
ಮೋಡದಲಿ ಮಿಂಚಿನಂತೆ ಹನುಮI
ಹಾರಿದ ಪುಷ್ಪಕ ಆವರಣದಿ ಕೋಟೆಗೊಡೆಯತ್ತ,II
ರಾವಣ-ಅಂತಪುರದಿ ಬಹು ದೂರ ಸಾಗಿದ ಹನುಮI
ಜನಕಪುತ್ರಿ ಸೀತೆ ಸಿಗದೆ ನುಡಿದ ಹನುಮ II
“ರಾಮನ ಮೆಚ್ಚುಗೆಗಾಗಿ ಲಂಕಾನಗರ ಸುತ್ತಿದೆI
ವೈದೇಹಪುತ್ರಿ ಸೀತೆ ಕಾಣಲಿಲ್ಲ ನನಗೆ, II
ಹೊಂಡ, ಸರೋವರ,ಝರಿ, ಅರಣ್ಯ ಬೆಟ್ಟI
ಪರ್ವತ, ಎಲ್ಲವನ್ನು ಸುತ್ತಿದೆ , ಸೀತೆ ಕಾಣಲಿಲ್ಲ, II
ಸೀತೆ ಇಹಳು ರಾವಣ-ಅಂತಪುರದಲ್ಲೆಂದು ಸಂಪತಿ ಹೇಳಿದ್ದ,I
ಆದರೆ ಕಾಣಲಿಲ್ಲ ನನಗೆ ಸೀತೆ ರಾವಣ-ಅಂತಪುರದಲಿ, II
ಸುಖವಾಗಿಹಳೆ ಜನಕಪುತ್ರಿ ಸೀತೆ I
ಆ ದುಷ್ಟ ರಾವಣನೊಂದಿಗೆ! II
ಕದ್ದು ಸೀತೆ, ರಾಮನಿಗೆ ಹೆದರಿ ಓಡುವಾಗ ರಾವಣI
ಮಧ್ಯ ಮಾರ್ಗದಲಿ ಜಾರಿ ಬಿದ್ದಳೆ ಸೀತೆ ? II
ಇಲ್ಲವೆ, ಸಿದ್ಧರು ಸೀತೆ ಹೃದಯ ಕದ್ದುI
ಮುಳುಗಿಸಿರಬಹುದು ಸಮುದ್ರದಲಿ! II
ಪ್ರಾಣ ತ್ಯಾಗ ಮಾಡಿರಬೇಕು ವಿಶಾಲಾಕ್ಷಿ ಸೀತೆ I
ರಾವಣನ ರಭಸ ವ ಹಿಂಸೆ ತಾಳಲಾರದೆ, II
ಹಾರಿ ಹೋಗುವಾಗ ಸಮುದ್ರ ಮೇಲೆI
ಪ್ರಾಣಕೊಟ್ಟಿರಬೇಕು ಹಾರಿ ಸಮುದ್ರಕ್ಕೆ ಸೀತೆ,II
ತನ್ನ ಶೀಲ ಕಾಪಾಡಿಕೊಂಡ ಸೀತೆಯನುI
ಭಕ್ಷಿಸಿರಬೇಕು ಕ್ರೂರ ರಾವಣ,II
ಇಲ್ಲವೆ, ರಾವಣನ ಕ್ರೂರ ರಾಕ್ಷಸ-ಪತ್ನಿಯರುI
ಭಕ್ಷಿಸಿಸಿರಬೇಕು ಮುಗ್ಧ ಕೋಮಲ ಸೀತಯನು, II
ಪ್ರಾಣ ಬಿಟ್ಟಿರಬೇಕು ರಾಮನ ಧ್ಯಾನದಲಿI
ಪದ್ಮಾಕ್ಷಿ ಚಂದ್ರಮುಖಿ ಮುಗ್ಧ ಸೀತೆ ದುಃಖದಿ, II
ದೇಹ ಬಿಟ್ಟಿರಬೇಕು ಮುಗ್ಧ ಸೀತೆI
ಓ ರಾಮಾ, ಓ ಲಕ್ಷ್ಮಣ, ಓ ಅಯೋಧ್ಯೆ, ಅರಚುತ, II
ಜೀವಂತವಿದ್ದಿದ್ದರೆ ಸೀತೆ ರಾವಣ-ಅಂತಪುರದಲಿI
ಪಂಜರದ ಶಾರಿಕ ದಂತೆ ಅರಚುತಿದ್ದಳಲಿ, II
ಬಳಕುವ ನಡ,ನೈದಿಲಾಕ್ಷ ಜನಕ ಪುತ್ರಿ,I
ರಾಮನ ಪತ್ನಿ ರಾವಣನಿಗೆ ಸೆರೆಯಾದಳೆ, II
ರಾಮನ ಪ್ರೀಯ ಸೀತೆ ಕಳೆದ, ಸತ್ತುಹೋದ, I
ಕಾಣೆಯಾದ ಸುದ್ಧಿ ರಾಮನಿಗೆ ಅಪ್ರೀಯ, II
ಸುದ್ಧಿ ತಿಳಿಸಿದರೂ ತಪ್ಪು, ತಿಳಿಸದಿದ್ದರೂ ತಪ್ಪು,I
ಹೇಗೆ ನಿಭಾಯಿಸಲಿ ನನ್ನ ಕರ್ತವ್ಯ ಸಂಧಿಗ್ದ ಸ್ಥಿತಿಯಲಿ,II
ಕಾಲ ಮಿಂಚುತಿದೆ ದ್ವಂದ್ವ ಚಿಂತೆಯಲಿI
ಯೋಗ್ಯ ಯಾವುದು ನಿಭಾಯಿಸೋಣ II
ಕಿಷ್ಕಿಂಧಕ್ಕೆ ಮರಳಿದಾಗ, ಸುಗ್ರೀವ ಇಲ್ಲವೆ ವಾನರರುI
ಇಲ್ಲವೆ ದಶರಥಪುತ್ರ ರಾಮ ಎನ್ನ ಕೇಳುವರೇನು? II
ತಿಳಿಸಿದರೆ ಸೀತೆ ಸಿಗದ ಅಪ್ರೀಯ ಸುದ್ಧಿ,I
ಪ್ರಾಣ ಬಿಡುವನು ರಾಮ ಕೇಳಿ ಸುದ್ಧಿ, II
ಕೇಳಿ ರಾಮನ ಪ್ರಾಣ ತ್ಯಾಗ ಸುದ್ಧಿ,I
ಪ್ರಾಣ ಬಿಡುವರು ಲಕ್ಷ್ಮಣ, ಭರತ ವ ಶತ್ರುಘ್ನ, II
ತಿಳಿದು ಮಕ್ಕಳ ಪ್ರಾಣ ತ್ಯಾಗ ಸುದ್ಧಿ I
ಪ್ರಾಣ ಬಿಡುವರು ಕೌಶಲ್ಯ, ಸುಮಿತ್ರ, ಕೈಕೆಯಿ, II
ಕಂಡು ರಾಮನ ಸಾವು ಸುಗ್ರೀವI
ಪ್ರಾಣ ಬಿಡುವನು ತನ್ನ ವಚನ ವಿಫಲತೆಗೆ, II
ಕಂಡು ಪತಿ ಸುಗ್ರೀವನ ಪ್ರಾಣ ತ್ಯಾಗI
ಮಾಡುವಳು ರೂಮಾ ಪ್ರಾಣ ತ್ಯಾಗ, II
ಪತಿ-ವಿರಹ ದುಃಖಿತ ತಾರಾ ಮಾಡುವಳು ಪ್ರಾಣ ತ್ಯಾಗI
ತಿಳಿದು ರೂಮಾ, ಸುಗ್ರೀವರ ಸಾವು,II
ತಿಳಿದು ತಂದೆ ತಾಯಿ ಸಾವು, ಸುಗ್ರೀವನ ದುಃಖI
ಯುವ ಅಂಗದನು ಬದುಕುವನೇ? II
ಸುಂದರ ಕಾಂಡ
ಸೀತೆಯನ್ನು ಹುಡುಕುತ್ತ ಅಶೋಕವನದತ್ತ ಹನುಮನನು ಪಯಣಿಸಿದ ಮತ್ತು ಅವನ ಮನದ ಸ್ಥಿತಿಯನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಸೀತೆ ಬದುಕಿದ್ದ ಬಗ್ಗೆ ಹನುಮಾನನಲ್ಲಿ ಅನುಮಾನ ಕಾಡುವದು: ಹನುಮನು ಸೀತೆಯನ್ನು ಹುಡುಕುತ್ತ ಪುಷ್ಪಕ ಆವರಣದಿಂದ ಕೋಟೆಗೊಡೆಯತ್ತ ಮೋಡದಲಿ ಮಿಂಚಿನಂತೆ ಹಾರಿದನು; ಜನಕಪುತ್ರಿ ಸೀತೆ ಸಿಗದೆ ರಾವಣ-ಅಂತಪುರದಿಮದ ಬಹು ದೂರ ಸಾಗಿದ ಹನುಮನು ಮನದಲ್ಲಿ ನುಡಿದನು “ನಾನು ರಾಮನ ಮೆಚ್ಚುಗೆಗಾಗಿ ಲಂಕಾನಗರವನ್ನು ಸುತ್ತಿದೆ ಆದರೆ ನನಗೆ ವೈದೇಹಪುತ್ರಿ ಸೀತೆ ಕಾಣಲಿಲ್ಲ; ಹೊಂಡ, ಸರೋವರ, ಝರಿ, ಅರಣ್ಯ ಬೆಟ್ಟ, ಪರ್ವತ ಹೀಗೆ ಎಲ್ಲವನ್ನು ಸುತ್ತಿದೆ ಆದರೂ ಸೀತೆ ನನಗೆ ಕಾಣಲಿಲ್ಲ; ಸೀತೆಯು ರಾವಣ-ಅಂತಪುರದಲ್ಲಿ ಇರುವಳೆಂದು ಗರುಡ ಸಂಪತಿ ಹೇಳಿದ್ದನು ಆದರೆ ನನಗೆ ಸೀತೆ ರಾವಣ-ಅಂತಪುರದಲಿ ಕಾಣಲಿಲ್ಲ; ಸುಖವಾಗಿರುವಳೆ ಜನಕಪುತ್ರಿ ಸೀತೆ ಆ ದುಷ್ಟ ರಾವಣನೊಂದಿಗೆ! ಕದ್ದು ಸೀತೆಯನ್ನು ರಾಮನಿಗೆ ಹೆದರಿ ಓಡುವಾಗ ರಾವಣನು ಮಧ್ಯ ಮಾರ್ಗದಲಿ ಜಾರಿ ಬಿದ್ದಳೆ ಸೀತೆ ? ಇಲ್ಲವೆ, ಸಿದ್ಧರು ಸೀತೆ ಹೃದಯ ಕದ್ದು ಮುಳುಗಿಸಿರಬಹುದು ಸಮುದ್ರದಲಿ! ರಾವಣನ ರಭಸ ಮತ್ತು ಹಿಂಸೆ ತಾಳಲಾರದೆ ವಿಶಾಲಾಕ್ಷಿ ಸೀತೆ ಪ್ರಾಣ ತ್ಯಾಗ ಮಾಡಿರಬೇಕು; ಸಮುದ್ರ ಮೇಲೆ ಹಾರಿ ಹೋಗುವಾಗ ಸೀತೆಯು ಸಮುದ್ರಕ್ಕೆ ಹಾರಿ ಪ್ರಾಣಕೊಟ್ಟಿರಬೇಕು; ತನ್ನ ಶೀಲ ಕಾಪಾಡಿಕೊಂಡ ಸೀತೆಯನು ಕ್ರೂರ ರಾವಣನು ತನ್ನ ಒತ್ತಾಸೆಗೆ ಒಳಗಾಗದಿದ್ದಾಗ ಭಕ್ಷಿಸಿರಬೇಕು ಇಲ್ಲವೆ ಮುಗ್ಧ ಕೋಮಲ ಸೀತೆಯನ್ನು ರಾವಣನ ಕ್ರೂರ ರಾಕ್ಷಸ-ಪತ್ನಿಯರು ಭಕ್ಷಿಸಿಸಿರಬೇಕು.” ಎಂದು ಹನುಮಾನನು ಸೀತೆಯು ಜೀವಂತವಿರುವಳೇ ಎಂಬ ಶಮಕೆಯನ್ನು ಹೊಂದುವನು; (2) ಸೀತೆ ಜೀವಂತವಿಲ್ಲದ ಸುದ್ಧಿಯ ದುಷ್ಪರಿಣಾಮವನ್ನು ಹನುಮಾನನು ಗ್ರಹಿಸಿಕೊಳ್ಳುವನು: ಸೀತೆಯ ಸುಳಿವು ಎಲ್ಲೂ ಸಿಗದಿದ್ದಾಗ ಹನುಮಾನ ಮನದಲ್ಲಿ “ಪದ್ಮಾಕ್ಷಿ ಚಂದ್ರಮುಖಿ ಮುಗ್ಧ ಸೀತೆ ದುಃಖದಿಂದ ರಾಮನ ಧ್ಯಾನದಲಿ ಪ್ರಾಣ ಬಿಟ್ಟಿರಬೇಕು, ಮುಗ್ಧ ಸೀತೆ ದೇಹ ಬಿಟ್ಟಿರಬೇಕು ಓ ರಾಮಾ, ಓ ಲಕ್ಷ್ಮಣ, ಓ ಅಯೋಧ್ಯೆ, ಎಂದು ಅರಚುತ; ರಾವಣ-ಅಂತಪುರದಲಿ ಸೀತೆಯು ಜೀವಂತವಿದ್ದಿದ್ದರೆ ಪಂಜರದ ಶಾರಿಕ ದಂತೆ ಅರಚುತಿದ್ದಳಲಿ, ಬಳಕುವ ನಡ, ನೈದಿಲಾಕ್ಷ ಜನಕ ಪುತ್ರಿ, ರಾಮನ ಪತ್ನಿ ರಾವಣನಿಗೆ ಸೇರೆಯಾದಳೆ; ರಾಮನ ಪ್ರೀಯ ಸೀತೆ ಕಳೆದ, ಸತ್ತುಹೋದ, ಕಾಣೆಯಾದ ಸುದ್ಧಿಯು ರಾಮನಿಗೆ ಅಪ್ರೀಯವಾದದು; ಈ ಸುದ್ಧಿ ರಾಮನಿಗೆ ತಿಳಿಸಿದರೂ ತಪ್ಪು, ತಿಳಿಸದಿದ್ದರೂ ತಪ್ಪು, ಇಂತಹ ಸಂಧಿಗ್ದ ಸ್ಥಿತಿಯಲಿ ನನ್ನ ಕರ್ತವ್ಯ ಹೇಗೆ ನಿಭಾಯಿಸಲಿ? ಈ ದ್ವಂದ್ವ ಚಿಂತೆಯಲಿ ಕಾಲ ಮಿಂಚುತಿದೆ, ಯೋಗ್ಯ ಯಾವುದು ಅದನ್ನು ನಿಭಾಯಿಸೋಣ; ನಾನು ಕಿಷ್ಕಿಂಧಕ್ಕೆ ಮರಳಿದಾಗ, ಸುಗ್ರೀವ ಇಲ್ಲವೆ ವಾನರರು ಇಲ್ಲವೆ ದಶರಥಪುತ್ರ ರಾಮ ನನ್ನನ್ನು ಕೇಳುವರೇನು? ಸೀತೆ ಸಿಗದ ಅಪ್ರೀಯ ಸುದ್ಧಿಯನು ರಾಮನಿಗೆ ತಿಳಿಸಿದರೆ, ಕೇಳಿ ಸುದ್ಧಿ ರಾಮ ಪ್ರಾಣ ಬಿಡುವನು; ಕೇಳಿ ರಾಮನ ಪ್ರಾಣ ತ್ಯಾಗದ ಸುದ್ಧಿ, ಲಕ್ಷ್ಮಣ ಭರತ ಮತ್ತು ಶತ್ರುಘ್ನರು ಪ್ರಾಣ ಬಿಡುವರು; ಮಕ್ಕಳ ಪ್ರಾಣ ತ್ಯಾಗದ ಸುದ್ಧಿ ತಿಳಿದು ಕೌಶಲ್ಯ ಸುಮಿತ್ರ ಮತ್ತು ಕೈಕೆಯಿ ಪ್ರಾಣ ಬಿಡುವರು; ರಾಮನ ಸಾವು ಕಂಡು ಸುಗ್ರೀವ ತನ್ನ ವಚನ ವಿಫಲತೆಗೆ ಪ್ರಾಣ ಬಿಡುವನು; ಪತಿ ಸುಗ್ರೀವನ ಪ್ರಾಣ ತ್ಯಾಗ ಕಂಡು ರೂಮಾ ಪ್ರಾಣ ತ್ಯಾಗ ಮಾಡುವಳು ಹಾಗು ಸುಗ್ರೀವರ ಮತ್ತು ರೂಮಾಳ ಪ್ರಾಣ ತ್ಯಾಗ ತಿಳಿದು ಪತಿ-ವಿರಹ ದುಃಖಿತ ತಾರಾ ಪ್ರಾಣ ತ್ಯಾಗ ಮಾಡುವಳು; ತಂದೆ ತಾಯಿ ಮತ್ತು ಸುಗ್ರೀವನ ಸಾವು ದುಃಖದಲ್ಲಿ ಯುವ ಅಂಗದನು ಬದುಕುವನೇ? ” ನೊಂದುಕೊಳ್ಳುತ ಆಡಿಕೊಳ್ಳುವನು. ಆದಿಕವಿ ವಾಲ್ಮೀಕಿಯು ಈ ಸಂದರ್ಭದಲ್ಲಿ ಸೀತೆಯನ್ನು ಹುಡುಕುವ ಹನುಮಾನನ ಮನೋಸ್ಥಿತಿಯನ್ನು ವಿವರಿಸುವಾಗ (ಅ) ಸೀತೆಯ ಸಾವಿನ ಶಂಕೆ: ತನಗೆ ಸೀತೆಯು ಎಲ್ಲೂ ಕಾಣದಿದ್ದಾಗ ಸಹಜ ಭಯಭೀತ ಮನದ ಅನಿಸಿಕೆ ‘ಸೀತೆ ಸತ್ತಿರಯವಳೇ?’ ಎಂಬ ಶಂಕೆ ವ್ಯಕ್ತವಾದದ್ದು, ಇಲ್ಲಿ ರಾವಣ ಮತ್ತು ರಾಕ್ಷಸರು ನರಭಕ್ಷರೆಂಬ ಅಂಶ ಋಜುವಾತವಾಗಿದೆ. (ಬ) ಸೀತೆ ಸಾವಿನ ಸುದ್ಧಿಯ ದುಷ್ಪರಿಣಾಮ: ಸೀತೆಯ ಸಾವಿನ ಸುದ್ಧಿ ರಾಮ ಮತ್ತು ವಾನರಕುಲವನ್ನು ಅಘಾತ, ದುಃಖಕ್ಕೀಡಮಾಡುವ ಮನಸ್ಸಿನ ಸಹಜ ಅನಿಸಿಕೆ ಇಲ್ಲಿ ವ್ಯಕ್ತ. ಹೀಗೆ ಎರಡು ಅಂಶಗಳನ್ನು ತಿಳಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ
