
ಕೇಳಿ ಹನುಮನ ನುಡಿ ಅಂಗದ ನುಡಿದ:” ಪರಿಶದ್ಧ ಮನಸ್ಸು,I
ಆತ್ಮ, ಕರುಣೆ, ಮುಕ್ತ-ಸ್ವಭಾವ ಎಲ್ಲವಿದೆ ಸುಗ್ರೀವನಲಿ;II
ಆದರೆ ಅಣ್ಣ ಜೀವಂತವಿಲ್ಲದಿದ್ದಾಗ ಅತ್ತಿಗೆಯೊಂದಿಗೆ ಸುಗ್ರೀವನI
ದುರ್ವ್ಯವಹಾರ ಸರಿಯೇ? ಅತ್ತಿಗೆ ತಾಯಿಗೆ ಸಮಾನ;II
ಗವಿಯಲಿ ದುಂದುಭಿಯೊಂದಿಗೆ ಯುದ್ಧನಿರತ ಅಣ್ಣ ವಾಲಿ,I
ಗವಿ ಮುಚ್ಚಿ ಬರುವದು ಸುಗ್ರೀವನ ನೈತಿಕತೆಯೇ? II
ತನ್ನ ಸ್ವಾರ್ಥಕ್ಕಾಗಿ ಪರಾಕ್ರಮಿ ರಾಮನ ಸ್ನೇಹ ಬೆಳಸಿ,I
ವಾಲಿ ಹತ್ಯೆ ರಾಮನಿಂದ ಮಾಡಿಸಿದ್ದು,ಸುಗ್ರೀವನ ಸತ್ಕಾರ್ಯವೇ?II
ಲಕ್ಷ್ಮಣನಿಗ್ಹೆದರಿ ಸೀತೆ-ಶೋಧಕ್ಕೆ ನಮ್ಮನು ಕಳಿಸಿದ ಸುಗ್ರೀವI
ಸ್ಮರಿಸಬಲ್ಲನೇ ನಮ್ಮ ಸೇವೆ? ನಮ್ಮನು ರಕ್ಷಿಸಬಲ್ಲನೇ?II
ಸುಗ್ರೀವನಲ್ಲಿ ಗೌರವ, ನಂಬಿಕೆಯಿಡುವವರ್ಯಾರು?I
ನನ್ನ ತಂದೆ-ಹತ್ಯೆ ನಾಚಿಕೆಗೇಡು ಕೃತ್ಯವೆಸಗಿದ; II
ಪಡೆದನು ನಾಚಿಕೆಗೇಡು ಸುಗ್ರೀವ ರಾಜ್ಯ ವ ನನ್ನ ತಾಯಿಯನು,I
ಅಧರ್ಮಿಕೃತ್ಯ, ರಾಮನೇಕೇ ಬೆಂಬಲಿಸಿದೀ ಕೃತ್ಯ?II
ಲಕ್ಷ್ಮಣನ ಬೆದರಿಕೆಗೆ ರಾಮನ ಒಪ್ಪಂದ ನೆನಪಿಸಿಕೊಂಡ ಸುಗ್ರೀವ,I
ಒತ್ತೆದಾಳದಂತೆ ನಮ್ಮನು ಬಳಿಸುತಿಹನು ಸುಗ್ರೀವ; II
ಇದೆಂತಹ ಮನೆತನದಲ್ಲಿ ಹುಟ್ಟಿದೆ ನಾ? ಪ್ರಮಾಣಿಕನಿರಲಿ,I
ಅಪ್ರಮಾಣಿಕನಿರಲಿ, ರಾಜಪುತ್ರನೇ ಯುವರಾಜ; II
ಶತ್ರುವಿನ ಮಗನನ್ನು ಸಹಿಸಲು ಸಾಧ್ಯವೇ?I
ನನ್ನ ಹಿತ, ರಕ್ಷಣೆ ಸುಗ್ರೀವನಿಂದ ಸಾಧ್ಯವೇ? II
ಕಪ್ಪು-ಗವಿಯಲಿ ವಾಸಿಸುವ ನನ್ನ ಯೋಜನೆ ಕಮರಿತು,I
ನನ್ನ ನೇತೃತ್ವದಲಿ ಸೀತೆಯೂ ಸಿಗಲಿಲ್ಲ; II
ನೀವೆಲ್ಲರೂ ಸುಗ್ರೀವನ ಬೆಂಬಲಿಗರು, ನಾನು ದುರ್ಬಲನಾದೆ, I
ಅನಾಥನಾದೆ, ಕಿಷ್ಕಿಂಧದಲಿ ಬದುಕಲು ಅಸಾಧ್ಯವೆನಗೆ; II
ಸುಗ್ರೀವನ ಕ್ರೂರ ದಂಡನೆಗೆ ಗುರಿಯಾಗುವದಕ್ಕಿಂತ ಆಮರಣI
ಉಪವಾಸ ಲೇಸೆನಗೆ, ನೀವೆಲ್ಲರೂ ಮರಳಿರಿ ಕಿಷ್ಕಿಂಧಕ್ಕೆ;II
ನನ್ನ ಪರವಾಗಿ ಗೌರವ ಸಲ್ಲಿಸಿ ಕೇಳಿರಿ ರಾಮನ ಕ್ಷೇಮ,I
ಸುಗ್ರೀವನ ವ ಮಲತಾಯಿ ರುಮಾಳ ಕ್ಷೇಮ; II
ಸಾಂತ್ವನ ಹೇಳಿ ನನ್ನ ತಾಯಿ ತಾರಾಳಿಗೆ,I
ತನ್ನ ಪ್ರಾಣ ಬಿಡಬಹುದು ತಾಯಿ ನನ್ನ ಸುದ್ಧಿ ಕೇಳಿ”; II
ಹೀಗೆ ನುಡಿಯುತ ಅಂಗದ ಹುಲ್ಲಿ ಹಾಸಿಗೆ ಮೇಲೆI
ಮಲಗಿದ, ಆಮರಣ ಉಪವಾಸಕ್ಕಾಗಿ; II
ನೆಲದ್ಮೇಲಿದ್ದ ಅಂಗದನ ಸ್ಥಿತಿ ಕಂಡು ವಾನರರು, I
ಕಣ್ಣೀರು ಸುರಿಸುತ, ಸಾಂತ್ವನ ಹೇಳುತ, ಉಪವಾಸಕ್ಕೆ ಕುಳಿತರು; II
ಮಹಾಸಾಗರದ ದಕ್ಷಿಣದತ್ತ ಮುಖ ಮಾಡಿ ಕುಳಿತ I
ವಾನರರು, ಚರ್ಚಿಸುತಿದ್ದರು ಸುದ್ದಿಗಳನು: II
ರಾಮನ ವನವಾಸ, ದಶರಥರ ಮರಣ,ರಾವಣನಿಂದ ಸೀತಾ-ಹರಣ, I
ಜಟಾಯು ಮರಣ ಪ್ರಸಂಗಗಳನು; II
ದೈತಮೋಡದಂತೆ ಕಂಡಿತು ವಾನರರ ದಂಡುI
ಪರ್ವತದಡಿ ಆಮರಣ ಉಪವಾಸನಿರತ.II
ಕಿಷ್ಕಿಂಧಕಾಂಡ ರಾಮಾಯಣ
ಹನುಮನ ಹಿತೋಪದೇಶ ಕೇಳಿದ ಅಂಗದನು ವಾನರರಿಗೆ ಸುಗ್ರೀವನ ನಡತೆ ಮತ್ತು ದುರ್ವ್ಯವಹಾರಗಳ ಬಗ್ಗೆ ಅಸಂತೋಷ ವ್ಯಕ್ತಪಡಿಸಿ ತಾನು ಕಿಷ್ಕಿಂಧಕ್ಕೆ ಮರಳದೇ ಆಮರಣ ಉಪವಾಸ ಮಾಡುವ ಇಂಗಿತ ವ್ಯಕ್ತ ಪಡಿಸಿದನ್ನು ಆದಿಕವಿ ವಾಲ್ಮೀಕಿಯು ವಿವರಿಸುವ ಮೂಲಕ ಒಂದು ಜಠಿಲ ಪ್ರಶ್ನೆಯನ್ನು ಲೋಕದ ಮುಂದೆ ಇಟ್ಟಿರುವರು, ಅದರಲ್ಲಿಯ ಗಮನಾರ್ಹ ಅಂಶಗಳು: (1) ಸುಗ್ರೀವನು ತಾರಾಳೊಂದಿಗೆ ನಡೆದು ಕೊಂಡ ರೀತಿ: “ಸುಗ್ರೀವನಲ್ಲಿ ಪರಿಶುದ್ಧ ಮನಸ್ಸು, ಆತ್ಮ, ಕರುಣೆ, ಮುಕ್ತ-ಸ್ವಭಾವ, ಎಲ್ಲವಿದೆ ಆದರೆ ತನ್ನ ಅಣ್ಣ ವಾಲಿ ಜೀವಂತವಿಲ್ಲದಿದ್ದಾಗ ಅವನ ಪತ್ನಿತಾರಾಳೊಂದಿಗೆ ಸುಗ್ರೀವನ ದುರ್ವ್ಯವಹಾರ ಸರಿಯೇ? ಅತ್ತಿಗೆ ತಾಯಿಗೆ ಸಮಾನ; ಗವಿಯಲ್ಲಿ ದುಂದುಭಿಯೊಂದಿಗೆ ಯುದ್ಧನಿರತ ಅಣ್ಣ ವಾಲಿಯನ್ನು ಗವಿಯಲ್ಲಿ ಮುಚ್ಚಿ ಬರುವದು ಸುಗ್ರೀವನ ನೈತಿಕತೆಯೇ? ತನ್ನ ಸ್ವಾರ್ಥಕ್ಕಾಗಿ ಮಹಾಪರಾಕ್ರಮಿ ರಾಮನ ಸ್ನೇಹ ಬೆಳಸಿ ತನ್ನ ಅಣ್ಣ ವಾಲಿಯನ್ನು ರಾಮನಿಂದ ಹತ್ಯೆ ಮಾಡಿಸಿದ್ದು ಸುಗ್ರೀವನ ಸತ್ಕಾರ್ಯವೇ? ಲಕ್ಷ್ಮಣನ ಕೋಪಕ್ಕೆ ಹೆದರಿ ಸೀತೆ-ಶೋಧಕ್ಕೆ ನಮ್ಮನು ಕಳಿಸಿದ ಸುಗ್ರೀವನು ಸ್ಮರಿಸಬಲ್ಲನೇ ನಮ್ಮ ಸೇವೆ? ನಮ್ಮನು ರಕ್ಷಿಸಬಲ್ಲನೇ? ಈಗ ಸುಗ್ರೀವನಲ್ಲಿ ಗೌರವ, ನಂಬಿಕೆಯಿಡುವವರು ಯಾರು? ನನ್ನ ತಂದೆ-ಹತ್ಯೆಯಂತಹ ನಾಚಿಕೆಗೇಡು ಕೃತ್ಯವೆಸಗಿದ ನಾಚಿಕೆಗೇಡು ಸುಗ್ರೀವ ರಾಜ್ಯ ಮತ್ತು ನನ್ನ ತಾಯಿಯನ್ನು ಪಡೆದನು, ಇದು ಅಧರ್ಮಿಕೃತ್ಯ, ಈ ಕುಕೃತ್ಯವನ್ನು ರಾಮನೇಕೇ ಬೆಂಬಲಿಸಿದನು? ಲಕ್ಷ್ಮಣನ ಬೆದರಿಕೆಗೆ ಅಂಜಿ ಸುಗ್ರೀವನು ರಾಮನ ಒಪ್ಪಂದ ನೆನಪಿಸಿಕೊಂಡು ಸುಗ್ರೀವನು ನಮ್ಮನು ಒತ್ತೆದಾಳದಂತೆ ಬಳಿಸುತ್ತಿರುವನು; ನಾನು ಇದೆಂತಹ ಮನೆತನದಲ್ಲಿ ಹುಟ್ಟಿದೆ ? ಪ್ರಮಾಣಿಕನಿರಲಿ, ಅಪ್ರಮಾಣಿಕನಿರಲಿ, ರಾಜಪುತ್ರನೇ ಯುವರಾಜ, ಶತ್ರುವಿನ ಮಗನನ್ನು ಸಹಿಸಲು ಸಾಧ್ಯವೇ? ನನ್ನ ಹಿತ, ರಕ್ಷಣೆ ಸುಗ್ರೀವನಿಂದ ಸಾಧ್ಯವೇ? ಕಪ್ಪು-ಗವಿಯಲ್ಲಿ ವಾಸಿಸುವ ನನ್ನ ಯೋಜನೆ ಕಮರಿತು, ನನ್ನ ನೇತೃತ್ವದಲಿ ಸೀತೆಯೂ ಸಿಗಲಿಲ್ಲ; ನೀವೆಲ್ಲರೂ ಸುಗ್ರೀವನ ಬೆಂಬಲಿಗರು, ನಾನು ದುರ್ಬಲನಾದೆ, ಅನಾಥನಾದೆ, ಇನ್ನು ನನಗೆ ಕಿಷ್ಕಿಂಧದಲ್ಲಿ ಬದುಕಲು ಅಸಾಧ್ಯ; ಸುಗ್ರೀವನ ಕ್ರೂರ ದಂಡನೆಗೆ ಗುರಿಯಾಗುವದಕ್ಕಿಂತ ನನಗೆ ಆಮರಣ ಉಪವಾಸ ಲೇಸು, ನೀವೆಲ್ಲರೂ ಕಿಷ್ಕಿಂಧಕ್ಕೆ ಹಿಂದಿರುಗಿರಿ; ನನ್ನ ಪರವಾಗಿ ಗೌರವ ಸಲ್ಲಿಸಿ ರಾಮನಲ್ಲಿ ಕ್ಷೇಮ ಕೇಳಿರಿ, ಸುಗ್ರೀವ ಮತ್ತು ಮಲತಾಯಿ ರುಮಾಳಲ್ಲಿ ಕ್ಷೇಮ ಕೇಳಿರಿ ಮತ್ತು ನನ್ನ ತಾಯಿ ತಾರಾಳಿಗೆ ಸಾಂತ್ವನ ಹೇಳಿರಿ, ನನ್ನ ಸುದ್ಧಿ ಕೇಳಿ ನನ್ನ ತಾಯಿ ತನ್ನ ಪ್ರಾಣ ಬಿಡಬಹುದು” ಹೀಗೆ ಹಲವಾರು ಪ್ರಶ್ನೆಗಳನ್ನು ವಾನರರ ಮುಂದೆ ಇಟ್ಟನು;ವಾಲಿ-ಹತ್ಯೆ ಸಂದರ್ಭದಲ್ಲಿ, ವಾಲಿಯ ಪ್ರಶ್ನೆಗಳಿಗೆ ರಾಮನು ಸುಗ್ರೀವನು ಜೀವಂತವಿದ್ದಾಗ ಅವನ ಪತ್ನಿ ರುಮಾಳಯ ಮೇಲೆ ವಾಲಿಯ ಬಲತ್ಕಾರವು ಅವನ ಹತ್ಯೆ-ಕಾರಣವೆಂದು ಉತ್ತರ ನೀಡಿದ್ದನು, ವಾಲಿಯೂ ಅದನ್ನು ಮನವರಿಕೆ ಮಾಡಿಕೊಂಡು ಉಸಿರು ಬಿಟ್ಟನು ಎಂಬ ವಿವರಣೆ ನೀಡಿದ ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಆ ಉತ್ತರ ಅಸಂಬದ್ಧವೆಂದು ಅಂಗದನ ಪ್ರಶ್ನೆಗಳ ಮೂಲಕ ವಾಲಿ-ಹತ್ಯೆ-ಕಾರಣ ಪ್ರಶ್ನೆಯನ್ನು ನಿರುತ್ತರಗೊಳಿಸಿರುವರು, ಅಂಗದವಲ್ಲಿಯ ಬಂಡಾಯವನ್ನು ವ್ಯಕ್ತಪಡಿಸಿರುವುದು, (2) ಅಂಗದ ಮತ್ತು ವಾನರರ ಆಮರಣ ಉಪವಾಸ ನಿರ್ಧಾರ: ಸುಗ್ರೀವನ ನಡತೆ ವಿರುದ್ಧ ಹಲವಾರು ಪ್ರಶ್ನೆಗಳನ್ನು ಕೇಳುತ ಅಂಗದ ಹುಲ್ಲಿ ಹಾಸಿಗೆ ಮೇಲೆ ಮಲಗಿದನು ಹಾಗು ಆಮರಣ ಉಪವಾಸ ಪ್ರಾರಂಭಿಸಿದನು. ನೆಲದ ಮೇಲೆ ಮಲಗಿದ್ದ ಅಂಗದನ ಸ್ಥಿತಿ ಕಂಡು ವಾನರರು ಕಣ್ಣೀರು ಸುರಿಸುತ, ಸಾಂತ್ವನ ಕೇಳುತ ಅವರೂ ಅವನೊಂದಿಗೆ ಆಮರಣ ಉಪವಾಸಕ್ಕೆ ಕುಳಿತರು; ಮಹಾಸಾಗರದ ದಕ್ಷಿಣದತ್ತ ಮುಖ ಮಾಡಿ ಕುಳಿತ ವಾನರರು ತಮ್ಮತಮ್ಮಲ್ಲಿಯೇ ರಾಮನ ವನವಾಸ, ದಶರಥರ ಮರಣ, ರಾವಣನಿಂದ ಸೀತಾ-ಹರಣ, ಜಟಾಯು ಮರಣ ಪ್ರಸಂಗಗಳ ಕೆಲವು ಸುದ್ದಿಗಳನ್ನು ಚರ್ಚಿಸುತಿದ್ದರು; ಪರ್ವತದಡಿ ಆಮರಣ ಉಪವಾಸನಿರತ ವಾನರರ ದಂಡು ದೈತಮೋಡದಂತೆ ಕಂಡಿತು. ಒಟ್ಟಿನಲ್ಲಿ ಈ ಸಂದರ್ಭದಲ್ಲಿ ಆದಿಕವಿ ವಾಲ್ಮೀಕಿಯು ಅಂಗದನ ಪ್ರಶ್ನೆಗಳ ಮೂಲಕ ವಾಲಿಯ ಹತ್ಯೆಗೆ ನ್ಯಾಯ ಸಮರ್ಥೀನೀಯ ಉತ್ತರ ಹುಡುಕಲು ಲೋಕದ ಮುಂದೆ ಇಟ್ಟಿರುವರು. ಅಣ್ಣ ಜೀವಂತವಿದ್ದಾಗ, ಜೀವಂತ ವಿಲ್ಲದಾಗ ಅವನ ಮಡದಿ ಜೊತೆ ಅವನ ಉಳಿದ ಸಹೋದರರು ಹೇಗೆ ವರ್ತಿಸಬೇಕು, ಅದರಂತೆ ತಮ್ಮ ಜೀವಂತವಿದ್ದಾಗ, ಜೀವಂತ ವಿಲ್ಲದಾಗ ಅವನ ಮಡದಿ ಜೊತೆ ಅವನ ಉಳಿದ ಸಹೋದರರು ಹೇಗೆ ವರ್ತಿಸಬೇಕು, ಎಂಬ ನೀತಿಶಾಸ್ತ್ರದ ವಾದ ಮತ್ತು ಸಾಮಾಜಿಕ ಮನಶಾಸ್ತ್ರಸ್ಥಿತಿಯನ್ನು ಆದಿಚಿಂತಕ ವಾಲ್ಮೀಕಿಯು ಮನುಷ್ಯ ಸಮಾಜದ ಮುಂದೆ ಇಟ್ಟಿರುವರು, ಅದು ಸಾಮಾಜಿಕ ವ್ಯವಸ್ಥೆ ಮತ್ತು ಪರಂಪರೆಯನ್ನು ರೂಪಿಸುವದು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
