ಸುಂದರಕಾಂಡ ರಾಮಾಯಣ ಭಾಗ-91

By admin


ಕೆಳಗಿಳಿದ ಮಹಾತೇಜಿ ವಿನಮ್ರ ಹನುಮ ಬಳಿ ಬಂದುI
ಕೈಮುಗಿದು ನಮಸ್ಕರಿಸಿ ಸೀತೆಗೆ ನುಡಿದನು: II
“ಓ ಕಮಲಾಕ್ಷಿ ಸಭ್ಯಳೇ, ಮಲಿನ ರೇಷ್ಮೆಉಡುಪಿನಲಿI
ಕೊಂಬೆ ಹಿಡಿದು ನಿಂತ ನೀನ್ಯಾರು? II
ಕಮಲ-ಪಕಳಿಯಿಂದ ಇಬ್ಬನಿ ಸುರಿದಂತೆI
ಕಣ್ಣೀರು ಸುರಿಸುತ್ತಿರುವಿ ಏಕೆ? II
ಸುರಳೊ, ಅಸುರಳೊ, ನಾಗಳೊ, ಗಂಧರ್ವಳೊ,I
ಯಕ್ಷಿಣಿಯೇ, ಕಿನ್ನರಿಯೇ, ನೀನ್ಯಾರು ಶೋಭಿತೆ? II
ಆಕಾಶದಿ ಉದುರಿದ ರೋಹಿನಿ ನಕ್ಷತ್ರಳೆ, ರುದ್ರಳೆ, ಮಾರುತಳೆ, I
ವಸುಳೆ, ದೇವತೆಯಂತೆ ಕಾಣುವಿ, ನೀನ್ಯಾರು? II
ಓ ಕಪ್ಪುಕಣ್ಣಿನ ಸಭ್ಯಳೇ, ಕೋಪ ಇಲ್ಲವೆ ತಪ್ಪಿನಿಂದI
ವಸಿಷ್ಠರನು ರೇಗಿಸುವ ಪತ್ನಿ ಆರುಂದತಿಯೇ? II
ಪುತ್ರ, ಪತಿ, ತಂದೆ ಇಹಲೋಕ ತ್ಯಜಿಸಿದವರಂತೆI
ಶೋಕಿಸುತ್ತಿರುವ ಕೃಶೋದರಿ ನೀನ್ಯಾರು? II
ಶೋಕಿಸುವಿ, ಉಸಿರಿಸುವಿ, ನೆಲ ತಟ್ಟುವಿ,I
ರಾಜ-ಚಿನ್ಹೆಗಳಿವೆ,ನಿಸ್ಸಂದೇಹ ನೀನಲ್ಲ ದೈವಿ ಸ್ತ್ರೀ, II
ನೋಡಿದರೆ ನಿನ್ನ ದೈಹಿಕ ಭಾಷೆ, ನಡತೆ,I
ಆಗಿರಬೇಕು ನೀ ರಾಜನ ಪುತ್ರಿ ಇಲ್ಲವೆ ಪತ್ನಿ, II
ರಾವಣ ಹೃತ ಸೀತೆಯಾಗಿದ್ದರೆ ನೀI
ಹೇಳು ಎನಗೆ ಕೇಳುವೆ ನೀನ್ಯಾರ ಮೆಚ್ಚಗೆ, II
ನೋಡಿದರೆ ನಿನ್ನ ಶೋಕಸ್ಥಿತಿ,ನಾರಿಶ್ರೇಷ್ಠ ಅಂದ,I
ತಪಸ್ವಿವೇಷ, ನಿಸ್ಸಂದೇಹ ನೀನೇ ಸೀತೆ”; II
ಕೇಳಿ ರಾಮ ನಾಮ ಹನುಮನಿಂದ ಹರುಷಿತI
ಸೀತೆ ಹನುಮಗೆ ನುಡಿದಳು, ಮರದಡಿನಿಂತು: II
ಭೂಮಂಡಲ ಶ್ರೇಷ್ಠ ರಾಜಾ ದಶರಥರ ಸೊಸೆ ನಾ,I
ವೈದೇಹ ರಾಜಾ ಜನಕನ ಪುತ್ರಿ ನಾ; II
ಲೌಕಿಕ ಮಾನವ ಸುಖಗಳನ್ನು ಅನುಭೋಗಿಸಿದೆ, ಬಯಕೆಗಳನ್ನು I
ತಿರಿಸಿಕೊಂಡೆ, ಹನ್ನೇರಡು ಮಾಸ ರಾಮನೊಂದಿಗೆ, II
ಹದಿಮೂರನೇ ಮಾಸ,ರಾಮನ ಪಟ್ಟಾಭಿಷೇಕದಂದುI
ಪತಿ ದಶರಥನಿಗೆ ಕೈಕೆಯಿ ವಿದಿಸಿದಳು ಶರತ್ತು: II
‘ರಾಮನಿಗೆ ಪಟ್ಟಗಟ್ಟಿದರೆ ಸಾಯುತನಕI
ಅನ್ನ ನೀರು ತ್ಯಾಗ ಮಾಡುವದಾಗಿ ಕೈಕೆಯಿ’ II
ರಾಮನಿಗೆ ವನವಾಸ, ಭರತನಿಗೆ ಪಟ್ಟI
ವಚನ ಪಾಲಿಸಲು ಹಠ ಹಿಡಿದಳು ಕೈಕೆಯಿ, II
ಕೈಕೆಯಿಗೆ ಕೊಟ್ಟ ವಚನ ನೆನಪಿಸಿI
ಪ್ರಜ್ಞಾಹೀನನಾಗಿ ನೆಲಕ್ಕೆ ಕುಸಿದ ದಶರಥ, II
ಧರ್ಮನಿಷ್ಠ ವಚನನಿಷ್ಠ ವೃದ್ಧ ರಾಜ ದಶರಥI
ಹೇಳಿದನು ವಚನ ಪಾಲಿಸಲು ರಾಮನಿಗೆ, II
ಪ್ರತಿರೋಧಿಸದೇ ಸ್ವೀಕರಿಸಿ ತಂದೆ ವಚನ, ರಾಜ್ಯ ತ್ಯಾಗ ಮಾಡಿI
ಹದಿನಾಲ್ಕು ವರ್ಷ ವನವಾಸಕ್ಕೆ ಸಿದ್ಧನಾದ ರಾಮ, II
ತನ್ನೆಲ್ಲ ಸಂಪತ್ತನು ದಾನಮಾಡಿ,ಸಂನ್ಯಾಸಿವೇದಿI
ರಾಮ ಒಪ್ಪಿಸಿದ ಎನ್ನ, ತನ್ನ ತಾಯಿಗೆ, II
ಗಂಡನಿಲ್ಲದ ಸ್ವರ್ಗವೂ ನರಕ,ಹೊರಟೆI
ರಾಮನೊಂದಿಗೆ ನಾ ವನವಾಸಕ್ಕೆ, II
ಅಣ್ಣನೊಂದಿಗೆ ಹೊರಡಲು ತಮ್ಮ ಲಕ್ಷ್ಮಣ I
ವನವಾಸಿ ವೇಷದಲಿ ಸಿದ್ಧನಾಗಿದ್ದ ನನಗಿಂತಲೂ ಮುಂಚೆ, ||
ದಶರಥರ ಆಜ್ಞೆಯಂತೆ, ದೃಢ ನಿರ್ಧಾರದಿI
ಹೊಕ್ಕೆವು ಅರಣ್ಯ ಎಂದೂ ಅನುಭವಿಸದ, II
ದಂಡಕಾರಣ್ಯದಲಿ ವಾಸವಿದ್ದಾಗ ದುಷ್ಟ ರಾವಣI
ಅಪಹರಿಸಿ ಎನ್ನ, ದೂರ ಇಟ್ಟಿರುವನಿಲ್ಲಿ, II
ಎರಡು ಮಾಸಗಳ ಗಡವು ನೀಡಿರುವನು ರಾವಣI
ಪ್ರಾಣ ತ್ಯಾಗಿಸಬೇಕು ನಾ ಗಡವಿನವಧಿಯಲಿ”. II
ಸುಂದರ ಕಾಂಡ

ಅಶೋಕವನದಲ್ಲಿ ಸೀತಯೊಂದಿಗೆ ಹನುಮನ ಸಂವಾದ ಸನ್ನಿವೇಶವನ್ನು ಆದಿಕವಿ ವಾಲ್ಮೀಕಿಯು ವಿವರಿಸಿರುವರು, ಅದರಲ್ಲಿಯ ಮುಖ್ಯಾಂಶಗಳು (1) ಹನುಮಾನನಿಂದ ಸೀತೆಗೆ ನಿವೇದನೆ: ಮಹಾತೇಜಿ ವಿನಮ್ರ ಹನುಮನು ಗಿಡದಿಂದ ಕೆಳಗಿಳಿದು ಸೀತೆಯ ಬಳಿ ಬಂದು ಕೈಮುಗಿದು ನಮಸ್ಕರಿಸಿ ಅವಳಿಗೆ ಹೀಗೆ ಅರುಹಿದನು “ಓ ಕಮಲಾಕ್ಷಿ ಸಭ್ಯಳೇ, ಮಲಿನ ರೇಷ್ಮೆ-ಉಡುಪಿನಲಿ ಕೊಂಬೆ ಹಿಡಿದು ನಿಂತವಳು ನೀನು ಯಾರು? ಕಮಲ-ಪಕಳಿಯಿಂದ ಇಬ್ಬನಿ ಸುರಿದಂತೆ ನೀನು ಕಣ್ಣೀರು ಸುರಿಸುತ್ತಿರುವಿ ಏಕೆ? ಸುರಳೊ, ಅಸುರಳೊ, ನಾಗಳೊ, ಗಂಧರ್ವಳೊ, ಯಕ್ಷಿಣಿಯೇ, ಕಿನ್ನರಿಯೇ, ಓ ಶೋಭಿತೆ ನೀನು ಯಾರು? ನೀನು ಆಕಾಶದಿಂದ ಉದುರಿದ ರೋಹಿನಿ ನಕ್ಷತ್ರಳೆ, ರುದ್ರಳೆ, ಮಾರುತಳೆ, ವಸುಳೆ, ದೇವತೆಯಂತೆ ಕಾಣುವಿ, ನೀನು ಯಾರು? ಓ ಕಪ್ಪುಕಣ್ಣಿನ ಸಭ್ಯಳೇ, ನೀನು ಕೋಪ ಇಲ್ಲವೆ ತಪ್ಪಿನಿಂದ ವಸಿಷ್ಠರನು ರೇಗಿಸುವ ಅವನ ಪತ್ನಿ ಆರುಂದತಿಯೇ? ಪುತ್ರ, ಪತಿ, ತಂದೆ ಇಹಲೋಕ ತೆಜಿಸಿದವರಂತೆ ಶೋಕಿಸುತ್ತಿರುವ ಕೃಶೋದರಿ(ತೆಳ್ಳಗಿನ ನಡದವಳು) ನೀನು ಯಾರು? ಶೋಕಿಸುತಿರುವಿ, ಉಸಿರಿ ಹಾಕುತ್ತಿರುವಿ, ನೆಲ ಬಡಿದು ಅಳುತ್ತಿರುವಿ, ನಿನ್ನಲಿ ರಾಜ-ಚಿನ್ಹೆಗಳಿವೆ, ನಿಸ್ಸಂದೇಹ ನೀನು ದೇವತಾ ಸ್ತ್ರೀ ಅಲ್ಲ; ನಿನ್ನ ದೈಹಿಕ ಭಾಷೆ, ನಡತೆ, ನೋಡಿದರೆ ನೀನು ರಾಜನ ಪುತ್ರಿ ಇಲ್ಲವೆ ಪತ್ನಿ ಆಗಿರಬೇಕು; ಒಂದುವೇಳೆ ನಿನು ರಾವಣ ಅಪಹರಿಸಿದ ಸೀತೆಯಾಗಿದ್ದರೆ ನನಗೆ ಹೇಳು ನಾನು ಕೇಳುವೆ ನಿಚ್ಚ ಮೆಚ್ಚುಗೆ ಮಾತಗಳನ್ನು; ನಿನ್ನ ಶೋಕಸ್ಥಿತಿ, ನಾರಿಶ್ರೇಷ್ಠ ಅಂದ, ತಪಸ್ವಿವೇಷ ನೋಡಿದರೆ, ನಿಸ್ಸಂದೇಹ, ನೀನೇ ಸೀತೆಯಾಗಿರಬೇಕು”.ಸೀತೆಯನ್ನು ಅವಳ್ಯಾರೆಂದು ತಿಳಿಯಲು ಹನುಮಾನನು ಅವಳೊಂದಿಗೆ ನಡೆಸಿದ ಸಂವಾದ ಮುಖೇನ ಆದಿಕವಿ ವಾಲ್ಮೀಕಿಯು ಪರಸ್ತ್ರೀಯೊಂದಿಗೆ ವ್ಯವಹರಿಸುವಾಗ ಪುರುಷನು ನಡೆದು ಕೊಳ್ಳುವ ರೀತಿ ವ ನಡತೆಧರ್ಮದ ಬಗ್ಗೆ ಲೋಕಕ್ಕೆ ತಿಳಿಸಿರುವರು; ಸ್ತ್ರೀಗೆ ಗೌರವ ನೀಡುವದು ಮತ್ತು ಅವಳೊಂದಿಗೆ ಸಭ್ಯತೆಯಿಂದ ವರ್ತಿಸುವ ಪುರುಷ ನಡತೆ ಸಾಮಾಜಿಕ ಪರಂಪರೆ ಆದಿಕಾಲದಿಂದಲೂ ಬಂದಿದ್ದನ್ನು ಆದಿಕವಿ ವಾಲ್ಮೀಕಿಯು ನೆನಪಿಸಿಕೊಟ್ಟಿರುವರು. ಅದೇ ವೇಳೆ ಪರೋಕ್ಷವಾಗಿ ಸೀತೆಯ ಸೌಂದರ್ಯ ಮತ್ತು ವ್ಯಕ್ತಿತ್ವ ವನ್ನು ಬಣ್ಣಿಸಿರುವ;(2) ಸೀತೆಯು ತನ್ನ ಪರಿಚಯವನ್ನು ರಾಮನ ಕಥೆ ಮೂಲಕ ನೀಡಿದ ಪರಿ: ರಾಮ ನಾಮ ಹನುಮನಿಂದ ಕೇಳಿ ಹರುಷಪಟ್ಟ ಸೀತೆಯು ಮರದಡಿ ನಿಂತು ಹನುಮಗೆ ತನ್ನ ಪರಿಚಯ ಗಾಥೆಯನ್ನು ಹೀಗೆ ಹೇಳಿದಳು “ ನಾನು ಭೂಮಂಡಲ ಶ್ರೇಷ್ಠ ರಾಜಾ ದಶರಥರ ಸೊಸೆ, ವೈದೇಹ ರಾಜಾ ಜನಕನ ಪುತ್ರಿ; ವೈವಾಹಿಕ ಜೀವನದ ಹನ್ನೇರಡು ಮಾಸಗಳನ್ನು ರಾಮನೊಂದಿಗೆ ಕಳೆದೆ, ಲೌಕಿಕ ಮಾನವ ಸುಖಗಳನ್ನು ಅನುಭೋಗಿಸಿದೆ, ಬಯಕೆಗಳನ್ನು ತಿರಿಸಿಕೊಂಡೆನು ಆದರೆ ಹದಿಮೂರನೇ ಮಾಸ,ರಾಮನ ಪಟ್ಟಾಭಿಷೇಕದಂದು ಕಿರಿಯ ರಾಣಿ ಕೈಕೆಯಿ ಪತಿ ದಶರಥನಿಗೆ ತನಗೆ ದೇವ-ಅಸುರ ಯದ್ಧದಲಿ ಕೊಟ್ಟ ವರಗಳನ್ನು ಪಾಲಿಸಲು ಶರತ್ತು ವಿಧಿಸಿದಳು ಹಾಗು ರಾಮನಿಗೆ ಪಟ್ಟಗಟ್ಟಿದರೆ ತಾನು ಸಾಯುವ ತನಕ ಅನ್ನ ನೀರು ತ್ಯಾಗ ಮಾಡುವದಾಗಿ ಎಚ್ಚರಿಸಿದಳು ಹಾಗು ರಾಮನಿಗೆ ಹದಿನಾಲ್ಕು ವರ್ಷ ವನವಾಸ, ಭರತನಿಗೆ ಪಟ್ಟಕಟ್ಟುವ ವಚನ ಪಾಲಿಸಲು ಹಠ ಹಿಡಿದಳು; ಕೈಕೆಯಿಗೆ ಕೊಟ್ಟ ವಚನ ನೆನಪಿಸಿಕೊಂಡು ದಶರಥನು ಪ್ರಜ್ಞಾಹೀನನಾಗಿ ನೆಲಕ್ಕೆ ಕುಸಿದನು; ಧರ್ಮನಿಷ್ಠ ವಚನನಿಷ್ಠ ವೃದ್ಧ ರಾಜಾ ದಶರಥನು ರಾಮನಿಗೆ ವಚನ ಪಾಲಿಸಲು ಹೇಳಿದನು; ರಾಮನು ಯಾವುದಕ್ಕೂ ಪ್ರತಿರೋಧಿಸದೇ ತಂದೆ ವಚನ ಸ್ವೀಕರಿಸಿ, ರಾಜ್ಯ ತ್ಯಾಗ ಮಾಡಿ ಹದಿನಾಲ್ಕು ವರ್ಷ ವನವಾಸಕ್ಕೆ ಸಿದ್ಧನಾದನು; ನನ್ನನು ತನ್ನ ತಾಯಿಗೆ ಒಪ್ಪಿಸಿ ರಾಮನು ಸಂನ್ಯಾಸಿ ಧರಿಸಿ ತನ್ನೆಲ್ಲ ಸಂಪತ್ತನು ದಾನಮಾಡಿದನು ಆದರೆ ಗಂಡನಿಲ್ಲದ ಸ್ವರ್ಗವೂ ನರಕ ಅದಕ್ಕಾಗಿ ನಾನು ಪತಿ ರಾಮನೊಂದಿಗೆ ವನವಾಸಕ್ಕೆ ಹೊರಟೆನು, ಅಣ್ಣನೊಂದಿಗೆ ಹೊರಡಲು ತಮ್ಮ ಲಕ್ಷ್ಮಣ ವನವಾಸಿ ವೇಷದಲಿ ನನಗಿಂತಲೂ ಮುಂಚೆಯೇ ಸಿದ್ಧನಾಗಿದ್ದನು; ರಾಜಾ ದಶರಥರ ಆಜ್ಞೆಯಂತೆ ದೃಢ ನಿರ್ಧಾರದಿಂದ ಎಂದೂ ಅನುಭವಿಸದ ಅರಣ್ಯ ಹೊಕ್ಕೆವು, ದಂಡಕಾರಣ್ಯದಲಿ ನಾವು ವಾಸವಿದ್ದಾಗ ದುಷ್ಟ ರಾವಣನು ನನ್ನನು ಅಪಹರಿಸಿ ದೂರದ ಈ ಅಶೋಕವನದಲ್ಲಿ ಇಟ್ಟಿರುವನು ಹಾಗು ನನಗೆ ಅವನನ್ನು ಪತಿಯಾಗಿ ಸ್ವೀಕರಿಸಲು ಎರಡು ಮಾಸಗಳ ಗಡವು ನೀಡಿರುವನು ಆದರೆ ನಾನು ಆ ಗಡವಿನ ಅವಧಿಯಲಿ ಪ್ರಾಣ ತ್ಯಾಗಿಸಬೇಕು”. ʻವಿವಾಹಿತ ಹೆಣ್ಣು ತನ್ನ ಪರಿಚಯವನ್ನು ತನ್ನ ಗಂಡನ ಮನೆಯ ಹೆಸರಿನಲ್ಲಿ ಹೇಳುವಳುʼ ಎಂಬ ಸ್ತ್ರೀ ಸಾಮಾಜಿಕ ಮನೋಜ್ಞ ಪರಂಪರೆಯನ್ನು ಆದಿಕವಿ ವಾಲ್ಮೀಕಿಯು ಈ ಮುಖೇನ ತಿಳಿಸಿರುವರು. ಪರಪುರುಷನಿಗೆ ತನನ್ನು ಒಪ್ಪಿಸುವ ಬದಲು ದೇಹತ್ಯಾಗ ಮಾಡುವ ಸೀತೆಯ ಮನದಿಂಗಿತ ಮೂಲಕ ವಿವಾಹಿತ ಸ್ತ್ರೀಯ ಪತಿನಿಷ್ಠೆ ಕುರಿತು ಆದಿಕವಿ ವಾಲ್ಮೀಕಿಯು ಈ ಸನ್ನಿವೇಶದಲ್ಲಿ ವ್ಯಕ್ತ ಪಡಿಸಿರುವರು. ಒಟ್ಟಿನಲ್ಲಿ , ಆದಿಕವಿ ವಾಲ್ಮೀಕಿಯು ಹನುಮಾನ ಮತ್ತು ಸೀತೆಯ ನಡುವಿ ಸಂವಾದದಲಿ ಹನುಮ ನೊಂದ ಸ್ತ್ರೀಗೆ ಪ್ರಶ್ನೆಗಳನ್ನು ಕೇಳುತ ಅವಳ ಹಾವಭಾವದಿಂದ ಅವಳೇ ಸೀತೆಯೆಂದು ಗುರುತಿಸುವ ಹಾಗು ಸೀತೆ ತಾನು ರಾಮನ ಪತ್ನಿಯೆಂದು ಮನವರಿಕೆ ಮಾಡಿಕೊಂಡಲು ರಾಮನ-ವನವಾಸಗಾಥೆಯನ್ನು ಹೇಳುವ ಸಂದರ್ಭವನ್ನು ವಿವರಿಸಿರುವರು ಜತೆಗೆ ‘ಗಂಡನಿಲ್ಲದ ಸ್ವರ್ಗವೂ ನರಕ’ ವೆಂಬ ತತ್ವದ ವಿವಾಹಿತ ಸ್ತ್ರೀಯ ಪಾರಂಪರಿಕ ಸಾಮಾಜಿಕ ಮನೋಶಾಸ್ತ್ರ ಸ್ಥಿತಿಯನ್ನು ಪ್ರತಿಪಾದಿಸಿರುವರು.
ಡಾ. ಅರ್ಜುನ ಯ. ಪಂಗಣ್ಣವರ ವಾಲ್ಮೀಕಿ ಸಾಹಿತ್ಯ ಚಿಂತಕ‌