ಕಿಷ್ಕಿಂದಕಾಂಡ ರಾಮಾಯಣ ಭಾಗ-40

By admin


ಆತ್ಮಹತ್ಯಾರ್ಥ ಉಪವಾಸ ಕುಳಿತ ವಾನರ ಸ್ಥಳಕ್ಕೆ ಹಾರಿ ಬಂತು ಗರುಡರಾಜ, I
ಜಟಾಯು ಹಿರಿಯಣ್ಣ ಸಂಪತಿ; II
ವಿಂಧ್ಯ-ಮಹಾಪರ್ತ ಗವಿಯಿಂದ ಹೊರಬಂದ ಬಲಶಾಲಿ,I
ಮಹಾವೇಗಿ ಸಂಪತಿ ಹಿಗ್ಗಿತು ಮನದಿ ವಾನರ ಕಂಡು; II
ನುಡಿಯಿತು ಸಂಪತಿ:”ಒಳ್ಳೆಯದಕ್ಕೋ,ಇಲ್ಲವೇ ಕೆಟ್ಟದಕ್ಕೋ, I
ದೈವ ಬೆನ್ನಟ್ಟುವದು, ಇಷ್ಟೊಂದು ಆಹಾರ ಕಾದಿದೆ ಎನಗಾಗಿ, II
ಕೊಲ್ಲತ ಒಂದೊಂದಾಗಿ, ಒಂದೊಂದುದಿನ ಬಲಿಗಳನು,I
ತಿನ್ನುವೆ ಹರುಷದೀ ಬಲಿಗಳನು”; ಕೇಳಿ ಪಕ್ಷಿಯ ನುಡಿ II
ಅಂಗದ ಎಚ್ಚತ್ತುಕೊಂಡ, ಹನುಮನಿಗೆ ನುಡಿದ: “ನೋಡು,I
ವಾನರರಿಗೆ ಯಮನಾಗಿ ಬಂದಿದೆ ಆ ಪಕ್ಷಿ, II
ದುರ್ಧೈವ ನಮ್ಮನು ಬೇಟೆಯಾಡಲು ಬೆನ್ನಟ್ಟಿದೆI
ಸಾಧ್ಯವಾಗದು ನಮಗೆ ಸುಗ್ರೀವ ರಾಮರ ಕಾರ್ಯ; II
ವೈದೇಹಿ ಕಾಪಾಡಲು ಜಟಾಯುವಿನ ಹೋರಾಟ ನಮ್ಮೇಲರಿಗೂI
ಗೊತ್ತು, ಜಟಾಯು ರಾಮನ ಕೃಪೆ ಗಳಿಸಿತು; II
ಜಟಾಯುವಿನಂತೆ ನಾವು ಸಾಹಸದಿ ವೈದೇಹಿಯನುI
ಹುಡುಕಿದೆವು ನಮ್ಮ ಪ್ರಾಣ ಪಣಕಿಟ್ಟು, ಸೀತೆ ಸಿಗಲಿಲ್ಲ; II
ಶ್ರೇಷ್ಠ ಜಟಾಯು ರಾವಣನಿಂದ ರಣದಲಿ ಹತನಾದ, ಸೀತೆಕಾಣದೇ ನಾವು I
ಭಯಭೀತರಾದೆವು ಸುಗ್ರೀವನ ಕೋಪಕೆ; II
ಜಟಾಯು ವ ದಶರಥರ ಸಾವಿನಿಂದಾಗಿI
ಈ ವಿಪತ್ತು ವಾನರರಿಗೆ ಎರಗಿದೆ; II
ತಂದೆ ವಚನದಂತೆ ಅರಣ್ಯ ಸೇರಿದ ರಾಮ ಸೀತೆ ಲಕ್ಷ್ಮಣರೊಂದಿಗೆ,I
ಸಂಹರಿಸಿದ ಜನಸ್ಥಾನ ರಾಕ್ಷಸರನು; II
ಸೀತೆಯನು ಅಪಹರಿಸಿದ ರಾವಣ ಸೇಡಿಗಾಗಿ,I
ಅರಸುತ ಸೀತೆಯನು ರಾಮ ಸುಗ್ರೀವನ ಸ್ನೇತನಾದ; II
ಸ್ನೇಹಕ್ಕಾಗಿ ಸುಗ್ರೀವನ ರಾಮನು ಹತ್ಯೆಗೈದ ವಾಲಿನ, I
ವಿಪತ್ತು ನಮಗೇರಗಿದೆ” ದುಃಖಿಸಿದ ಅಂಗದ;II
ವಾನರರಿಂದ ಜಟಾಯುವಿನ ಮರಣ ಸುದ್ಧಿ ಕೇಳಿ,I
ಪಕ್ಷಿರಾಜ ಸಂಪತಿ ದುಃಖದಿ ಗದ್ದರಿಸುತ ನುಡಿದ: II
“ ನನ್ನ ಪ್ರಾಣದಂತಿದ್ದ ನನ್ನ ತಮ್ಮ ಜಟಾಯುವಿನI
ಮರಣ ಸುದ್ಧಿ ಮಾತನಾಡುತಿಹರು,ಯಾರು? II
ಜನಸ್ಥಾನ ರಾಕ್ಷಸ ವ ಜಟಾಯು ಮಧ್ಯೆ ನಡೆದ ಯುದ್ದವೇನು?I
ಕೇಳುತಿಹೆನು ಧೀರ್ಘಾವಧಿ ನಂತರ ಜಟಾಯು ನಾಮ; II
ಜಟಾಯುವಿನ ಗುಣಗಾನ ಕೇಳಿ ಸಂತೋಷಪಟ್ಟೆ,I
ಬೆಟ್ಟ-ಗವಿಯಿಂದ ಕೆಳಗಿಳಿಸಿರಿ ಎನ್ನ; II
ಓ ವಾನರನೇ, ಕೇಳಬೇಕಾಗಿದೇನಗೆ ಯಾವಾಗಾಯಿತುI
ಜನಸ್ಥಾನದಲಿ ಜಟಾಯುವಿನ ಹತ್ಯೆ? II
ದಶರಥನು ಜಟಾಯುವಿನ ಸ್ನೇಹಿತ,I
ಯಾವಾಗ ದಶರಥ ಸಾವಪ್ಪಿದಾ?II
ಸೂರ್ಯ ಬಿಸಿಲಿಗೆ ಕಮರಿವೆನ್ನ ಪಕ್ಕಗಳು,I
ಬಿಚ್ಚಲಾರೆ, ಕೆಳಗಿಳಿಸಿ ಎನ್ನನು”;ಕೋರಿತು ವಾನರರನು. II
ಕಿಷ್ಕಿಂಧಕಾಂಡ ರಾಮಾಯಣ

ಆತ್ಮಹತ್ಯಾರ್ಥ ಉಪವಾಸಕ್ಕೆ ಕುಳಿತ ವಾನರರ ಸ್ಥಳಕ್ಕೆ ಜಟಾಯುನ ಹಿರಿಯಣ್ಣ ಗರುಡರಾಜ ಸಂಪತಿ ಜಿಗಿದು ಬಂದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಗಮನಾರ್ಹ ಅಂಶಗಳು: (1) ಗರುಡರಾಜ ಸಂಪತಿ ವಾನರರನ್ನು ಆಹಾರವಾಹಿ ಪಡೆಯಲು ಬಂದನು: ವಿಂಧ್ಯ-ಮಹಾಪರ್ತ ಗವಿಯಿಂದ ಹೊರಬಂದ ಬಲಶಾಲಿ, ಮಹಾವೇಗಿ ಸಂಪತಿಯು ವಾನರ ಕಂಡು ಮನದಲ್ಲಿ ಹಿಗ್ಗಿದನು ಹಾಗು ಅದು “ಒಳ್ಳೆಯದಕ್ಕೋ,ಇಲ್ಲವೇ ಕೆಟ್ಟದಕ್ಕೋ, ದೈವ ಬೆನ್ನಟ್ಟುವದು, ನನಗಾಗಿ ಇಷ್ಟೊಂದು ವಾನರ-ಆಹಾರ ಕಾದಿದೆ, ವಾನರರನ್ನು ಒಂದೊಂದು ದಿನ ಬಲಿಗಳಂತೆ ಕೊಲ್ಲತ ಒಂದೊಂದಾಗಿ ಹರುಷದಿಂದ ತಿನ್ನುವೆನು”ಎಂದು ಆನಂದದಲ್ಲಿ ನುಡಿಡಿಯುವನು; ಆ ಸಂದರ್ಭದಲ್ಲೂ ಆದಿಕವಿ ವಾಲ್ಮೀಕಿಯು ಸಂಪತಿ ಶಬ್ದಗಳಲ್ಲಿ ದೈವದ ಪಾತ್ರದ ಮಹತ್ವವನ್ನು ತಿಳಿಸಿರುವನು, (2) ಅಂಗದನು ಗರುಡ ಪಕ್ಷಿಯ ಮಾತುಗಳನ್ನು ಕೇಳಿ ಎಚ್ಚತ್ತುಕೊಂಡನು: ಹನುಮನಿಗೆ “ನೋಡು, ಆ ಗರುಡ ಆ ಪಕ್ಷಿ ವಾನರರಿಗೆ ಯಮನಾಗಿ ಬಂದಿದೆ, ದುರ್ಧೈವವು ನಮ್ಮನು ಬೇಟೆಯಾಡಲು ಬೆನ್ನಟ್ಟಿ ಬಂದಿದೆ, ನಮ್ಮಿಂದ ಸುಗ್ರೀವ ಮತ್ತು ರಾಮರ ಕಾರ್ಯ ಸಾಧ್ಯವಾಗದು; ವೈದೇಹಿಯನ್ನು ಕಾಪಾಡಲು ಜಟಾಯು ನಡೆಸಿದ ಹೋರಾಟ ನಮ್ಮೇಲರಿಗೂ ಗೊತ್ತು ಹಾಗು ಜಟಾಯು ರಾಮನ ಕೃಪೆ ಗಳಿಸಿತು; ಜಟಾಯುವಿನಂತೆ ನಾವು ಸಾಹಸದಿಂದ ವೈದೇಹಿಯನ್ನು ನಮ್ಮ ಪ್ರಾಣ ಪಣಕಿಟ್ಟು ಹುಡುಕಿದೆವು, ಆದರೂ ನಮಗೆ ಸೀತೆ ಸಿಗಲಿಲ್ಲ; ಜಟಾಯು ರಾವಣನಿಂದ ರಣದಲಿ ಹತನಾಗಿ ಶ್ರೇಷ್ಠನಾದನು ಆದರೆ ನಾವು ಸೀತೆಕಾಣದೇ ಸುಗ್ರೀವನ ಕೋಪಕ್ಕೆ ಭಯಭೀತರಾದೆವು; ಜಟಾಯು ಮತ್ತು ದಶರಥರ ಸಾವಿನಿಂದಾಗಿ ಈ ವಿಪತ್ತು ವಾನರರಿಗೆ ಬಂದಿದೆ: ತಂದೆ ವಚನ ಪಾಲಿಸಲು ರಾಮನು ಸೀತೆ ಲಕ್ಷ್ಮಣರೊಂದಿಗೆ ಅರಣ್ಯ ಸೇರಿದನು ಹಾಗು ಜನಸ್ಥಾನದ ರಾಕ್ಷಸರನ್ನು ಸಂಹರಿಸಿದನು; ಸೀತೆಯನ್ನು ಅಪಹರಿಸಿದ ರಾವಣನ ಸೇಡಿಗಾಗಿ ಸೀತೆಯನು ಹುಡುಕುತ್ತ ಬಂದ ರಾಮನು ಸುಗ್ರೀವನ ಸ್ನೇತನಾದನು; ರಾಮನು ಸುಗ್ರೀವನ ಸ್ನೇಹಕ್ಕಾಗಿ ವಾಲಿನ್ನು ಹತ್ಯೆಗೈದನು, ಈಗ ಆ ವಿಪತ್ತು ನಮಗೆ ಬಂದಿದೆ”ಎಂದು ಅಸಹಾಯಕನಂತೆ ದುಃಖಿಸುತ್ತ ಅಂಗದನು ನುಡಿದನು. ಈ ಸಂದರ್ಭದಲ್ಲಿ ಆದಿಚಿಂತಕ ವಾಲ್ಮೀಕಿಯು ” ಯಾವುದಕ್ಕೂ ಒಂದು ಕಾರಣವಿದೆ” ಎಂಬ ತತ್ವ ಹಾಗು ಸಂಭವಿಸುವ ಘಟನೆಗಳ ಮಧ್ಯೆ ಸರಪಳಿ-ಸಂಭಂದ ಮತ್ತು ದೈವ ನಿರ್ಧಾರಗಳು ಇದದ್ದನು ದಶರಥರ ವಚನ ಪಾಲನೆ ಘಟನೆಯಿಂದ ಸೀತೆಯನ್ನು ಹುಡುಗುವ ಘಟನೆಗಳ ಸರಣೀಯಲ್ಲಿ ಅಡಗಿದ ದೈವದ ಆಟವನ್ನು ಅಂಗದನ ಶಬ್ದಗಳ ಮುಖೇನ ತಿಳಿಸಿರುವರು. (3) ಜಟಾಯುವಿನ ಸಾವಿನ ಸುದ್ಧಿ ತಿಳಿದ ಸಂಪತಿ: ಅಂಗದನಿಂದ ಜಟಾಯುವಿನ ಮರಣ ಸುದ್ಧಿ ಕೇಳಿದ ಪಕ್ಷಿರಾಜ ಸಂಪತಿಯು ದುಃಖದಿಂದ ಗದ್ದರಿಸುತ “ನನ್ನ ಪ್ರಾಣದಂತಿದ್ದ ನನ್ನ ತಮ್ಮ ಜಟಾಯುವಿನ ಮರಣ ಸುದ್ಧಿ ಮಾತನಾಡುತಿರುವರು,ಯಾರು? ಜನಸ್ಥಾನದ ರಾಕ್ಷಸರ ಮತ್ತು ಜಟಾಯು ಮಧ್ಯೆ ನಡೆದ ಯುದ್ದವೇನು? ನಾನು ಧೀರ್ಘಾವಧಿನಂತರ ಜಟಾಯುವಿನ ಸುದ್ಧಿ ಕೆಳುತ್ತಿರುವೆನು; ಜಟಾಯುವಿನ ಗುಣಗಾನ ಕೇಳಿ ಸಂತೋಷಪಟ್ಟೆನು; ಓ ವಾನರನೇ, ನನ್ನನು ಈ ಬೆಟ್ಟ-ಗವಿಯಿಂದ ಕೆಳಗಿಳಿಸಿರಿ ನನಗೆ ಜನಸ್ಥಾನದಲ್ಲಿ ಜಟಾಯುವಿನ ಹತ್ಯೆ ಯಾವಾಗಾಯಿತು ಎಂಬ ವಿಷಯ ಕೇಳಬೇಕಾಗಿದೆ; ದಶರಥನು ಜಟಾಯುವಿನ ಸ್ನೇಹಿತನು, ದಶರಥನು ಯಾವಾಗ ಸಾವನಪ್ಪಿದನು? ಸೂರ್ಯ ಬಿಸಿಲಿಗೆ ನನ್ನ ಪಕ್ಕಗಳು ಕಮರಿವೆ, ಅವುಗಳನ್ನು ಬಿಚ್ಚಿ ನಾನು ಕೆಳಗಿಳಿಯಲಾರೆ, ನೀವೇ ನನ್ನನು ಕೆಳಗಿಳಿಸಿರಿ” ಎಂದು ವಾನರರನ್ನು ಕೋರುವದು. ತಮ್ಮನ ಸಾವಿನ ಸುದ್ಧಿ ತಿಳಿಯಲು ಅಣ್ಣ ಸಂಪತಿ ತನ್ನ ಆಹಾರವಾಗಿ ಬಂದ ವಾನರರನ್ನು ಸಹಾಯ ಕೋರಿದ ಸಂಪತಿಯ ಘಟನೆಯು ದೈವದ ಒಂದು ತಿರುವು ಆಗಿದೆ. ಓಟ್ಟಿನಲ್ಲಿ ಜಂಬುದ್ವೀಪದ ದಕ್ಷಿಣ ಪ್ರದೇಶದ ಭೌಗೋಲಿಕ ಪ್ರದೇಶಗಳ ವರ್ಣನೆ ನೀಡುವಾಗ ಆದಿಕವಿ ವಾಲ್ಮೀಕಿ ಇಂದಿನ ವಿಂಧ್ಯ ಪರ್ವತಯಲಯವನ್ನು ಪಶ್ಚಿಮ-ಘಟ್ಟ ಮತ್ತು ಪೂರ್ವ-ಘಟ್ಟಗಳನ್ನೊಳಗೊಂಡು ದಕ್ಷಿಣದ ಹಿಂದೂ ಮಹಾಸಾಗರ ಕಡಲತೀರವರೆಗೆ ಹರಡಿದನ್ನು ತಿಳಿಸಿರುವರು ಹಾಗು ಜಟಾಯುವಿನ ಅಣ್ಣ ಗರುಡ ಸಂಪತಿ ವಾನರರನ್ನು ಭಕ್ಷಿಸಲು ಬಂದು ಜಟಾಯುವಿ ಮೃತ್ಯ-ಘಟನೆ ವಿವರಣೆ ಕೇಳಲು ಉತ್ಸುಕನಾಗುವ ಸಂದರ್ಭಗಳನ್ನು ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ವಿವರಿಸಿರುವರು.

ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌