
ಕೇಳಿ ತಾರಾಳ ಧರ್ಮಸಂಹಿತ ನುಡಿ.I
ಮೃದುಸ್ವಭಾವದಿ ಲಕ್ಷ್ಮಣ ಜಾಗರೂಕತೆದಿ ಸಮ್ಮತಿಸಿದ;II
ತಿಳಿದು ತಾರಾಳ ಮಾತಿಗೆ ಲಕ್ಷ್ಮಣನ ಸಮ್ಮತಿI
ವಾನರರಾಜ ಸುಗ್ರೀವ ಬಿಟ್ಟ ನಿಟ್ಟುಸಿರು, II
ಹರುಷದಿ ಬಲಶಾಲಿ ಸುಗ್ರೀವ ಲಕ್ಷ್ಮನಿಗೆ ನುಡಿದ:I
“ಕಳೆದುಕೊಂಡಿದ್ದೆ ರಾಜ್ಯ, ಕೀರ್ತಿ ವ ಸಮೃದ್ಧಿ, II
ಓ ಲಕ್ಷ್ಮಣಾ,ಪುಃನ ಪಡೆದಿಹನು ರಾಮನ ಕೃಪೆದಿ, I
ರಾಮನ ಅಪ್ರತಿಮ ಸಾಹಸ ಸಹಾಯದಿII
ಸಂಹರಿಸಿ ರಾವಣನ ಸೀತೆ ಹಿಂಪಡೆವ ಸಾಮರ್ಥ್ಯI
ರಾಮನಲಿದೆ, ನಿಮಿತ್ಯಮಾತ್ರ ನನ್ನ ಸಹಾಯ, II
ತಪ್ಪು ಮಾಡದವರಿಲ್ಲಾ ಲೋಕದಲಿ, ನಂಬಿಕೆ ವI
ಸ್ನೇಹದಲಿ ನನ್ನಿಂದ ತಪ್ಪಾಗಿದ್ದರೆ ಕ್ಷಮಿಸು”;II
ಕೇಳಿ ಸಂತೃಪ್ತನಾದ ಲಕ್ಷ್ಮಣ ಸುಗ್ರೀವನ ನುಡಿ,I
ಸ್ನೇಹದಿ ಲಕ್ಷ್ಮಣ ಸುಗ್ರೀವನಿಗೆ ನುಡಿದ, II
“ಓ ಸುಗ್ರೀವಾ, ವಚನನಿಷ್ಠೆಯುಳ್ಳವ ನೀI
ರಾಮನಂತೆ, ರಾಜನಾಗು ಯೋಗ್ಯ ಮುಕ್ತಮನಸ್ಸಿ ನೀ, II
ಸಹಾಯಕ್ಕೆ ಬಂದ ನಿಮ್ಮನು ರಕ್ಷಿಸುವನುI
ರಣರಂಗದಲ್ಲಿ ವೈರಿ ಸೈನ್ಯ ಸಂಹರಿಸಿ ರಾಮ, II
ಧರ್ಮದಿಂದಲೋ,ಕೃತಜ್ಞತೆಯಿಂದಲೋ ರಣರಂಗದಲಿI
ನಿನ್ನ ಆಜ್ಞೆಯೇ ಮೇಲು, ಓ ಸುಗ್ರೀವಾ, II
ದೋಷಿಗಳು, ನನ್ನಣ್ಣ ವ ಸುಗ್ರೀವನ ಮಾತು I
ಉಲ್ಲಂಘಿಸಿದವರು, ದುರ್ನಡತೆ ತೋರಿದವರು, II
ರಾಮನಷ್ಟೆ ಸಮ ವೀರ ನೀ, ಸುಗ್ರಿವಾI
ನಿನ್ನ ಸ್ನೇಹ ನಮಗೆ ದೈವಿಕೃಪಾ, II
ಓ ಶೂರನೆ, ನಿನ್ನ ಆಪ್ತರೊಂದಿಗೆ ನಡೆI
ನನ್ನೊಂದಿಗೆ ದುಃಖಿತ ರಾಮನ ಭೇಟಿಗೆ, II
ಓ ಸ್ನೇಹಿತನೆ, ರಾಮನ ವಿರಹ ದುಃಖ ನೋಡಿI
ಕಠೋರ ಶಬ್ದಗಳನ್ನು ಆಡಿರುವೆ ನಿಮಗೆ ನಾ, ಕ್ಷಮಿಸಿ.”II
ಕಿಷ್ಕಿಂಧಕಾಂಡ ರಾಮಾಯಣ
ಮಾಡಿದ ಮತ್ತು ಆಡಿದ ತಪ್ಪಿಗೆ ಕ್ಷಮೆ ಕೇಳುವದು ವ್ಯಕ್ತಿಯ ಸದ್ಗಣ ತೋರಿಸುವದು ಹಾಗು ಅದು ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯ ಪಡೆಯಲು ಸಹಾಯವಾಗುವದೆಂದು ಆದಿಕವಿ ವಾಲ್ಮೀಕಿ ಈ ಪ್ರಸಂಗದಲ್ಲಿ ವಿವರಿಸಿರುವರು, ಅದರಲ್ಲಿ ಮೂಡಿಬರುವ ಅಂಶಗಳು (1)ಲಕ್ಷನನು ಕೋಪ ತೊರೆದನು: ತಾರಾಳ ಧರ್ಮಸಂಹಿತ ಸಮಾದಾನದ ಮಾತುಗಳನ್ನು ತಿಳಿದುಕೊಂಡು ಮೃದು ಸ್ವಭಾವದಿಂದ ಲಕ್ಷ್ಮಣನು ಜಾಗರೂಕತೆಯಿಂದ ಅವುಗಳನ್ನು ಒಪ್ಪಿಕೊಂಡನು, ಆದಿಧರ್ಮಜ್ಞ ವಾಲ್ಮೀಕಿಯು ತಾರಾಳ ಮುಖೇನ ಧರ್ಮ ಸಂಹಿತೆಯನ್ನು ಬೋದಿಸಿರುವರು, ಆದಿಕವಿ ವಾಲ್ಮೀಕಿಯ ಪ್ರಕಾರ ಧರ್ಮ ಪದ ಅರ್ಥವು ಮತ ಪದ ಅರ್ಥವು ಬೇರೆ ಬೇರೆ ಆಗಿವೆ, ಕಾಲಾಂತರದಲ್ಲಿ ಬೋಧಿಸಿದ ಬೌದ್ಧ, ಜೈನ, ವೈಷ್ಣವ, ಶೈವ, ಶಾಕ್ತ, ಇಸ್ಲಾಂ, ಕ್ರಿಶ್ಚನ್ ಇತ್ಯಾದಿ ಮತಗಳ (ನಂಬಿಕೆಗಳ) ಆಚರಣೆಗಳ ವಿಧಾನ ಮತ್ತು ತತ್ವಗಳನ್ನು ಧರ್ಮವೆಂದು ತಪ್ಪಾಗಿ ಬಳಿಸಲಾಗುತ್ತಿದೆ, ಆದಿಚಿಂತಕ ವಾಲ್ಮೀಕಿಯ ಪ್ರಕಾರ ಧರ್ಮವೆಂದರೆ ಪಾಲಿಸ ಬೇಕಾದ ನೀತಿ ನಿಯಮಗಳು(ಸಂಹಿತೆಗಳು/ಸೂತ್ರಗಳು), 12ನೇ ಶತಮಾನದ ಬಸವಣ್ಣನವರ ಪ್ರಕಾರ ಧರ್ಮವೆಂದರೆ ನಡೆ ಮತ್ತು ನುಡಿ, ಗೌತಮ ಬುದ್ಧರ ಪ್ರಕಾರ ಧರ್ಮವೆಂದರೆ ಸತ್ಯ ತತ್ವಗಳ (ನಿಯಮಗಳ) ಪಾಲನೆ. ವ್ಯಕ್ತಿ ಬದುಕಿನಲ್ಲಿ, ವ್ಯವಸ್ಥೆಯಲ್ಲಿ, ಸಂಘಟನೆಯಲ್ಲಿ, ದೇಶದಲ್ಲಿ ಶಿಸ್ತು ಕಾಪಾಡಲು ನೀತಿ ನಿಯಮ (ನಡತೆ ಸಂಹಿತೆ)ಗಳನ್ನು ಮಾಡಲಾಗುವದು, ಅದುವೆ ಧರ್ಮ, ಇಂದು ಭಾರತೀಯರಲ್ಲಿ ಶಿಸ್ತು ತರಲು ದೇಶದ ಸಂವಿಧಾನವನ್ನು ಜಾರಿಗೆ ತರಲಾಗಿದೆ, ಸಂವಿಧಾನವೇ ಇಂದು ಭಾರತೀಯರ ಅರ್ಥಾತ್ ಹಿಂದುಸ್ತಾನ ವಾಸಿಗಳ ಧರ್ಮ ಆಗಿದೆ, ಅದನ್ನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಲು ಭಾರತೀಯ ದಂಡ ಸಂಹಿತೆ ಇದೆ, ಇಂತಹ ಸುಸ್ಥಿರ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಭರತಖಂಡದಲ್ಲಿ ಸಮ್ರಾಟ ಭರತನಿಂದ ಜಾರಿ ಬಂದಿರುವದು, ಅದನ್ನು ನಂತರದ ರಾಜರು ಪಾಲಿಸಿದರು, (2) ಸುಗ್ರೀವನು ರಾಮನ ಉಪಕಾರವನ್ನು ಸರಿಸುವನು: ಲಕ್ಷ್ಮಣನು ತಾರಾಳ ಮಾತಿಗೆ ಸಮ್ಮತಿ ಕೊಟ್ಟಿದ್ದನ್ನು ತಿಳಿದು ವಾನರರಾಜ ಸುಗ್ರೀವನು ನಿಟ್ಟುಸಿರು ಬಿಟ್ಟನು ಹಾಗು ಹರುಷದಿಂದ ಬಲಶಾಲಿ ಸುಗ್ರೀವನು ಲಕ್ಷ್ಮನಿಗೆ ತಾನು ಕಳೆದಿಕೊಂಡ ರಾಜ್ಯ, ಪತ್ನಿ, ಕೀರ್ತಿ ಮತ್ತು ಸಮೃದ್ಧಿಗಳನ್ನು; ರಾಮನ ಕೃಪೆಯಿಂದ ಪಡೆದದನ್ನು ತಿಳಿಸುವನು, ರಾವಣನನ್ನು ಸಂಹರಿಸಿ ಸೀತೆಯನ್ನು ಹಿಂಪಡೆವ ಸಾಮರ್ಥ್ಯ ರಾಮನಲಿದೆ, ಅವನಿಗೆ ತನ್ನ ಸಹಾಯ ನಿಮಿತ್ಯಮಾತ್ರ ಎಂದು ರಾಮನ ಶೌರ್ಯವನ್ನು ಹೊಗಳುವನು, ಈ ಲೋಕದಲಿ ತಪ್ಪು ಮಾಡದವರಿಲ್ಲಾ , ನಂಬಿಕೆ ಮತ್ತು ಸ್ನೇಹದಲ್ಲಿ ನನ್ನಿಂದ ತಪ್ಪಾಗಿದ್ದರೆ ನನ್ನನ್ನು ಕ್ಷಮಿಸು ಎಂದು ರಾಮನ ಉಪಕಾರ ಸ್ಮರಿಸುತ, ಅವನ ಸಾಮರ್ಥ್ಯದ ಗುಣಗಾನ ಮಾತುಗಳನ್ನಾಡುತ ತನ್ನ ತಪ್ಪಿಗಾಗಿ ಕ್ಷಮೆ ಸುಗ್ರೀವನು ಕೋರಿದನು, ಎಲ್ಲರಿಂದ ತಪ್ಪು ಆಗುವದು ಸಹಜ, ಆದರೆ ಅದನ್ನು ಕ್ಷಮಿಸುವ ಗುಣ ದೊಡ್ಡದು ಎಂಬ ತತ್ವವನ್ನು ಆದಿಕವಿ ವಾಲ್ಮೀಕಿಯು ಈ ಮೂಖೇನ ತಿಳಿಸಿರುವರು,(3) ಲಕ್ಷ್ಮಣನು ಸುಗ್ರೀವನ ಕ್ಷಮೆಯಾಚನೆ ಮಾತುಗಳನ್ನು ಕೇಳಿ ಸಂತೃಪ್ತನಾದನು ಹಾಗು ಸ್ನೇಹದಿಂದ ಲಕ್ಷ್ಮಣನು ಸುಗ್ರೀವನಿಗೆ ರಾಮನಂತೆ ವಚನನಿಷ್ಠೆಯುಳ್ಳವನು, ರಾಜನಾಗುವ ಯೋಗ್ಯತೆಯುಳ್ಳವನು, ಎಂದು ಅವನಿಗೆ ಸಮ್ಮತಿಯ ಮಾತುಗಳನ್ನು ಆಡುವನು, ಸಹಾಯಕ್ಕೆ ಬಂದ ವಾನರರನ್ನು ರಾಮನು ರಣರಂಗದಲ್ಲಿ ವೈರಿ ಸೈನ್ಯ ಸಂಹರಿಸಿ ಅವರನ್ನು ರಕ್ಷಿಸುವನು; ಧರ್ಮದಿಂದಲೋ, ಕೃತಜ್ಞತೆಯಿಂದಲೋ ರಣರಂಗದಲಿ ಸುಗ್ರೀವನ ಆಜ್ಞೆಯೇ ಅಂತಿಮ ಎಂದು ತಿಳಿಸುವನು, ರಾಮ ಮತ್ತು ಸುಗ್ರೀವನ ಮಾತುಗಳನ್ನು ಉಲ್ಲಂಘಿಸಿದವರು, ಅವರಿಗೆ ದುರ್ನಡತೆ ತೋರಿದವರು ದೋಷಿಗಳು ಎಂದು ಹೇಲುವನು, ಸುಗ್ರೀವನು ರಾಮನಷ್ಟೆ ಸಮ ವೀರನು, ದೈವಿಕೃಪೆಯಿಂದ ಅವನ ಸ್ನೇಹವು ತಮಗೆ ಸಿಕ್ಕಿದೆ; ಆಪ್ತರೊಂದಿಗೆ ತನ್ನೊಂದಿಗೆ ದುಃಖಿತ ರಾಮನ ಭೇಟಿಗೆ ಬರಲು ಸುಗ್ರೀವನಿಗೆ ಲಕ್ಷನನು ಕೋರಿದನು, ಅದರಂತೆ ತಾನೂ , ರಾಮನ ವಿರಹ ದುಃಖ ನೋಡಿ ಸಹಿಸದೇ ಕಠೋರ ಶಬ್ದಗಳನ್ನು ಆಡಿದಕ್ಕಾಗಿ ಸುಗ್ರೀವನಲ್ಲಿ ಕ್ಷಮೆ ಕೇಳಿದನು. ಕ್ಷಮೆ ಉತ್ತಮ ಗುಣವೇಂದು ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಬೋಧಿಸಿರುವರು.
-ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
