀಯ ತೆರಿಗೆ ಮತ್ತು ಕೇಂದ್ರ ಅಬಕಾರಿ ಸುಂಕ ಸೇವೆಯ ತರಬೇತಿ ಶಿಬಿರದಲ್ಲಿ ತೆರಿಗೆಯಲ್ಲಿ ಸಾಂಸ್ಥಿಕ ವೀಕ್ಷಣೆ ಎಂಬ ವಿಷಯದ ಕುರಿತು ಉಪನ್ಯಾಸ, ೨೯ನೇ ಅಕ್ಟೋಬರ್ ೧೯೯೫ರಂದು ಮದ್ರಾಸ್ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದಲ್ಲಿ ‘ಜಾತ್ಯಾತೀತತೆ-ಒಂದು ಹೊಸಮಾಲೆ’ ಎಂಬ ವಿಷಯವಾಗಿ ಭಾಷಣ, ೨೫ನೇ ನವಂಬರ್ ೧೯೯೫ ಮದ್ರಾಸ್‌ನ ಉಚ್ಛನ್ಯಾಯಾಲಯದ ವತಿಯಲ್ಲಿ ನಡೆದ ನ್ಯಾಯಾಧೀಶರ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಉಪನ್ಯಾಸವನ್ನು ನೀಡಿದ್ದಾರೆ.
೧೨ನೇ ಜನವರಿ ೧೯೯೬ ರಂದು ಶ್ರೀ ಜಗದ್ಗರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆ ಮತ್ತು ಎಸ್.ಜೆ.ಆರ್. ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ‘ಜಾತ್ಯಾತೀತತೆ ಒಂದು ಬದುಕಿನ ನುಡಿ ಗ್ರಂಥ ಮತ್ತು ಜೀವನದ ಚೈತನ್ಯ’ ಎಂಬ ವಿಷಯದ ಮೇಲಿನ ಭಾಷಣ, ೧೬ನೇ ಮಾರ್ಚ್ ೧೯೯೬ರಲ್ಲಿ ಮದ್ರಾಸಿನ ನ್ಯಾಯಮೂರ್ತಿ ಶ್ರೀ ಬಷಿರ್ ಅಹ್ಮದ್ ಸೈಯದ್ ಸಾಹೇಬ್ ಮಹಿಳಾ ಕಾಲೇಜಿನ ಘಟಿಕೋತ್ಸವ ಭಾಷಣ, ೨೮ನೇ ಮಾರ್ಚ್ ೧೯೯೬ ರಂದು ಮದ್ರಾಸಿನ ಜಾಗತಿಕ ಪ್ರೇಮ ಮತ್ತು ಭಾತೃತ್ವ ಸಂಘಟನೆಯ ೨೦ನೇ ವರ್ಷಾಚರಣೆಯ ಉದ್ಘಾಟನಾ ಸಮಾರಂಭದ ಭಾಷಣ, ಚೆನ್ನೈ ನಲ್ಲಿ ‘ನ್ಯಾಯಾಂಗೀಯ ಸುಧಾರಣೆ’ ವಿಷಯದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿಯ ಭಾಷಣ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ೧೨ನೇ ಘಟಿಕೋತ್ಸವ ಭಾಷಣ, ಉತ್ತರ ಅಮೇರಿಕಾದ ವೀರಶೈವ ಸಮಾಜ ಬೆಳ್ಳಿ ಹಬ್ಬದ ಸಂದರ್ಭದಲ್ಲಿಯ ಪ್ರಮುಖ ಭಾಷಣ, ಜೋಧಪುರ ಜೈ ನರೇನ್ ವ್ಯಾಸ ವಿಶ್ವವಿದ್ಯಾಲಯದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ‘ಜಾಗತೀಕರಣ, ಮಾನವ ಹಕ್ಕುಗಳು ಮತ್ತು ಶಿಕ್ಷಣದ ಕರ್ತವ್ಯ’ ಎಂಬ ವಿಷಯದ ಕುರಿತಾದ ಉಪನ್ಯಾಸ, ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ದಲ್ಲಿ ನಡೆದ ದಕ್ಷಿಣ ಆಫ್ರಿಕಾದ ಸಂವಿಧಾನಾತ್ಮಕ ನ್ಯಾಯಾಲಯದ ಹೊಸ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಭಾಷಣ, ಗುಹಾತಿಯಲ್ಲಿ ನ್ಯಾಯಮೂರ್ತಿ ಪಿ.ಟಿ.ಗೋಸ್ವಾಮಿ ಸ್ಮಾರಕ ಉಪನ್ಯಾಸ, ತಮಿಳುನಾಡಿನ ಸೇಲಂನ ಕೇಂದ್ರೀಯ ಕಾನೂನು ಮಹಾವಿದ್ಯಾಲಯದ ಘಟಿಕೋತ್ಸವ ಭಾಷಣ, ದೆಹಲಿಯಲ್ಲಿ ನ್ಯಾಯಮೂರ್ತಿ ಸುನಂದಾ ಭಂಡಾರೆ ಸ್ಮಾರಕ ಕಾರ್ಯಕ್ರಮದ ಅಧ್ಯಕ್ಷೀಯ ನುಡಿ, ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಘಟಿಕೋತ್ಸವದಂತಹ ಹಲವು ಸಮಾರಂಭಗಳಲ್ಲಿ ಸುಮಾರು ೫೦೦ಕ್ಕಿಂತ ಹೆಚ್ಚು ವಿದ್ವತ್‌ಪೂರ್ಣ ಉಪನ್ಯಾಸಗಳನ್ನು ನೀಡಿದ್ದಾರೆ. ಹಲವಾರು ಸಮ್ಮೇಳನಗಳ, ವಿಚಾರ ಸಂಕಿರಣಗಳ, ಕಾರ್ಯಾಗಾರಗಳ ಅಧ್ಯಕ್ಷತೆಯನ್ನು ವಹಿಸಿಕೊಂಡ ವ್ಯಕ್ತಿತ್ವ ಇವರದ್ದು.
ಇವರು ನ್ಯಾಯಾಂಗ ಕ್ಷೇತ್ರದಲ್ಲಿ ಮಾಡಿದ ಕೃಷಿಯನ್ನು ಕಂಡು ೨೦೦೨ರಲ್ಲಿ ಬೆಂಗಳೂರಿನ ಬಸವ ವೇದಿಕೆಯವರು ‘ಬಸವಶ್ರೀ’ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯ ಮಾರ್ಚ್-೨೦೦೫ರಲ್ಲಿ ‘ಗೌರವ ಡಾಕ್ಟರೇಟ್’ ಪದವಿ, ೫ನೆಯ ಜುಲೈ, ೨೦೦೩ ರಂದು ಉತ್ತರ ಅಮೇರಿಕಾದ ವೀರಶೈವ ಸಮಾಜದಿಂದ ಗೌರವದ ಸನ್ಮಾನ, ೨೦೦೫ರಲ್ಲಿ ‘ಭಾರತೀಯ ಕಾನೂನು ದಿನಾಚರಣೆ’ ಪ್ರಶಸ್ತಿ, ದಾವಣಗೆರೆ ಜಿಲ್ಲಾ ಪ್ರೆಸ್ ಕ್ಲಬ್ ಟ್ರಸ್ಟ್ನ ವತಿಯಿಂದ ೨೦೦೫ರಲ್ಲಿ ‘ಕಾಯಕರತ್ನ’ ಪ್ರಶಸ್ತಿ, ೨೦೦೬ರಲ್ಲಿ ನವದೆಹಲಿಯಿಂದ ‘ಭಾರತ ಶಿರೋಮಣಿ’ ಪ್ರಶಸ್ತಿ, ರಾಯಚೂರು ಜಿಲ್ಲೆಯ ದೇವದುರ್ಗದ ಅಭಿನಂದನ ಸಮಿತಿಯ ವತಿಯಿಂದ ೨೦೦೭ರಲ್ಲಿ ‘ಶರಣ ಶ್ರೀ’ ಪ್ರಶಸ್ತಿ, ೨೦೦೭ರಲ್ಲಿ ಕರ್ನಾಟಕ-ಅರ್ಚಕರ ವೇದಿಕೆಯ ‘ವಿನಯ ಶ್ರೀ’ ಪ್ರಶಸ್ತಿ, ೨೦೦೮ರಲ್ಲಿ ಶಿವಮೊಗ್ಗದ ಶ್ರೀರಾಮ ಚಂದ್ರಾಪುರ ಮಠದಿಂದ ‘ಪುರುಷೋತ್ತಮ’ ಪ್ರಶಸ್ತಿ, ೨೦೦೯ರಲ್ಲಿ ಚಿಕ್ಕಮಗಳೂರಿನಿಂದ ‘ಫ.ಗು.ಹಳಕಟ್ಟಿ’ ಪ್ರಶಸ್ತಿ, ೨೦೧೦ರಲ್ಲಿ ರಾಯಚೂರು ಜಿಲ್ಲಾ ೭ನೇ ಕನ್ನಡ ಸಾಹಿತ್ಯ ‘ಸಮ್ಮೇಳನಾಧ್ಯಕ್ಷ’ ಪದವಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿಯಿಂದ ೨೦೧೫ರಲ್ಲಿ ‘ಗೌರವ ಡಾಕ್ಟರೇಟ್’ ಪದವಿಗಳು ಸಂದಿವೆ. ಇಷ್ಟೆಲ್ಲ ಸಾಧನೆ ಮಾಡಿದ ಇವರಿಗೆ ಕರ್ನಾಟಕ ಸರ್ಕಾರ ೨೦೧೬ನೇ ನವಂಬರ್ ೧ ರಂದು ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಇವರಿಗೆ ತಾವು ಹುಟ್ಟಿ ಬೆಳೆದ ಹಳ್ಳಿಯ ಬಗ್ಗೆ ಎಲ್ಲಿಲ್ಲದ ಅಭಿಮಾನ. “ನನ್ನ ಹುಟ್ಟೂರು ಇಲ್ಲಿಗೆ ಸಮೀಪದಲ್ಲಿರುವ ಹಳ್ಳಿ ಮಲದಕಲ್, ನನ್ನ ತಾಲೂಕು ದೇವದುರ್ಗ, ನನ್ನ ಜಿಲ್ಲೆ ರಾಯಚೂರು ಹಾಗೂ ನಾನು ಕನ್ನಡಿಗನೆಂಬ ಹೆಮ್ಮೆ, ಇದು ನನಗೆ ಅತ್ಯಂತ ಅಭಿಮಾನ ಹಾಗೂ ಆನಂದಪಡುವ ಸಂಗತಿಯಾಗಿದೆ. ನಾನು ಇದೇ ನೆಲದಲ್ಲಿ ನಡೆದಾಡಿದವನು. ಈ ಸಂದರ್ಭದಲ್ಲಿ ನನ್ನ ಬಾಲ್ಯದ ದಿನಗಳು ನೆನಪಿಗೆ ಬರುತ್ತಿವೆ. ಆ ದಿನಗಳು ಬಹಳ ಕಷ್ಟಕರವಾದವುಗಳೇ ಆಗಿದ್ದವು. ನಾನು ಎರಡು ವರ್ಷದವನಿರುವಾಗಲೇ ತಾಯಿಯ ಪ್ರೀತಿಯಿಂದ ವಂಚಿತನಾದೆ. ತಾಯಿಯ ಅಗಲುವಿಕೆಯು ನನ್ನ ಮನಸ್ಸಿಗಾದ ಅತಿ ದೊಡ್ಡ ನೋವು. ಅನಂತರ ತಂದೆ ಹಾಗೂ ನನ್ನ ಸಹೋದರಿಯರ ಲಾಲನೆ-ಪಾಲನೆಯಲ್ಲಿ ಬೆಳೆದೆ” ಎಂಬ ಇವರ ಮನದಾಳದ ಮಾತು ಮನಮಿಡಿಯುವಂಥದ್ದು. ವಕೀಲಿ ವೃತ್ತಿಯನ್ನು ಆರಂಭಿಸಿದ ದಿನದಲ್ಲಿ ಮೊದಲ ಕಕ್ಷಿದಾರರಾಗಿ ಬಂದ ಕುಸನೂರು ಗ್ರಾಮದ ಶ್ರೀ ಅಮಂತ್ಯಪ್ಪ ಸಿದ್ದಪ್ಪ ಲಾಡ್ ಚಿಂಚೋಳಿ ಎಂಬ ಬಡ ದಲಿತ ವ್ಯಕ್ತಿಯನ್ನು ಇಂದಿಗೂ ಮರೆತಿಲ್ಲ. ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅವರು ನಿತ್ಯವು ಸತ್ಯವನ್ನೇ ನಂಬಿರುವ ಹಾಗೂ ಅಪಾರ ದೈವಿಭಕ್ತರಾಗಿ, ಸದಾ ಹಸನ್ಮುಖಿಯಾಗಿರುವ ಇವರು ಈಗ ಬೆಂಗಳೂರಿನ ಸದಾಶಿವನಗರದಲ್ಲಿ ನೆಲೆಸಿದ್ದರೂ ಇವರ ಚಿತ್ತ ವಾಲುತ್ತಿರುವುದು ಹುಟ್ಟೂರಿನತ್ತ, ಬೆಳೆದ ಸಾಧನೆಗಳ ಪರಿಸರದತ್ತ. ಇಡೀ ದೇಶಾದ್ಯಂತ ಸುತ್ತಾಡುತ್ತಾ, ತಮ್ಮ ಜ್ಞಾನ ಹಾಗೂ ಅನುಭವದ ನಿಧಿಯನ್ನು ಧಾರೆಯೆರೆಯುತ್ತಿದ್ದಾರೆ. ಇಂಥವರು ಎಂದೆಂದಿಗೂ ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ.
-ಶಿವರಾಜ ಯತಗಲ್, ಉಪನ್ಯಾಸಕರು, ಕನ್ನಡ ಅಧ್ಯಯನ ವಿಭಾಗ, ರಾಯಚೂರು ವಿಶ್ವವಿದ್ಯಾಲಯ ರಾಯಚೂರು. ಮೊ.ನಂ: ೯೦೧೯೮೬೭೮೮೬/ ೮೬೬೦೮೨೭೭೦೫
